ಅಂಕಣಪ್ರಚಲಿತ

ಸಾವನ್ನೇ ಗೆಲ್ಲುತ್ತೇನೆಂದು ಪಣ ತೊಟ್ಟಿದ್ದ ಆ ಭಾರತೀಯ ಯೋಧ ತಿರುಗಿ ಬಂದಿದ್ದು ಛಿದ್ರ ಛಿದ್ರವಾಗಿ! ಡೈರಿಯ ಪುಟಗಳೂ ಕಾದು ಕುಳಿತಿದ್ದವು ಆತನ ವಿಜಯವನ್ನು ನೋಡಲು!

ನನ್ನ ರಕ್ತದ ಕ್ಷಾತ್ರತೇಜಸ್ಸನ್ನು ತೋರುವ ಮುನ್ನ ನನ್ನೆದುರು ಸಾವು ಬಂದರೆ ನಾನು ಸಾವನ್ನೆ ಕೊಂದುಬಿಡುತ್ತೇನೆ,(  If death strikes before i prove my blood, I promise (swear), I will kill death, )

–ಕಾಪ್ಟನ್ ಮನೋಜ್ ಕುಮಾರ್ ಪಾಂಡೆ…

ಮನೋಜ್ ಕುಮಾರ್ ಪಾಂಡೆ ಹುಟ್ಟಿದ್ದು ೨೫ ಜೂನ್ ೧೯೭೫ ಸೀತಾಪುರದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ , ಅತ್ಯಂತ ಕ್ಲಿಷ್ಟಕರವಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಯನ್ನು ಮೊದಲ ಯತ್ನದಲ್ಲೇ ಪಾಸು ಮಾಡಿದ ಈತ ಆರ್ಮಿಯನ್ನು ಸೇರಿದ ಮೇಲೆ ಗೂರ್ಖಾ ರೈಫಲ್ಸ್‌ನಲ್ಲಿದ್ದ.

ಸರ್ವೀಸ್ ಸೆಲೆಕ್ಷನ್ ಬೋರ್ಡ್ ಪರೀಕ್ಷೆಯಲ್ಲಿ ಎಲ್ಲರಿಗೂ ‘ನೀವೇಕೆ ಸೇನೆ ಸೇರುತ್ತಿದ್ದೀರಿ’ ಎಂದು ಕೇಳುತ್ತಾರೆ. ಬಹಳಷ್ಟು ಜನ ಅದೊಂದು ದಿನ ಸೇನಾ ಮುಖ್ಯಸ್ಥನಾಗುತ್ತೇನೆ ಎಂದು, ಇಲ್ಲವೇ ಮತ್ಯಾವುದಾದರೂ ಹುದ್ದೆಗೆ ಹೋಗುತ್ತೇನೆ ಎಂದು ಉತ್ತರಿಸುತ್ತಾರೆ. ಈ ಹುಡುಗ ಮಾತ್ರ ಅವತ್ತು ಅತ್ಯಂತ ಸ್ಪಷ್ಟವಾಗಿ ಹೇಳಿದ್ದ- ‘ನಾನು ಸೇನೆ ಸೇರುತ್ತಿರುವುದೇ ಪರಮವೀರಚಕ್ರ ಪಡೆಯುವುದಕ್ಕೆ..’ ಅದನ್ನ ಸೇನೆ ಬಿಟ್ಟು ಬೇರೆಲ್ಲೂ ಕೊಡಲ್ವಲ್ಲಾ?

ನವಾಜ್ ಷರೀಫ್ ಅವರೊಂದಿಗೆ ಕೈಕುಲುಕಿದ್ದ ವಾಜಪೇಯಿ ಅವರ ಸರ್ಕಾರ ನಡುಗಿತ್ತು, ಸೇನಾ ಮುಖ್ಯಸ್ಥರೊಂದಿಗೆ ಮಾತುಕತೆ ಶುರುವಾಯ್ತು. ಆಪರೇಷನ್ ವಿಜಯ ಶುರುವಾಯ್ತು.

ಮನೋಜ್ ಕುಮಾರ್ ಪಾಂಡೆಯ ತುಕಡಿಗೆ ಬಟಾಲಿಕ್ ಸೆಕ್ಟರ್‌ನಿಂದ ಭಯೋತ್ಪಾದಕರನ್ನು ಬಡಿದೋಡಿಸುವ ಜವಾಬ್ದಾರಿಯನ್ನು ನೀಡಲಾಯಿತು. 14,229 ಅಡಿ ಎತ್ತರದ ಬಟಾಲಿಕ್ ಸೆಕ್ಟರ್ಅಲ್ಲಿರುವ ಶತ್ರುಗಳನ್ನು ಬಡಿದೋಡಿಸುವುದು ನಿಜವಾದ ಅರ್ಥದಲ್ಲಿ ರಫ್ ಆಂಡ್ ಟಫ್ ವಾರ್ ಆಗಿತ್ತು.

ಅದು 1999, ಜೂನ್ 11. ಜುಬರ್ ಶಿಖರವನ್ನು ಮರುವಶಪಡಿಸಿಕೊಳ್ಳುವ ಕಾರ್ಯಾಚರಣೆಯೊಂದಿಗೆ ತನ್ನತುಕಡಿಯನ್ನು ಮುನ್ನೆಡೆಸಲಾರಂಭಿಸಿದರು ಪಾಂಡೆ. ಅದು ಸೇನಾ ಕಾರ್ಯಾಚರಣೆದೃಷ್ಟಿಯಿಂದ ಅತ್ಯಂತ ಮಹತ್ವದ ತುದಿಯಾಗಿತ್ತು.  ಹೋರಾಟದ ಪ್ರಮುಖ ಕ್ಷಣವೆಂದರೆ 1999, ಜುಲೈ 3ರ ಬೆಳಗಿನ ಜಾವ. ಖಲುಬಾರ್ ಶಿಖರದ ಮರುವಶವಾಗಿತ್ತು.

ಮುಂದುವರಿದು ಮಧ್ಯರಾತ್ರಿಯ ವೇಳೆಗೆ ಅವರ ತುಕಡಿ ಅಂತಿಮ ಗುರಿಯತ್ತ ಮುಂದಡಿಯಿಡುತ್ತಿತ್ತು.ಆದರೆ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತಿದ್ದ ಶತ್ರುಗಳು ತಡೆದು ನಿಲ್ಲಿಸಿದರು. ಆದರೆ ರಾತ್ರಿ ಕಳೆದು ಬೆಳಕು ಹರಿಯುವಷ್ಟರಲ್ಲಿ ಈ ತೊಂದರೆಯನ್ನು ದೂರ ಮಾಡಲೇಬೇಕಿತ್ತು ಅಲ್ಲದೇ ಹೋದರೆ ಬೆಳಕಿನಲ್ಲಿ ಶತ್ರುಗಳ ಕಣ್ಣಿಗೆಬಿದ್ದು ಉಳಿಗಾಲವಿಲ್ಲ ಎಂಬುದು ತಿಳಿದೇ ಇತ್ತು. ಪಾಂಡೆಯವರೇ ಮುಂದೆ ಸಾಗುತ್ತಾ ಒಂದು ಕಿರಿದಾದ ಭಾಗದ ಮೂಲಕ ಶತ್ರುವಿನ ಸಮೀಪಕ್ಕೆ ತಮ್ಮ ಬೆಟಾಲಿಯನನ್ನು ಕರೆತಂದರು. ಎಚ್ಚೆತ್ತ ಶತ್ರುಗಳು ಗುಂಡಿನ ಸುರಿಮಳೆಗೈಯ್ಯಲಾರಂಭಿಸಿದರು.

ಅಷ್ಟರಲ್ಲಿ ಹೆಗಲು, ಕಾಲಿಗೆ ತೀವ್ರ ಗಾಯಗಳಾಗಿದ್ದವು. ಅದಾಗಲೇ ಹೇಳಿದ ಮಾತಿಗೆ ಕಟಿ ಬದ್ಧರಾದ ಪಾಂಡೆ ಸಾವು ಕಣ್ಣಮುಂದೆ ನಲಿದಾಡುತ್ತಿದ್ದರೂ ಮುನ್ನುಗ್ಗುವುದನ್ನು ನಿಲ್ಲಿಸಲಿಲ್ಲ. ಇಬ್ಬರು ಶತ್ರುಗಳನ್ನು ಹೊಡೆದುರುಳಿಸಿ ಮೊದಲ ಬಂಕರ್ವಶಪಡಿಸಿಕೊಂಡರು. ತಮ್ಮ ನಾಯಕನ  ಧೈರ್ಯ ವಿಜಯ ಅಷ್ಟೇ ಸಾಕಾಯಿತು ಬೆಟಾಲಿಯನ್ನ ಉಳಿದ ಸೈನಿಕರಿಗೆ,

ಸಾಮಾನ್ಯವಾಗಿ ಬಂಕರ್ ಒಂದರಲ್ಲಿ ಒಂದು ಮಷಿನ್ ಗನ್ ಇರುತ್ತದೆ. ಪ್ರತಿ ಮಿನಿಟಿಗೆ 600 ಗುಂಡುಗಳನ್ನು ಕಕ್ಕುವ ಮಷಿನ್ ಗನ್ ಗಳು ಅವು. ಅವುಗಳ ನಡುವೆಯೇ ಆತ ಒಂದು ಮತ್ತು ಎರಡನೇ ಬಂಕರುಗಳನ್ನು ಗ್ರೆನೇಡಿನಲ್ಲಿ ಉಡಾಯಿಸಿಯೇಬಿಟ್ಟ. ಆಗ ಆತನ ತೋಳಿಗೆ ಮತ್ತು ಕಾಲಿಗೆ ಗುಂಡುಗಳು ಬಿದ್ದವು. ಜತೆಯಲ್ಲಿದ್ದ ಹುಡುಗರು ಹೇಳಿದರು- ‘ಇಲ್ಲೇ ನಿಲ್ಲಿ ಸಾಹೆಬ್.. ನಾವು ಮುಂದುವರಿಯುತ್ತೇವೆ..’ ಆತ ಹೇಳಿದ- ‘ಕರ್ನಲ್ ಗೆ ನಾನು ಮಾತು ಕೊಟ್ಟಿದ್ದೇನೆ. ನಾನೇ ಹೋರಾಟ ಮುಗಿಸುತ್ತೇನೆ..’ ಹಾಗನ್ನುತ್ತಲೇ ಮೂರನೇ ಬಂಕರನ್ನೂ ಉಡಾಯಿಸಿದ.  ನಾಲ್ಕನೆಯದರ ಬಳಿ ಸಾರಿದಾಗ ಅದಾಗಲೇ ಸುಸ್ತಾಗಿದ್ದ. ಸ್ಥಿರತೆ ಸಹಜವಾಗಿಯೇ ತಪ್ಪಿತ್ತು. ಅಷ್ಟಾಗಿಯೂ ನಾಲ್ಕನೇ ಬಂಕರ್ ಗುರಿಯಾಗಿಸಿ ಗ್ರೈನೆಡ್ ಮುಚ್ಚಳ ಜಗ್ಗಿದ. ಆಗಲೇ ನನ್ನ ಕಣ್ಣೆದುರು ಪಾಕಿಸ್ತಾನಿ ಮಷಿನ್ ಗನ್ನುಗಳು ಆತನ ತಲೆಯನ್ನು ಸೀಳಿಬಿಟ್ಟವು. ಆ ಕ್ಷಣದಲ್ಲೇ ಸಾವು ಬಂತು. ಆದರೆ ಅಚ್ಚರಿ ನೋಡಿ. ಅಂಥ ಸಂದರ್ಭದಲ್ಲೂ ಆತ ಎಸೆದ ಗ್ರೆನೆಡ್ ಗುರಿ ತಲುಪಿ ನಾಲ್ಕನೇ ಬಂಕರನ್ನು ಉಡಾಯಿಸಿತು..

ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಸಂದರ್ಶನದಲ್ಲಿ ಹೇಳಿದ ಉತ್ತರವನ್ನು ಸಾಧಿಸಿಯೇ ಬಿಟ್ಟರು, ದೇಶಯುದ್ಧಕಾಲದಲ್ಲಿನೀಡುವ ಅತ್ಯುಚ್ಛ ಶೌರ್ಯ ಪ್ರಶಸ್ತಿಯಾದ ‘ಪರಮವೀರ ಚಕ್ರ’ವನ್ನು ಅಪ್ಪ ಗೋಪಿಚಂದ್ ಪಾಂಡೆ ಮಗನ ಪರವಾಗಿ ಪಡೆದುಕೊಂಡರು.

“A man is not dead until he is forgotten” ಎಂಬ ಮಾತೊಂದಿದೆ. ಇವತ್ತು ನಾವು ಚೆನ್ನಾಗಿದ್ದೇವೆ, ಸುರಕ್ಷಿತವಾಗಿದ್ದೇವೆ ಅಂದ್ರೆಇವರಿಂದಲೇ. ದೇಶರಕ್ಷಣೆಯನ್ನು ಕೈಗೆತ್ತಿಕೊಂ ಸೈನಿಕರಿಗೆ ನಮ್ಮ ನಮನಗಳು.

ಕಾರ್ಗಿಲ್ ಉಳಿಸಿಕೊಳ್ಳುವುದಕ್ಕಾಗಿ ಅಂದು 527 ಸೈನಿಕರು ತಮ್ಮ ಜೀವವನ್ನೇ ಬಲಿ ಕೊಟ್ಟರು. 1363 ಸೈನಿಕರು ಊನಗೊಂಡರು, ಅಂಗಾಂಗ ಕಳೆದುಕೊಂಡರು. ಮೇಜರ್ ಪದ್ಮಪಾಣಿ ಆಚಾರ್ ತೀರಿಕೊಂಡಾಗ ಅವರ ಪತ್ನಿಯ ಹೊಟ್ಟೆಯಲ್ಲಿ ಚೊಚ್ಚಲ ಮಗು ಬೆಳೆಯುತ್ತಿತ್ತು, ಕ್ಯಾಪ್ಟನ್ ವಿಕ್ರಂ ಬಾತ್ರಾ ಮಡಿದಾಗ ಅವರ ಭಾವಿ ಪತ್ನಿ ವಿವಾಹಕ್ಕೆ ತಯಾರಿ ನಡೆಸುತ್ತಿದ್ದಳು, ಲೆಫ್ಟಿನೆಂಟ್ ಹನೀಫುದ್ದೀನ್ ಹುತಾತ್ಮನಾಗುವುದರೊಂದಿಗೆ ಆತನ ವಿಧವೆ ತಾಯಿಇದ್ದ ಒಬ್ಬಮಗನನ್ನೂ ಕಳೆದುಕೊಂಡಳು, ಕ್ಯಾಪ್ಟನ್ ಕೆ. ಕ್ಲಿಫೋರ್ಡ್ ನೊಂಗ್ರುಮ್ ಮಡಿದಾಗ ಒಂದಿಡೀ ಮೇಘಾಲಯರಾಜ್ಯವೇಕಣ್ಣೀರ ಕಡಲಾಗಿತ್ತು.ದೇಶಕ್ಕಾಗಿ ತಮ್ಮೆಲ್ಲ ಸುಖ ಸಂತೋಷಗಳನ್ನು ಬದಿಗಿಟ್ಟು ಸೇವೆಗೈಯುವ ವೀರರನ್ನು, ದೇಶಕ್ಕಾಗಿ ಮಡಿದ ಹುತಾತ್ಮರನ್ನು ಸ್ಮರಿಸುವುದೇ ನಾವು ಅವರಿಗೆ ಸಲ್ಲಿಸಬಲ್ಲ ಕೃತಜ್ಞತೆ.

 

– ಮಹೇಶ

 

 

Tags

Related Articles

Close