ಪ್ರಚಲಿತ

21 ದಿನಗಳ ಲಾಕ್‌ಡೌನ್, ವಿನಾಯಿತಿ ಮತ್ತು ಅದನ್ನು ಉಲ್ಲಂಘಿಸಿದ್ದಕ್ಕಾಗಿ ಶಿಕ್ಷೆಯ ಪ್ರಮಾಣ‌: ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ….

ಭಾರತದಲ್ಲಿ 11 ಮಂದಿ ಸಾವನ್ನಪ್ಪಿ ಐನೂರಕ್ಕೂ ಹೆಚ್ಚು ಮಂದಿ ಸೋಂಕಿಗೆ ಒಳಗಾದ ಮಾರಣಾಂತಿಕ

ಕೊರೊನಾ ವೈರಸ್ ದೇಶದಾದ್ಯಂತ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದ್ದಾರೆ.

ಇಡೀ ಜಗತ್ತಲ್ಲಿ ಸುಮಾರು 18,000 ಜನರನ್ನು ಬಲಿ ತೆಗೆದುಕೊಂಡ ಮತ್ತು 3.8 ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕಿಗೊಳಗಾದ ಕಾರಣ ಭಾರತವನ್ನು ರಕ್ಷಿಸುವ ಸಲುವಾಗಿ ಮೋದಿ ಈ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾರೆ.

ಲಾಕ್‌ಡೌನ್ ಎಂದರೇನು?

ಲಾಕ್‌ಡೌನ್ ಎನ್ನುವುದು ತುರ್ತು ಪ್ರೋಟೋಕಾಲ್ ಆಗಿದ್ದು, ನಿರ್ದಿಷ್ಟ ಪ್ರದೇಶದಲ್ಲಿ ಜನರ ಸಂಚಾರವನ್ನು ನಿರ್ಬಂಧಿಸುವುದು ಆಗಿದೆ.

ಪೂರ್ಣ ಲಾಕ್‌ಡೌನ್ ಎಂದರೆ ನೀವು ಎಲ್ಲಿರುತ್ತೀರೋ ಅಲ್ಲಿಯೇ ಇರಬೇಕು. ಒಂದು ನಿರ್ದಿಷ್ಟ ಪ್ರದೇಶ, ಕಟ್ಟಡದಿಂದ ಹೊರಹೋಗದಂತೆ ತಡೆಯುವುದು.

ಕೊರೊನಾ ವೈರಸ್ ಏಕಾಏಕಿಯಾಗಿ ಭಾರತದಲ್ಲಿ ಕಾಣಿಸಿಕೊಂಡ ಪರಿಣಾಮ‌ ಮೋದಿ 21 ದಿನಗಳ ಲಾಕ್‌ಡೌನ್ ಘೋಷಿಸಿದ್ದಾರೆ. ಈವೇಳೆ ಕೆಲವೊಂದು ವಿನಾಯಿತಿ ಇದೆ. ಇದನ್ನು ಹೊರತುಪಡಿಸಿ ಲಾಕ್‌ಡೌನ್ ಉಲ್ಲಂಘಿಸಿದರೆ ಸೂಕ್ತ ಶಿಕ್ಷೆ ವಿಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಭಾರತದಲ್ಲಿ ಲಾಕ್‌ಡೌನ್!

ಮಾರ್ಚ್ 31 ರವರೆಗೆ ಭಾರತದ ಕೆಲವು ಭಾಗಗಳಲ್ಲಿ ಲಾಕ್‌ಡೌನ್ ಇತ್ತು. ಆದರೆ ಮಂಗಳವಾರ ಮೋದಿಯವರು ಇದನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಿದರು. ಅಂದರೆ ಏಪ್ರಿಲ್ 14 ರವರೆಗೆ ಇಡೀ ದೇಶಕ್ಕೆ ಅನ್ವಯವಾಗುವಂತೆ ನಿನ್ನೆಯಿಂದ ಲಾಕ್‌ಡೌನ್ ಪ್ರಾರಂಭವಾಯಿತು.

“ಏನೇ ಆಗಲಿ, ನಿಮ್ಮ ಮನೆಗಳಿಂದ ಹೊರಗೆ ಹೋಗಬೇಡಿ” ಎಂದು ಮೋದಿಯವರು ಮಂಗಳವಾರ ತಮ್ಮ ಭಾಷಣದಲ್ಲಿ ,ಜನರನ್ನು ಮನೆಯಲ್ಲಿಯೇ ಇರಬೇಕೆಂದು ಕೇಳಿಕೊಂಡರು.

ಲಾಕ್‌ಡೌನ್ ಮತ್ತು ಕರ್ಫ್ಯೂ ನಡುವಿನ ವ್ಯತ್ಯಾಸ

ಲಾಕ್‌ಡೌನ್ ಅನ್ನು “ಒಂದು ರೀತಿಯ ಕರ್ಫ್ಯೂ” ಎಂದು ಪ್ರಧಾನಿ ಕರೆದರೂ, ಲಾಕ್‌ಡೌನ್, ಕರ್ಫ್ಯೂಗಿಂತ ಬಹಳ ಭಿನ್ನವಾಗಿದೆ.

ಮೊದಲನೆಯದಾಗಿ, ಕರ್ಫ್ಯೂ ಎನ್ನುವುದು ಕಾನೂನು ಮತ್ತು ಸುವ್ಯವಸ್ಥೆಗಾಗಿ ಮಾಡುವ ಪ್ರಕ್ರಿಯೆಯಾಗಿದೆ. ಆದರೆ, ಪ್ರಸ್ತುತ ಲಾಕ್‌ಡೌನ್ ಎನ್ನುವುದು ಜನರನ್ನು ಅನಾರೋಗ್ಯದಿಂದ ರಕ್ಷಿಸುವ ಸಲುವಾಗಿ ತೆಗೆದುಕೊಂಡ ತುರ್ತು ಪ್ರಕ್ರಿಯೆಯಾಗಿದೆ.

ಲಾಕ್‌ಡೌನ್ ಉದ್ದೇಶ ಜನರ ಚಲನೆಯನ್ನು ನಿರ್ಬಂಧಿಸುವುದಾಗಿದೆ.

ಜನರಿಗೆ ಅಗತ್ಯ ವಸ್ತುಗಳಾದ ಹಾಲು, ದಿನಸಿ, ಔಷಧಿ, ತರಕಾರಿ ಖರೀದಿಸಲು ಅಂಗಡಿಗಳಿಗೆ ಹೋಗಲು ಅನುಮತಿಸಲಾಗುತ್ತದೆ. ಆದರೆ, ಕರ್ಫ್ಯೂ ಸಮಯದಲ್ಲಿ, ಯಾವುದೇ ವ್ಯಕ್ತಿಯನ್ನು ರಸ್ತೆಯಲ್ಲಿ ಸಂಚರಿಸಲು ಅನುಮತಿಸಲಾಗುವುದಿಲ್ಲ.

ಕರ್ಫ್ಯೂ ಒಂದು ಸಣ್ಣ ಅವಧಿಗೆ, ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಸುಧಾರಿಸಲು ತೆಗೆದುಕೊಂಡ ಶಾಸನವಾಗಿದ್ದು, ಆ‌ ಪ್ರದೇಶದ ಪರಿಸ್ಥಿತಿ ಸುಧಾರಿಸಿದೆ ಎಂದು ಅಧಿಕಾರಿಗಳಿಗೆ ವಿಶ್ವಾಸ‌ ಮೂಡಿದ ಬಳಿಕ ಅದನ್ನು ತೆಗೆದುಹಾಕಲಾಗುತ್ತದೆ. ಆದರೆ ಈ ಲಾಕ್‌ಡೌನ್ ನಿಗದಿತ ಅವಧಿಯವರೆಗೆ ತೆಗೆದುಕೊಂಡ ನಿರ್ಧಾರವಾಗಿದ್ದು, ಅದರ ಅವಧಿ ಮುಗಿಯದ ಹೊರತು ಹಿಂದಕ್ಕೆ ಪಡೆಯಲಾಗುವುದಿಲ್ಲ.

ಲಾಕ್‌ಡೌನ್ ಅನಿವಾರ್ಯತೆ

ವಿಶ್ವದ 136 ದೇಶಗಳಂತೆ, ಕೊರೊನಾ ವೈರಸ್ ಭಾರತದಲ್ಲೂ ಅಪಾಯದ ಮಟ್ಟಕ್ಕೆ ಬಂದು ತಲುಪಿದೆ. ಆದಾಗ್ಯೂ, ಅಧಿಕಾರಿಗಳ ಪ್ರಕಾರ‌ ಭಾರತ ದೇಶವು ಇನ್ನೂ ಸೋಂಕಿನ ಎರಡನೇ ಹಂತದಲ್ಲಿದೆ ಎನ್ನುತ್ತಾರೆ. ಇದು ಮೂರನೆಯ ಹಂತವನ್ನು ತಲುಪಿದ ನಂತರ, ಅದು ಸಮುದಾಯದ ಜೊತೆ ‌ಪಸರಲಾರಂಭಿಸುತ್ತದೆ. ಆಗ ಕೊರೊನಾ ಹರಡುವುದನ್ನು ತಡೆಯುವುದು ಕಷ್ಟಕರವಾಗಿರುತ್ತದೆ.

ಸಾಮಾಜಿಕ ಅಂತರ(social distance)

ಕೊರೊನಾ ತಡೆಯಲು ಸಾಮಾಜಿಕ ಅಂತರ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಲಾಕ್‌ಡೌನ್ ಜನರು ಹೊರಗಡೆ ಹೋಗುವುದನ್ನು ನಿರ್ಬಂಧಿಸಿ ಇತರ ಸೋಂಕಿತ ಜನರಿಂದ ಸಂಪರ್ಕ ಹೊಂದುವುದನ್ನು ತಡೆಯುತ್ತದೆ.

ಪ್ರಧಾನ ಮಂತ್ರಿ ಹೇಳಿದಂತೆ, “ಮುಂಬರುವ 21 ದಿನಗಳವರೆಗೆ (ರಾಷ್ಟ್ರವ್ಯಾಪಿ ಸಂಪೂರ್ಣ) ಲಾಕ್‌ಡೌನ್ ನಿರ್ವಹಿಸಲು ನಮಗೆ ಸಾಧ್ಯವಾಗದಿದ್ದರೆ, ನಮ್ಮ ದೇಶ 21 ವರ್ಷಗಳ ಹಿಂದಕ್ಕೆ ತಳ್ಳಲ್ಪಡುತ್ತದೆ. ಭಾರತವನ್ನು ದುರಂತದಿಂದ ಪಾರು‌ಮಾಡಲು ಲಾಕ್‌ಡೌನ್ ಗೆ ಸಾಥ್ ನೀಡಿ ದೇಶವನ್ನು ರಕ್ಷಿಸುವ‌‌ ಸಂಕಲ್ಪ‌ ಮಾಡೋಣ” ಎಂದು ಕರೆ ನೀಡಿದ್ದಾರೆ‌.

ದೇಶದಲ್ಲಿ ನೀವು‌‌ ಎಲ್ಲಿದ್ದೀರೋ ಅಲ್ಲೇ ಇರಿ ಎಂದು ಮೋದಿ ಕೊರೊನಾ ಹಿಮ್ಮೆಟ್ಟಿಸಲು ಜನರನ್ನು ಹುರಿದುಂಬಿಸಿದ್ದಾರೆ.

ಲಾಕ್‌ಡೌನ್ ಉಲ್ಲಂಘಿಸಿದರೆ ಶಿಕ್ಷೆಯ ಪ್ರಮಾಣ:

21 ದಿನಗಳ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಇದನ್ನು ಉಲ್ಲಂಘಿಸುವ ಜನರ ವಿರುದ್ದ ಅದರ ತೀವ್ರತೆಯನ್ನು ಅವಲಂಬಿಸಿ 200 ರಿಂದ 1,000 ರೂ.ವರೆಗೆ ದಂಡ ಅಥವಾ ಒಂದು ತಿಂಗಳಿನಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.

ವಿಪತ್ತು ನಿರ್ವಹಣಾ ಕಾಯ್ದೆ:

2015 ರ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 51, 60 ರ ಪ್ರಕಾರ, ಲಾಕ್‌ಡೌನ್ ಅನ್ನು ಉಲ್ಲಂಘಿಸುವವರಿಗೆ, ಸರ್ಕಾರಿ ಅಧಿಕಾರಿ- ಸರ್ಕಾರಿ ನೌಕರರಿಗೆ ಅಡ್ಡಿಪಡಿಸುವುದು, ಆದೇಶವನ್ನು ಪಾಲಿಸಲು ನಿರಾಕರಿಸುವುದು, ಇಂಥಾ ನಿರ್ದಿಷ್ಟ ಅಪರಾಧಗಳಿಗೆ ಶಿಕ್ಷೆ ವಿಧಿಸಬಹುದು.
ಸುಳ್ಳು, ವದಂತಿ ಹಬ್ಬಿಸುವುದು, ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಹಣ ಅಥವಾ ವಸ್ತುಗಳನ್ನು ದುರುಪಯೋಗಪಡಿಸಿಕೊಳ್ಳುವುದು ಕೂಡ ಅಪರಾಧವಾಗುತ್ತದೆ.

ಮಾಡಿದ ಅಪರಾಧಕ್ಕೆ ಅನುಗುಣವಾಗಿ ಜನರಿಗೆ ಒಂದು ವರ್ಷದಿಂದ ಎರಡು ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ಶಿಕ್ಷೆ ವಿಧಿಸಬಹುದು.

ಸಾರ್ವಜನಿಕವಾಗಿ ಸಿಕ್ಕಿಬಿದ್ದವರ ಅಪರಾಧದ ಪ್ರಮಾಣಕ್ಕೆ ತಕ್ಕಂತೆ ದಂಡ ಅಥವಾ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಆದೇಶವನ್ನು ಪಾಲಿಸದ ಅಥವಾ ಪೊಲೀಸರಂಥಾ ಸಾರ್ವಜನಿಕ ಸೇವಕರಿಗೆ ಹಾನಿ ಅಥವಾ ಕಿರಿಕಿರಿ ಉಂಟುಮಾಡಿದರೆ ಸರಳ ಜೈಲು ಶಿಕ್ಷೆಯಿಂದ ಹಿಡಿದು ಇನ್ನೂರು ರೂ. ದಂಡ ವಿಧಿಸಬಹುದು. ಆದೇಶವನ್ನು ಧಿಕ್ಕರಿಸಿ ಇದರಿಂದ ಇತರರ ಆರೋಗ್ಯ ಅಥವಾ ಸುರಕ್ಷತೆಗೆ ಹಾನಿಯನ್ನುಂಟು ಮಾಡುವುದು ಅಥವಾ ಗಲಭೆ ಸೃಷ್ಟಿಸಿ ಅನಾಹುತ ಉಂಟುಮಾಡಿದರೆ, ಆ ವ್ಯಕ್ತಿಯನ್ನು ಆರು ತಿಂಗಳವರೆಗೆ ಜೈಲಿನಲ್ಲಿರಿಸಬಹುದು ಅಥವಾ ಒಂದು ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದು.

ಲಾಕ್‌ಡೌನ್‌ನಿಂದ ಯಾವುದಕ್ಕೆ ವಿನಾಯಿತಿ?

ಲಾಕ್‌ಡೌನ್‌ನ ಭಾಗವಾಗಿ, ಶಿಕ್ಷಣ ಸಂಸ್ಥೆಗಳು, ಪೂಜಾ ಸ್ಥಳಗಳು, ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳು ಈ ಕೆಳಗಿನ ವಿನಾಯಿತಿಗಳೊಂದಿಗೆ ಮುಚ್ಚಲ್ಪಡುತ್ತವೆ.

1) ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಡೈರಿ ಮತ್ತು ಹಾಲಿನ ಬೂತ್‌ಗಳು, ಮಾಂಸ ಮತ್ತು ಮೀನುಗಳು, ಪ್ರಾಣಿಗಳ ಮೇವು ಒದಗಿಸುವ ಪಡಿತರ ಅಂಗಡಿಗಳು (ಪಿಡಿಎಸ್ ಅಡಿಯಲ್ಲಿ) ಸೇರಿದಂತೆ ಅಂಗಡಿಗಳು. ಆದಾಗ್ಯೂ, ಅಧಿಕಾರಿಗಳು ಜನರ ಸಂಚಾರವನ್ನು‌ ತಡೆಯಲು ಮನೆ ವಿತರಣೆಯನ್ನು ಪ್ರೋತ್ಸಾಹಿಸಬಹುದು ಮತ್ತು ಸುಗಮಗೊಳಿಸಬಹುದು.

2) ಬ್ಯಾಂಕುಗಳು, ವಿಮಾ ಕಚೇರಿಗಳು ಮತ್ತು ಎಟಿಎಂಗಳು.

3) ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ.

4) ದೂರಸಂಪರ್ಕ, ಇಂಟರ್ನೆಟ್ ಸೇವೆಗಳು, ಪ್ರಸಾರ ಮತ್ತು ಕೇಬಲ್ ಸೇವೆಗಳು. ಮನೆಯಲ್ಲೇ ಮಾಡುವ ಕೆಲಸಗಳು(ಐಟಿ)

5) ಆಹಾರ, ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಇ-ಕಾಮರ್ಸ್ ಮೂಲಕ ತಲುಪಿಸುವ ಸೇವೆ.

6) ಪೆಟ್ರೋಲ್ ಪಂಪ್‌ಗಳು, ಎಲ್‌ಪಿಜಿ, ಪೆಟ್ರೋಲಿಯಂ ಮತ್ತು ಗ್ಯಾಸ್ ಚಿಲ್ಲರೆ ವ್ಯಾಪಾರ ಮತ್ತು ಶೇಖರಣಾ ಮಳಿಗೆಗಳು.

7) ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣಾ ಘಟಕಗಳು ಮತ್ತು ಸೇವೆಗಳು.

8) ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಸೂಚಿಸಿದಂತೆ ಬಂಡವಾಳ ಮತ್ತು ಸಾಲ ಮಾರುಕಟ್ಟೆ ಸೇವೆಗಳು.

ಲಾಕ್‌ಡೌನ್ ಬಗ್ಗೆ ಸಂಪೂರ್ಣವಾಗಿ ಅರ್ಥ‌ ಮಾಡಿಕೊಂಡು‌ ಅದನ್ನು ಯಶಸ್ಚಿಗೊಳಿಸೋಣ. ಕೊರೊನಾ ನಿರ್ಮಾಲನೆ ಮಾಡೋಣ.

ಜೀಎಂ

Tags

Related Articles

FOR DAILY ALERTS
Close