ಪ್ರಚಲಿತ

ಕೊರೊನಾ ಸಂಕಷ್ಟ ಕಾಲದಲ್ಲೂ ಮೋದಿ ಸರ್ಕಾರ ಘಟಾನುಘಟಿಗಳ ಸಾಲ ಮನ್ನಾ ಮಾಡಿತೇ..? ಹಾಗಾದರೆ ಸಾಲದ ರೈಟ್‌ ಆಫ್‌ ಎಂದರೇನು?

  • ದೇಶಾದ್ಯಂತ ಈಗ ಕೊರೊನಾ ವೈರಸ್‌ ವ್ಯಾಪಕವಾಗಿದ್ದು, ಲಾಕ್‌ಡೌನ್‌ನಿಂದ ದೇಶವೇ ತತ್ತರಿಸಿದೆ. ಈ ಮಧ್ಯೆ ಮೋದಿ ಸರಕಾ ಘಟಾನುಘಟಿಗಳ ಸಾಲಮನ್ನಾ ಮಾಡಲಾಗಿದೆ ಎಂದು ಕೆಲವರು ಗಂಟಲು ಕಿರಿಯುವಂತೆ ಊಳಿಡುತ್ತಿದ್ದಾರೆ. ಅರ್ಥಶಾಸ್ತ್ರದ ಎಬಿಸಿಡಿ ಬಾರದವರು ಈ ರೀತಿ‌ ಬೊಬ್ಬೆ ಹೊಡೆಯುವುದನ್ನು‌ ನೋಡಿದಾಗ ಇಡೀ ದೇಶದ ಜನತೆ ಮುಸಿಮುಸಿ ನಗಲಾರಂಭಿಸಿದ್ದು, ಅಜ್ಞಾನಿಗಳ ಜ್ಞಾನದ ಮಟ್ಟ ನೋಡಿ ಜನರೆಲ್ಲಾ ಕಕ್ಕಾಬಿಕ್ಕಿಯಾಗಿದ್ದಾರೆ.

ಆದ್ದರಿಂದ ಇಂದು ನಾವು ಅಷ್ಟೊಂದು ದೊಡ್ಡ‌ ಮಟ್ಟದ ಸಾಲ ನೀಡಿದ್ದುವಯಾರು? ಸಾಲದ ರೈಟ್‌ ಆಫ್ ಅಂದ್ರೆ ಏನು? ಎನ್ನುವ ಎರಡು ವಿಷಯಗಳನ್ನು ಸ್ಪಷ್ಟವಾಗಿ ಅರ್ಥ‌ ಮಾಡಿಕೊಳ್ಳಬೇಕಾಗಿದೆ.‌

ಸಾಲ ತೀರಿಸಲಾಗದೆ ಕುಖ್ಯಾತರಾಗಿರುವ ವಿಜಯ್ ಮಲ್ಯ, ನೀರವ್‌ ಮೋದಿ ಹಾಗೂ ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಸೇರಿದಂತೆ ಒಟ್ಟು 50 ಸಾಲಗಾರರು ಬಾಕಿ ಉಳಿಸಿಕೊಂಡಿರುವ 68,607 ಕೋಟಿ ರೂ. ಸಾಲವನ್ನು ಮೋದಿ ಸರ್ಕಾರ ರೈಟ್‌ ಆಫ್‌ ಮಾಡಿದೆ.

ಮೆಹುಲ್‌ ಚೋಕ್ಸಿಯವರ ಗೀತಾಂಜಲಿ ಜೆಮ್ಸ್‌ ಲಿ.ನ 5,492 ಕೋಟಿ ರೂ, ವಿಜಯ್‌ ಮಲ್ಯ ಅವರ ಕಿಂಗ್‌ಫಿಶರ್‌ ಏರ್‌ಲೈನ್ಸ್‌ನ 1,943 ಕೋಟಿ ರೂ, ಬಾಬಾ ರಾಮ್‌ದೇವ್‌ ಅವರ ಪತಂಜಲಿ ಗ್ರೂಪ್‌ನ ಭಾಗವಾದ ರುಚಿ ಸೋಯಾ ಇಂಡಸ್ಟ್ರೀಸ್‌ನ 2,212 ಕೋಟಿ ರೂ. ಸುಸ್ತಿ ಸಾಲ ತಾಂತ್ರಿಕವಾಗಿ ಕಡತದಿಂದ ಹೊರಗೆ ಹೋಗಿದೆ. ಈ ಪಟ್ಟಿಯಲ್ಲಿ, ಆರ್‌ಇಐ ಆಗ್ರೊ ಲಿಮಿಟೆಡ್‌ನ 4,314 ಕೋಟಿ ರೂ, ಜತಿನ್‌ ಮೆಹ್ತಾ ಅವರ ವಿನ್‌ಸಮ್‌ ಡೈಮಂಡ್ಸ್‌ ಆ್ಯಂಡ್‌ ಜ್ಯುವೆಲ್ಲರಿಯ 4,076 ಕೋಟಿ ರೂ. ಸಾಲವನ್ನೂ ತಾಂತ್ರಿಕವಾಗಿ ಬರ್ಖಾಸ್ತುಗೊಳಿಸಲಾಗಿದೆ.

ಯುಪಿಎ ಅವಧಿಯಲ್ಲೇ ಭರ್ಜರಿ ಸಾಲ ನೀಡಿಕೆ

ಇಷ್ಟು ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷ 52 ಲಕ್ಷ ಕೋಟಿ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ನೀಡಿತ್ತು. ಯಾವುದೇ ಅಧಿಕೃತ ದಾಖಲೆಗಳು ಇಲ್ಲದೆಯೇ ಭಾರೀ ಮೊತ್ತದ ಈ ಸಾಲವನ್ನು ಕಾಂಗ್ರೆಸ್ ನೀಡಿತ್ತು. ಚುನಾವಣೆ ಹತ್ತಿರ ಬರುತ್ತಿರುವ ಕಾರಣದಿಂದ ಈ ಸಾಲಗಳನ್ನು ತರಾತುರಿಯಲ್ಲಿ ಕಾಂಗ್ರೆಸ್ ಸರ್ಕಾರ ನೀಡಿತ್ತು. ಈ ಮೂಲಕ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಾಲದಲ್ಲೂ ಭಾರೀ ಭ್ರಷ್ಟಾಚಾರವನ್ನು ಮೆರೆದಿತ್ತು.

ಮೇಲಿರುವ ಸಾಲಗಾರರ ಹೆಸರುಗಳನ್ನೇ ಗಮನಿಸಿದರೆ, ಮೆಹುಲ್ ಚೋಕ್ಸಿ 2005 ರಿಂದ 2017ರವರೆಗೆ ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ. ಶೇ. 90 ಅವರು ಸಾಲ ಪಡೆದಿರುವುದು 2014 ರ ಮುಂಚೆ. ನೆನಪಿಡಿ ಆ ಅವಧಿಯ ಮುಂಚೆ ಮೋದಿ ಸರಕಾರ ಇರದೆ ಯುಪಿಎ1-2 ಸರಕಾರ ಅಸ್ತಿತ್ವದಲ್ಲಿತ್ತು.

ವಿಜಯ್ ಮಲ್ಯ ಅವರು ಅತಿ ಹೆಚ್ಚು ಸಾಲ ಪಡೆದಿರುವ ಸಮಯ 2005ರಿಂದ 2010 ರವರೆಗೆ. ಈ ಅವಧಿಯಲ್ಲೂ ಮೋದಿ ಸರಕಾರ ಇರಲಿಲ್ಲ. ಆದರೆ ಸಾಲ ವಸೂಲಾತಿ ಆರಂಭಗೊಂಡಿದ್ದು 2016 ರಿಂದ. ಅಂದರೆ ಮೋದಿ ಸರಕಾರದ‌ ಅವಧಿಯಲ್ಲೇ.

ನೀರವ್ ಮೋದಿ ಸಾಲ ಪಡೆದು ಬ್ಯಾಂಕ್‌ಗಳಿಗೆ ಪಂಗನಾಮ ಹಾಕಲಾರಂಭಿಸಿದ್ದು 2008 ರಿಂದ. ಆದರೆ ಇದರ ತನಿಖೆ ಆರಂಭಗೊಂಡಿದ್ದು 2016 ರಿಂದ. ಅದೂ ಕೂಡಾ ಮೋದಿ ಸರಕಾರ ಬಂದ ಮೇಲೆಯೇ…ಇದೇ ರೀತಿ ಹಲವಾರು ಮಂದಿ ಯುಪಿಎ ಅವಧಿಯಲ್ಲಿ ಸಾಲ ಪಡೆದಿದ್ದು, ದಯಪಾಲಿಸಿದ್ದು ಮಾತ್ರ ಯುಪಿಎ ಅವಧಿಯಲ್ಲೇ.

ಹಾಗಾದರೆ ಸಾಲದ ರೈಟ್‌ ಆಫ್‌ ಎಂದರೇನು?

ಕೊರೊನಾ ಗಂಡಾಂತರದ ನಡುವೆ ಈ ಸುದ್ದಿ ಸದ್ಯ ಭಾರೀ ಚರ್ಚೆಗೀಡಾಗಿದೆ.‌ ತಮ್ಮ ಆಡಳಿತಾವಧಿಯಲ್ಲಿ ತಾನೇ ಬೇಕಾ ಬಿಟ್ಟಿ ಸಾಲ ಕೊಟ್ಟಿದ್ದ ಪಕ್ಷಗಳೆಲ್ಲಾ ಇದೀಗ ವಿರೋಧ ಪಕ್ಷದಲ್ಲಿ ಕುಳಿತು, ಕೇಂದ್ರ ಸರ್ಕಾರ ಪ್ರಮುಖ ‘ಸಾಲಕೋರರ’ ಸಾಲಮನ್ನಾ ಮಾಡಿಬಿಟ್ಟಿದೆ ಎಂದು ಊಳಿಡುತ್ತಿವೆ.

ಮಾಹಿತಿ ಹಕ್ಕು ಕಾಯ್ದೆಯ ಅಧಿಕಾರವನ್ನು ಬಳಸಿ ಆರ್‌ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ ಎಂಬುವರು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಪ್ರಶ್ನೆಯೊಂದನ್ನು ಕೇಳಿ, ದೇಶದ 50 ಪ್ರಮುಖ ಸಾಲ ಸುಸ್ತಿದಾರರ ಈಗಿನ ಸಾಲದ ವಿವರಗಳನ್ನು ಕೇಳಿದ್ದರು.
ಈ ಪ್ರಶ್ನೆಗೆ ಉತ್ತರಿಸಿದ್ದ ಆರ್‌ಬಿಐ, 2019ರ ಸೆಪ್ಟಂಬರ್ 30ರ ತನಕ 68,607 ಕೋಟಿ ರೂ. ಸಾಲವನ್ನು ರೈಟ್‌ ಆಫ್‌ ಮಾಡಿರುವುದಾಗಿ ತಿಳಿಸಿತ್ತು. ಅದರಲ್ಲಿ ಚೋಕ್ಷಿ, ಮಲ್ಯ ಮುಂತಾದ ಘಟಾನುಗಳು ಸೇರಿ ಐವತ್ತು ಮಂದಿಯ ಹೆಸರಿತ್ತು.

ರೈಟ್‌ ಆಫ್‌ ಎಂದರೆ, ಸಾಲದ ದಾಖಲೆಯನ್ನು ತಾಂತ್ರಿಕವಾಗಿ ಕಡತದಿಂದ ಹೊರಗಿಡುವುದು ಎಂದರ್ಥ. ರೈಟ್‌ ಆಫ್‌ ಎಂದರೆ ಸಾಲಮನ್ನಾ ಎಂದರ್ಥವಲ್ಲ. ಬ್ಯಾಂಕಿಂಗ್‌ ವ್ಯವಸ್ಥೆಗೆ ಹೆಚ್ಚು ಪಾರದರ್ಶಕತೆ ಮತ್ತು ಉತ್ತರದಾಯಿತ್ವ ನೀಡುವ ಕ್ರಮವನ್ನು ಸಾಲದ ರೈಟ್ ಆಫ್ ಎನ್ನುತ್ತಾರೆ.

ಬ್ಯಾಂಕ್‌ಗಳು ತಾವು ನೀಡಿರುವ ಸಾಲದ ಮರು ವಸೂಲಾತಿ ತುಂಬಾ ಕಷ್ಟ ಎಂದು ಗಮನಕ್ಕೆ ಬಂದಾಗ ಮಾತ್ರ ಈ ಕ್ರಮ ಕೈಗೊಳ್ಳುತ್ತವೆ. ಸುಸ್ತಿ ಸಾಲಗಳನ್ನು ತಮ್ಮ ಬ್ಯಾಲೆನ್ಸ್‌ ಶೀಟ್‌ನಿಂದ ಪ್ರತ್ಯೇಕಗೊಳಿಸಲು ‘ರೈಟ್‌ ಆಫ್‌’ ಪದ್ಧತಿಯನ್ನು ಬಳಸುತ್ತವೆ. ಇದು ಲೆಕ್ಕಪತ್ರಗಳ ಅನುಕೂಲಕ್ಕಾಗಿ ಬಳಸಬಹುದಾದ ವಿಧಾನ ಮಾತ್ರ. ಇದರಿಂದ ಬ್ಯಾಂಕ್‌ಗಳಿಗೆ ತೆರಿಗೆಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

ಅಂದರೆ ಸಾಲ ಮನ್ನ ಅಲ್ಲ…

ರೈಟ್‌ ಆಫ್‌ ಎಂದರೆ ಯಾವುದೇ ಕಾರಣಕ್ಕೂ ಸಾಲ ಮನ್ನಾ ಅಲ್ಲವೇ ಅಲ್ಲ. ಸಾಲ ವಸೂಲಾತಿಯನ್ನು ಮುಂದೆಯೂ ಮಾಡಬಹುದಾಗಿದೆ. ಅವಕಾಶ ಸಿಕ್ಕಾಗಲೆಲ್ಲಾ ಬ್ಯಾಂಕ್‌ಗಳು ತಾವು ನೀಡಿದ ಸಾಲವನ್ನು ಬಡ್ಡಿ ಸಮೇತ ವಸೂಲಿ ಮಾಡೇ ಮಾಡುತ್ತವೆ. ಏಕೆಂದರೆ ರೈಟ್ ಆಫ್ ಆಗಿರೋ ಸಾಲಗಳನ್ನು ಮರು ವಸೂಲು ಮಾಡಿದ ಅನೇಕ ಉದಾಹರಣೆಗಳು ದೇಶದಲ್ಲಿವೆ.

ಆರ್‌ಟಿಐ ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸಿದ ಭಾರತೀಯ ರಿಸರ್ವ್‌ ಬ್ಯಾಂಕ್‌ ಸುಸ್ತಿದಾರರ ಪಟ್ಟಿ ಕೊಟ್ಟಿದ್ದೇ ತಡ, ಕೇಂದ್ರ ಸರ್ಕಾರ ಸಾಲಮನ್ನಾ ಮಾಡಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ, “ಈ ಹಿಂದೆ ಸಂಸತ್ತಿನಲ್ಲಿ ನಡೆದ ಚರ್ಚೆಯ ವೇಳೆ ಪ್ರಮುಖ 50 ಸುಸ್ತಿದಾರರ ಪಟ್ಟಿಯನ್ನು ನೀಡುವಂತೆ ನಾನು ಕೇಳಿದ್ದೆ. ಆದರೆ ಕೇಂದ್ರ ಸರಕಾರ ಆ ಸಮಯದಲ್ಲಿ ಯಾವುದೇ ಉತ್ತರ ನೀಡಿರಲಿಲ್ಲ. ಈಗ ನೋಡಿದರೆ, ಬಿಜೆಪಿಗೆ ಬೇಕಿರುವ ಸ್ನೇಹಿತರ ಹೆಸರುಗಳುಳ್ಳ 50 ಸುಸ್ತಿದಾರರ ಪಟ್ಟಿಯನ್ನು ನೀಡಿದೆ” ಎಂದು ರಾಹುಲ್ ಗಾಂಧಿ ಟ್ವೀಟಿಸಿದರು. ಇದು ಭಾರೀ ವಿವಾದ ಸೃಷ್ಟಿಸಿತು.

ಕೊರೊನಾ ವೈರಸ್ ಲಾಕ್‌ಡೌನ್‌ ಸಮಯದಲ್ಲೇ ಕೇಂದ್ರ ಸರ್ಕಾರ ಸಾಲಕೋರ ಉದ್ಯಮಿಗಳ ಪರ ನಿಂತಿದ್ದೇಕೆ ಎಂದು ದೇಶಾದ್ಯಂತ ಆಕ್ರೋಶ ವ್ಯಕ್ತವಾಯ್ತು. ಆದರೆ, ಸಾಲಮನ್ನಾಗೂ ಸಾಲದ ರೈಟ್‌ ಆಫ್‌ಗೂ ಯಾವುದೇ ಸಂಬಂಧವಿಲ್ಲ ಅನ್ನೋದು ಇದೀಗ ಸ್ಪಷ್ಟವಾಗಿದೆ

ರಾಹುಲ್ ಗಾಂಧಿಯ ಟೀಕೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರ್ಜರಿ ತಿರುಗೇಟು ನೀಡಿ ಕಾಂಗ್ರೆಸ್ ನಿಜ ಬಣ್ಣ ಬಯಲುಗೊಳಿಸಿದ್ದಾರೆ.

ಜನರನ್ನು ದಿಕ್ಕುತ್ತಪ್ಪಿಸಲು ಲಜ್ಜೆಗೆಟ್ಟ ರೀತಿ ಪ್ರಯತ್ನಿಸುವುದೇ ಕಾಂಗ್ರೆಸ್ಸಿನ ವೈಶಿಷ್ಟ್ಯತೆ ಎಂದು ಸರಣಿ ಟ್ವೀಟ್‌ಗಳ ಮೂಲಕ ತಿರುಗೇಟು ನೀಡಿದ್ದಾರೆ.

ನಿರ್ಮಲಾ‌ ಸೀತರಾಮನ್ ಟ್ವಿಟರ್‌ನಲ್ಲಿ ನೀಡಿದ ತಿರುಗೇಟಿನ ಝಲಕ್ ಇಲ್ಲಿದೆ.

“ನರೇಂದ್ರ ಮೋದಿ ಸರ್ಕಾರ ಸುಸ್ತಿದಾರರ ವಿರುದ್ಧ ಕ್ರಮ ಕೈಗೊಂಡಿದೆ. ಈಗಾಗಲೇ 3,515 ಎಫ್‍ಐಆರ್ ದಾಖಲಾಗಿದೆ. ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ವಿಜಯ್ ಮಲ್ಯ ಪ್ರಕರಣಗಳ ಪೈಕಿ ಒಟ್ಟು 18,332 ಕೋಟಿ ಮೌಲ್ಯ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ”

” 2009-2010 ಮತ್ತು 2013-2014ರ ನಡುವೆ ವಾಣಿಜ್ಯ ಬ್ಯಾಂಕುಗಳು 1,45,226 ಕೋಟಿ ರೂ. ರೈಟಾಫ್ ಮಾಡಿವೆ. ಎನ್‍ಡಿಎ ಸರ್ಕಾರವನ್ನು ಟೀಕೆ ಮಾಡುವ ಮೊದಲು ರಾಹುಲ್ ಗಾಂಧಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಳಿ ರೈಟಾಫ್ ಎಂದರೇನು ಎಂದು ಕೇಳಿ ತಿಳಿದುಕೊಳ್ಳಲಿ”.

“2006ರಿಂದ 2008ರ ಮಧ್ಯೆ ದೊಡ್ಡ ಪ್ರಮಾಣದ ಅನುತ್ಪಾದಕ ಸಾಲಗಳು ಸೃಷ್ಟಿಯಾಗಿತ್ತು. ಸಾಲ ಹಿಂತಿರುಗಿಸದೆ ವಂಚಿಸದೆ ಹಿನ್ನಲೆಯಿರುವ ಪ್ರಮುಖ ಉದ್ಯಮಿಗಳೇ ಈ ಸಾಲಗಳನ್ನು ಹೊಂದಿದ್ದರು” ಎಂಬ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರ ಹೇಳಿಕೆಯನ್ನು ತಮ್ಮ ವಾದಕ್ಕೆ ಉಲ್ಲೇಖಿಸಿ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.

“ವಿಜಯ್ ಮಲ್ಯ ಪ್ರಕರಣದಲ್ಲಿ 1,693 ಕೋಟಿ ರೂ. ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಈಗಾಗಲೇ ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಲಾಗಿದ್ದು ಸರ್ಕಾರ ಇಂಗ್ಲೆಂಡ್ ಸರ್ಕಾರಕ್ಕೆ ಹಸ್ತಾಂತರ ಮಾಡುವಂತೆ ಕೇಳಿಕೊಂಡಿದೆ. ಹೈಕೋರ್ಟ್ ಸಹ ಹಸ್ತಾಂತರ ಪರವಾಗಿಯೇ ತೀರ್ಪು ನೀಡಿದೆ”

“ನೀರವ್ ಮೋದಿ ಪ್ರಕರಣದಲ್ಲಿ 2,387 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. 53.45 ಕೋಟಿ ರೂ. ಮೌಲ್ಯದ ಲಕ್ಷುರಿ ವಸ್ತುಗಳನ್ನು ಹರಾಜು ಹಾಕಲಾಗಿದೆ. ಈಗಾಗಲೇ ಈ ವ್ಯಕ್ತಿ ಇಂಗ್ಲೆಂಡ್ ಜೈಲಿನಲ್ಲಿದ್ದಾರೆ. ಮೆಹುಲ್ ಚೋಕ್ಸಿ ಪ್ರಕರಣಲ್ಲಿ 1,936.95 ಕೋಟಿ ರೂ. ಮೌಲ್ಯ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಈಗಾಗಲೇ ರೆಡ್ ನೋಟಿಸ್ ಹೊರಡಿಸಲಾಗಿದ್ದು. ಆಂಟಿಗುವಾ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಕೇಳಲಾಗಿದೆ”

“ಸಾಲ ಮರಳಿಸುವ ಶಕ್ತಿ ಇದ್ದರೂ ಹಿಂತಿರುಗಿಸದಿದ್ದವರನ್ನು ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದವರು ಎಂದು ಹೆಸರಿಸಲಾಯಿತು. ಇಂತವರು ಹಿಂದಿನ ಯುಪಿಎ ಸರ್ಕಾರದ ‘ಫೋನ್ ಬ್ಯಾಂಕಿಂಗ್’ ಸೌಲಭ್ಯವನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದರು”

ನಿರ್ಮಲಾ ಸೀತಾರಾಮನ್ ಅವರ ದಾಖಲೆ ಸಮೇತ ನೀಡಿದ ತಿರುಗೇಟಿಗೆ ವಿರೋಧ ಪಕ್ಷಗಳು ಯಾಕಾಗಿ ಬೇಕಿತ್ತು ಈ ವಿಷ್ಯ ಎನ್ನುವ ಮಟ್ಟಿಗೆ ಸ್ತಬ್ಧವಾಗಿ ಬಿಟ್ಟಿದೆ.

  • ಗಿರೀಶ್
Tags

Related Articles

FOR DAILY ALERTS
Close