ಅಂಕಣ

41,000 ಹೆಣ್ಮಕ್ಕಳಿಗೆ ಮಾಂಗಲ್ಯ ದಾನ ಮಾಡಿದವರಿಗೆ ತನ್ನ ಮಗಳ ಮದುವೆಯನ್ನು ತನ್ನಿಷ್ಟದಂತೆ ಮಾಡಲು ಹಕ್ಕಿಲ್ಲವೇ?

ಕೋಟಿಗಟ್ಟಲೆ ದುಡ್ಡು ಮಾಡಿದರೂ ನಯಾಪೈಸೆಯನ್ನೂ ಬಿಚ್ಚುವವರಿಲ್ಲದಿರುವಾಗ ಆ ವ್ಯಕ್ತಿ ಬರೋಬ್ಬರಿ 41,000 ಹೆಣ್ಮಕ್ಕಳಿಗೆ ಮದುವೆ ಮಾಡಿದರು. ಒಂದಷ್ಟು ದಾನ ಮಾಡಿದರು. ಸರಕಾರ ಮಕ್ಕಳ ಅನ್ನವನ್ನು ಕಸಿದಾಗ ತಾನೇ ಮುಂದೆ ನಿಂತು ಅನ್ನಕ್ಕಾಗಿ ದಾನ ನೀಡಿದರು. ಇಷ್ಟೆಲ್ಲಾ ಮಾಡಿದ ವ್ಯಕ್ತಿ ತನ್ನ ಮಗಳ ಮದುವೆ ಮಾಡಿದಾಗ ಮಾತ್ರ ಅವರನ್ನು ಖಳನಾಯಕನಂತೆ ಚಿತ್ರಿಸಿದರು. 41,000 ಹೆಣ್ಮಕ್ಕಳಿಗೆ ಮಾಂಗಲ್ಯ ದಾನ ಮಾಡಿದವರಿಗೆ ತನ್ನ ಮಗಳ ಮದುವೆಯನ್ನು ತನ್ನಿಷ್ಟದಂತೆ ಮಾಡಲು ಹಕ್ಕಿಲ್ಲವೇ? ತನ್ನ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದರೆಂದು ಪ್ರಚಾರ ಮಾಡುವವರಿಗೆ ಅವರು ಮಾಡಿದ ಮಾಂಗಲ್ಯ ದಾನದ ಬಗ್ಗೆ ಯಾಕೆ ಪ್ರಚಾರ ಮಾಡಲು ಸಾಧ್ಯವಾಗಿಲ್ಲ?

ಅಷ್ಟಕ್ಕೂ 41,000 ಮಾಂಗಲ್ಯ ದಾನ ಮಾಡಿದ ಕೊಡುಗೈ ದಾನಿ ಯಾರು ಗೊತ್ತಾ…? ಜನಾರ್ದನ ರೆಡ್ಡಿ.

ನಾನಾ ಸುಳ್ಳು ಆರೋಪಗಳಿಗೆ ಸಿಲುಕಿ ಜೈಲು ಶಿಕ್ಷೆ ಅನುಭವಿಸಿದ ಜನಾರ್ದನ ರೆಡ್ಡಿಯವರನ್ನು ಮಾಧ್ಯಮಗಳೆಲ್ಲಾ ಖಳನಾಯಕನಂತೆ ಚಿತ್ರಿಸಿದರೇ ಹೊರತು
ಅವರೊಬ್ಬ ಕೊಡುಗೈ ದಾನಿ, ಅನೇಕರ ಸಂಕಷ್ಟಗಳಿಗೆ ನೆರವಾದ ವ್ಯಕ್ತಿ ಎಂದು ಯಾರೂ ತೋರಿಸಲೇ ಇಲ್ಲ ಎನ್ನುವುದೇ ದೊಡ್ಡ ವಿಪರ್ಯಾಸ. ಇಷ್ಟೆಲ್ಲಾ ಮಾಡಿದ ವ್ಯಕ್ತಿ ತನ್ನ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದಾಗ ರಾಜ್ಯದ ಮಾಧ್ಯಮವೊಂದು ಬರೋಬ್ಬರಿ 500 ಕೋಟಿ ಖರ್ಚು ಮಾಡಿದರೆಂದು ವರದಿ ಮಾಡಿತು… ಅಷ್ಟೊಂದು ದುಡ್ಡಿಗೆ ಎಷ್ಟು ಸೊನ್ನೆಗಳಿದೆ, ಅಷ್ಟೊಂದು ಹಣವನ್ನು ಖರ್ಚು ಮಾಡಿದರೆಂದು ಅಂದಾಜೂ ಮಾಡಲು ಸಾಧ್ಯವಿಲ್ಲದ ಆ ಮಾಧ್ಯಮ ಈ ರೀತಿ ಸುಳ್ಳು ಪ್ರಚಾರ ಮಾಡಲು ಒಂದು ಕಾರಣವೂ ಇದೆ. ಇಂದು ಈ ಮೀಡಿಯಾ ಅಂದ್ರೇನೇ ಹಾಗೆ ಅಲ್ವಾ… ಡೀಲು ಇಲ್ಲವೇ ಬ್ಲ್ಯಾಕ್‍ಮೇಲು….!!! ಡೀಲು ಮಾಡಿ ಹಣ ಕುದುರಿಸಿದರೆ ಅವನನ್ನು ಇಂದ್ರ, ಚಂದ್ರ ಎಂದು ಹೊಗಳುವ ಮಾಧ್ಯಮಗಳು ಹಣ ಕೊಡದಿದ್ದರೆ ಅವನೊಬ್ಬ ನಟೋರಿಯಸ್ ರೌಡಿಯಾಗಬಲ್ಲ… ಅದೇ ರೀತಿ ಜನಾರ್ದನ ರೆಡ್ಡಿಯೂ ಮೀಡಿಯಾವೊಂದರ ಕುತಂತ್ರಕ್ಕೆ ಬಲಿಯಾದರು.

ಜನಾರ್ದನ ರೆಡ್ಡಿಯವರು 41,000 ಹೆಣ್ಮಕ್ಕಳಿಗೆ ಮದುವೆ ಮಾಡಿದ್ದಾರೆ ಎಂದರೆ ಒಂದು ಕ್ಷಣ ಅಚ್ಚರಿಯಾಗಬಹುದು. ಹೌದು!! ಜನಾರ್ದನ ರೆಡ್ಡಿ- ಶ್ರೀರಾಮುಲು ಜೋಡಿ ಇದುವರೆಗೆ ಬರೋಬ್ಬರಿ 41,000 ಹೆಣ್ಮಕ್ಕಳಿಗೆ ಮದುವೆ ಮಾಡಿದ್ದಾರೆ. ಇಷ್ಟೆಲ್ಲಾ ಕೆಲಸ ಮಾಡಿಯೂ ಕೂಡಾ ಜನಾರ್ದನ ರೆಡ್ಡಿ ತಾನು ಅದು ಮಾಡಿದೆ, ಇದು ಮಾಡಿದೆ ಎಂದು ಹೇಳಿಕೊಂಡವರೇ ಅಲ್ಲ. ತನ್ನಷ್ಟಕ್ಕೆ ತಾನು ಕೆಲಸ ಮಾಡಿಕೊಂಡು ಇಂದದಿಗೂ ಕೂಡಾ ತನ್ನ ಕೈಂಕರ್ಯವನ್ನು ಮುಂದುವರಿಸಿಕೊಂಡಿ ಬಂದಿದ್ದಾರೆ. 20 ವರ್ಷಗಳಿಂದ ಎಡೆಬಿಡದೆ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಮಾಡಿ ಸಾವಿರಾರು ಮಂದಿ ಬಡಹೆಣ್ಮಕ್ಕಳ ಮದುವೆ ಮಾಡುವುದೆಂದರೆ ಅದು ಸುಮ್ಮನೆ ಅಲ್ಲ.

1999ರಲ್ಲಿ ಬಳ್ಳಾರಿಯಲ್ಲಿ ಸಾಮೂಹಿಕ ವಿವಾಹ ಮಾಡಲು ತೊಡಗಿದ ಜನಾರ್ದನ ರೆಡ್ಡಿ ಆ ಬಳಿಕ 2006ರಿಂದ ಗದಗದಲ್ಲೂ ಆರಂಭಿಸಿದರು. ಇವರಿಗೆ ಸಾಥ್ ನೀಡಿದ್ದು ಶ್ರೀರಾಮುಲು ಅವರು. ಪ್ರತೀ ಜೋಡಿಗೂ 2 ತಾಳಿ, ಪಾತ್ರೆ ಸಾಮಗ್ರಿ, ರೂ. 10,000 ಹಣ, ಸೀರೆ ಹೀಗೆ ಮದುವೆಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಕೊಡುತ್ತಾರೆ. ಒಂದು ಜೋಡಿಗೂ ಕಡಿಮೆ ಎಂದರೂ 20000 ಖರ್ಚು ಮಾಡಿದರೂ ಇದುವರೆಗೆ 41,000 ಮಂದಿಗೆ ಎಷ್ಟು ಖರ್ಚಾಗಬಹುದೆಂದು ಅಂದಾಜಿದೆಯಾ? ಏನಿಲ್ಲವೆಂದರೂ 82 ಕೋಟಿ ರೂ. ಖರ್ಚಾಗುತ್ತದೆ. ಇನ್ನು ಮದುವೆಗೆ ಬಂದವರಿಗೆ ಊಟೋಪಚಾರ, ಸಾಂಸ್ಕ್ರತಿಕ ಕಾರ್ಯಕ್ರಮ ಇತರ ಖರ್ಚು ಎಲ್ಲಾ ಸೇರಿ ಎಷ್ಟು ಖರ್ಚಾಗಬಹುದು? ಈ ಬಗ್ಗೆ ಯಾವುದಾದರೂ ಮಾಧ್ಯಮಗಳ ವರದಿ ಮಾಡಿವೆಯೇ? ವಿರೋಧಿಗಳ ಷಡ್ಯಂತ್ರಕ್ಕೆ ಬಲಿಯಾದ ಜನಾರ್ದನ ರೆಡ್ಡಿಯನ್ನು ಖಳನಾಯಕನಂತೆ ಚಿತ್ರಿಸಿದ ಮಾಧ್ಯಮಗಳಿಗೆ ನಿಜವಾಗಿಯೂ ನೈತಿಕತೆ ಎಂಬುವುದಿದ್ದರೆ ಖಂಡಿತವಾಗಿಯೂ ಅವರ ಒಳ್ಳೆಯ ಕೆಲಸಗಳನ್ನೂ ಪ್ರಚಾರ ಮಾಡಿರುತ್ತಿದ್ದವು. ತಮಗೆ ಹಣ ನೀಡಿಲ್ಲ, ಜಾಹೀರಾತು ನೀಡಿಲ್ಲ ಎಂಬ ಕಾರಣಕ್ಕೆ ಒಬ್ಬನ ತೇಜೋವಧೆ ಮಾಡುವುದಕ್ಕೂ ಒಂದು ಅರ್ಥವಿರಬೇಕು..

ಅಷ್ಟಕ್ಕೂ ಜನಾರ್ದನ ರೆಡ್ಡಿ ತನ್ನ ಮಗಳ ಮದುವೆಗೆ ಮಾಡಿದ ಒಟ್ಟು ಖರ್ಚೆಷ್ಟು ಗೊತ್ತಾ?

ಜನಾರ್ದನ ರೆಡ್ಡಿಯವರು ತನ್ನ ಮಗಳಿಗೆ ಬರೋಬ್ಬರಿ 500 ಕೋಟಿ ರೂ ಖರ್ಚು ಮಾಡಿದರೆಂದು ಒಂದು ಮಾಧ್ಯಮ ಸುದ್ದಿ ಹಬ್ಬಿಸಿತು. ಬಳ್ಳಾರಿ ಜಿಲ್ಲೆಗೆ ಬಜೆಟ್‍ನಲ್ಲಿ ಮೀಸಲಿಡುವ ಹಣವೇ 184 ಕೋಟಿ ರೂ. ಅಂತೆ. ಆದರೆ ಜನಾರ್ದನ ರೆಡ್ಡಿ 500 ಕೋಟಿ ರೂ ಖರ್ಚು ಮಾಡಿದ್ದಾರೆಂದು ಆ ಮೀಡಿಯಾ ಜನರನ್ನು ನಂಬಿಸಿತು. ಅಷ್ಟೊಂದು ಹಣವನ್ನು ಖರ್ಚು ಮಾಡಲು ಸಾಧ್ಯವೇ? 500 ಕೋಟಿಗೆ ಎಷ್ಟು ಸೊನ್ನೆ ಇದೆ ಎಂಬ ಲೆಕ್ಕಾಚಾರವನ್ನೂ ಮಾಡದ ಆ ಒಂದು ಮೀಡಿಯಾದ ಸುಳ್ಳು ಸುದ್ದಿಯನ್ನೆಲ್ಲಾ ನಾವೆಲ್ಲಾ ಕಣ್ಣುಮುಚ್ಚಿ ನಂಬಿದೆವು. ಆದರೆ ರೆಡ್ಡಿ ತನ್ನ ಮಗಳಿಗೆ ಮಾಡಿದ ಒಟ್ಟು ಖರ್ಚೆಷ್ಟು ಗೊತ್ತಾ? 31 ಕೋಟಿ ರೂ. ಹಣ….!!! ತನ್ನ ಪ್ರೀತಿಯ ಮಗಳಿಗೆ ಒಬ್ಬ ಶ್ರೀಮಂತ ವ್ಯಕ್ತಿ ತನ್ನ ಆತ್ಮಸಂತೃಪ್ತಿಗಾಗಿ ಮದುವೆ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ ಬಿಡಿ. 41,000 ಮಂದಿಗೆ ಅದ್ದೂರಿ ಮದುವೆ ಮಾಡಿದವರಿಗೆ ತನ್ನ ಮಗಳ ಮದುವೆಯನ್ನು ತನ್ನಿಚ್ಛೆಯಂತೆ ಮಾಡಿಕೊಳ್ಳುವುದರಲ್ಲಿ ತಪ್ಪೇನಿದೆ ಸ್ವಾಮೀ?

ಜನಾರ್ದನ ರೆಡ್ಡಿ ತನ್ನ ಮಗಳಿಗೆ ಮಾಡಿದ 31 ಕೋಟಿ ಹಣಕ್ಕೂ ಲೆಕ್ಕಾಚಾರವಿದೆ. ಪ್ರತಿಯೊಂದಕ್ಕೂ ಖರ್ಚು ಮಾಡಿರುವುದಕ್ಕೆ ಬಿಲ್ ಇದೆ. ಆ ಹಣ ಎಲ್ಲಿಂದ ಬಂತು, ಯಾವುದಕ್ಕೆಲ್ಲಾ ಖರ್ಚಾಗಿದೆ ಹೀಗೆ ಪ್ರತಿಯೊಂದಕ್ಕೂ ಪಿನ್‍ಟುಪಿನ್ ಲೆಕ್ಕಾಚಾರವಿದೆ. ಇದನ್ನು ಆದಾಯ ತೆರಿಗೆ ಇಲಾಖೆಯೂ ಕಂಡುಕೊಂಡಿದೆ. ಇಲ್ಲವಾದರೆ ರೆಡ್ಡಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಯಾಕೆ ಮಾಡಿಲ್ಲ? ಇದರಲ್ಲೇ ರೆಡ್ಡಿ 500 ಕೋಟಿ ರೂ ಖರ್ಚು ಮಾಡಿದ್ದು ಸುಳ್ಳು ಎಂದು ಸಾಬೀತು ಮಾಡಬಹುದು. ಅಲ್ಲಾ ಸ್ವಾಮೀ ರೆಡ್ಡಿ ಒಂದು ವೇಳೆ 500 ಕೋಟಿ ರೂ. ಹಣ ಖರ್ಚು ಮಾಡಿದ್ದೇ ಆಗಿದ್ದರೆ ಮದುವೆ ಬಂದ ಪ್ರತೀಯೊಬ್ಬರು ಹೆಣ್ಣಮಕ್ಕಳಿಗೂ ಚಿನ್ನದ ಸೀರೆಯನ್ನು ಕೊಟ್ಟರೂ ಅಷ್ಟೊಂದು ಹಣವನ್ನು ಖರ್ಚು ಮಾಡಲು ಸಾಧ್ಯವಿಲ್ಲ. ಅಂತಹುದ್ದರಲ್ಲಿ 500 ಕೋಟಿ ಖರ್ಚು ಮಾಡಿದ್ದಾರೆಂದು ಯಾವುದೇ ಆಧಾರಹಿತ ಸುದ್ದಿಯನ್ನು ನಾವೂ ಕೂಡಾ ಮೂರ್ಖರಂತೆ ನಂಬಿದೆವಲ್ಲಾ… ಛೇ ಎಂಥಾ ವಿಪರ್ಯಾಸ…!!

ಕುತಂತ್ರವೇನು ಗೊತ್ತಾ?

ಯಾವಾಗ ಜನಾರ್ದನ ರೆಡ್ಡಿ ತನ್ನ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಾರೆಂದು ಗೊತ್ತಾಯಿತೋ ಮಾಧ್ಯಮಗಳೂ ಕೂಡಾ ತಮಗೂ ಕೂಡಾ ಸ್ವಲ್ಪ
ಕಮಾಯಿ ಸಿಗಬಹುದೆಂದು ಭಾವಿಸಿದ್ದವು. ಜಾಹೀರಾತು ರೂಪದಲ್ಲಿ ಅಥವಾ ಡೀಲು ರೂಪದಲ್ಲಿ ಒಂದಷ್ಟು ಪೀಕಿಸಬಹುದೆಂದು ಭಾವಿಸಿದ್ದವು. ಇಂದು ಯಾವುದೇ
ಸೆಲೆಬ್ರಿಟಿ ಮದುವೆಯಾದರೂ ಟಿ.ವಿ.ಯಲ್ಲಿ ಲೈವ್ ದೃಶ್ಯ ಬಂದುಬಿಡುತ್ತದೆ. ಅದೇ ರೀತಿ ಪ್ಲಾನ್ ಮಾಡಿತ್ತು ಆ ಒಂದು ಮೀಡಿಯಾ…

ಈ ಯೋಚನೆ ತಲೆಯಲ್ಲಿ ಬಂದಿದ್ದೇ ತಡ. ಜನಾರ್ದನ ರೆಡ್ಡಿಯ ಬಳಿಗೆ ತೆರಳಿದ ಆ ಮೀಡಿಯಾದ ವ್ಯಕ್ತಿ ತಮ್ಮಲ್ಲಿ ಲೈವ್ ಕೊಡಬಹುದು ಎಂದು ಹೇಳಿ ಒಂದಷ್ಟು ಹಣ ಫಿಕ್ಸು ಮಾಡಿತು. ಎಲ್ಲಾ ಮೀಡಿಯಾಗಳಿಗೂ ಪ್ರಸಾರದ ಹಕ್ಕನ್ನು ಮದುವೆಯ ನಂತರ ಕೊಡೋಣ ಎಂದು ಭಾವಿಸಿದ್ದ ಜನಾರ್ದನ ರೆಡ್ಡಿ ಯಾವಾಗ ಹಣ ಬಿಚ್ಚುವುದಿಲ್ಲ ಮತ್ತು ಲೈವ್ ಪ್ರಸಾರದ ಹಕ್ಕನ್ನು ನೀಡುವುದಿಲ್ಲ ಎಂದು ಗೊತ್ತಾಯಿತೋ ಎಂದು ಗೊತ್ತಾಯಿತೋ ಆ ಮೀಡಿಯಾಕ್ಕೆ ಆದ ಕೋಪ ಅಷ್ಟಿಷ್ಟಲ್ಲ. ಮೊದಲು ಡೀಲು ಆಮೇಲೆ ಬ್ಲ್ಯಾಕ್‍ಮೇಲು ಎಂಬ ಸಿದ್ಧಾಂತವನ್ನು ಹೊಸೆದಿದ್ದ ಆ ಚಾನೆಲ್ ಅದೇ ತಂತ್ರ ಹೆಣೆಯಿತು.

ಜನಾರ್ದನ ರೆಡ್ಡಿಯ ಮದುವೆಗೆ ಬರೋಬ್ಬರಿ 500 ರೂ. ಕೋಟಿ ರೂ ಖರ್ಚು ಸುದ್ದಿ ಹರಡಿಸುವ ಕೆಲಸ ಆರಂಭಿಸಿತು. ಬೆಳಿಗ್ಗೆಯಿಂದ ಸಂಜೆ ತನಕ ಒಂದೇ ಸುಳ್ಳು
ಸುಳ್ಳನ್ನು ನೂರಾರು ಸಲ ಬಿತ್ತರಿಸಿ ಅದನ್ನು ಸತ್ಯವನ್ನಾಗಿಸಲು ಪ್ರಯತ್ನಿಸಿತು. ಜನಾರ್ದನ ರೆಡ್ಡಿ ಬಳಿ ಇಷ್ಟೊಂದು ಹಣ ಎಲ್ಲಿಂದ ಬಂತು ಎಂದೆಲ್ಲಾ ಗಾಸಿಪ್ ಹಬ್ಬಿಸಿ ಸಂಜೆಯ ವೇಳೆ ಜನಾರ್ದನ ರೆಡ್ಡಿ ಖಳನಾಯಕನಾಗಿಬಿಟ್ಟರು… ಎಲ್ಲಿಯವರೆಗೆ ಮುಂದುವರಿಯಿತು ಎಂದರೆ ಅವರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಿದೆ ಎಂದೂ ಹೇಳಿಬಿಟ್ಟಿತು. ಮದುವೆಗೆ ಯಾರೆಲ್ಲಾ ರಾಜಕಾರಣಿಗಳೆಲ್ಲಾ ಬಂದರೋ ಅವರನ್ನೂ ಖಳನಾಯಕರಂತೆ ಚಿತ್ರಿಸಲಾಯಿತು. ಯಾರಿಗೂ ಕೂಡಾ ಇದೆಲ್ಲಾ ಆ ಒಂದು ಮಾಧ್ಯಮ ಹೆಣೆದ ಕುತಂತ್ರ ಎಂದೂ ನಂಬಲಾಗಲಿಲ್ಲ…

ಶ್ರೀರಾಮುಲು ಅವರು ಗಾಲಿ ಜನಾರ್ದನ ರೆಡ್ಡಿ ತೆರಿಗೆ ವಂಚಿಸಿ ಮಗಳ ಮದುವೆ ಮಾಡುತ್ತಿಲ್ಲ. ಮದುವೆ ಖರ್ಚಿನ ಎಲ್ಲ ಲೆಕ್ಕವನ್ನು ತಪ್ಪದೇ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲಿದ್ದಾರೆ. ಅದನ್ನು ಸುಮ್ಮನೆ ವಿವಾದ ಮಾಡುವ ಅಗತ್ಯವಿಲ್ಲ ಎಂದು ಹೇಳಿದರೂ ಯಾರೂ ನಂಬಲಿಲ್ಲ. ಅಂತೂ ಇಂತೂ ಮಗಳ ಮದುವೆಯಾಯಿತು. ಅಂತೆಯೇ ಜನಾರ್ದನ ರೆಡ್ಡಿ ಎಲ್ಲಾ ಖರ್ಚುವೆಚ್ಚಗಳನ್ನು ಆದಾಯ ತೆರಿಗೆ ಸಲ್ಲಿಸಿದ್ದೂ ಆಯಿತು. ಆದರೆ ಎಲ್ಲವೂ ಕಾನೂನಾತ್ಮಕವಾಗಿದ್ದರಿಂದ ಅವರ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳಲಾಗಲಿಲ್ಲ. ಜನಾರ್ದನ ರೆಡ್ಡಿ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ್ದ ಆ ಮೀಡಿಯಾ ಕೂಡಾ ಏನನ್ನೂ ಮಾತಾಡದೆ ಸುಮ್ಮನಾಯಿತು…

ಇಂದು ಮೀಡಿಯಾ ಎಂದರೆ ಭ್ರಷ್ಟಾಚಾರದ ಕೂಪವಾಗಿಬಿಟ್ಟಿದೆ. ಇಂದು ಕೂಡಾ ಅದೆಷ್ಟೋ ಮೀಡಿಯಾಗಳೂ ಡೀಲು, ಬ್ಲ್ಯಾಕ್‍ಮೇಲ್‍ನಿಂದಲೇ ಹಣ ಮಾಡುತ್ತದೆ. ಹಫ್ತಾ ವಸೂಲಿ ಮಾಡುತ್ತದೆ. ಹಣಕೊಡುವಂತೆ ಯಾವುದೇ ನಟೋರಿಯಸ್ ರೌಡಿಗಿಂತಲೂ ಕಡಿಮೆ ಇಲ್ಲದೆ ಅವಾಜ್ ಹಾಕುತ್ತದೆ. ಹಣ ಕೊಡಲು ಒಪ್ಪದ ವ್ಯಕ್ತಿ ನಾಳಿನ ದಿನಗಳಲ್ಲಿ ತಮ್ಮ ಮೀಡಿಯಾದಲ್ಲಿ ಖಳನಾಯಕನಾಗಿಬಿಡಬಲ್ಲ. ಹಣಕೊಡುವ ಖಳನಾಯಕನೊಬ್ಬ ನಾಳಿನ ದಿನದಲ್ಲಿ ಹೀರಾ ಆಗಿಬಿಡಬಲ್ಲ…! ಅದೇ ರೀತಿ ಜನಾರ್ದನ ರೆಡ್ಡಿಯೂ ಬಲಿಯಾದರು. ಇದೇ ಈತಿ ಬ್ಲ್ಯಾಕ್‍ಮೇಲ್ ಮೀಡಿಯಾಗಳಿಗೆ ಅದೆಷ್ಟೋ ಮಂದಿ ಬಲಿಯಾಗಿದ್ದಾರೆ. ಸಂವಿಧಾನದ ನಾಲ್ಕನೇ ಅಂಗ ಎನ್ನುವ ಮಾಧ್ಯಮ ಎಂದೋ ರೋಗಗ್ರಸ್ಥವಾಗಿದೆ.

ಜನಾರ್ದನ ರೆಡ್ಡಿಯ ಬಗ್ಗೆ ಇಲ್ಲ ಸಲ್ಲದ ಬಗ್ಗೆ ಪ್ರಕಟಿಸುವ ಮಾಧ್ಯಮಗಳು ಅವರು ಮಾಡಿದ ಒಳ್ಳೆಯ ಕಾರ್ಯವನ್ನು ಎಂದಾದರೂ ಪ್ರಚಾರ ಮಾಡಿರುವುದನ್ನು
ನೋಡಿದ್ದೀರಾ? 41,000 ಮದುವೆ ಮಾಡಿದ್ದಾರೆಂದರೆ… ಊಹಿಸಲೂ ಸಾಧ್ಯವಿಲ್ಲ ಅಲ್ಲವೇ? ಇಂದು ಅದೆಷ್ಟೋ ಮಂದಿ ಜನಾರ್ದನ ರೆಡ್ಡಿಯಿಂದ ಜೀವನ ರೂಪಿಸಿದ್ದಾರೆ. ಅದೆಷ್ಟೋ ಮಂದಿ ದಾನ ಪಡೆದಿದ್ದಾರೆ. ಆದರೆ ಜನಾರ್ದನ ರೆಡ್ಡಿ ಅದನ್ನೆಲ್ಲಾ ಹೇಳಿಕೊಳ್ಳುತ್ತಾ ಬರುವುದಿಲ್ಲ.

ಅವರೆಂಥವರು ಎಂದು ಹೇಳಬೇಕಿದ್ದರೆ ಜಸ್ಟ್ ಈ ಉದಾಹರಣೆ ಸಾಕು.. ಕಲ್ಲಡ್ಕ ಪ್ರಭಾಕರ ಭಟ್ ಅವರ ಶಾಲೆಗೆ ಕೊಲ್ಲೂರಿನಿಂದ ಬರುತ್ತಿದ್ದ ಅನ್ನವನ್ನು ರಾಜ್ಯದ
ಕಾಂಗ್ರೆಸ್ ಸರಕಾರ ನಿಲ್ಲಿಸಿದಾಗ `ಭಿಕ್ಷಾಂದೇಹಿ’ ಅಭಿಯಾನವೊಂದು ಆರಂಭವಾಗಿತ್ತು. ಈ ಅಭಿಯಾನ ಯಾವಾಗ ಆರಂಭವಾಯಿತೋ ತಕ್ಷಣ ಮಾಹಿತಿ ಪಡೆದ ಜನಾರ್ದನ ರೆಡ್ಡಿ ತಕ್ಷಣ ಶಾಲೆಗೆ ಆಗಮಿಸಿ ಬರೋಬ್ಬರಿ 26 ಲಕ್ಷ ರೂ.ವನ್ನು ದಾನವಾಗಿ ನೀಡಿದ್ದರು. ಇಂದು ಅವರೆಲ್ಲಾ ಸೇರಿ ಮಾಡಿದ ದಾನದಿಂದಾಗಿ ಕಲ್ಲಡ್ಕ ಶಾಲೆಯ ಬಡ ಮಕ್ಕಳು ಮಧ್ಯಾಹ್ನ ಊಟ ಮಾಡುವಂತಾಗಿದೆ!!

ಇನ್ನಾದರೂ ಒಳ್ಳೆಯ ಕೆಲಸಗಳನ್ನು ಗುರುತಿಸಿ ಮಾಧ್ಯಮದವರು ಧನಾತ್ಮಕವಾಗುವುದು ಈ ಸಮಾಜಕ್ಕೆ ಬೇಕಾಗಿದೆ!

-ಚೇಕಿತಾನ

Tags

Related Articles

Close