ಅಂಕಣದೇಶಪ್ರಚಲಿತ

70 ಲಕ್ಷ ಭಾರತೀಯ ಯೋಧರನ್ನು ನಿಯೋಜಿಸಿದರೂ, ಕಾಶ್ಮೀರದಲ್ಲಿನ ಆಜಾದಿ ಗ್ಯಾಂಗ್ ಅನ್ನು ಸೋಲಿಸುವುದಕ್ಕೆ ಆಗುವುದಿಲ್ಲ- ಅರುಂಧತಿ ರಾಯ್

ಬಂದೂಕಿನ ನಳಿಕೆಗಳು ಶಬ್ಧ ಮಾಡಿದರೆ 70 ಲಕ್ಷ ಸೈನಿಕರೇಕೆ, ಏಳೇ ನಿಮಿಷದಲ್ಲಿ ನಿಶ್ಶಬ್ದವಾಗಿಬಿಡುತ್ತದೆ ಕಾಶ್ಶೀರ!

ನೂರೈವತ್ತು ವರ್ಷಗಳ ಕಾಲ ಬ್ರಿಟಿಷರ ನಿಯಂತ್ರಣದಲ್ಲಿದ್ದ ಹಾಂಕಾಂಗ್ 1997ರಲ್ಲಿ ಚೀನಾದ ಪಾಲಾಯಿತು. 442 ವರ್ಷಗಳ ಕಾಲ ಮಕಾವು ಅನ್ನು ಆಳಿದ ಪೋರ್ಚುಗೀಸರು 1999ರಲ್ಲಿ ತುಟಿಪಿಟಿಕ್ ಅನ್ನದೆ ಚೀನಾದ ವಶಕ್ಕೆ ನೀಡಿ ಕಾಲ್ಕಿತ್ತರು. ಇನ್ನು ರಾಜಕೀಯವಾಗಿ ಪ್ರತ್ಯೇಕಗೊಂಡಿದ್ದರೂ ತೈವಾನ್‌ನಲ್ಲಿ ಇಂದಿಗೂ ನಡೆಯುವುದು ಚೀನಾದ್ದೇ ದರ್ಬಾರು. ಕಳೆದ 2 ಸಾವಿರ ವರ್ಷಗಳಲ್ಲಿ ಚೀನಾವನ್ನು ಆಳಿದ ಹಾನ್, ತಾಂಗ್, ಸಾಂಗ್, ಮಿಂಗ್, ಯಾನ್ ಮತ್ತು ಕಿಂಗ್ ಈ ಎಲ್ಲ ವಂಶಾಡಳಿತಗಳೂ ಪಕ್ಕದ ವಿಯೆಟ್ನಾಂ ಅನ್ನು ಕಬಳಿಸಲು ಯತ್ನಿಸಿವೆ.

1974ರಲ್ಲಿ ನಡೆದ ನೌಕಾ ಸಮರದ ನಂತರ ವಿಯೆಟ್ನಾಂಗೆ ಸೇರಿದ  Paracel Islands ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಚೀನಾ ಯಶಸ್ವಿಯಾಯಿತು. 1988ರಲ್ಲಿ Spratly Islands ಗಳನ್ನು ರಾತ್ರೋರಾತ್ರಿ ಆಕ್ರಮಿಸಿಕೊಂಡಿತು.”Save Vietnam from China’s Expansionism” ಎಂಬ ಆನ್‌ಲೈನ್ ಪಿಟಿಶನ್ ಆರಂಭ ಮಾಡಿ, ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾದ ಸಾಮ್ರಾಜ್ಯಶಾಹಿತ್ವದ ಬಗ್ಗೆ ಜಾಗೃತಿ ಮೂಡಿಸಲು, ಅಪಾಯದ ಬಗ್ಗೆ ಎಚ್ಚರಿಸಲು ಮುಂದಾಗಬೇಕಾದಂತಹ ಪರಿಸ್ಥಿತಿ ವಿಯೆಟ್ನಾಂಗೆ ನಿರ್ಮಾಣವಾಯಿತು. 1969ರಲ್ಲಿ ಗಡಿ ವಿವಾದ ವಿಷಯವನ್ನೆತ್ತಿಕೊಂಡು ಸೋವಿಯತ್ ರಷ್ಯಾದ ಜತೆಗೂ ಚೀನಾ ಯುದ್ಧಕ್ಕೆ ಮುಂದಾಗಿತ್ತು. 1959ರಲ್ಲಿ ಟಿಬೆಟ್ ಅನ್ನು ನುಂಗಿ ನೀರು ಕುಡಿದಿರುವ ಚೀನಾ, ಈಗ ನಮ್ಮ ಅರುಣಾಚಲ ಪ್ರದೇಶದ ಮೇಲೂ ಹಕ್ಕುಪ್ರತಿಪಾದನೆ ಮಾಡುತ್ತಿದೆ!

ಏಕಾಗಿ?
ಯಾವ ಕಾರಣಕ್ಕಾಗಿ, ಯಾವ ಆಧಾರದ ಮೇಲೆ ಚೀನಾ ತನ್ನ ನೆರೆಯ ರಾಷ್ಟ್ರಗಳೆಲ್ಲವುಗಳ ಜತೆಯೂ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುತ್ತದೆ? ಹಾಂಕಾಂಗ್, ಮಕಾವುಗಳನ್ನು ಏಕಾಗಿ ತನ್ನ ತೆಕ್ಕೆಗೆ ಸೆಳೆದುಕೊಂಡಿತು?

Greater China!
ಇಂಥದ್ದೊಂದು ಪದಗುಚ್ಛವನ್ನು ಮೊದಲು ಬಳಸಿದ್ದು “China’s Geographic Foundations'(1930) (1930) ಎಂಬ ಪುಸ್ತಕ ಬರೆದ ಅಮೆರಿಕದ ಭೂಗೋಳಶಾಸ್ತ್ರಜ್ಞ ಜಾರ್ಜ್ ಕ್ರೆಸ್ಸಿ. ಹಾನ್, ತಾಂಗ್, ಸಾಂಗ್, ಮಿಂಗ್, ಯಾನ್‌ನಿಂದ ಕಟ್ಟಕಡೆಯ ಕಿಂಗ್‌ವರೆಗೂ ಚೀನಾವನ್ನು ಆಳಿದ ಈ ಎಲ್ಲ ವಂಶಾಡಳಿತಗಳೂ ಯಾವ ಯಾವ ಭೂಪ್ರದೇಶಗಳ ಮೇಲೆ ತಮ್ಮ ಪ್ರಭುತ್ವವನ್ನು ಸಾಧಿಸಿದ್ದವು ಎಂಬುದನ್ನು ಪಟ್ಟಿಮಾಡುತ್ತಾ ಅವುಗಳೆಲ್ಲವನ್ನೂ ಒಳಗೊಂಡ ಪ್ರದೇಶಕ್ಕೆ ‘ಗ್ರೇಟರ್ ಚೈನಾ’ ಅಥವಾ ‘ಮಹಾ ಚೀನಾ’ ಎಂದು ಜಾರ್ಜ್ ಕ್ರೆಸ್ಸಿ ಕರೆಯುತ್ತಾನೆ. ಆದರೆ ಅದೀಗ ಕೇವಲ ಇತಿಹಾಸದ ಪುಟಗಳಿಗಷ್ಟೇ ಸೀಮಿತವಾಗಿಲ್ಲ. ಜಗತ್ತಿನ ಸೂಪರ್ ಪವರ್ ರಾಷ್ಟ್ರವಾಗುತ್ತಾ ದಾಪುಗಾಲಿಡುತ್ತಿರುವ ಚೀನಾ, ಆರ್ಥಿಕತೆಯ ಜತೆಗೆ ಭೌಗೋಳಿಕ ವಿಸ್ತಾರಕ್ಕೂ ಕೈಹಾಕಿದೆ. ಇತಿಹಾಸವನ್ನು ಪುನರಾವರ್ತನೆ ಮಾಡುವ ಮೂಲಕ ‘ಮಹಾ ಚೀನಾ’ ರಚನೆ ಮಾಡುವುದಕ್ಕೆ ಹೊರಟಿದೆ. ಈ ನಡುವೆ ತನ್ನ ಕ್ಷಿನ್ ಜಿಯಾಂಗ್ ಪ್ರದೇಶದಲ್ಲಿ ಪ್ರತ್ಯೇಕತಾ ಚಳವಳಿಗೆ ಮುಂದಾದ ಮುಸ್ಲಿಮರನ್ನು ಮಿಲಿಟರಿ ಬಿಟ್ಟು ಹೊಸಕಿ ಹಾಕಿದೆ.

ಇಂತಹ ವಾಸ್ತವ ಕಣ್ಣಮುಂದೆ ಇದ್ದರೂ ನಮ್ಮ ದೇಶದಲ್ಲಿರುವ ಕೆಲವು ತಿಳಿಗೇಡಿಗಳು, ಉಂಡ ಮನೆಗೆ ಎರಡು ಬಗೆಯುವ ಮನಸ್ಥಿತಿ ಇರುವವರು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕು ಎಂಬಂಥ ಮನಸ್ಥಿತಿ ಹೊಂದಿದ್ದಾರೆ. ಅಂತಹ ಕೃತಘ್ನರಲ್ಲಿ ಅರುಂಧತಿ ರಾಯ್ ಮುಂಚೂಣಿಯಲ್ಲಿ ಬಂದು ನಿಲ್ಲುತ್ತಾರೆ. ಮೂರು ಸಲ ನಮ್ಮ ಮೇಲೆ ಯುದ್ಧಕ್ಕೆ ಬಂದು ಮೂರು ಭಾರಿಯೂ ಮುಖಭಂಗಕ್ಕೊಳಗಾಗಿರುವ ಪಾಕಿಸ್ತಾನದ ಮೇಲೆ ಈಕೆಗೆ ಅದೇನೋ ಮೋಹ! ಇತ್ತೀಚೆಗೆ ಪಾಕಿಸ್ತಾನದ ಟೈಮ್ಸ್‌ ಆಫ್ ಇಸ್ಲಾಮಾಬಾದ್ ಪತ್ರಿಕೆ ಸಂದರ್ಶನವೊಂದನ್ನು ನೀಡಿರುವ ಆಕೆ, ಕಾಶ್ಮೀರದಲ್ಲಿ ಭಾರತ ಈಗಿರುವ 7 ಲಕ್ಷ ಸೈನಿಕರ ಬದಲು 70 ಲಕ್ಷ ಸೈನಿಕರನ್ನು ನಿಯೋಜನೆ ಮಾಡಿದರೂ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ! ಈ ಹಿಂದೆ ಕೂಡ ಅರುಂಧತಿ ರಾಯ್ ‘ಕಾಶ್ಮೀರ ಎಂದೂ ಭಾರತದ ಅವಿಭಾಜ್ಯ ಅಂಗವಾಗಿರಲಿಲ್ಲ’ ಎಂದು ಮತಿಗೇಡಿಯಂತೆ ಮಾತನಾಡಿದ್ದರು.

ಇವನ್ನೆಲ್ಲ ಎಷ್ಟು ದಿನ ಅಂತ ಸಹಿಸಿಕೊಂಡು ಸುಮ್ಮನಿರಬೇಕು ಹೇಳಿ? ಅದ್ಯಾವ ಆಧಾರದ ಮೇಲೆ ಆಕೆ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ? ಈಕೆಗೆ ಇತಿಹಾಸದ ಕನಿಷ್ಠ ಜ್ಞಾನವೂ ಇಲ್ಲವೆ? ಇಸ್ಲಾಂ ಧರ್ಮ ಹುಟ್ಟುವುದಕ್ಕಿಂತ ಮೊದಲೇ ಕಾಶ್ಮೀರ ಹಿಂದೂ ಧರ್ಮದ ಪುಣ್ಯಾತಿಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿತ್ತು ಎಂಬ ಸತ್ಯ ಈಕೆಗೆ ತಿಳಿದಿಲ್ಲವೆ? ಈಕೆಗೆ ಇಂಥ ಹೇಳಿಕೆ ಕೊಡುವುದು ಒಂದು ಚಾಳಿ ಎನ್ನುವುದಕ್ಕಿಂತ ವೃತ್ತಿಯಾಗಿಬಿಟ್ಟಿದೆ. ಇವರನ್ನು ದಶಕಗಳಿಂದಲೂ ಸಾಕಿ, ಸಲಹಿಕೊಂಡು ಬಂದಿದ್ದು ಇದೇ. ದಶಕಗಳಿಂದಲೂ ಈಕೆಯದ್ದು ಒಂದೇ ಹಾಡು. ಕಾಶ್ಮೀರ ಭಾರತದ್ದಲ್ಲ ಎಂದು. ಆದರೆ ಈಗ ವರಸೆ ಬದಲಾಗಿದೆ. ಕಾಶ್ಮೀರದ ಜತೆಗೆ ಪಂಜಾಬ್, ಗೋವಾ, ಹೈದರಾಬಾದ್, ತೆಲಂಗಾಣ ಹಾಗೂ ಈಶಾನ್ಯ ರಾಜ್ಯಗಳು ಯಾವುವೂ ಭಾರತದಲ್ಲವಂತೆ. ಅದನ್ನು ಭಾರತ ಅತಿಕ್ರಮಿಸಿಕೊಂಡಿದೆಯಂತೆ.
ವರ್ಷದಿಂದ ವರ್ಷಕ್ಕೆ ಈಕೆಯ ಹುಚ್ಚು ಹೆಚ್ಚಾದಂತೇ ತೋರುತ್ತಿದೆ. ಇಲ್ಲದಿದ್ದರೆ, ಮೊದಲು ಕಾಶ್ಮೀರ ಅಷ್ಟೇ ಭಾರತದ್ದಲ್ಲ ಎಂದು ಹೇಳುತ್ತಿದ್ದ ಈಕೆ ಯಾಕಾಗಿ ಇನ್ನಷ್ಟು ರಾಜ್ಯಗಳನ್ನು ಸೇರಿಸಿಕೊಂಡಿದ್ದಾರೆ. ಈಗ ಹುಟ್ಟುತ್ತಿರುವ ಪ್ರಶ್ನೆಯೇನೆಂದರೆ, ಗಡಿಭಾಗದಲ್ಲಿರುವ ಯಾವ ರಾಜ್ಯವೂ ಭಾರತದ್ದಲ್ಲ ಎಂದು ಹೇಳುವ ಈಕೆ ಯಾವಾಗ ಭಾರತದ ಪ್ರಜೆಯಂತೆ ವರ್ತಿಸಿದ್ದರು? ‘70 ಲಕ್ಷ ಭಾರತೀಯ ಯೋಧರನ್ನು ನಿಯೋಜಿಸಿದರೂ, ಕಾಶ್ಮೀರದಲ್ಲಿನ ಆಜಾದಿ ಗ್ಯಾಂಗ್ ಅನ್ನು ಸೋಲಿಸುವುದಕ್ಕೆ ಆಗುವುದಿಲ್ಲ’ ಎನ್ನುತ್ತಾರಲ್ಲಾ, ಈಕೆಗೆ ಭಾರತದ ಸೇನೆಗಿಂತ ಕಾಶ್ಮೀರದಲ್ಲಿ ಕಲ್ಲು ಎಸೆಯುವ ಉದ್ಯೋಗದಲ್ಲಿರುವ ಈಕೆ ಅಣ್ಣ ತಮ್ಮಂದಿರ ಮೇಲೇ ನಂಬಿಕೆ ಜಾಸ್ತಿ ಎಂದಾಯಿತಲ್ಲ?! ಇಷ್ಟಾಗ್ಯೂ ಈಕೆ ಭಾರತೀಯಳು ಎಂದು ಅದು ಹೇಗೆ ಹೇಳಿಕೊಳ್ಳುತ್ತಾರೆ?

ನಮ್ಮ ದೇಶದಲ್ಲಿ ಜನ ಯಾವುದರ ಮೇಲೆ ನಂಬಿಕೆ ಕಳೆದುಕೊಂಡಿದ್ದರೂ ನ್ಯಾಯಾಂಗದ ಮೇಲೆ ಇನ್ನೂ ಅತೀವ ನಂಬಿಕೆ, ವಿಶ್ವಾಸ ಇಟ್ಟುಕೊಂಡಿದ್ದಾರೆ. ಆದರೆ ಈಕೆ ಮಾತ್ರ ಅಫ್ಜಲ್ ಗುರುವನ್ನು ಗಲ್ಲಿಗೇರಿಸುವ ತೀರ್ಪು ಬಂದಾಗ ಅದು ತಪ್ಪು ನ್ಯಾಯಾಂಗವನ್ನೇ ಪ್ರಶ್ನಿಸಿದ್ದರು!
ನೀವು ಯುಟ್ಯೂಬ್‌ಗೆ ಹೋದರೆ ಕಲ್ಲುತೂರಾಟಗಾರರನ್ನು ಇಸ್ರೇಲ್ ಯಾವ ರೀತಿ ಮಟ್ಟಹಾಕುತ್ತದೆ ಎಂಬುದನ್ನು ನೋಡಬಹುದು. ಇಸ್ರೇಲಿ ಯೋಧರು, ಕಲ್ಲುತೂರಾಟಗಾರನೊಬ್ಬನ ಮೇಲೇ ಜೀಪ್ ಹರಿದುಬಿಟ್ಟ ವಿಡಿಯೊ ಕಾಣುತ್ತದೆ. ಇಸ್ರೇಲಿ ಸೇನೆ ಕಲ್ಲುತೂರಾಟಗಾರರಿಗೆ ಕೊಟ್ಟ ಒದೆಗಳು ಅವರು ಜೀವನ ಪೂರ್ತಿ ನೆನಪಿಸಿಕೊಳ್ಳಬೇಕು ಹಾಗಿರುತ್ತವೆ. ಅದೇ ರೀತಿ ನಮ್ಮ ಯೋಧರಿರಬೇಕು ಎಂದು ಭಾರತೀಯರು ಆಶಿಸುತ್ತಿದ್ದರೆ, ಮೇಜರ್ ಗೊಗೋಯ್ ಸೇನೆಯ ರಕ್ಷಣೆಗಾಗಿ ಕಲ್ಲುತೂರಾಟಗಾರರನೊಬ್ಬನನ್ನು ಜೀಪಿಗೆ ಕಟ್ಟಿಕೊಂಡು ಹೋದರೆ, ಅರುಂಧತಿ ರಾಯ್‌ಗೆ ಮಾತ್ರ ಅದು ಕ್ರೌರ್ಯವಾಗಿ ಕಾಣಿಸಿತ್ತಂತೆ. ಆಗಿನಿಂದಲೇ ಈಕೆ, ಕಾಶ್ಮೀರದ ಜೆತೆಗೆ, ಪಂಜಾಬ್, ಗೋವಾ, ಹೈದರಾಬಾದ್ ಮತ್ತು ಇನ್ನಿತರ ರಾಜ್ಯವನ್ನೂ ಭಾರತ ಅತಿಕ್ರಮಿಸಿಕೊಂಡಿದೆ ಎಂದು ಬಡಬಡಾಯಿಸಲು ಶುರು ಮಾಡಿಕೊಂಡಿದ್ದು.

ಬೇರೆ ರಾಜ್ಯಗಳ ಕತೆ ಬಿಡಿ, ಕಾಶ್ಮೀರದ ಇತಿಹಾಸವಾದರೂ ಈಕೆಗೆ ಗೊತ್ತಿದೆಯಾ? ಅಷ್ಟಕ್ಕೂ ಭಾರತದ ಮುಕುಟಪ್ರಾಯದಂತಿರುವ ಕಾಶ್ಮೀರಕ್ಕೂ ಹಿಂದೂ ಧರ್ಮಕ್ಕೂ ಇರುವ ಅವಿನಾಭಾವ ಸಂಬಂಧವಾದರೂ ಎಂಥದ್ದು ಅಂದುಕೊಂಡಿರಿ? ಕಾಶ್ಮೀರ ಎಂಬ ಹೆಸರಲ್ಲೇ ಹಿಂದುತ್ವದ ಕುರುಹುಗಳಿವೆ. ಕಾಶ್ಮೀರ ಕಣಿವೆಯಲ್ಲಿನ ವಿಶಾಲವಾದ ‘ಸತಿಸರ್’ ಕೊಳವನ್ನು ಸತಿ ದೇವಿಯ (ಶಿವನ ಪತ್ನಿಯಾದ ಪಾರ್ವತಿ) ಕೊಳವೆಂದೂ ಕರೆಯಲಾಗುತ್ತದೆ. ಇದನ್ನು ಕಶ್ಯಪ ಋಷಿಗಳು ಉದ್ಧಾರಗೊಳಿಸಿದರು ಎಂದು ಪುರಾಣ ಕತೆಗಳು ಹೇಳುತ್ತವೆ. ಪುರಾತನ ಕಾಲದಲ್ಲಿ ಇದನ್ನು ‘ಕಶ್ಯಪಾಮರ್’ ಎಂದೂ ಕರೆಯಲಾಗುತ್ತಿತ್ತು. ಈ ಹೆಸರೇ ಮುಂದೆ ಕಾಶ್ಮೀರವಾಯಿತು. ಪುರಾತನ ಗ್ರೀಕರು ಇದನ್ನು ‘ಕಸ್ಪೇರಿಯಾ’ ಎಂದು ಕರೆಯುತ್ತಿದ್ದರು.

7ನೇ ಶತಮಾನದಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಚೀನಾದ ಯಾತ್ರಿಕ ಹುಯೆನ್‌ತ್ಸಾಂಗ್ ಇದನ್ನು ‘ಕಾಶಿಮಿಲೊ’ ಎಂದು ಕರೆದಿದ್ದ. ಕಾಶ್ಮೀರದ ಕುರಿತು ಕಲ್ಹಣ ಬರೆದಿರುವ ಇತಿಹಾಸದಲ್ಲಿ ಸಿಗುವ ಮೊದಲ ದಾಖಲೆ ಮಹಾಭಾರತ ಯುದ್ಧ ಕಾಲದ್ದು. ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಚಕ್ರವರ್ತಿ ಅಶೋಕ ಬೌದ್ಧಮತವನ್ನು ಕಾಶ್ಮೀರ ಕಣಿವೆಯಲ್ಲಿ ಪ್ರಚುರಪಡಿಸಿದ. ಕ್ರಿಸ್ತಶಕ 9ನೇ ಶತಮಾನದ ಹೊತ್ತಿಗೆ ಕಾಶ್ಮೀರವು ಹಿಂದೂ ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿತ್ತು. ಕಾಶ್ಮೀರಿ ‘ಶೈವ ಪಂಥ’ ಹುಟ್ಟಿಕೊಂಡಿದ್ದು ಈ ನೆಲದಲ್ಲಿಯೇ. ಅಲ್ಲದೆ ಸಂಸ್ಕೃತದ ಮಹಾನ್ ಪಂಡಿತರಿಗೆ ಇದು ಸ್ವರ್ಗ ಸಮಾನವಾದ ಪ್ರದೇಶವಾಗಿತ್ತು. ಕಾಶ್ಮೀರದ ಸೌಂದರ್ಯಕ್ಕೆ, ಅಲ್ಲಿನ ವಿಜೃಂಭಣೆಗೆ ಮರುಳಾಗದವರೇ ಇಲ್ಲ. ಕಾಶ್ಮೀರಕ್ಕೆ ಅದರದೇ ಆದ ಐತಿಹ್ಯವಿದೆ. ಕವಿಗಳು, ಇತಿಹಾಸಕಾರರು ಕಾಶ್ಮೀರವನ್ನು ಹಾಡಿ ಹೊಗಳಿದ್ದಾರೆ. ಕಾಳಿದಾಸ ಕಾಶ್ಮೀರ ಕಣಿವೆಯನ್ನು ‘ಸ್ವರ್ಗಕ್ಕಿಂತಲೂ ಸುಂದರವಾದದ್ದು ಮತ್ತು ಉತ್ಕೃಷ್ಟವಾದ ಸಂತಸ ಹಾಗೂ ಆನಂದದಾಯಕವಾದದ್ದು’ ಎಂದು ವರ್ಣಿಸಿದ್ದಾನೆ.

ಕಾಶ್ಮೀರದ ಮಹಾನ್ ಇತಿಹಾಸಜ್ಞನಾದ ಕಲ್ಹಣ ‘ಹಿಮಾಲಯದಲ್ಲಿಯೇ ಅತ್ಯುತ್ತಮವಾದ ಪ್ರದೇಶ’ ಎಂದು ಬಣ್ಣಿಸಿದ್ದಾನೆ. ‘ಸೂರ್ಯನು ಸೌಮ್ಯವಾಗಿ ಹೊಳೆಯುವ ದೇಶವಿದು’ ಎನ್ನುತ್ತಾನವನು. ‘ಕಾಶ್ಮೀರ ಕಣಿವೆಯು ಮುತ್ತಿನೊಂದಿಗೆ ಸೇರಿಕೊಂಡ ಪಚ್ಚೆಯಂತಿದೆ. ಕೊಳಗಳ ನಾಡು, ಶುಭ್ರವಾದ ತೊರೆಗಳು, ಕಂಗೊಳಿಸುವ ಹಸಿರು, ನಯನಮನೋಹರವಾದ ವೃಕ್ಷಗಳು, ದಿಗಂತದೆತ್ತರಕ್ಕೆ ನಿಂತಿರುವ ಬಲಿಷ್ಠ ಪರ್ವತಗಳು, ಅವುಗಳಿಂದ ಬೀಸುವ ತಂಗಾಳಿ, ಸಿಹಿಯಾದ ನೀರು, ಸಾಹಸಿ ಪುರುಷರು, ಮಹಿಳೆಯರಿಂದ ಕಂಗೊಳಿಸುತ್ತಿದೆ’ ಎಂದು ಹತ್ತೊಂಬತ್ತನೇ ಶತಮಾನದ ಬ್ರಿಟಿಷ್ ಇತಿಹಾಸಕಾರ ಸರ್ ವಾಲ್ಟರ್ ಲಾರೆನ್ಸ್‌ ಕಾಶ್ಮೀರದ ಕುರಿತು ಬರೆಯುತ್ತಾರೆ.

ಇಂತಹ ನಿತ್ಯಮನೋಹರವಾದ ಕಾಶ್ಮೀರದಲ್ಲಿ 1346ರವರೆಗೂ ಹಲವಾರು ಹಿಂದೂ ಮಹಾರಾಜರು ಆಳ್ವಿಕೆ ನಡೆಸಿದರು. ಮುಸ್ಲಿಮರು ಕಾಶ್ಮೀರದ ಮೇಲೆ ಆಕ್ರಮಣ ನಡೆಸಿದ್ದು 1346ರಲ್ಲಿ. ಈ ಅವಧಿಯಲ್ಲಿ ಹತ್ತಾರು ಹಿಂದೂ ದೇವಾಲಯಗಳನ್ನು ನಾಶಪಡಿಸಲಾಯಿತು ಹಾಗೂ ಹಿಂದೂಗಳು ಬಲವಂತವಾಗಿ ಇಸ್ಲಾಂ ಅಪ್ಪಿಕೊಳ್ಳುವಂತೆ ಮಾಡಲಾಯಿತು. ಮೊಘಲರು 1587ರಿಂದ 1752ರವರೆಗೂ ಕಾಶ್ಮೀರದಲ್ಲಿ ಆಡಳಿತ ನಡೆಸಿದರು. ಈ ಅವಧಿ ಶಾಂತಿ ಮತ್ತು ಸುವ್ಯವಸ್ಥೆಯಿಂದ ಕೂಡಿತ್ತು. ಕಾಶ್ಮೀರದ ಪಾಲಿಗೆ 1752ರಿಂದ 1819ರವರೆಗೂ ಕತ್ತಲೆಯ ಯುಗ. ಈ ಅವಧಿಯಲ್ಲಿ ಆಫ್ಘನ್‌ನ ಸರ್ವಾಧಿಕಾರಿಗಳು ಕಾಶ್ಮೀರವನ್ನು ಆಳಿದರು. ಸರಿಸುಮಾರು 500 ವರ್ಷಗಳ ಕಾಲ ಕಾಶ್ಮೀರದಲ್ಲಿ ಮುಸ್ಲಿಮರ ಆಳ್ವಿಕೆ ನಡೆಯಿತು.

1819ರಲ್ಲಿ ಸಿಖ್ಖರ ಸಾಮ್ರಾಜ್ಯವಾದ ಪಂಜಾಬ್‌ಗೆ ಕಾಶ್ಮೀರ ಸೇರ್ಪಡೆಯಾಗುವುದರೊಂದಿಗೆ ಕಾಶ್ಮೀರದಲ್ಲಿ ಮುಸ್ಲಿಮರ ಆಡಳಿತ ಕೊನೆಗೊಂಡಿತು. 1846ರಲ್ಲಿ ನಡೆದ ಮೊದಲ ಸಿಖ್ಖ್‌ ಯುದ್ಧದ ಬಳಿಕ ಕಾಶ್ಮೀರ ಈಗಿರುವ ಸ್ವರೂಪದಲ್ಲಿ ಹಿಂದೂ ಡೋಗ್ರಾ ಸಾಮ್ರಾಜ್ಯದ ಭಾಗವಾಯಿತು. ಡೋಗ್ರಾ ಆಡಳಿತಗಾರರಾದ ಮಹಾರಾಜ ಗುಲಾಬ್ ಸಿಂಗ್ (1846ರಿಂದ 1957), ಮಹಾರಾಜ ರಣಬೀರ್ ಸಿಂಗ್ (1857ರಿಂದ 1885), ಮಹಾರಾಜ ಪ್ರತಾಪ್ ಸಿಂಗ್ (1885ರಿಂದ 1925) ಹಾಗೂ ಮಹಾರಾಜ ಹರಿ ಸಿಂಗ್ (1925ರಿಂದ 1950) ಆಧುನಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಬುನಾದಿಯನ್ನು ಹಾಕಿದರು.

ಇಂತಹ ಕಾಶ್ಮೀರ ನಮ್ಮದಲ್ಲದೆ ಮತ್ತಾರದ್ದು?
2000 ವರ್ಷಗಳ ಹಿಂದೆ ಯಾವುದೋ ಒಂದು ವಂಶ ಆಳಿತ್ತು ಎಂಬ ಕಾರಣಕ್ಕೆ ಮಕಾವು, ಹಾಂಕಾಂಗ್, ವಿಯೆಟ್ನಾಂ, ಟಿಬೆಟ್ ತನ್ನದೆಂದು ಚೀನಾ ಪ್ರತಿಪಾದಿಸುವುದಾದರೆ, ಇತಿಹಾಸದುದ್ದಕ್ಕೂ ಭಾರತದ ನಿಯಂತ್ರಣದಲ್ಲಿರುವ ಕಾಶ್ಮೀರ ಈ ದೇಶದ ಅವಿಭಾಜ್ಯ ಅಂಗವಲ್ಲದೆ ಮತ್ತೇನು? ಕಾಶ್ಮೀರ ಎಂದಕೂಡಲೇ ಏಕೆ ಇವರಿಗೆ ಬರೀ ಮುಸ್ಲಿಮರೇ ನೆನಪಾಗುತ್ತಾರೆ? ಸ್ವಂತ ನೆಲದಲ್ಲೇ ನಿರಾಶ್ರಿತರಾಗಿರುವ 7 ಲಕ್ಷ ಕಾಶ್ಮೀರಿ ಪಂಡಿತರು, 60 ಸಾವಿರ ಸಿಖ್ಖರು, ಲದ್ದಾಕ್‌ನ ಬೌದ್ಧಧರ್ಮೀಯರು ಕೂಡ ಕಾಶ್ಮೀರಿಗರೇ ಎಂದು ಏಕನಿಸುವುದಿಲ್ಲ? ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ ಎಂಬ ಏಕಮಾತ್ರ ಕಾರಣಕ್ಕೆ ಸ್ವಾತಂತ್ರ್ಯ ಕೊಟ್ಟುಬಿಡಬೇಕು, ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕು ಎನ್ನುವುದಾದರೆ ಮುಂದೊಂದು ದಿನ ಪಶ್ಚಿಮ ಬಂಗಾಳ, ಅಸ್ಸಾಂ, ಒಲ್ಡ್‌ ಹೈದರಾಬಾದ್, ಕೇರಳದ ಮಲ್ಲಪ್ಪುರಂ, ಕಾಸರಗೋಡು, ಕರ್ನಾಟಕದ ಕರಾವಳಿಯಲ್ಲೂ ಪ್ರತ್ಯೇಕತೆಯ ಕೂಗೇಳುವ ಕಾಲ ದೂರವಿಲ್ಲ!

ಅದಿರಲಿ, ‘70 ಲಕ್ಷ ಭಾರತೀಯ ಯೋಧರನ್ನು ನಿಯೋಜಿಸಿದರೂ, ಕಾಶ್ಮೀರದಲ್ಲಿನ ಆಜಾದಿ ಗ್ಯಾಂಗ್ ಅನ್ನು ಸೋಲಿಸುವುದಕ್ಕೆ ಆಗುವುದಿಲ್ಲ’ ಎನ್ನುತ್ತಾರಲ್ಲಾ ಈಕೆಗೆ, ನಮ್ಮ ಸೈನಿಕರ ಬಂದೂಕಿನ ನಳಿಕೆಗಳಿಗೆ ಶಬ್ದ ಮಾಡಲು ಆರ್ಡರ್ ಕೊಟ್ಟರೆ ಏಳೇ ನಿಮಿಷದಲ್ಲಿ ನಿಶ್ಶಬ್ದವಾಗಿ ಬಿಡುತ್ತದೆ ಕಾಶ್ಮೀರ ಎಂದು ಹೇಳಿದರೆ ಬಹುಶಃ ಅರ್ಥವಾಗಬಹುದು!

ಪ್ರತಾಪ್ ಸಿಂಹ

Tags

Related Articles

Close