ಪ್ರಚಲಿತ

ಗಂಗಾ ಮಾತೆ ನನ್ನನ್ನು ದತ್ತು ಪಡೆದಿದ್ದಾಳೆ: ಪ್ರಧಾನಿ ಮೋದಿ

ಈ ಹಿಂದೆ ನಡೆದ ಪ್ರತಿ ಚುನಾವಣೆಯ ಸಂದರ್ಭದಲ್ಲಿ ಸಹ ಪ್ರಧಾನಿ ಮೋದಿ ಅವರು ತಮ್ಮ ತಾಯಿ ಹೀರಾ ಬೆನ್ ಅವರ ಆಶೀರ್ವಾದ ಪಡೆದು, ಆ ಬಳಿಕ ನಾಮ ಪತ್ರ ಸಲ್ಲಿಕೆ ಮಾಡುತ್ತಿದ್ದರು. ಆದರೆ ಈ ಲೋಕಸಭಾ ಚುನಾವಣೆಯ ಈ‌ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಮಾತೃಶ್ರೀ ಅವರು ಇಹ ಲೋಕ ತ್ಯಜಿಸಿದ್ದಾರೆ. ಈ ಬಾರಿಯ ಚುನಾವಣೆಗೆ ಅವರು ಗಂಗಾ ಮಾತೆಗೆ ಪೂಜೆ ಸಲ್ಲಿಸಿ, ಆ ತಾಯಿಯ ಆಶೀರ್ವಾದ ಪಡೆದು ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದ್ದಾರೆ.

ವಾರಣಾಸಿಯಲ್ಲಿ ನಡೆದ ನಾರಿ ಶಕ್ತಿ ಸಂವಾದ್ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದು, ತನಗೆ ಈ ಬಾರಿ ಹೆತ್ತಮ್ಮನ ಆಶೀರ್ವಾದ ಪಡೆಯುವ ಭಾಗ್ಯ ಇರಲಿಲ್ಲ. ಇದೇ ಮೊದಲ ಬಾರಿಗೆ ನಾನು ತಾಯಿಯ ಆಶೀರ್ವಾದ ಪಡೆಯದೆ ನಾಮ ಪತ್ರ ಸಲ್ಲಿಸಿದ್ದೇನೆ. ಆದರೆ ಗಂಗಾ ಮಾತೆ ನನ್ನನ್ನು ಕಾಶಿಗೆ ಕರೆಸಿಕೊಂಡು ನಾಮ ಪತ್ರ ಸಲ್ಲಿಕೆಗೂ ಮುನ್ನ ಆಶೀರ್ವಾದ ಮಾಡಿದ್ದಾಳೆ. ಆಕೆ ನನ್ನನ್ನು ದತ್ತು ತೆಗೆದುಕೊಂಡಿದ್ದಾಳೆ ಎಂಬುದಾಗಿ ತಿಳಿಸಿದ್ದಾರೆ.

ನನ್ನ ತಾಯಿಯ ಆಶೀರ್ವಾದ ಇಲ್ಲದೆ ನಾನು ಮೊದಲ ಬಾರಿಗೆ ಕಾಶಿಗೆ ನಾಮ ಪತ್ರ ಸಲ್ಲಿಸಿದ್ದೇನೆ‌. ಮಾ ಗಂಗಾ ನನ್ನ ತಾಯಿ. ಆಕೆ ನನ್ನನ್ನು ದತ್ತು ಪಡೆದಿದ್ದಾಳೆ‌. ಆಕೆಯೇ ನನಗೆ ಆಶೀರ್ವಾದ ಮಾಡಿದ್ದಾರೆ ಎಂದು ಅವರು ನುಡಿದಿದ್ದಾರೆ.

ಇನ್ನು ಬಿಹಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಮೊದಲ ಪ್ರಧಾನಿ ನೆಹರೂ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವುದನ್ನು ವಿರೋಧ ಮಾಡಿದ್ದರು ಎಂದಿದ್ದಾರೆ.

ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಇರದೇ ಹೋಗಿದ್ದರೆ ನೆಹರೂ ಅವರು ದೇಶದಲ್ಲಿ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರೆಯಲು ಸಮ್ಮತಿಸುತ್ತಿರಲಿಲ್ಲ. ನೆಹರೂ ಆಗಿನ ಪ್ರಧಾನಿಗಳಿಗೆ ಬರೆದ ಪತ್ರದಲ್ಲಿ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿರುವುದೇ ಇದಕ್ಕೆ ಸಾಕ್ಷಿ ಎಂದು ಅವರು ನುಡಿದಿದ್ದಾರೆ.

ಹಾಗೆಯೇ, ಕಾಂಗ್ರೆಸ್ ಸೇರಿದಂತೆ ಇತರ ವಿರೋಧಿಗಳು ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಏರಿದಲ್ಲಿ ಸಂವಿಧಾನ ಬದಲಾಯಿಸುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಸುಳ್ಳು ಹೇಳುವ ಕೆಲಸ ಮಾಡುತ್ತಿವೆ. ಬಿಜೆಪಿ ಸಂವಿಧಾನಕ್ಕೆ ತಿದ್ದುಪಡಿ ತಂದು ಕೋಟಾ ವ್ಯವಸ್ಥೆ ರದ್ದು ಮಾಡಲು ಹೊರಟಿದೆ ಎನ್ನುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಕಾಂಗ್ರೆಸ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ದೇಶದ ಹಿಂದುಳಿದ ಜನರ ಹಕ್ಕುಗಳನ್ನು ನಮ್ಮ ಸರ್ಕಾರ ಬೆಂಬಲಿಸುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ

Tags

Related Articles

Close