ಪ್ರಚಲಿತ

ಕಣಿವೆ ರಾಜ್ಯದಲ್ಲಿ ಶಾರದಾ ಮಾತೆ ಮಂದಿರ ಉದ್ಘಾಟಿಸಿದ ಅಮಿತ್ ಶಾ

ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಟೀತ್ವಾಲ್‌ನಲ್ಲಿರುವ ಮಾತೆ ಶಾರದಾ ದೇವಿ ದೇಗುಲವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದ್ದಾರೆ.

ನೂತನ ವರ್ಷಾರಂಭದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾದ ಮಾತೆ ಶಾರದಾ ದೇವಿ ದೇವಾಲಯವನ್ನು ಭಕ್ತರಿಗಾಗಿ ತೆರೆಯಲಾಗಿದೆ. ಇದು ಭಾರತೀಯ ಭಕ್ತರೆಲ್ಲರಿಗೂ ಶುಭ ಸಂಕೇತವಾಗಿದೆ. ಶಾರದಾ ದೇವಿಯ ಮಂದಿರದ ಉದ್ಘಾಟನೆ ನವ ಯುಗದ ನಾಂದಿಯಾಗಿದೆ ಎಂದು ಶಾ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ದೇಗುಲದ ವಾಸ್ತು ಶಿಲ್ಪ, ಇದರ ನಿರ್ಮಾಣವನ್ನು ಪೌರಾಣಿಕ ಗ್ರಂಥಗಳನ್ನು ಆಧಾರವಾಗಿರಿಸಿಕೊಂಡು ನಿರ್ಮಾಣ ಮಾಡಲಾಗಿದೆ. ಕುಪ್ವಾರಾ‌ದಲ್ಲಿರುವ ಮಾತೆ ಶಾರದೆಯ ಮಂದಿರದ ಮರು ನಿರ್ಮಾಣ ನಾಗರಿಕತೆಯ ಆವಿಷ್ಕಾರ ಮತ್ತು ಶಾರದಾ ಲಿಪಿಯ ಪ್ರಚಾರದ ಹಿನ್ನೆಲೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಶಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಂದು ಸಮಯದಲ್ಲಿ ಶಾರದಾ ಪೀಠವನ್ನು ಭಾರತೀಯ ಉಪಖಂಡದಲ್ಲಿ ಜ್ಞಾನದ ಕೇಂದ್ರ ಎಂಬುದಾಗಿಯೇ ಪರಿಗಣಿಸಲಾಗಿತ್ತು. ದೇಶದೆಲ್ಲೆಡೆಯಿಂದ ವಿದ್ವಾಂಸರು ಧರ್ಮಗ್ರಂಥಗಳು ಮತ್ತು ಆಧ್ಯಾತ್ಮಿಕ ಜ್ಞಾನ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿಗೆ ಅಧ್ಯಯನಕ್ಕಾಗಿ ಭೇಟಿ ನೀಡುತ್ತಿದ್ದರು. ಕಾಶ್ಮೀರದ ಮೂಲ ಲಿಪಿ ಶಾರದಾ ಲಿಪಿಯಾಗಿದೆ ಎಂಬುದಾಗಿಯೂ ಶಾ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ೩೭೦ ನೇ ವಿಧಿಯನ್ನು ರದ್ದು ಮಾಡಿದ ನಂತರ ಶಾಂತಿ, ಸುವ್ಯವಸ್ಥೆ ನೆಲೆಸಿದೆ. ಕಾಶ್ಮೀರವು ತನ್ನ ಹಳೆಯ ಸಂಸ್ಕೃತಿ ಸಂಸ್ಕಾರಗಳನ್ನು ಮತ್ತೆ ಮರುಸ್ಥಾಪನೆ ಮಾಡುತ್ತಿದೆ ಎಂದು ಶಾ ಹೇಳಿದ್ದಾರೆ.

Tags

Related Articles

Close