ಪ್ರಚಲಿತ

ಪಿಒಕೆ ಅಸ್ತಿತ್ವಕ್ಕೆ ಬಂದದ್ದು ನೆಹರೂ ಅವರ ತಪ್ಪಿನಿಂದ: ಅಮಿತ್ ಶಾ

ಬಿಜೆಪಿ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಜಿ ಪ್ರಧಾನಿ ದಿ. ಜವಹರಲಾಲ್ ನೆಹರೂ ವಿರುದ್ಧ ಗುಡುಗಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರವು ಹಲವು ದಶಕಗಳಿಂದ ಭದ್ರತಾ ಸವಾಲುಗಳನ್ನು ಎದುರಿಸುತ್ತಿದ್ದು, ಇದೆಲ್ಲಕ್ಕೂ ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಕಾರಣ ಎಂದು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ 2023 ಮತ್ತು ಜಮ್ಮು ಮತ್ತು ಕಾಶ್ಮೀರ ಮರು ಸಂಘಟನೆ (ತಿದ್ದುಪಡಿ) ಮಸೂದೆ 2023 ಕ್ಕೆ ಸಂಬಂಧಿಸಿದ ಹಾಗೆ ಮಾತನಾಡುವ ವೇಳೆ, ನೆಹರೂ ಕಣಿವೆ ರಾಜ್ಯಕ್ಕೆ ಎಸಗಿದ ಅನ್ಯಾಯದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ನೆಹರೂ ಈ ಎರಡು ಪ್ರಮಾದಗಳನ್ನು ಎಸಗದೇ ಹೋಗಿದ್ದರೆ ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ) ಅಸ್ತಿತ್ವ ಇರುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಸದನದಲ್ಲಿ ನಿಂತು ಜವಾಬ್ದಾರಿಯುತವಾಗಿ ಈ ಬಗ್ಗೆ ಮಾತನಾಡುವುದಾಗಿ ಹೇಳಿದ ಶಾ, ಜವಹರಲಾಲ್ ನೆಹರೂ ಕಾಲದಲ್ಲಿ ನಡೆದ ಎರಡು ಪ್ರಮಾದಗಳ ಕಾರಣಕ್ಕೆ ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಇಷ್ಟು ವರ್ಷಗಳ ಕಾಲ ತೊಂದರೆ ಅನುಭವಿಸುವಂತಾಯಿತು. ನಮ್ಮ ಭಾರತೀಯ ಸೇನೆ ಗೆದ್ದಾಗ ಕದನ ವಿರಾಮ ಘೋಷಣೆ ಮಾಡಲಾಯಿತು. ಪಿಒಕೆ ಅಸ್ತಿತ್ವ ಪಡೆಯಿತು. ಕದನ ವಿರಾಮ ಘೋಷಣೆ ಮೂರು ದಿನ ತಡವಾಗಿದ್ದಿದ್ದರೆ ಪಿಒಕೆ ಭಾರತದ ಭಾಗವಾಗುತ್ತಿತ್ತು ಎಂದು ನೆಹರೂ ತಪ್ಪಿನ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಇನ್ನೊಂದು ಸಮಸ್ಯೆ ನಮ್ಮ ಸಮಸ್ಯೆಗಳನ್ನು ವಿಶ್ವ ಸಂಸ್ಥೆಗೆ ಕೊಂಡೊಯ್ಯುವುದಕ್ಕೆ ಮಾಡಿದ ಪ್ರಮಾದ ಎಂದು ಅವರು ತಿಳಿಸಿದ್ದಾರೆ. ಪಿಒಕೆ ಸಮಸ್ಯೆ ನೆಹರೂ ಅವರಿಂದ ಉಂಟಾಗಿದೆ. ಇಲ್ಲದಿದ್ದರೆ ಆ ಪ್ರದೇಶ ಇಂದು ಕಾಶ್ಮೀರಕ್ಕೆ ಸೇರಿರುತ್ತಿತ್ತು. ಭಾರತ ತನ್ನ ದೊಡ್ಡ ಪ್ರಮಾಣದ ಭೂಭಾಗವನ್ನು ಕಳೆದುಕೊಳ್ಳಲು ನೆಹರೂ ಕಾರಣ. ಕಾಶ್ಮೀರಿ ಪಂಡಿತರ ವಲಸೆಗೂ ಅವರೇ ಕಾರಣ. ವೋಟ್‌ಬ್ಯಾಂಕ್ ರಾಜಕಾರಣದ ಹುನ್ನಾರ ಇಲ್ಲದೇ ಇದ್ದಿದ್ದರೆ ಇದನ್ನು ಅವರು ತಡೆಯಬಹುದಿತ್ತು ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಶಾ ಅವರು ನೆಹರೂ ವಿರುದ್ಧ ನಡೆಸಿದ ವಾಗ್ದಾಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌ನ ಹಲವು ಸದಸ್ಯರು ಸಭಾ ತ್ಯಾಗ ಮಾಡಿದರು. ಈ ಘಟನೆಗೆ ಪ್ರತಿಕ್ರಿಯೆ ನೀಡಿದ ಶಾ, ನಾನು ನೆಹರೂ ತಪ್ಪುಗಳನ್ನು ಹಿಮಾಲಯನ್ ಬ್ಲಂಡರ್ ಎಂದು ಹೇಳಿದ್ದರೆ ಇಂದು ಕಾಂಗ್ರೆಸ್‌ನವರು ರಾಜೀನಾಮೆ ನೀಡುತ್ತಿದ್ದರು ಎಂದು ಲೇವಡಿ ಮಾಡಿದರು.

Tags

Related Articles

Close