ಅಂಕಣ

ಕರ್ನಾಟಕಕ್ಕೆ ಸಿಗಬೇಕಾಗಿದ್ದ ಆದರೆ ಸಿಗದೆ ಹೋದ ಅತ್ಯುತ್ತಮ ಮುಖ್ಯಮಂತ್ರಿಯಾಗಬಹುದಾಗಿದ್ದ ಸಾವಿನಲ್ಲೂ ಮಕ್ಕಳ ಹೊಟ್ಟೆ ತುಂಬಿ ಹೋದ ಅದಮ್ಯ ಚೇತನ ಅನಂತ್ ಕುಮಾರ್ ಮಾನವೀಯ ಮುಖದ ಅನಾವರಣ

ಕೆಲವು ತಿಂಗಳ ಹಿಂದೆ ವಿಧಾನಸಭೆ ಚುನಾವಣೆ ನಡೆದು ಭಾರತೀಯ ಜನತಾ ಪಕ್ಷ ಕೇವಲ ಎಂಟು ಸೀಟುಗಳಿಂದ ಅಧಿಕಾರ ನಡೆಸುವ ಅವಕಾಶವನ್ನು ಕಳೆದುಕೊಂಡಾಗ, ಉಬ್ಬುಹಲ್ಲು ಅನಂತನನ್ನು ಬೈದವರೆ ಹೆಚ್ಚು. ‘ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್” ಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು ಎಂದು ಅಲವತ್ತುಕೊಂಡವರೆಲ್ಲ ಮರೆತ ಒಂದು ವಿಚಾರವೆಂದರೆ, ಕರ್ನಾಟಕದಲ್ಲಿ ಇವತ್ತೇನಾದರೂ ಬಿಜೆಪಿ ಪಕ್ಷ ಅಸ್ತಿತ್ವದಲ್ಲಿ ಇದೆಯೆಂದಾದರೆ ಅದಕ್ಕೆ ಕಾರಣ ಇದೆ ಅನಂತ್ ಕುಮಾರ್.

ಭಾರತೀಯ ಜನತಾ ಪಕ್ಷಕ್ಕೆ ದಕ್ಷಿಣ ಭಾರತದ ಹೆಬ್ಬಾಗಿಲನ್ನು ತೆರೆಯಲು ಯಡಿಯೂರಪ್ಪನವರು ಎಷ್ಟು ಕಷ್ಟ ಪಟ್ಟಿದ್ದರೋ, ಅಷ್ಟೇ ಕಷ್ಟ ಅನಂತ್ ಕುಮಾರ್ ಕೂಡಾ ಪಟ್ಟಿದ್ದಾರೆ. ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಜೋಡಿ ಸೈಕಲ್ ತುಳಿದು ಹಳ್ಳಿ ಹಳ್ಳಿಗೂ ತೆರಳಿ ತಳ ಮಟ್ಟದಿಂದ ಪಕ್ಷವನ್ನು ಕಟ್ಟಿದ್ದಾರೆ. ಕೇಂದ್ರದ ಅಟಲ್-ಅಡ್ವಾಣಿ ಜೋಡಿಯಂತೆಯೆ ರಾಜ್ಯದ ಯಡಿಯೂರಪ್ಪ-ಅನಂತ್ ಜೋಡಿ ಪಕ್ಷವನ್ನು ಕಟ್ಟಲು ಬೇಕಾದಷ್ಟು ಶ್ರಮ ಪಟ್ಟಿದ್ದಾರೆ. ಕೇವಲ 39 ರ ಅತಿ ಕಿರಿಯ ವಯಸ್ಸಿನಲ್ಲಿಯೆ ಅಟಲ್ ಸರಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಬೇಗಾಗಿದ್ದರೆ ಅನಂತ್ ಕುಮಾರರ ಬುದ್ದಿ ಮತ್ತೆ ಮತ್ತು ಸಂಘಟನಾ ಚಾತುರ್ಯ ಎಂಥದ್ದಿರಬೇಕು?

39 ರ ಹರೆಯದಲ್ಲಿ ಅಟಲ್ ಸರಕಾರದಲ್ಲಿದ್ದು 59ರ ಹರೆಯದಲ್ಲಿ ಮೋದಿ ಸರಕಾರ್ದಲ್ಲಿರುವ ಕರ್ನಾಟಕದ ಏಕೈಕ ಪ್ರತಿನಿಧಿ ಈ ಅನಂತ್ ಕುಮಾರ್. ಸರಿ ಸುಮಾರು 20 ವರ್ಷಗಳ ರಾಜಕಾರಣದ ಸುಧೀರ್ಘ ಅವಧಿಯಲ್ಲಿ ಹೊಲಸು ರಾಜಕಾರಣದ ನಡುವೆಯೂ ತನ್ನ ವರ್ಚಸ್ಸನ್ನು ಕಾಯ್ದುಕೊಂಡವರು ಇದೆ ಅನಂತ್ ಕುಮಾರ್. ಮೂಲತಃ ಅಡ್ವಾಣಿ ಪಾಳಯದಲ್ಲಿದ್ದರೂ ತದನಂತರ ಮೋದಿಯವರ ನಿಷ್ಟಾವಂತನಾಗಿ ತನಗೆ ವ್ಯಕ್ತಿಗಿಂತ ಪಕ್ಷ ಮತ್ತು ಜನತೆಯ ಭವಿಷ್ಯವೆ ಮುಖ್ಯ ಎಂದು ತೋರಿಸಿಕೊಟ್ಟವರು ಅನಂತ್ ಕುಮಾರ್. ಎಸ್.ಎಮ್ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ದೆಹಲಿಗೆ ಎಡತಾಕಿ ಬೆಂಗಳೂರು ದಕ್ಷಿಣ ಕ್ಷೇತ್ರ ಮಾತ್ರವಲ್ಲ ಇಡಿ ಕರ್ನಾಟಕದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದವರು ಇದೆ ಅನಂತ್ ಕುಮಾರ್. ಕೇಂದ್ರದಲ್ಲಿ ಯವುದೆ ಸರಕಾರವಿರಲಿ ತನ್ನ ರಾಜ್ಯದ ಹಿತಕ್ಕಾಗಿ ಸಂಸತ್ತಿನಲ್ಲಿ ದನಿಯಾಗುತ್ತಿದ್ದವರು ಅನಂತ್ ಕುಮಾರ್.

ತನ್ನ ಕ್ಷೇತ್ರದಿಂದ ಸತತ ಆರು ಬಾರಿ ಸಂಸದರಾಗಿ ಚುನಾಯಿತರಾಗಬೇಕಾದರೆ ಅವರು ತಮ್ಮ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳ ಬಗ್ಗೆ ಊಹಿಸಬಹುದಷ್ಟೆ. ಒಂದು ವೇಳೆ ಅನಂತ್ ಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾಗಿರುತ್ತಿದ್ದರೆ ರಾಜ್ಯದ ಭಾಗ್ಯವೆ ಬದಲಾಗಿರುತ್ತಿತ್ತು. ಕನ್ನಡಿಗರಿಗೆ ಭಾಗ್ಯವಿಲ್ಲ ಎಂದಷ್ಟೇ ಹೇಳಬಹುದು. ರಾಜಕಾರಣವನ್ನು ಅದಮ್ಯವಾಗಿ ಪ್ರೀತಿಸುತ್ತಿದ್ದ ಅನಂತ್, ವಿಧಾನ ಸೌಧದ ಮುಂದೆ ನಡೆದಾಡುವಾಗೆಲ್ಲಾ ತಲೆ ಬಗ್ಗಿಸಿ ಕೈ ಮುಗಿಯುತ್ತಿದ್ದರಂತೆ. ಆತ ಪ್ರಜಾಪ್ರಭುತ್ವಕ್ಕೆ ಎಷ್ಟು ಮಹತ್ವ ಕೊಡುತ್ತಿದ್ದರೆನ್ನುವುದನ್ನು ಅರ್ಥ ಮಾಡಲು ಈ ಸಣ್ಣ ಉದಾಹರಣೆಗಳೆ ಸಾಕು.

ಅನಂತ್ ಅನ್ನುವ ಅನಂತ ಮಾನವೀಯತೆಯ ಮನುಷ್ಯ ಅದೆಷ್ಟೋ ಮಕ್ಕಳ ಹೊಟ್ಟೆ ತುಂಬಿ ಆವರ ಬಾಳಿಗೆ ಬೆಳಕಾಗಿದ್ದಾರೆ. ತನ್ನ ಪತ್ನಿ ನಡೆಸುವ ಎನ್.ಜಿ.ಒ ಸಂಸ್ಥೆಯಾದ ಅದಮ್ಯ ಚೇತನದ ಮೂಲಕ ಸಾವಿರಾರು ಬಡ ಮಕ್ಕಳ ಹೊಟ್ಟೆ ತುಂಬಿದ್ದಾರೆ. ಮೊನ್ನೆ ಅವರು ತೀರಿಕೊಂಡ ದಿನವೂ ಅದಮ್ಯ ಚೇತನದಲ್ಲಿ ಮಕ್ಕಳಿಗೆ ಕೊಡಬೇಕಾದ ಊಟ ನಿಲ್ಲಲಿಲ್ಲ. ತನ್ನ ನೆಚ್ಚಿನ ನಾಯಕನನ್ನು ಕಳೆದುಕೊಂಡ ದುಃಖದಲ್ಲಿದ್ದರೂ ಮಕ್ಕಳನ್ನು ಉಪವಾಸ ಕೆಡವಲಿಲ್ಲ. ಬದುಕಿದ್ದಾಗಲೂ ಇತರರ ಕಷ್ಟಕ್ಕೆ ಮಿಡಿದ ಹೃದಯ ಸಾವಿನಲ್ಲೂ ಮಕ್ಕಳ ಹೊಟ್ಟೆ ತಣ್ಣಗಾಗಿಸಿದ “ಅನಂತ ಚೇತನ” ಹಿಂತಿರುಗಿ ಬಾರದ ಲೋಕಕ್ಕೆ ತೆರಳಿತು.

ನಿಮಗೆ ಗೊತ್ತಿದೆಯೋ ಇಲ್ಲವೋ ಆದರೆ ಅನಂತ್ ಕುಮಾರ್ ಸದಾ ಸಂತೋಷದಿಂದಿರುವ ವ್ಯಕ್ತಿ. ಮಾತ್ರವಲ್ಲ ಒಕ್ಕಣೆ, ಘೋಷಣೆಗಳನ್ನು ಕೊಡುವುದರಲ್ಲಿ ಎತ್ತಿದ ಕೈ. ಪಕ್ಷಕ್ಕೆ ಹಲವಾರು ಘೋಷಣೆಗಳನ್ನು ಕೊಟ್ಟವರು ಅನಂತ್ ಕುಮಾರ್. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲಿಷ್ ಹೀಗೆ ಹಲವಾರು ಭಾಷೆಗಳಲ್ಲಿ ನಿಷ್ಣಾತರಾಗಿದ್ದರು. ರಾಜಕಾರದಲ್ಲಿ ಅವರಿಗಿರುವ ಅಗಾಧ ಅನುಭವದ ಕಾರಣದಿಂದಾಗಿಯೆ ಸಂಸದೀಯ ವ್ಯವಹಾರಗಳ ಅತಿ ದೊಡ್ಡ ಜವಾಬ್ದಾರಿಯನ್ನು ಅನಂತ್ ಕುಮಾರ್ ಹೆಗಲಿಗೆ ಹಾಕಿದ್ದರು ನರೇಂದ್ರ ಮೋದಿ. ತನಗೆ ಕೊಟ್ಟ ಯಾವುದೇ ಜವಾಬ್ದಾರಿಯನ್ನು ನಿಷ್ಟೆಯಿಂದ ನಿರ್ವಹಿಸಿ ತನ್ನ ಪಾಲಿನ ಕರ್ತವ್ಯವನ್ನು ಮಾಡುತ್ತಿದ್ದರು ಅನಂತ್. ಅನಂತ್ ಕುಮಾರ್ ಅವರ ಸಾಧನೆ ನೋಡಬೇಕಾದರೆ ಸಂಸದ ಆದರ್ಶ ಗ್ರಾಮ ಯೋಜನೆಯಡಿ ಅವರು ದತ್ತು ತೆಗೆದುಕೊಂಡ ರಾಗಿ ಹಳ್ಳಿಯನ್ನೊಮ್ಮೆ ನೋಡಿ ಬರಬೇಕು.

ಪಕ್ಷದಲ್ಲಿ ತನ್ನ ವಿರುದ್ದದ್ದ “ಆಂತರಿಕ ರಾಜಕಾರಣ”ವನ್ನು ಹತ್ತಿಕ್ಕುವುದರಲ್ಲಿ ಅನಂತ್ ಕುಮಾರಿಗೆ ಅವರೆ ಸಾಟಿ. ರಾಜಕಾರಣದ ಪಡಸಾಲೆಯಲ್ಲಿ ಒಂದು ಮಾತು ಬಲು ಪ್ರಚಲಿತ. ಒಂದು ವೇಳೆ ಬಿಜೆಪಿ ಪ್ರಧಾನ ಕಚೇರಿಯ ಮೇಲೆ ಬಾಂಬ್ ದಾಳಿ ನಡೆದರೆ ಬದುಕುಳಿಯುವುದು ಇಬ್ಬರೆ, ಒಂದು ಗೋಡೆ ಮೇಲಿನ ಜಿರಳೆ, ಇನ್ನೊಂದು ಅನಂತ್ ಕುಮಾರ್!! ಪಕ್ಷದಲ್ಲಿ ಅನಂತ್ ಕುಮಾರ್ ಎಷ್ಟು ಬಲಿಷ್ಟರಾಗಿದ್ದರು ಎನ್ನುವುದಕ್ಕೆ ಇದು ಉದಾಹರಣೆ. ಪಕ್ಷದ ಅಧ್ಯಕ್ಷ ಯಾರೆ ಆಗಿರಲಿ, ಪ್ರಧಾನ ಮಂತ್ರಿ ಯಾರೆ ಆಗಿರಲಿ ಪಕ್ಷದೊಳಗೆ ಹೇಗೆ ಬದುಕುಳಿಯಬೇಕು ಎನ್ನುವುದು ಅನಂತ್ ಕುಮಾರರಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿಯೆ ಅಂದು ಅಟಲ್ ಸರಕಾರ ಇಂದು ಮೋದಿ ಸರಕಾರದಲ್ಲಿ ಕಾರ್ಯನಿರ್ವಹಿಸಿ ಒಂದು ಆವರ್ತನವನ್ನು ಪೂರ್ಣಗೊಳಿಸಲು ಅವರಿಗೆ ಸಾಧ್ಯವಾದದ್ದು.

ಅಪ್ಪಟ ಬ್ರಾಹ್ಮಣ ಪರಿವಾರದಿಂದ ಬಂದರೂ ಎಲ್ಲರನ್ನೂ ಸಮಭಾಅವದಿಂದ ಕಂಡು, ಒಬ್ಬ ಕ್ಷತ್ರಿಯನಾಗಿ ಜೀವನದ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ ಅನಂತ್ ವಿಧಿ ಒಡ್ಡಿದ ಪರೀಕ್ಷೆಯನ್ನು ಎದುರಿಸುವಲ್ಲಿ ವಿಫಲರಾದರು. ತನ್ನ ಪಕ್ಷದ ಕಾರ್ಯಕರ್ತರ ಹೆಸರನ್ನು ವರ್ಷಗಳವರೆಗೂ ನೆನಪಿಟ್ಟು ಗುರುತಿಸುತ್ತಿದ್ದ ಅನಂತ್ ಇನ್ನಿಲ್ಲ. ಕರ್ನಾಟಕದಿಂದ ಹೋಗುವ ಶಾಸಕರಿಗೆ, ಸಂಸದರಿಗೆ ಪಕ್ಷಾತೀತವಾಗಿ ದೆಹಲಿಯಲ್ಲಿ ಉಳಕೊಳ್ಳುವ ಆಸರೆಯಾಗಿದ್ದ ಅನಂತ್ ಕುಮಾರ್ ಮನೆಯ ಕದ ಮುಚ್ಚಿಹೋಯಿತು. ರಾಜ್ಯ ಮಾತ್ರವಲ್ಲ ದೇಶಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಹಗಲಿರುಳೂ ಶ್ರಮಿಸಿದ ಅದಮ್ಯ ಚೇತನ ನಮ್ಮನ್ನಗಲಿಗೆ ಹೋಗಿದೆ. ಕರ್ನಾಟಕ ಮತ್ತು ದೆಹಲಿಯನ್ನು ಬೆಸೆಯುತ್ತಿದ್ದ ಕೊಂಡಿಯೊಂದು ಕಳಚಿದೆ. ಯುವ ರಾಜಕಾರಣಿಗಳಿಗೆ ಪ್ರೇರಣೆಯಾಗಬಹುದಾಗಿದ್ದ ರಾಜಕಾರಣದ ನಡೆದಾಡುವ ಪುಸ್ತಕವೊಂದು ಶಾಶ್ವತವಾಗಿ ಮುಚ್ಚಿಕೊಂಡಿದೆ.

ಓ ಶಾಂತಿ

–ಶಾರ್ವರಿ

swarajyamag

Tags

Related Articles

FOR DAILY ALERTS
Close