ಪ್ರಚಲಿತ

ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ: ಯಾರೂ ಊಹಿಸದ ರೀತಿಯಲ್ಲಿ ಪಂಚ್ ಕೊಟ್ಟ ಕುಸ್ತಿಪಟುಗಳು!

ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ರಾಜೀನಾಮೆಗೆ ಆಗ್ರಹಿಸಿ ದೇಶದ ಕುಸ್ತಿ ಪಟುಗಳು ದೆಹಲಿಯಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯ ಲಾಭವನ್ನು ರಾಜಕೀಯವಾಗಿ ಪಡೆದುಕೊಳ್ಳಲು ಕಾಂಗ್ರೆಸ್ ಸೇರಿದಂತೆ ಇತರ ಪಕ್ಷದ ನಾಯಕರು ಪ್ರಯತ್ನ ನಡೆಸಿದ್ದು, ಇದಕ್ಕೆ ಖಡಕ್ ಉತ್ತರ ನೀಡುವ ಮೂಲಕ ಕುಸ್ತಿ ಪಟುಗಳು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಈ ಪ್ರತಿಭಟನೆ ಬಿಜೆಪಿ ಸರ್ಕಾರ, ಪ್ರಧಾನಿ ಮೋದಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ನಡೆಯುತ್ತಿರುವಂತೆ ಬಿಂಬಿಸಲು ಹೊರಟ ವಿರೋಧ ಪಕ್ಷಗಳಿಗೆ, ಕುಸ್ತಿ ಪಟುಗಳು ಈ ನಡೆ ಮುಖಕ್ಕೆ ಮಂಗಳಾರತಿ ಎತ್ತಿದಂತಾಗಿದೆ. ಕುಸ್ತಿ ಪಟುಗಳು ಪ್ರತಿಭಟನೆಗೆ ಆಗಮಿಸಿ, ರಾಜಕೀಯ ಮಾಡಲು ಮುಂದಾದ ಸಿಪಿಐ ನಾಯಕಿ ಬೃಂದಾ ಕಾರಾಟ್ ಅವರನ್ನು, ಈ ಪ್ರತಿಭಟನೆಯನ್ನು ರಾಜಕೀಯದ ಜೊತೆಗೆ ತಳುಕು ಹಾಕಬೇಡಿ ಎನ್ನುವ ಮೂಲಕ ವೇದಿಕೆಯಿಂದಲೇ ಹೊರಗೆ ಕಳುಹಿಸಲಾಗಿದೆ. ಬಿಜೆಪಿ, ಮೋದಿ ವಿರುದ್ಧ ಭಾಷಣ ಮಾಡಿ ದ್ವೇಷ ಹರಡುವ ಕೆಲಸ ಮಾಡಲು ಹೊರಟಿದ್ದ ಬೃಂದಾ‌ಗೆ ಕುಸ್ತಿ ಪಟುಗಳೇ ತಕ್ಕ ಉತ್ತರ ನೀಡಿದ್ದಾರೆ.

ಹಾಗೆಯೇ ಈ ಪ್ರತಿಭಟನೆಯನ್ನು ರಾಜಕೀಯಕ್ಕಾಗಿ ಬಳಕೆ ಮಾಡದಂತೆ ಕಾಂಗ್ರೆಸ್ ಪಕ್ಷಕ್ಕೂ ಟ್ವಿಟರ್ ಮೂಲಕ ಕುಸ್ತಿ ಪಟುಗಳು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಮಾಜಿ ಕುಸ್ತಿ ಪಟು, ಬಿಜೆಪಿ ನಾಯಕಿ ಬಬಿತಾ ಪೊಗಾಟ್ ಕಾಂಗ್ರೆಸ್ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದು, ಈ ಹೋರಾಟ ಪ್ರಧಾನಿ ಮೋದಿ, ಸ್ಮೃತಿ ಇರಾನಿ ವಿರುದ್ಧ ಅಲ್ಲ. ಕುಸ್ತಿ ಪಟುಗಳು ಮತ್ತು ಫೆಡರೇಶನ್ ನಡುವಿನ ಹೋರಾಟ. ಇದನ್ನು ರಾಜಕೀಯ ಲಾಭಕ್ಕೆ ಬಳಕೆ ಮಾಡಿಕೊಳ್ಳಬೇಡಿ ಎಂದು ಸೂಚಿಸಿದ್ದಾರೆ.

ಹಾಗೆಯೇ, ಕುಸ್ತಿ ಪಟುಗಳ ಈ ಪ್ರತಿಭಟನೆ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಸ್ಮೃತಿ ಇರಾನಿ ವಿರುದ್ಧ ಅಲ್ಲ.ಈ ಪ್ರತಿಭಟನೆ ಫೆಡರೇಶನ್‌ನ ಒಬ್ಬ ವ್ಯಕ್ತಿಯ ವಿರುದ್ಧ. ನಾನು ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡುವುದೇನೆಂದರೆ, ಇದನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಕೆ ಮಾಡಬೇಡಿ. ಕುಸ್ತಿ ಪಟುಗಳು ತಮ್ಮ ಬೇಡಿಕೆ ಮತ್ತು ಅವಶ್ಯಕತೆಗಳನ್ನು ಪೂರೈಸಲು ಮಾಡುತ್ತಿರುವ ಪ್ರಮಾಣಿಕ ಹೋರಾಟದಲ್ಲಿ ರಾಜಕೀಯ ಬೇಡ ಎಂದು ಕಾಂಗ್ರೆಸ್‌ಗೆ ಚಾಟಿ ಬಳಸಿದ್ದಾರೆ.

ಕುಸ್ತಿ ಪಟು ಭಜರಂಗ್ ಪೂನಿಯಾ ಅವರು ಈ ಬಗ್ಗೆ ಮಾತನಾಡಿದ್ದು, ಇದು ಕುಸ್ತಿ ಪಟುಗಳು ಪ್ರತಿಭಟನೆ. ಇದನ್ನು ರಾಜಕೀಯಕ್ಕೆ ಬಳಕೆ ಮಾಡಬೇಡಿ ಎಂದು ಪ್ರತಿಭಟನೆಯ ವೇದಿಕೆಯಲ್ಲೆಯೇ ತಿಳಿಸುವ ಮೂಲಕ, ಈ ಪ್ರಕರಣವನ್ನು ಕೇಂದ್ರ ಸರ್ಕಾರದ ವಿರುದ್ಧ ತಿರುಚುವವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಮಾತಿನೇಟು ನೀಡಿದ್ದಾರೆ‌.

ಒಟ್ಟಿನಲ್ಲಿ ಕುಸ್ತಿ ಪಟುಗಳ ಪ್ರತಿಭಟನೆಯಲ್ಲಿ ಮೂಗು ತೂರಿಸಿ ಮಜಾ ತೆಗೆದುಕೊಳ್ಳಲು ಪ್ರಯತ್ನ ನಡೆಸಿದ ವಿಪಕ್ಷಗಳ ಸ್ಥಿತಿ ‘ತಾವೇ ಚಪ್ಪಲಿ ಕೊಟ್ಟು, ಅದರಲ್ಲಿ ತಾವೇ ಹೊಡೆಸಿಕೊಂಡಂತಾಗಿದೆ‌.

Tags

Related Articles

Close