ಪ್ರಚಲಿತ

ಪಾಕ್-ಚೈನಾದ ತಂತ್ರಕ್ಕೆ ಭಾರತದ ತಿರುಗೇಟು: ಪಾಕಿಸ್ತಾನದ ಉಗ್ರವಾದಕ್ಕೆ ಮತ್ತೊಂದು ಸೋಲು!

ಪಾಕಿಸ್ತಾನ ಮೂಲದ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತನ್ನ ಐಎಸ್‌ಐಎಲ್ ಮತ್ತು ಅಲ್ ಖೈದಾ ನಿರ್ಬಂಧಗಳ ಸಮಿತಿ ಅಡಿಯಲ್ಲಿ ‘ಜಾಗತಿಕ ಉಗ್ರ’ ಎಂದು ಘೋಷಿಸಿದೆ.

ಈ ಉಗ್ರ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೈಬಾದ ನಾಯಕನಾಗಿದ್ದು, ಕಳೆದ ವರ್ಷ ೨೦೨೨ ರಲ್ಲಿಯೇ ಈತನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಭಾರತ ಪ್ರಯತ್ನ ನಡೆಸಿದ್ದು, ಈ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿ ಮಕ್ಕಿಗೆ ಬೆಂಬಲ ಸೂಚಿಸುವಂತೆ ನಡೆಯನ್ನು ಪ್ರದರ್ಶಿಸಿತ್ತು. ಭಾರತವು ಮಕ್ತಿಯನ್ನು ಜಾಗತಿಕ ಉಗ್ರ ಪಟ್ಟಿಗೆ ಈತನನ್ನು ಸೇರಿಸುವಂತೆ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಿದ್ದ ಸಂದರ್ಭದಲ್ಲಿ, ಅದನ್ನು ತಡೆದಿದ್ದ ಚೀನಾವನ್ನು ಭಾರತ ತರಾಟೆಗೂ ತೆಗೆದುಕೊಂಡಿತ್ತು. ಇದೀಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈ ಉಗ್ರನ ವಿರುದ್ಧ ಕ್ರಮ ತೆಗೆದುಕೊಂಡಿರುವುದು ಭಾರತದ ಮನವಿಗೆ ಸಿಕ್ಕ ಜಯ ಎನ್ನಬಹುದು.

ಮಕ್ಕಿಯನ್ನು ಭಾರತ ಮತ್ತು ಅಮೇರಿಕ ರಾಷ್ಟ್ರಗಳು ಈಗಾಗಲೇ ತಮ್ಮ ದೇಶದ ಕಾನೂನಿನನ್ವಯ ‘ಭಯೋತ್ಪಾದಕ’ ಎಂದು ಘೋಷಿಸಿಕೊಂಡಿವೆ. ಈ ಭಯೋತ್ಪಾದಕ ವಿಶೇಷವಾಗಿ ಜಮ್ಮು ಕಾಶ್ಮೀರದಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸಿ, ಶಾಂತಿ ಕದಡಲು ಯುವಕರನ್ನು ತನ್ನ ಗುಂಪಿಗೆ ಸೇರಿಸಿಕೊಳ್ಳುವುದು, ತರಬೇತಿ ನೀಡುವುದು, ದಾಳಿಗಳನ್ನು ಯೋಜಿಸುವುದು, ಉಗ್ರ ಚಟುವಟಿಕೆಗಳಿಗೆ ನಿಧಿ ಸಂಗ್ರಹ ಇತ್ಯಾದಿ ಸಮಾಜಘಾತುಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ. ಈ ವ್ಯಕ್ತಿ ಎಲ್‌ಇಟಿ ಉಗ್ರ ಹಫೀಸ್ ಸಯ್ಯದ್‌ನ ಸೋದರ ಮಾವನೂ ಹೌದು.

ಕಳೆದ ವರ್ಷ ಪಾಕ್‌ನ ಭಯೋತ್ಪಾದನೆ ವಿರೋಧಿ ನ್ಯಾಯಾಲಯವು ಈತನನ್ನು ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೋಷಿ ಎಂದು ಘೋಷಣೆ ಮಾಡಿತ್ತು. ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರಕಾರ ಈತನಿಗೆ ಜೈಲು ಶಿಕ್ಷೆ ಸಹ ಆಗಿತ್ತು.

ಒಟ್ಟಿನಲ್ಲಿ ಭಾರತ ಉಗ್ರ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದು, ಭಾರತವು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಸೂಚಿಸಿದ್ದ ಮಿಕ್ಕಿ ಹೆಸರನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ‘ಜಾಗತಿಕ ಉಗ್ರರ ಪಟ್ಟಿ’ ಗೆ ಸೇರಿಸಿರುವುದು ಸ್ವಾಗತಾರ್ಹ ಮತ್ತು ಭಾರತಕ್ಕೆ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಸಿಕ್ಕ ಜಯ ಎನ್ನಬಹುದು. ಹಾಗೆಯೇ ಮಕ್ಕಿ ಜಾಗತಿಕ ಭಯೋತ್ಪಾದಕ ಪಟ್ಟಿ ಸೇರಿರುವುದು ಚೀನಾ ದೇಶಕ್ಕೆ ನುಂಗಲಾರದ ತುತ್ತಾಗಿರಬಹುದು ಎಂಬುದರಲ್ಲೂ ಎರಡು ಮಾತಿಲ್ಲ.

Tags

Related Articles

Close