
ಇನ್ನೇನು ಕೆಲವೇ ಸಮಯದೊಳಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ಎಲ್ಲಾ ಪಕ್ಷಗಳೂ ಈ ಚುನಾವಣೆಗೆ ಈಗೀಂದಲೇ ಯಾವ ಅಭ್ಯರ್ಥಿಗಳನ್ನು, ಯಾವ ಕ್ಷೇತ್ರದಿಂದ ಕಣಕ್ಕಿಳಿಸೋದು, ಹೇಗೆ ಈ ಚುನಾವಣೆಯನ್ನು ಗೇಲ್ಲೋದು, ಸೋಲು – ಗೆಲುವಿನ ಲೆಕ್ಕಾಚಾರಕ್ಕೆ ಈಗಿಂದಲೇ ತೊಡಗಿಕೊಂಡಿವೆ. ಎಲ್ಲಿ ಹೇಗೆ ಪ್ರಚಾರ ಕಾರ್ಯ ನಡೆಸ್ಬೇಕು ಅನ್ನೋದರ ಬಗೆಗೂ ಈಗಾಗಲೇ ಕಾರ್ಯಯೋಜನೆಯನ್ನು ತಯಾರಿಸ್ತಾ ಇರೋದಂತೂ ಸತ್ಯ. ಇದು ಪ್ರತಿ ಚುನಾವಣೆಯ ಸಂದರ್ಭದಲ್ಲಿಯೂ ಮತದಾರರನ್ನು ಸೆಳೆಯೋದಿಕ್ಕೆ ಎಲ್ಲಾ ಪಕ್ಷಗಳು ಮಾಡೋ ಕಸರತ್ತು.
ಈ ಬಾರಿ 2023 ರಲ್ಲಿ ನಡೆಯಲಿರೋ ವಿಧಾನಸಭಾ ಚುನಾವಣೆಗೂ ಅಭ್ಯರ್ಥಿಗಳು ನಂಗೆ ಸೀಟ್ ಕೊಡಿ, ನಂಗೆ ಟಿಕೆಟ್ ಕೊಡಿ ಅಂತ ಈಗಾಗಲೇ ತಮ್ಮ ಪಕ್ಷಕ್ಕೆ ಮನವಿಯನ್ನು ಸಲ್ಲಿಸ್ತಾ ಇದ್ದಾರೆ.
ಇನ್ನು ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡಕ್ಕೆ ಸಂಬಂಧಿಸಿದಂತೆ ಇರೋ ಎಂಟು ಕ್ಷೇತ್ರಕ್ಕೆ 40 ಅಭ್ಯರ್ಥಿಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ನಿಜ ಹೇಳ್ಬೇಕಂದ್ರೆ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ಈಗಾಗಲೇ ಶುರು ಆಗಿದೆ ಅಂತ ಹೇಳ್ಬಹುದು. ಅಂದ ಹಾಗೆ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳು ಟಿಕೆಟ್ ಬೇಕಾದ್ರೆ 2 ಲಕ್ಷ ಡೆಪಾಸಿಟ್ ಇಡೋ ಪದ್ಧತಿ ಇದೆ. ಇರೋ ಎಂಟು ಸೀಟ್‌ಗೆ 40 ಅಭ್ಯರ್ಥಿಗಳು ತಲಾ 2 ಲಕ್ಷ ರೂ. ಗಳ ಹಾಗೆ ಈಗಾಗಲೇ ಡೆಪಾಸಿಟ್ ಇಟ್ಟು, ಟಿಕೆಟ್‌ಗಾಗಿ ಲಾಬಿ ನಡೆಸ್ತಾ ಇದ್ದಾರೆ ಅನ್ನೋದು ಸದ್ಯದ ಸುದ್ದಿ.
ಅಂದ ಹಾಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ, ಮೋದಿ ಗೆದ್ದರೂ ಇಲ್ಲಿ ಮಾತ್ರ ಮೋದಿ ಅಲೆ ಇಲ್ಲ. ಬಿಜೆಪಿ ಪಕ್ಷ ಇಲ್ಲಿ ಯಾವುದೇ ಕಾರಣಕ್ಕೂ ಖಾತೆ ತೆರೆಯೋದಿಲ್ಲ ಎಂಬ ಎಣಿಕೆಯಲ್ಲಿತ್ತು. ಆದರೆ ಅವರ ಲೆಕ್ಕಾಚಾರವನ್ನು ಜನರು ತಲೆಕೆಳಗಾಗಿಸಿ ‘ಬಿಜೆಪಿ’ ಜೊತೆ ನಾವಿದ್ದೇವೆ, ಇಲ್ಲಿ ಭರವಸೆಯ ಪಕ್ಷ ಎಂಬುದೊಂದಿದ್ದರೆ ಅದು ಬಿಜೆಪಿ ಪಕ್ಷ ಎಂದು ಪರಿಗಣಿಸಿ, ಕಮಲ ಅರಳಿಸಿದ್ದರು. ಎಂಟು ಕ್ಷೇತ್ರದಲ್ಲಿ 7 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿತ್ತು. ಕೇವಲ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೂ, ಹ್ಯಾಪ್ ಮೋರೆ ಹಾಕುವ ಹೀನಾಯ ಸ್ಥಿತಿಯನ್ನು ತಂದುಕೊಂಡಿತ್ತು ಎನ್ನುವುದು ಸತ್ಯ.
ಅಂದ ಹಾಗೆ ,ಕಾಂಗ್ರೆಸ್‌ನಲ್ಲಿ ಆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಮುಂದಿನ ಚುನಾವಣೆಯಲ್ಲಿ ಯುವ ನಾಯಕರಿಗೆ ಅವಕಾಶ ನೀಡುವುದಾಗಿ ಹೇಳಿದ್ದರು. ಆದರೆ ಈಗ ಈ ಮಾತನ್ನು ಮರೆತು ಹಿರಿಯರು, ಯುವಕರು ಎನ್ನದೆ 40 ಮಂದಿ ಯುವಕರು, ಹಿರಿಯರೆನ್ನದೆ ಟಿಕೆಟ್ ಆಕಾಂಕ್ಷಿಗಳು 2 ಲಕ್ಷ ಡೆಪಾಸಿಟ್ ಇರಿಸಿ, ನನಗೇ ಟಿಕೆಟ್ ಸಿಗುತ್ತೆ ಅನ್ನುವ ಆಶಯದಲ್ಲಿ ಕಾಯ್ತಾ ಇದ್ದಾರೆ. ಕಾಂಗ್ರೆಸ್ ನಾಯಕ ಡಿಕೆಶಿ ಅವರು ಯಾರೇ ಟಿಕೆಟ್ ಆಕಾಂಕ್ಷಿಗಳು ಇರಲಿ, ಅವರು 2 ಲಕ್ಷ ಡೆಪಾಸಿಟ್ ಇರಿಸಬೇಕು. ಬಳಿಕ ಯಾವ ಅಭ್ಯರ್ಥಿ ಸೂಕ್ತ ಎಂಬುದನ್ನು ಯೋಚಿಸಿ ,ಗುಣಿಸಿ, ಕೂಡಿಸಿ, ಕಳೆದು 8 ಮಂದಿಗೆ ಹೈಕಮಾಂಡ್ ಟಿಕೆಟ್ ನೀಡಲಿದೆ ಎಂಬುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಈಗ 40 ಜನರು ಹಣ ಕಟ್ಟಿ ಟಿಕೆಟ್ ಕನಸು ಕಾಣುತ್ತಿದ್ದಾರೆ.
ಅಂದ ಹಾಗೆ ದಕ್ಷಿಣ ಕನ್ನಡದಲ್ಲಿ ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಘಟಾನುಘಟಿಗಳೇ ಸ್ಪರ್ಧೆ ನಡೆಸಿದ್ದರೂ ಸಹ, ಸೋಲಿನ ರುಚಿ ನೋಡಿದ್ದಾರೆ. ಈ ಬಾರಿ ದಕ್ಷಿಣ ಕನ್ನಡದಲ್ಲಿ ಹಿಂದುತ್ವದ ಅಲೆ, ಈಗಿರುವ ಶಾಸಕರುಗಳ ಅಭಿವೃದ್ಧಿ ಕೆಲಸಗಳು, ಜೊತೆಗೆ ಮೋದಿ ಅಲೆಯೂ ಇದ್ದು, ಈ ಬಾರಿಯೂ ಕಾಂಗ್ರೆಸ್ ಪಕ್ಷ ಮಕಾಡೆ ಮಲಗಲಿದೆ ಎಂಬುದರಲ್ಲಿ ನೋ ಡೌಟ್. ಅಂದ ಹಾಗೆ ಈ ವರೆಗೆ ಸ್ಥಗಿತವಾಗಿದ್ದ ಎಲ್ಲಾ ರೀತಿಯ ಅಭಿವೃದ್ಧಿ ಕೆಲಸಗಳನ್ನು ಸಹ ಬಿಜೆಪಿ ಶಾಸಕರು ಕಳೆದ 4.5 ವರ್ಷಗಳಲ್ಲೇ ಮುಗಿಸಿದ್ದು, ಜನಾನುರಾಗಿಗಳು ಎಂಬ ಹೆಸರನ್ನೂ ಪಡೆದಿದ್ದಾರೆ. ಬಿಜೆಪಿಯನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಾಟಕ, ಸುಳ್ಳು ಭರವಸೆಗಳು, ಪ್ರಚಾರಕ್ಕೆ ಜನ ಮರುಳಾಗಲಾರರು. ಬದಲಾಗಿ ಬಿಜೆಪಿಯ ಅಭ್ಯರ್ಥಿಗಳು ಯಾರೇ ಆಗಿರಲಿ, ಜನರ ಆಯ್ಕೆ ‘ಬಿಜೆಪಿ’ ಯೇ ಆಗಿರುತ್ತದೆ ಎನ್ನುವುದು ಕೇಳಿ ಬರುತ್ತಿರುವ ಮಾತು.
ಈ ಹಿಂದೆ ಈ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ನಾಯಕರೆಲ್ಲರೂ ಘಟಾನುಘಟಿಗಳೇ ಆಗಿದ್ದರು. ಬುಡ ಗಟ್ಟಿ ಮಾಡಿಕೊಂಡೇ ಗದ್ದುಗೆ ಏರಿದ್ದವರಾಗಿದ್ದರು. ಆದರೆ ನಿಮಗೆ ಗೊತ್ತಾ.. ಇಂತಹ ನಾಯಕರನ್ನೇ 2018 ರ ಚುನಾವಣೆಯಲ್ಲಿ ಜನರು ಮನೆಗೆ ಕಳುಹಿಸಿದ್ದರು. ಇನ್ನು ಈಗಂತೂ ಪ್ರಧಾನಿ ಮೋದಿ ಅಲೆಯ ಜೊತೆಗೆ, ಬಿಜೆಪಿ ನಡೆಸಿದ ಅಭಿವೃದ್ಧಿ ಕೆಲಸಗಳ ಸರಮಾಲೆಯೇ ಇರುವಾಗ ಜನರ ಆಯ್ಕೆ ಖಂಡಿತವಾಗಿಯೂ ಬಿಜೆಪಿಯೇ ಆಗಿರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇನ್ನು ದಕ್ಷಿಣ ಕನ್ನಡದ ಎಂಟು ಕ್ಷೇತ್ರಗಳಿಗೆ ಕಾಂಗ್ರೆಸ್‌ನಿಂದ 40 ಮಂದಿ ಟಿಕೆಟ್‌ಗಾಗಿ ಡೆಪಾಸಿಟ್ ಇರಿಸಿದ್ದಾರೆ ಎನ್ನುವಾಗಲೇ, ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ. ಟಿಕೆಟ್‌ಗಾಗಿ ಲಾಭಿ, ಜಗಳಗಳು ನಡೆಯುತ್ತಿವೆ ಎನ್ನುವುದು ಅರಿವಾಗುತ್ತೆ. ಜೊತೆಗೆ ಇನ್ನೊಂದು ಗಮನಿಸಬೇಕಾದ ಅಂಶ ಟಿಕೆಟ್ ಆಕಾಂಕ್ಷಿ ನಾಯಕರ ಹಿಂಬಾಲಕರು ಅವರ ಪರವಾಗಿ ನಡೆಸುತ್ತಿರುವ ಪ್ರಚಾರ, ಹಾಕುತ್ತಿರುವ ಫ್ಲೆಕ್ಸ್‌ಗಳು ಸಹ ಕಾಂಗ್ರೆಸ್‌ನ ಒಳಜಗಳಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು.
ಇನ್ನು ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅಲ್ಲೂ ಎಲ್ಲವೂ ಸರಿ ಇಲ್ಲ ಎಂಬುದು ಸತ್ಯ. ಡಿಕೆಶಿ ಮತ್ತು ಅವರ ಬಣ, ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡುವುದು, ಸಿದ್ದು ಬಣ ಡಿಕೆಶಿ ವಿರುದ್ಧ ಮಾತನಾಡುವುದರಲ್ಲೇ ಕಾಂಗ್ರೆಸ್ ಪಕ್ಷದ ಹುಳುಕು ಅರ್ಥವಾಗಿ ಬಿಡುತ್ತದೆ. ತಮ್ಮ ಪಕ್ಷವನ್ನೇ ನಿಯಂತ್ರಣ ಮಾಡಲಾಗದವರು ಇನ್ನು ಅಧಿಕಾರ ಸಿಕ್ಕರೆ ರಾಜ್ಯವನ್ನು, ಆಡಳಿತವನ್ನು ನಿಭಾಯಿಸುವುದು ಸಾಧ್ಯವೇ ಇಲ್ಲ ಎಂಬುದು ಜನಸಾಮಾನ್ಯರಿಗೂ ಅರಿವಾಗಿದೆ.
ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್, ಸ್ಥಳೀಯ ಕಾಂಗ್ರೆಸ್ ಸಹ ತಮ್ಮ ಸ್ವ ಅಭಿವೃದ್ಧಿಯ ದೃಷ್ಟಿಯಿಂದ ಮಾತ್ರವೇ ಅಧಿಕಾರಕ್ಕೆ ಹಂಬಲಿಸುತ್ತಿದೆ ಎನ್ನುವುದು ಸ್ಪಷ್ಟ. ಸ್ವಾತಂತ್ರ್ಯ ನಂತರದಿಂದಲೂ ದೇಶವನ್ನು ಮುಕ್ಕಿ ತಿಂದ ಕಾಂಗ್ರೆಸ್ ಪಕ್ಷ ,ಈಗಲೂ ಅದೇ ಮನಸ್ಥಿತಿ ಹೊಂದಿದ್ದು, ಅವರು ಸ್ವ ಲಾಭದ ದೃಷ್ಟಿಯಿಂದ ಅಧಿಕಾರಕ್ಕಾಗಿ ಕಚ್ಚಾಡುತ್ತಿರುವುದು ಜನರಿಗೆ ಪುಕ್ಕಟೆ ಮನರಂಜನೆ ಎಂಬಂತಾಗಿದೆ. ಅಧಿಕಾರಕ್ಕಾಗಿ ನಾಯಕರು, ಸ್ವಂತ ಲಾಭಕ್ಕಾಗಿಯೇ ಅಧಿಕಾರ ಬಯಸುವ ಕಾಂಗ್ರೆಸ್ ಪಕ್ಕದ ನಾಯಕರು, ಈವರೆಗೂ ಪಾಠ ಕಲಿತಿಲ್ಲ. ಮುಂದೆಯೂ ಕಲಿಯುವುದಿಲ್ಲ.