ಪ್ರಚಲಿತ

ಆಸ್ಟ್ರೇಲಿಯಾದಲ್ಲೂ ನಡೆಯುತ್ತಿದೆ ‘ಹಿಂದೂ ಭಾವನೆ’ಗಳ ಮೇಲೆ ದಾಳಿ

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿಯೂ ಹಿಂದೂ ಧರ್ಮೀಯರ ಭಾವನೆಗಳನ್ನು ಗಾಸಿಗೊಳಿಸುವ ಘಟನೆಗಳು ನಡೆಯುತ್ತಲೇ ಇವೆ. ಕೆಲ ದಿನಗಳ ಹಿಂದಷ್ಟೇ ಹಿಂದೂ ಧರ್ಮದ ದೇಗುಲ ಗಳಿಗೆ ಹಾನಿ ಮಾಡಿರುವ ಆಸ್ಟ್ರೇಲಿಯಾದ ಕೆಲ ಕಿಡಿಗೇಡಿಗಳು, ಆ ಮೂಲಕ ಹಿಂದೂ ಧರ್ಮೀಯರಿಗೆ ನೋವುಂಟು ಮಾಡುವ ಕೆಲಸವನ್ನು ಮಾಡಿದ್ದರು. ಆ ಘಟನೆ ಮಾಸಿಕ ಮೊದಲೇ, ಈಗ ಹಿಂದೂ ದೇಗುಲ ಧ್ವಂಸಕ್ಕೆ ಪ್ರಯತ್ನ ನಡೆಸಿರುವ ಘಟನೆ ನಡೆದಿದೆ. ಕಿಡಿಗೇಡಿಗಳ ಈ ಕೃತ್ಯವನ್ನು ಭಾರತ ಖಂಡಿಸಿದೆ.

ಖಲಿಸ್ತಾನಿ ಪರ ಕಿಡಿಗೇಡಿಗಳು ಹಿಂದೂ ದೇವಾಲಯಗಳನ್ನು ಹಾಳುಗೆಡಹುವ ಕಾರ್ಯ ನಡೆಸುತ್ತಿದ್ದು, ಅವರ ಈ ಕೃತ್ಯವನ್ನು ಭಾರತ ಖಂಡಿಸಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಉತ್ತಮ ಬಾಂಧವ್ಯವನ್ನು ಹಾಳು ಮಾಡುವ ಉದ್ದೇಶದಿಂದ ಈ ಕೃತ್ಯ ನಡೆಸಲಾಗುತ್ತಿದ್ದು, ಈ ಬೆಳವಣಿಗೆ ಆತಂಕಕಾರಿಯಾಗಿದೆ. ಈ ಹೀನ ಕೃತ್ಯದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತವು ಆಸ್ಟ್ರೇಲಿಯಾ ಸರ್ಕಾರಕ್ಕೆ ಆಗ್ರಹಿಸಿದೆ.

ಕೆಲ ವಾರಗಳಲ್ಲಿಯೇ ಆಸ್ಟ್ರೇಲಿಯಾದ ಹಲವು ಭಾಗಗಳಲ್ಲಿ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿಕೊಂಡು ಹಾನಿ ನಡೆಸುವ ಕುಕೃತ್ಯ‌ಗಳನ್ನು ನಡೆಸಲಾಗಿದೆ. ಕಳೆದ ಸೋಮವಾರ ಹರೇ ಕೃಷ್ಣ ದೇವಾಲಯವನ್ನು ಧ್ವಂಸಗೊಳಿಸಿ, ಅದರ ಗೋಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಬರೆಯಲಾಗಿತ್ತು. ಈ ಸಂಬಂಧ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಹೈ ಕಮಿಷನ್ ಪ್ರತಿಕ್ರಿಯೆ ಸಹ ನೀಡಿತ್ತು. ಮೂರನೇ ಹಿಂದೂ ದೇಗುಲವನ್ನು ಧ್ವಂಸ ಮಾಡಲಾಗಿದ್ದು, ಇದು ಭಾರತೀಯರ ಶಾಂತಿ, ಸಮನ್ವಯತೆಯನ್ನು ಭಂಗಗೊಳಿಸುವ ಕೆಲಸವಾಗಿದೆ ಎಂಬುದಾಗಿಯೂ ಆಕ್ಷೇಪ ವ್ಯಕ್ತಪಡಿಸಿತ್ತು.

ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂ ಭಾವನೆಗಳಿಗೆ ನೋವು ತರುವ ಕೆಲಸ ಆಸ್ಟ್ರೇಲಿಯಾದಲ್ಲಿಯೂ ನಡೆಯುತ್ತಿದ್ದು, ಇದು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಇಡೀ ವಿಶ್ವವೇ ‌ಸನಾತನ ಹಿಂದೂ ಧರ್ಮವನ್ನು ಒಪ್ಪಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಆಸ್ಟ್ರೇಲಿಯಾ‌ದಲ್ಲಿ ಹಿಂದೂ ದೇಗುಲಗಳ ಮೇಲೆ ಕಿಡಿಗೇಡಿಗಳ ಕಣ್ಣು ಬಿದ್ದಿರುವುದು ದುರಂತವೇ ಸರಿ.

Tags

Related Articles

Close