ಪ್ರಚಲಿತ

ಧಾರ್ಮಿಕ ಮತಾಂತರ ತಡೆ: ಕ್ರಮ ಕೈಗೊಳ್ಳಲು ಕೇಂದ್ರ‌ಕ್ಕೆ ಸುಪ್ರೀಂ ಸೂಚನೆ

ಧಾರ್ಮಿಕ‌ವಾಗಿ ಬಲವಂತವಾಗಿ ಮತಾಂತರ ಮಾಡುವುದನ್ನು ಬಹಳ ಗಂಭೀರ ವಿಷಯ ಎಂಬುದಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್, ಈ ಸಂಬಂಧ ಮಧ್ಯಪ್ರವೇಶ ಮಾಡಿ ಕೃತ್ಯಗಳ ಪರಿಶೀಲನೆಯನ್ನು ಪ್ರಾಮಾಣಿಕ‌ವಾಗಿ ಮಾಡುವಂತೆ ಕೇಂದ್ರ ಸರ್ಕಾರ‌ಕ್ಕೆ ತಿಳಿಸಿದೆ.

ಬಲವಂತ‌ದ ಧಾರ್ಮಿಕ ಮತಾಂತರ ಮಾಡುವುದನ್ನು ನಿಲ್ಲಿಸದೇ ಹೋದಲ್ಲಿ ಅತ್ಯಂತ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.

ನ್ಯಾಯಮೂರ್ತಿಗಳಾದ ಎಂ. ಆರ್. ಶಾ ಮತ್ತು ಹಿಮಾ ಕೊಹ್ಲಿ ಅವರ ಪೀಠ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರನ್ನು, ಆಮಿಷಗಳನ್ನೊಡ್ಡಿ ಮಾಡುವ ಮತಾಂತರ‌ಗಳನ್ನು ತಡೆಯುವ ಕ್ರಮಗಳ ಪಟ್ಟಿ ತಯಾರಿಸುವಂತೆ ಸೂಚನೆ ನೀಡಿದೆ.

ಬಲವಂತ‌ದ ಮತಾಂತರ ಬಹಳ ಗಂಭೀರ ವಿಷಯವಾಗಿದ್ದು, ಇದರ ತಡೆಗೆ ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ‌ಗಳನ್ನು ನಡೆಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಠಿಣ ಪರಿಸ್ಥಿತಿ ಒದಗಿ ಬರುತ್ತದೆ. ಈ ಸಂಬಂಧ ನೀವು ಯಾವ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತೀರಿ ಎಂಬುದನ್ನು ಕೋರ್ಟ್‌ಗೆ ತಿಳಿಸಬೇಕು‌. ಹಾಗೆಯೇ ಈ ನೀಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆ ಹಾಕಬೇಕು ಎಂದು ತಿಳಿಸಿದೆ.

ಈ ವಿಚಾರ ರಾಷ್ಟ್ರದ ಭದ್ರತೆ, ಧರ್ಮ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯ‌ದ ಮೇಲೆ ಪರಿಣಾಮ ಬೀರುವ ಅತ್ಯಂತ ಗಂಭೀರ ವಿಚಾರವಾಗಿದೆ. ಆದ್ದರಿಂದ ಬಲವಂತದ ಮತಾಂತರ ತಡೆಯುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು ಭಾರತ ಸರ್ಕಾರ ಸ್ಪಷ್ಟ‌ವಾಗಿ ತಿಳಿಸಿದಲ್ಲಿ ಉತ್ತಮ ಎಂಬುದಾಗಿಯೂ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಬೆದರಿಕೆ ಒಡ್ಡುವ, ಹಣ, ಉಡುಗೊರೆ‌ಯ ಆಮಿಷದ ಮೂಲಕ ಮೋಸದಿಂದ ಧಾರ್ಮಿಕ ಮತಾಂತರ ನಡೆಯುವುದನ್ನು ನಿಷೇಧ ಮಾಡಲು ಕಟ್ಟು ನಿಟ್ಟಾದ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯಗಳಿಗೆ ಸೂಚನೆ ನೀಡುವಂತೆ‌ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಈ ಸೂಚನೆ ನೀಡಿದೆ.

Tags

Related Articles

Close