ಪ್ರಚಲಿತರಾಜ್ಯ

ಕಾಶ್ಮೀರ ಕ್ರಾಂತಿಗೆ ಕೊಲ್ಲೂರಿನಲ್ಲಿ ಯಾಗ.? ತಾಯಿ ಕರೆದರೆ ಬಂದೇ ಬರ್ತೇನೆಯೆಂದ ಮೋದಿ.! ಮೂಕಾಂಬೆಗೆ ನಮೋ ನಮಃ…

ಮಿಷನ್ ಕಾಶ್ಮೀರ. ಇದು ರಾಷ್ಟ್ರ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಭಾರೀ ಸುದ್ಧಿಯಾದ ವಿಷಯ. ಭಾರತದಲ್ಲಿರುವ ಕೆಲ ರಾಜಕೀಯ ಪಕ್ಷಗಳನ್ನು ಮಾತ್ರವಲ್ಲದೆ ಭಾರತವ ವಿರುದ್ಧ ಕತ್ತಿ ಮಸೆಯುವ ಕೆಲ ರಾಷ್ಟ್ರಗಳನ್ನೇ ಬೆಚ್ಚಿ ಬೀಳಿಸಿದ ಮೋದಿ ಸರ್ಕಾರದ ಮಾಸ್ಟರ್ ಸ್ಟ್ರೋಕ್. ಸ್ವಾತಂತ್ರ್ಯ ಬಂದಾಗಿನಿಂದ ಪ್ರತ್ಯೇಕವಾಗಿದ್ದ ಜಮ್ಮು ಕಾಶ್ಮೀರಕ್ಕೆ ನೀಡಿದ್ದ 370 ಪ್ರಾಧಿಕಾರವನ್ನು ಕಿತ್ತೆಸೆದು ಅಖಂಡ ಭಾರತದ ಸಾರ್ವಭೌಮತೆಯನ್ನು ಜಗತ್ತಿಗೆ ಸಾರಿದ ಕಾಶ್ಮೀರ ಕ್ರಾಂತಿ ಮೋದಿ ಸರ್ಕಾರದ ಅತೀದೊಡ್ಡ ಮಸೂದೆಯಾಗಿತ್ತು.

ಆದರೆ ಈ ಮಸೂದೆಯನ್ನು ಜಾರಿಗೊಳಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಸ್ವಲ್ಪ ಎಡವಿದರೂ ಅಪಾಯಾ ಕಟ್ಟಿಟ್ಟ ಬುತ್ತಿ ಎಂಬಂತಾಗಿತ್ತು. ಹಿಂಸಾಚಾರಕ್ಕೆ ಸುದ್ಧಿಯಾಗಿರುತ್ತಿದ್ದ ಕಾಶ್ಮೀರಲ್ಲಿ ಸ್ವಲ್ಪ ಹಿಂಸೆ ನಡೆದರೂ ಮೋದಿ ಸರ್ಕಾರಕ್ಕೆ ಕಪ್ಪುಚುಕ್ಕೆ ಶತಸಿದ್ಧವಾಗಿತ್ತು. ಆದರೆ ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಹಾಗೂ ವಿದೇಶಾಂಗ ಸಚಿವ ಜಯ್ ಶಂಕರ್ ನಡೆಸಿದ್ದ ಯೋಜನೆ ಈಗ ಅಕ್ಷರಶಃ ಯಶಸ್ವಿಯಾಗಿದೆ. ಜಮ್ಮು ಕಾಶ್ಮೀರ ಈಗ ಶಾಂತಿಯುತವಾಗಿ ಭಾರತದ ಸ್ವತ್ತಾಗಿದೆ.

ಕಾಶ್ಮೀರಕ್ಕಾಗಿ ಕೊಲ್ಲೂರಿನಲ್ಲಿ ಯಾಗ.?

ದಿನಾಂಕ 05-08-2019ರಂದು ಭಾರತೀಯರೆಲ್ಲರೂ ನಾಗರ ಪಂಚಮಿಗೆ ಹಾಲೆರೆಯುತ್ತಿದ್ದರೆ ಕೇಂದ್ರ ಸರ್ಕಾರ ಕಾಶ್ಮೀರವನ್ನು ಶುದ್ಧೀಕರಿಸುತ್ತಿತ್ತು. ಅಂದು ಕಾಶ್ಮೀರಕ್ಕೆ ಕಳಂಕವಾಗಿದ್ದ ಆರ್ಟಿಕಲ್ 370, 35ಎ ಎಂಬ ವಿಧಿಯನ್ನು ಕಿತ್ತುಹಾಕಿತ್ತು. ಈ ಮಹಾ ಸಾಧನೆಗಾಗಿ ಕೇಂದ್ರ ದೇವರ ಮೊರೆಹೋಗಿತ್ತು. ಈ ಬಗ್ಗೆ ಕರ್ನಾಟಕದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಚಂಡಿಕಾ ಯಾಗ ನಡೆದಿತ್ತು. ಕೊಲ್ಲೂರು ದೇವಾಲಯದ ಪ್ರಧಾನ ಅರ್ಚಕರಾದ ಡಾ.ನರಸಿಂಹ ಅಡಿಗ ಹಾಗೂ ತಂಡದಿಂದ ಕಾಶ್ಮೀರ ಕ್ರಾಂತಿಯ ಯೋಜನೆ ಯಶಸ್ವಿ ಹಾಗೂ ದೇಶದ ಜನರ ಸುಭೀಕ್ಷೆಗಾಗಿ ಚಂಡಿಕಾ ಯಾಗವು ನಡೆಯುತ್ತಿತ್ತು.

ಈ ಯಾಗದ ಸಂಪೂರ್ಣ ಉಸ್ತುವಾರಿಯನ್ನು ಪ್ರಧಾನ ಮಂತ್ರಿಗಳ ಸಚಿವಾಲಯವೇ ನೋಡಿಕೊಂಡಿತ್ತು. ಈ ಬಗ್ಗೆ ಯಾಗ ನಡೆಸಿ ದಿನಾಂಕ 08-08-2019ರಂದು ಪ್ರಧಾನ ಅರ್ಚಕರು ಸೇರಿದಂತೆ ಕೆಲ ಅರ್ಚಕರು ಪ್ರಸಾದವನ್ನು ಹೊತ್ತುಕೊಂಡು ದೆಹಲಿಗೆ ತೆರಳಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಸಾದ ನೀಡಿದ್ದರು. ಈ ಬಗ್ಗೆ ಖುದ್ದು ಅರ್ಚಕರೇ ಸುದ್ಧಿ ಮಾಧ್ಯಮಗಳ ಜೊತೆ ಸಂತಸವನ್ನು ಹಂಚಿಕೊಂಡಿದ್ದಾರೆ.

ತಾಯಿ ಕರೆದರೆ ಬಂದೇ ಬರ್ತೇನೆ-ಮೋದಿ…

ಖಾಸಗೀ ಮಾಧ್ಯಮದೊಂದಿಗೆ ಮಾತನಾಡಿದ ಕೊಲ್ಲೂರು ಕ್ಷೇತ್ರದ ಪ್ರಧಾನ ಅರ್ಚಕ ಡಾ.ನರಸಿಂಹ ಅಡಿಗರು ಮೋದಿ ಭೇಟಿ ಹಾಗೂ ಮಾತುಕತೆಯ ಮಾಹಿತಿಯನ್ನು ನೀಡಿದ್ದಾರೆ. “ನಾನು ಮೋದಿಯವರನ್ನು ಕೊಲ್ಲೂರಿಗೆ ಆಗಮಿಸಿ ಎಂದು ಆಹ್ವಾನ ನೀಡಿದ್ದಾನೆ. ಈ ವೇಳೆ ತಾಯಿಯ ಇಚ್ಚೆ, ಅವಳು ಯಾವಾಗ ನನ್ನನ್ನು ಕರೆಯುತ್ತಾಳೋ ಅಂದು ನಾನು ಬಂದೇ ಬರುತ್ತೇನೆ ಎಂದು ಮೋದಿಯವರು ಹೇಳಿದ್ದಾರೆ. ಮೋದಿಯವರನ್ನು ಭೇಟಿ ಮಾಡಿದ್ದು ನಮ್ಮ ಜೀವಮಾನದ ಸಂತಸದ ದಿನ” ಎಂದು ಅರ್ಚಕರು ಹೇಳಿದ್ದಾರೆ.

ಒಟ್ಟಾರೆ ದೇಶದ ಭದ್ರತೆ ಹಾಗೂ ಜನರ ಸುಭೀಕ್ಷೆಯ ಕಾರಣಕ್ಕೆ ಖುದ್ದು ಕೇಂದ್ರ ಸರ್ಕಾರವೇ ಕೊಲ್ಲೂರು ಮೂಕಾಂಬಿಕೆಗೆ ಪ್ರಾರ್ಥಿಸಿದ್ದು ಕಾಶ್ಮೀರ ಕ್ರಾಂತಿಯ ಫಲಪ್ರದಕ್ಕೆ ಇಡೀ ದಿನ ಚಂಡಿಕಾ ನಡೆದಿದೆ. ಈ ಮೂಲಕ ಕರ್ನಾಟಕದ ದೇವಾಲಯವೊಂದು ರಾಷ್ಟ್ರಮಟ್ಟದಲ್ಲಿ ಖ್ಯಾತಿಗೆ ಕಾರಣವಾಗಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
Close