ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಸಂಪೂರ್ಣ ದೇಶದ ಚಿತ್ರಣವೇ ಬದಲಾಗಿದೆ. ಇಡೀ ವಿಶ್ವವೇ ಭಾರತದ ಅಭಿವೃದ್ಧಿಯನ್ನು ಕಂಡು ತಲೆದೂಗುತ್ತಿವೆ. ಅಷ್ಟೇ ಅಲ್ಲದೆ ಜಾಗತಿಕ ಸಮಸ್ಯೆಗಳಿಗೂ ಭಾರತದ ಬಳಿ ಪರಿಹಾರ ಇದೆ ಎಂಬ ನಂಬಿಕೆ ವ್ಯಕ್ತಪಡಿಸುತ್ತಿವೆ. ಜಗತ್ತಿನ ಮುಂದೆ ಕೈ ಕಟ್ಟಿ ನಿಲ್ಲುತ್ತಿದ್ದ ಭಾರತದ ಮುಂದೆ ಇಂದು ವಿಶ್ವವೇ ಕೈಕಟ್ಟಿ ನಿಲ್ಲುವ ಹಾಗಾಗಿದೆ ಎಂದರೆ ಇದು ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಮೆರೆದ ಸಾಧನೆ ಎಂದು ಕಣ್ಮುಚ್ಚಿ ಹೇಳಬಹುದು.
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನಮಾನ ಉನ್ನತಿಗೆ ಏರಿರುವ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಚಿತ್ರಣ ಬದಲಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂಬುದಾಗಿ ಅವರು ತಿಳಿಸಿದ್ದಾರೆ. ರಾಜತಾಂತ್ರಿಕತೆಗೆ ಸಂಬಂಧಿಸಿದ ಪಟ್ಟಿಯಲ್ಲಿ ಭಾರತವು ತನ್ನ ಸ್ಥಾನಮಾನವನ್ನು ಎತ್ತರಕ್ಕೆ ಏರಿಸಿಕೊಳ್ಳುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ದೊಡ್ಡದು ಎಂದು ಅವರು ತಿಳಿಸಿದ್ದಾರೆ.
ಸುದ್ದಿ ಏಜೆನ್ಸಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ವಿಚಾರಧಾರೆಯನ್ನು ಹಂಚಿಕೊಂಡಿರುವ ಅವರು, ಭಾರತವು ಗ್ಲೋಬಲ್ ಸೌತ್‌ನ ಧ್ವನಿಯನ್ನು ಜಿ-20 ಗೆ ತೆಗೆದುಕೊಂಡು ಹೋಗುವ ಸಂಬಂಧ ಮಾತನಾಡಿದರು. ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಟ್ಟುಗೂಡಿಸುವ ಗುರಿಯನ್ನು ಭಾರತದ ಹೊರತಾಗಿ ಇನ್ಯಾವ ರಾಷ್ಟ್ರಗಳು ಸಹ ತಮ್ಮ ಅಧ್ಯಕ್ಷೀಯ ಸಮಯದಲ್ಲಿ ಹೊಂದಿರಲಿಲ್ಲ ಎಂಬುದಾಗಿಯೂ ಅವರು ನುಡಿದಿದ್ದಾರೆ.
ಸದ್ಯ ಇಡೀ ವಿಶ್ವವೇ ಬದಲಾವಣೆಯ ಸನ್ನಿವೇಶಕ್ಕೆ ತೆರೆದುಕೊಂಡಿವೆ. ಇಂತಹ ವಿಶೇಷ ಸಂದರ್ಭದಲ್ಲಿ ಭಾರತವು ಅತ್ಯಂತ ಮಹತ್ವದ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿ ಇರುವುದಾಗಿ ಅವರು ತಿಳಿಸಿದ್ದಾರೆ. ಜಿ-20 ದೇಶಗಳು ಪ್ರಪಂಚದ ಇತರ ದೇಶಗಳಿಗೆ ತಮ್ಮ ಜವಾಬ್ದಾರಿ ಏನು ಎಂಬುದನ್ನು ಅರ್ಥ ಮಾಡಿಸಿ ಕೊಡಲಿರುವುದಾಗಿಯೂ ಅವರು ನುಡಿದಿದ್ದಾರೆ. ದೆಹಲಿಯಲ್ಲಿ ನಡೆಯುವ ಶೃಂಗ ಸಭೆಯಲ್ಲಿ ಭಾಗವಹಿಸುವ ಎಲ್ಲಾ ರಾಷ್ಟ್ರಗಳು ತಮ್ಮ ಜವಾಬ್ದಾರಿ ಏನು?, ತಾವು ಮಾಡಬೇಕಾದ ಕಾರ್ಯಗಳೇನು ಎಂಬುದನ್ನು ಅರ್ಥ ಮಾಡಿಕೊಳ್ಳಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶೃಂಗಸಭೆಯ ಅಖಾಡ ರಾಜಕಾರಣ ಮಾಡುವ ಜಾಗವಲ್ಲ ಎಂಬುದನ್ನು ಸಹ ಅವರು ಒತ್ತಿ ಹೇಳಿದ್ದಾರೆ.
ಪ್ರಸ್ತುತ ಭಾರತ ದೇಶವು ಪ್ರಜಾಪ್ರಭುತ್ವ, ಬಹುತ್ವ, ಅಭಿವೃದ್ಧಿಶೀಲ ರಾಷ್ಟ್ರ ಎಂಬುದಾಗಿ ಗುರುತಿಸಿಕೊಂಡಿದೆ. ವಿಶ್ವದ ಹಲವು ರಾಷ್ಟ್ರಗಳು ನಮ್ಮ ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರ ಎಂಬುದಾಗಿ ಗುರುತಿಸಲಾರಂಭಿಸಿವೆ. ಅನೇಕ ರಾಷ್ಟ್ರಗಳು ನಮ್ಮ ದೇಶವನ್ನು ಪ್ರಜಾಪ್ರಭುತ್ವ ರಾಷ್ಟ್ರ, ಬಹುತ್ವದಲ್ಲಿ ಏಕತೆಯನ್ನು ಕಾಣುವ ದೇಶ ಎಂದೆಲ್ಲಾ ಕೊಂಡಾಡುತ್ತಿವೆ. ನಾವು ಹಲವಾರು ಸಾಂಸ್ಥಿಕ, ಸಾಂಸ್ಕೃತಿಕ ಹೋಲಿಕೆಗಳನ್ನು ನೋಡುತ್ತಿದ್ದೇವೆ. ನಮ್ಮೊಂದಿಗೆ ಪ್ರಸ್ತುತ ಪ್ರಪಂಚದ ಹಲವಾರು ಜನರು ಗುರುತಿಸಿಕೊಳ್ಳಲು ಬಯಸುತ್ತಾರೆ. ನಮ್ಮ ರಾಜತಾಂತ್ರಿಕ ವ್ಯವಸ್ಥೆ, ಅಂತಾರಾಷ್ಟ್ರೀಯ ಸಂಬಂಧ ಸ್ಪರ್ಧಾತ್ಮಕವಾಗಿವೆ ಎಂದು ಅವರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಕಳೆದ ಒಂಬತ್ತು ವರ್ಷಗಳ ಆಡಳಿತಾವಧಿಯಲ್ಲಿ ಪ್ರಧಾನಿ ಮೋದಿ ಅವರು ವಿಶ್ವದ ಜೊತೆಗಿನ ಭಾರತದ ನಂಟು, ಜಾಗತಿಕ ಮಟ್ಟದಲ್ಲಿ ಭಾರತದ ಅಭಿವೃದ್ಧಿಯ ಓಟವನ್ನು ಉನ್ನತ ನೆಲೆಗೇರಿಸಲು ಪ್ರಯತ್ನ ಮಾಡಿದ್ದಾರೆ. ಈ ಪ್ರಯತ್ನದಲ್ಲಿ ಸಫಲತೆಯನ್ನು ಕಂಡಿದ್ದಾರೆ. ಜಗತ್ತು ಇಂದು ಬಿಟ್ಟ ಕಂಗಳಿಂದ ಭಾರತವನ್ನು ನೋಡುವ, ಪ್ರತಿಯೊಂದು ವಿಷಮ ಸ್ಥಿತಿಯಲ್ಲಿಯೂ ಭಾರತದ ಸಲಹೆ, ಸೂಚನೆ, ಸಹಕಾರಕ್ಕೆ ಹಾತೊರೆಯುವ ಹಾಗಾಗಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ಮೋದಿ ಎಂಬ ವ್ಯಕ್ತಿ ಶಕ್ತಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.