ಪ್ರಚಲಿತ

ಭಾರತದ ಜ್ಞಾನ ಶಕ್ತಿ, ಸೇನಾ ಶಕ್ತಿ ವಿಸ್ತರಣೆಯಾಗಿದೆ

ಭದ್ರತಾ ವಾತಾವರಣಕ್ಕೆ ಸಂಬಂಧಿಸಿದ ಹಾಗೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮಾತನಾಡಿದ್ದು, ಸುಧಾರಿತ, ಸ್ಥಾಪಿತ, ವಿಚ್ಛಿದ್ರಕಾರಕ ತಂತ್ರಜ್ಞಾನಗಳು ಮತ್ತು ಸ್ವಾಯತ್ತ ವೇದಿಕೆಗಳ ಆಗಮನದಿಂದ ಇಂದು ಭದ್ರತಾ ವಾತಾವರಣವು ಮತ್ತಷ್ಟು ಜಟಿಲವಾಗಿರುವುದಾಗಿ ತಿಳಿಸಿದ್ದಾರೆ.

ನಮ್ಮ ಯೋಧರು ಪರಿಚಿತರು ಮತ್ತು ಅಪರಿಚಿತರಿಂದ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಾ ಸಂದರ್ಭದಲ್ಲಿಯೂ ನಮಗೆ ಪೂರ್ಣ ಮಾಹಿತಿ ಇರುವುದಿಲ್ಲ. ಅಪೂರ್ಣ ಮಾಹಿತಿಯ ನಡುವೆಯೂ ನಾವು ಕೆಲಸ ಮಾಡಬೇಕಾಗಿದೆ. ಇಂತಹ ಪರಿಸ್ಥಿತಿ‌ಗಳನ್ನು ನಿರ್ವಹಣೆ ಮಾಡುವುದು ಹೇಗೆ, ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬುದು ಬಹಳ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.

ಕೆಡೆಟ್‌ನ ತರಬೇತಿ, ಅನುಭವಗಳ ಜೊತೆಗೆ ಅವರು ಪಡೆದ ಶಿಕ್ಷಣ ಇಂತಹ ವಿಷಮ ಪರಿಸ್ಥಿತಿಗಳನ್ನು, ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ನಮಗೆ ಸಹಕರಿಸುತ್ತದೆ ಎಂಬ ಅಭಿಪ್ರಾಯವನ್ನು ಅವರು ಮಂಡಿಸಿದ್ದಾರೆ. ಪ್ರಸ್ತುತ ಜಾಗತಿಕವಾಗಿ ಭಾರತ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಅದರ ನಡುವೆಯೂ ಭಾರತ ಉಜ್ವಲ ತಾಣವಾಗಿ ಪ್ರಜ್ವಲಿಸುತ್ತಿದೆ ಎಂದು ತಿಳಿಸಿದ್ದಾರೆ.

ಹಾಗೆಯೇ 2047 ರ ವೇಳೆಗೆ ಸಂಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ನಿರ್ಮಾಣವಾಗಲು ಸರಿಯಾದ ಹಾದಿಯಲ್ಲಿ ಸಾಗುತ್ತಿದೆ. ನಮ್ಮ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಔದ್ಯಮಿಕವಾಗಿಯೂ ಏರು ಹಾದಿಯಲ್ಲಿ ಸಾಗುತ್ತಿದೆ. ಜ್ಞಾನ ಮತ್ತು ಸೇನಾ ಶಕ್ತಿ ವಿಸ್ತರಣೆಯಾಗಿದೆ ಎಂದು ಅವರು ನುಡಿದಿದ್ದಾರೆ.

Tags

Related Articles

Close