ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಳ್ಳುವ ಭೀತಿಯಿಂದ ಜೆಡಿಎಸ್ ಜೊತೆ ಸೇರಿಕೊಂಡು ಮೈತ್ರಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೂ ಕೂಡ ಹಳೇ ದ್ವೇಷಗಳು ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಯಾಕೆಂದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಚುನಾವಣೆಗೂ ಮೊದಲು ಬದ್ಧ ವೈರಿಗಳಂತೆ ಕಿತ್ತಾಡಿಕೊಳ್ಳುತ್ತಿದ್ದವರು , ಇದೀಗ ದೋಸ್ತಿಗಳಂತೆ ವರ್ತಿಸುತ್ತಿದ್ದಾರೆ. ಆದರೆ ಒಳಗಿಂದೊಳಗೆ ಒಬ್ಬರನ್ನು ಕಂಡರೆ ಇನ್ನೊಬ್ಬರು ಉರಿದು ಬೀಳುತ್ತಲೇ ಇದ್ದು, ತೆರೆಮರೆಯಲ್ಲಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಮುಖಂಡರು ಕತ್ತಿ ಮಸಿಯುತ್ತಲೇ ಇದ್ದಾರೆ. ಅದೇ ಕಾರಣಕ್ಕಾಗಿ ಕುಮಾರಸ್ವಾಮಿ ಅವರೂ ಕೂಡ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಹೆಚ್ಚು ಸಂಪರ್ಕ ಇಟ್ಟುಕೊಳ್ಳದೆ ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಸಂಪರ್ಕ ಬೆಳೆಸಿಕೊಂಡಿದ್ದಾರೆ. ಇದುವೇ ಇದೀಗ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ತಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಬೇರೆ ಪಕ್ಷದ ನಾಯಕನಿಗೆ ಹೆಚ್ಚು ಒತ್ತು ನೀಡುತ್ತಿದ್ದು, ರಾಜ್ಯ ಕಾಂಗ್ರೆಸ್ ನಾಯಕರ ಅಸಮಧಾನಕ್ಕೆ ಮುಖ್ಯ ಕಾರಣವಾಗಿದೆ.!
ಕಾಂಗ್ರೆಸ್ ನಾಯಕರಿಗಿಂತ ಕುಮಾರಸ್ವಾಮಿಯೇ ಮುಖ್ಯ..!
ಇತ್ತೀಚಿನ ಬೆಳವಣಿಗೆ ಕಂಡರೆ ಕಾಂಗ್ರೆಸ್ ಹೈಕಮಾಂಡ್ ಅಂದರೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷದ ಮುಖಂಡರಿಗಿಂತ ಹೆಚ್ಚು ಪ್ರಾಮುಖ್ಯತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೇ ನೀಡುತ್ತಿದ್ದಾರೆ. ಇತ್ತ ಕುಮಾರಸ್ವಾಮಿ ಅವರೂ ಕೂಡ ತಮಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕೂ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸುವುದಕ್ಕೂ ಮೊದಲೇ ಹೈಕಮಾಂಡ್ ಜೊತೆ ಚರ್ಚಿಸುತ್ತಾರೆ. ಆದ್ದರಿಂದ ಇದು ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ. ಮೈತ್ರಿ ಮಾಡಿಕೊಂಡರೂ ಕೂಡ ತಮಗೆ ಯಾವುದೇ ಕಿಮ್ಮತ್ತು ಸಿಗುತ್ತಿಲ್ಲ, ಪ್ರತಿಯೊಂದು ವಿಚಾರಕ್ಕೂ ಹೈಕಮಾಂಡ್ ಭೇಟಿಗೆ ತೆರಳುವ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ರಾಜ್ಯ ನಾಯಕರು ಇದೀಗ ಉರಿದು ಬೀಳುವಂತಾಗಿದೆ.
ಇತ್ತ ರಾಹುಲ್ ಗಾಂಧಿ ಕೂಡ ಕಾಂಗ್ರೆಸ್ ನಾಯಕರಿಗಿಂತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನೇ ಹೆಚ್ಚು ಮೆಚ್ಚಿಕೊಂಡಿದ್ದು, ಇದು ಕೇವಲ ಸದ್ಯದ ಪರಿಸ್ಥಿತಿಗಷ್ಟೇ ಅಲ್ಲದೆ ಮುಂದಿನ ಲೋಕಸಭಾ ಚುನಾವಣೆಗೂ ಪರಿಣಾಮ ಬೀರುವ ಸಾಧ್ಯತೆ ಇದೆ. ಯಾಕೆಂದರೆ ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಮೋದಿ ವಿರುದ್ಧ ಹೇಗಾದರೂ ಮಾಡಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿದ್ದು, ಕೇವಲ ಆಯ್ದ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲು ನಿರ್ಧರಿಸಿದೆ. ಆದ್ದರಿಂದ ಕರ್ನಾಟಕದಲ್ಲಿ ಈಗಾಗಲೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಕಾರಣದಿಂದ ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ ಎಂಬ ಸಂಶಯ ಕಾಂಗ್ರೆಸ್ ನಾಯಕರಲ್ಲಿ ವ್ಯಕ್ತವಾಗಿದೆ.!
ಜೆಡಿಎಸ್‌ಗೆ ಸ್ಥಾನ ಬಿಟ್ಟುಕೊಡುತ್ತಾರಾ ರಾಹುಲ್ ಗಾಂಧಿ..?
ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದ ಕಾಂಗ್ರೆಸ್ ಹೈಕಮಾಂಡ್ ಇದೀಗ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್‌ಗೆ ಲೋಕಸಭಾ ಸ್ಥಾನಗಳನ್ನು ಬಿಟ್ಟುಕೊಡಲು ಮುಂದಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ ಜೆಡಿಎಸ್ ಈಗಾಗಲೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ೧೦ ಸ್ಥಾನಗಳ ಸಂಖ್ಯೆ ಕಣ್ಣಿಟ್ಟಿದೆ, ಆದರೆ ಈ ಕ್ಷೇತ್ರಗಳ ಪೈಕಿ ಕೆಲವು ಕಾಂಗ್ರೆಸ್‌ನ ಸಂಸದರ ಕೈಯಲ್ಲಿರುವುದರಿಂದ ಜೆಡಿಎಸ್ ಆಶಯಕ್ಕೆ ರಾಹುಲ್ ಗಾಂಧಿ ಒಪ್ಪಿಗೆ ಸೂಚಿಸುತ್ತಾರಾ ಎಂಬೂದು ಕಾದು ನೋಡಬೇಕಾಗಿದೆ.!
ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಹೈಕಮಾಂಡ್‌ನ ನಿಕಟ ಸಂಪರ್ಕ ಕಂಡು ರಾಜ್ಯ ಕಾಂಗ್ರೆಸ್ ನಾಯಕರು ಕಂಗಾಲಾಗಿರುವುದು ಖಂಡಿತ. ಆದ್ದರಿಂದಲೇ ಇತ್ತ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರ ವಿರುದ್ಧ ಪದೇ ಪದೇ ಅಸಮಧಾನ ಹೊರಹಾಕುತ್ತಲೇ ಇದ್ದಾರೆ.!
–ಅರ್ಜುನ್