ಪ್ರಚಲಿತ

ಟಿಕೆಟ್ ವಿಚಾರದಲ್ಲಿ ದಿಕ್ಕು ತಪ್ಪಿತೇ ಬಿಜೆಪಿ ತಂತ್ರಗಾರಿಕೆ..! ನಿಜವಾಗಿಯೂ ಸರ್ವೇ ನಡೆಸಲಾಗಿದೆಯೇ.?!

ಭಾರತೀಯ ಜನತಾ ಪಕ್ಷದ ಆರಂಭಿಕ ಹಂತದ ಮಾತುಗಳು ಈ ಸಮಯದಲ್ಲಿ ಅದ್ಯಾಕೋ ಸುಳ್ಳಾಗುತ್ತಿದೆ ಎಂಬಂತೆ ಭಾಸವಾಗುತ್ತದೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಭಾರತೀಯ ಜನತಾ ಪಕ್ಷ ಸಂಪೂರ್ಣ ತನ್ನ ಸಿದ್ಧಾಂತವನ್ನು ತಪ್ಪಿದೆಯಾ ಎಂಬ ಮಾತುಗಳೂ ಕೇಳಿಬರುತ್ತಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೊಸ ಮುಖ ಹಾಗೂ ಯುವಕರಿಗೆ ಆದ್ಯತೆ ನೀಡಲಾಗುವುದು ಎಂದೇ ಹೇಳೀಕೊಳ್ಳುತ್ತಿದ್ದ ಬಿಜೆಪಿ ಇದೀಗ ಈ ಹಿಂದಿನ ದಾರಿಯನ್ನೇ ಅನುಸರಿಸುತ್ತಿದಿಯಾ ಎಂಬ ಮಾತೂ ಕೇಳಿಬರುತ್ತಿದೆ.

ಮತ್ತೆ ಹಳೇ ಮುಖಗಳಿಗೆ ಮಣೆ ಹಾಕಿದ ಬಿಜೆಪಿ..!

ಹೊಸ ಮುಖ ಹಾಗೂ ಯುವಕರಿಗೆ ಮಣೆ ಹಾಕುತ್ತೇವೆ ಎಂದಿದ್ದ ಬಿಜೆಪಿ ಇದೀಗ ಮತ್ತೆ ಹಿಂದಿನ ದಾರಿಯನ್ನೇ ಹಿಡಿಯುತ್ತಿದೆ. ವೈದ್ಯರು, ಇಂಜಿನಿಯರ್‌ಗಳು, ಸಾಮಾಜಿಕ ಜಾಲತಾಣದ ದಿಗ್ಗಜರು, ಹಿಂದೂ ಸಂಘಟನೆಯ ನಾಯರು ಸಹಿತ ಪ್ರಮುಖ ನಾಯಕರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿಕೊಂಡು ಬರುತ್ತಿದ್ದ ಬಿಜೆಪಿ ನಾಯಕರು ಇದೀಗ ತನ್ನ ಹಿಂದಿನ ಹಾದಿಯನ್ನೇ ಹಿಡಿದಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಯಾರಿಗೆ ಟಿಕೆಟ್‌ ನೀಡಿದ್ದರೋ ಈ ಬಾರಿಯ ಚುನಾವಣೆಗೂ ಅದೇ ಅಭ್ಯರ್ಥಿ ಗಳಿಗೆ ಟಿಕೆಟ್‌ಗಳು ನೀಡಿದ್ದಾರೆ.

ಈ ಹಿಂದೆಯೂ ಸ್ಪರ್ಧೆ ಮಾಡಿದ್ದ ರೇಣುಕಾಚಾರ್ಯ, ಹರತಾಳು ಹಾಲಪ್ಪ ಸಹಿತ ಅನೇಕ ಹಳೇ ಮುಖಗಳಿಗೆ ಟಿಕೆಟ್ ನೀಡಿ ಸ್ಪರ್ಧೆಗೆ ಅವಕಾಶ ನೀಡಿದೆ. ಹರತಾಳ ಹಾಲಪ್ಪ ಒಂದೊಮ್ಮೆ ಭಾರತೀಯ ಜನತಾ ಪಕ್ಷ ತೊರೆದು ಕಾಂಗ್ರೆಸ್ ಸೇರುವ ಇಚ್ಚೆಯನ್ನೂ ಮುಂದಿಟ್ಟಿದ್ದರು. ಆದರೂ ಅವರನ್ನು ಸ್ಪರ್ಧೆ ಗೆ ಅವಕಾಶ ನೀಡಲಾಗುತ್ತದೆ. ಇದು ಸಾಗರದಲ್ಲಿ ಭಾರೀ ಅಲ್ಲೋಲ ಕಲ್ಲೋಲ ಉಂಟಾಗುವಂತೆ ಮಾಡುತ್ತದೆ. ಇದಿಷ್ಟು ಮಾತ್ರವಲ್ಲದೆ ಇನ್ನೂ ಅನೇಕ ಕಡೆಗಳಲ್ಲಿ ಮತ್ತೆ ಹಳೇ ಮುಖಗಳಿಗೆ ಟಿಕೆಟ್ ನೀಡಿ ಮತ್ತೆ ಸೋಲಿನ ಭೀತಿಯನ್ನು ಸ್ವತಃ ಪಕ್ಷವೇ ಹೊಂದುತ್ತಿದಿಯಾ ಎಂಬ ಅನುಮಾನವೂ ಮೂಡುತ್ತಿದೆ.

ಕರಾವಳಿಯಲ್ಲೂ ಗೊಂದಲ..!

ಈ ಬಾರಿ ಅತ್ಯಧಿಕ ಸ್ಥಾನವನ್ನು ಗೆಲ್ಲಿಸಿಕೊಡುವ ಕ್ಷೇತ್ರಗಳಲ್ಲಿ ಕರಾವಳಿ ಭಾಗ ಪ್ರಮುಖ ಸ್ಥಾನವನ್ನು ಪಡೆದಿತ್ತು. ಹಿಂದೂ ಕಾರ್ಯಕರ್ತರ ಹತ್ಯೆ, ಸರ್ಕಾರದ ದಂಧ್ವ ನೀತಿ, ಇವೆಲ್ಲವೂ ಕರಾವಳಿಯಲ್ಲಿ ಕಾಂಗ್ರೆಸ್ ಸೋಲಿಸಲು ಪ್ರಮುಖ ಕಾರಣವಾಗಿದೆ. ಕರಾವಳಿಯ ಜನತೆಗೆ ಕಾಂಗ್ರೆಸ್ ಮೇಲೆ ಇರುವ ಸಿಟ್ಟನ್ನು ಚುನಾವಣೆಯ ಮೂಲಕ ತೀರಿಸುವ ಹಠದಲ್ಲಿತ್ತು. ಹಿಂದುತ್ವವೇ ಇಲ್ಲಿ ಪ್ರಮುಖ ಅಸ್ತ್ರವಾಗಿತ್ತು. ಆದರೆ ಇಲ್ಲಿ ನಡೆದಿದ್ದೇ ಬೇರೆ. ಈ ಬಾರಿಯ ಚುನಾವಣೆ ಹಿಂದುತ್ವದ ಅಜೆಂಡಾವನ್ನೇ ಇಟ್ಟುಕೊಂಡು ಕಣಕ್ಕಿಳಿಯಬೇಕಾಗಿದ್ದ ಬಿಜೆಪಿ, ಇತ್ತ ಕರಾವಳಿಯಲ್ಲಿ ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಪಕ್ಷದ ಹಿರಿಯರು ಉಲ್ಟಾ ಹೊಡೆದಿದ್ದಾರೆ.

ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಅರುಣ್ ಕುಮಾರ್ ಪುತ್ತಿಲ ಅವರ ಹೆಸರು ಬಹಳ ಜೋರಾಗಿಯೇ ಕೇಳಿ ಬರುತ್ತಿತ್ತು. ಕಾಂಗ್ರೆಸ್ ನ ಹಿರಿಯ ನಾಯಕಿ, ಶಕುಂತಲಾ ಶೆಟ್ಟಿ ಅವರ ವಿರುದ್ಧ ಬಿಜೆಪಿಯಿಂದ ಅರುಣ್ ಕುಮಾರ್ ಪುತ್ತಿಲ ಪ್ರಬಲ ಸ್ಪರ್ಧಿಯಾಗಿದ್ದರು. ಆದರೆ ಇಲ್ಲಿ ನಡೆದದ್ದೇ ಬೇರೆ, ಯಾವ ದೃಷ್ಟಿಯಲ್ಲೂ ಬಿಜೆಪಿಯ ಅಭ್ಯರ್ಥಿಯಾಗಿ ಕಾಣದ ಸಂಜೀವ ಮಠಂದೂರು ಅವರಿಗೆ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಕೇಂದ್ರ ಸಚಿವರೊಬ್ಬರ ಸಂಬಂಧಿಕ ಅಥವಾ ಜಿಲ್ಲೆಯ ಸಂಸದರ ಆಪ್ತ ಎಂಬ ಕಾರಣಕ್ಕಾಗಿ ಟಿಕೆಟ್ ನೀಡಲಾಗಿದೆಯೇ ಎಂಬ ಪ್ರಶ್ನೆ ಕರಾವಳಿಯಲ್ಲಿ ಕೇಳಿ ಬರುತ್ತಿದೆ. ಇದೇ ರೀತಿ ಮಂಗಳೂರು ದಕ್ಷಿಣದಲ್ಲೂ ಗೆಲ್ಲುವ ಅಭ್ಯರ್ಥಿಯನ್ನು ಬಿಟ್ಟು ಬೇರೆ ಅಭ್ಯರ್ಥಿಗೆ ಮಣೆ ಹಾಕಲಾಗಿದೆ. ಇದೇ ರೀತಿ ಮುಂದುವರಿದರೆ ಸುಲಭವಾಗಿ ಗೆಲ್ಲಬಹುದಾಗಿದ್ದ ಕರಾವಳಿಯಲ್ಲಿ ಬಿಜೆಪಿ ಕಷ್ಟ ಅನುಭವಿಸಬೇಕಾಗುತ್ತದೆ.

ಇಡೀ ಜಿಲ್ಲೆಯನ್ನು ಗೆಲ್ಲಬಹುದಾದ ಅಭ್ಯರ್ಥಿಯನ್ನು ದೂರ ಇಟ್ಟರೇ..?

ಕರ್ನಾಟಕದಲ್ಲಿ ಹಿಂದುತ್ವದ ಧ್ವನಿ ಜೋರಾಗಿ ಕೇಳಿ ಬರುವುದು ಕರಾವಳಿಯಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಉಡುಪಿ ಮತ್ತು ಮಂಗಳೂರು ಹಿಂದುತ್ವದ ಭದ್ರಕೋಟೆ ಎಂದೇ ಕರೆಯಲಾಗುತ್ತದೆ. ಉಡುಪಿಯಲ್ಲಿ ಕಳೆದ ವಿಧಾನಸಭಾ ಚುನಾವಣೆಯ ನಂತರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಇಡೀ ಜಿಲ್ಲೆಯಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ , ಬಿಜೆಪಿಗೆ ಹೊಸ ಬಲ ತಂದು ಕೊಟ್ಟ ಸ್ಥಳೀಯ ಮುಖಂಡ , ಕಾರ್ಯಕರ್ತರ ಪಾಲಿಗೆ ಆಶಾಕಿರಣ , ಯಶ್ ಪಾಲ್ ಸುವರ್ಣ ಇವರು ಬಿಜೆಪಿಯಿಂದ ಉಡುಪಿಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರು ಗೆಲ್ಲುವುದು ಖಚಿತ.

ಅಂತಹ ಜನಬೆಂಬಲವನ್ನು ಗಳಿಸಿರುವಂತಹ ಯಶ್ ಪಾಲ್ ಸುವರ್ಣ ಅವರು ಗಳಿಸಿಕೊಂಡಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡು ಪಕ್ಷದ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡು ಉತ್ತಮ ರೀತಿಯಲ್ಲಿ ಪಕ್ಷವನ್ನು ಮುನ್ನಡೆಸಿಕೊಂಡು ಬಂದಿದ್ದ ಯಶ್ ಪಾಲ್ ಸುವರ್ಣ ಗೆ ಇದೀಗ ಬಿಜೆಪಿಯಿಂದ ಟಿಕೆಟ್ ನೀಡದೇ ಇರುವುದು ಉಡುಪಿ ಬಿಜೆಪಿಯಲ್ಲಿ ಭಾರೀ ಕೋಲಾಹಲ ಎಬ್ಬಿಸಿದೆ. ಯಾಕೆಂದರೆ ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿಸಿಕೊಂಡು ಪಕ್ಷಕ್ಕಾಗಿ ಶ್ರಮಿಸುತ್ತಿದ್ದ ಸುವರ್ಣರಿಗೆ ಟಿಕೆಟ್ ನೀಡದೆ ಬೇರೆ ಆಕಾಂಕ್ಷಿಗಳಿಗೆ ಬಿಜೆಪಿ ಮಣೆ ಹಾಕಿರುವುದರಿಂದ , ಉಡುಪಿಯಲ್ಲೂ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಹೇಗಾದರೂ ಈ ಬಾರಿ ಕರ್ನಾಟಕದಲ್ಲಿ ಕೇಸರಿ ಪತಾಕೆ ಹಾರಿಸಿಯೇ ಸಿದ್ಧ ಎಂದು ಶಪಥ ಮಾಡಿರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಟಿಕೆಟ್ ವಿಚಾರವಾಗಿಯೂ ಸ್ವತಃ ತಾವೇ ಸರ್ವೆ ನಡೆಸಿ , ಜನಾಭಿಪ್ರಾಯ ಸಂಗ್ರಹಿಸಿ ಮಣೆ ಹಾಕಲಾಗುತ್ತದೆ ಎನ್ನಲಾಗುತ್ತಿತ್ತು. ಆದರೆ ಪುತ್ತೂರು, ಕಾಪು ಕ್ಷೇತ್ರಗಳನ್ನು ಗಮನಿಸಿದರೆ ನಿಜವಾಗಿಯೂ ಸರ್ವೆ ನಡೆದಿದೆಯೇ ಎಂಬ ಸಂಶಯ ಮೂಡದೇ ಇರಬಹುದು.! ಅದೇನೇ ಇರಲಿ, ಹಿಂದೂಗಳು ನೆಮ್ಮದಿಯಿಂದ ಜೀವಿಸಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಲೇಬೇಕು. ಆದ್ದರಿಂದ ಬಿಜೆಪಿಯ ಹಿರಿಯ ನಾಯಕರು ಟಿಕೆಟ್ ವಿಚಾರವಾಗಿ ಕೂಲಂಕುಷವಾಗಿ ಪರಿಶೀಲಿಸಿ ಅಭ್ಯರ್ಥಿ ಆಯ್ಕೆ ಮಾಡಿದರೆ ಉತ್ತಮ..!

–ಸಾರ್ಥಕ್

Tags

Related Articles

Close