ಭಾರತ ದೇಶದಲ್ಲಿ ಇದ್ದುಕೊಂಡು, ಸನಾತನ ಹಿಂದೂ ಧರ್ಮದಲ್ಲಿ ಹುಟ್ಟಿದ ಕೆಲವರಿಗೆ ತಾನೋರ್ವ ಹಿಂದೂ, ಸನಾತನಿ ಎಂದು ಹೇಳಿಕೊಳ್ಳಲು ನಾಚಿಕೆ ಎನಿಸುತ್ತದೆ. ಹಿಂದೂಗಳಾಗಿ ಜನಿಸಿ ಹಿಂದೂ ಧರ್ಮದ ವಿರುದ್ಧವಾಗಿ ಹೇಳಿಕೆ ನೀಡಿ, ಪ್ರಚಾರ ಗಿಟ್ಟಿಸಿಕೊಳ್ಳುವ ಆಸಾಮಿಗಳು ಸಹ ನಮ್ಮ ನಡುವೆ ಇದ್ದಾರೆ. ಒಂದು ಕಡೆ ಇಂತಹ ಸೋಗಲಾಡಿ ಸೋ ಕಾಲ್ಡ್ ಬುದ್ಧಿ ಜೀವಿಗಳಿದ್ದರೆ, ಇನ್ನೊಂದು ಕಡೆ ಸನಾತನ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಅರಿತು, ಹಿಂದೂ ಧರ್ಮವನ್ನು ಅನುಸರಿಸಿಕೊಂಡು, ಜೀವನದ ಭಾಗವಾಗಿಸಿಕೊಂಡು ‘ತಾನೋರ್ವ ಹಿಂದೂ’ ಎಂದು ಎದೆ ತಟ್ಟಿ ಹೇಳುವ ವಿದೇಶಿಗರು, ಅನಿವಾಸಿ ಭಾರತೀಯರೂ ನಮ್ಮ ನಡುವೆ ಇದ್ದಾರೆ ಎನ್ನುವುದು ಸಂತಸ.
ಭಾರತದಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ನಿನ್ನೆಯಷ್ಟೇ ನಮ್ಮ ದೇಶಕ್ಕೆ ಬಂದಿದ್ದಾರೆ. ‘ವಸುದೈವ ಕುಟುಂಬಕಂ’ ಎಂಬ ಕಲ್ಪನೆಯನ್ನು ಹಾಡಿ ಹೊಗಳಿರುವ ಅವರು, ನಾನೊಬ್ಬ ಹೆಮ್ಮೆಯ ಹಿಂದೂ ಎಂಬುದಾಗಿ ನುಡಿದಿದ್ದಾರೆ. ಹಾಗೆಯೇ ಹಿಂದೂ ಧರ್ಮೀಯನಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ವಸುದೈವ ಕುಟುಂಬಕಂ ಕಲ್ಪನೆಗೆ ನಾನು ಉದಾಹರಣೆಯ ಹಾಗೆ ಇದ್ದೇನೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಬ್ರಿಟನ್ ಮತ್ತು ಭಾರತದ ನಡುವಿನ ಸೇತುವೆಯಾಗಿದ್ದೇನೆ. ನನ್ನ ಹಾಗೆಯೇ ಬ್ರಿಟನ್ ದೇಶದಲ್ಲಿ ಸುಮಾರು ಇಪ್ಪತ್ತು ಲಕ್ಷಗಳಷ್ಟು ಅನಿವಾಸಿ ಭಾರತೀಯರಿದ್ದಾರೆ. ಬ್ರಿಟನ್‌ನ ಪ್ರಧಾನಿಯಾಗಿ ನಾನು ಭಾರತಕ್ಕೆ ಭೇಟಿ ನೀಡಿರುವ ಈ ಸಂದರ್ಭ ನನಗೆ ಬಹಳಷ್ಟು ವಿಶೇಷವಾದುದಾಗಿದೆ. ನನ್ನ ಕುಟುಂಬ ಸಹ ಭಾರತದಲ್ಲಿಯೇ ಇದೆ ಎಂದು ರಿಶಿ ಸುನಕ್ ಸಂತಸ ಹಂಚಿಕೊಂಡಿದ್ದಾರೆ.
ನಾನು ಹಿಂದೂ ಆಗಿಯೇ ಹುಟ್ಟಿದ್ದೇನೆ. ಹಿಂದೂ ಆಗಿಯೇ ಬೆಳೆದಿದ್ದೇನೆ. ನಾನೋರ್ವ ಹೆಮ್ಮೆಯ ಹಿಂದೂ. ನಾನು ಭಾರತದಲ್ಲಿರುವ ಕೆಲ ದಿನಗಳ ಕಾಲ ಇಲ್ಲಿರುವ ಮಂದಿರಗಳಿಗೂ ಭೇಟಿ ನೀಡಲಿದ್ದೇನೆ ಎಂದು ಹೇಳಿದ್ದಾರೆ. ನಾನು ಇತ್ತೀಚೆಗೆ ರಕ್ಷಾ ಬಂಧನವನ್ನು ಸಹ ಆಚರಿಸಿದ್ದೇನೆ. ನನಗೆ ನನ್ನ ಸಹೋದರ – ಸಹೋದರಿಯರು ರಕ್ಷೆ ಕಟ್ಟಿದ್ದಾರೆ. ನನ್ನ ಹಾಗೆ ಒತ್ತಡದ ಬದುಕಿನಲ್ಲಿ ಇರುವವರಿಗೆ ಇಂತಹ ಆಚರಣೆಗಳು ನಂಬಿಕೆ, ಶಕ್ತಿ ಕೊಡುತ್ತವೆ. ಮಾತ್ರವಲ್ಲದೆ ಒತ್ತಡದ ಬದುಕಿನಿಂದಲೂ ಮುಕ್ತಿ ನೀಡುತ್ತವೆ ಎಂದು ಹಿಂದೂ ಧರ್ಮದ ಆಚರಣೆಗಳ ಬಗೆಗೂ ಹರ್ಷ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಬ್ರಿಟನ್ ನಡುವೆ ವ್ಯಾಪಾರ, ವ್ಯಾವಹಾರಿಕ ಸಂಬಂಧ ಮತ್ತಷ್ಟು ಭದ್ರಗೊಳಿಸುವ ಬಗೆಗೂ ಸುನಕ್ ಮಾತನಾಡಿದ್ದು, ಉಭಯ ರಾಷ್ಟ್ರಗಳ ನಡುವೆ ಮಹತ್ವಾಕಾಂಕ್ಷೆಯ ವ್ಯಾಪಾರ ಸಂಬಂಧವನ್ನು, ಒಪ್ಪಂದವನ್ನು ಅಂತಿಮಗೊಳಿಸಲು ತಾನು ಮತ್ತು ಪ್ರಧಾನಿ ಮೋದಿ ಅವರು ಉತ್ಸುಕರಾಗಿರುವುದಾಗಿ ನುಡಿದಿದ್ದಾರೆ.
ಇದೇ ಸಂದರ್ಭದಲ್ಲಿ ಭಾರತ ವಿರೋಧಿ ಖಲೀಸ್ತಾನಿ ಭಯೋತ್ಪಾದಕರ ಬಗೆಗೂ ಸುನಕ್ ಮಾತನಾಡಿದ್ದಾರೆ. ಬ್ರಿಟನ್ನಿನಲ್ಲಿ ಯಾವುದೇ ಉಗ್ರ ವಾದ, ಹಿಂಸಾಚಾರ ಸ್ವೀಕಾರಾರ್ಹವಲ್ಲ. ಇದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ನಾನು ಗಟ್ಟಿಯಾಗಿ ಹೇಳುತ್ತೇನೆ. ಭಾರತ ವಿರೋಧಿ ಚಟುವಟಿಕೆಯನ್ನು ಖಲೀಸ್ತಾನದ ಉಗ್ರರು ಬ್ರಿಟನ್ನಿನಲ್ಲಿ ನಡೆಸುತ್ತಿದ್ದು, ಇದನ್ನು ಹತ್ತಿ ಕೈ ಕುಲ ನಿಟ್ಟಿನಲ್ಲಿ ಭಾರತ ಸರ್ಕಾರದ ಜೊತೆಗೆ ನಾವು ಎಂದೆಂದಿಗೂ ಕೈ ಜೋಡಿಸುತ್ತೇವೆ. ಕೆಲ ಸಮಯದ ಹಿಂದೆ ಬ್ರಿಟನ್ನಿನ ರಕ್ಷಣಾ ಸಚಿವರು ಭಾರತಕ್ಕೆ ಆಗಮಿಸಿದ್ದ ಸಂದರ್ಭದಲ್ಲಿಯೂ ಈ ಸಂಬಂಧ ಮಾತುಕತೆಗಳನ್ನು ನಡೆಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಖಲೀಸ್ತಾನಿ ಉಗ್ರನ ಭಾರತ ವಿರೋಧಿ ಕೃತ್ಯಗಳ ಬಗ್ಗೆ ಭಾರತದ ಗುಪ್ತಚರ ಇಲಾಖೆಯ ಅಧಿಕಾರಿಗಳ ಜೊತೆಗೂ ನಾವು ನಿಕಟವಾದ ಸಂಪರ್ಕ ಹೊಂದಿದ್ದೇವೆ. ಹಿಂಸಾತ್ಮಕವಾದ ಉಗ್ರಗಾಮಿಗಳ ತಂತ್ರಗಳನ್ನು, ಕೃತ್ಯಗಳನ್ನು ಬುಡಸಮೇತ ತೊಡೆದು ಹಾಕುವ ನಿಟ್ಟಿನಲ್ಲಿ ಇಂತಹ ಸಂಬಂಧ ಸಹಾಯಕವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.