ಇತ್ತೀಚೆಗಷ್ಟೇ ಖಲೀಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರಕ್ಕೆ ಸಂಬಂಧಿಸಿದ ಹಾಗೆ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಭಾರತದ ವಿರುದ್ಧ ಆರೋಪ ಹೊರಿಸಿದ್ದರು. ಆತನ ಹತ್ಯೆಯ ಹಿಂದೆ ಭಾರತದ ಕೈವಾರ ಇದೆ ಎನ್ನುವ ಮೂಲಕ ವಿನಾ ಕಾರಣ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದರು.
ಉಗ್ರ ನಿಜ್ಜರ್ ಹತ್ಯೆಗೂ ಭಾರತಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವ ಮೂಲಕ ಈ ಆರೋಪವನ್ನು ಭಾರತದ ಅಲ್ಲಗಳೆದಿತ್ತು. ಇದಾದ ಕೆಲವೇ ದಿನಗಳಲ್ಲಿ ಕೆನಡಾದಲ್ಲಿ ಖಲೀಸ್ತಾನಿ ಭಯೋತ್ಪಾದಕರು ಮತ್ತೆ ಭಾರತದ ವಿರುದ್ಧ ಕತ್ತಿ ಮಸೆಯಲು ಆರಂಭಿಸಿದ್ದಾರೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ಆಡಳಿತದಲ್ಲಿ, ಖಲೀಸ್ತಾನಿ ಭಯೋತ್ಪಾದಕರಿಗೆ ಅಭಯಸಿಕ್ಕಂತಾಗಿದ್ದು, ನಿರ್ಭಯವಾಗಿ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಇವರೆಲ್ಲರಿಗೂ ಟ್ರುಡೋ ಸುರಕ್ಷಿತ ನೆಲೆ ಕಲ್ಪಿಸಿದ್ದಾರೋ ಎಂಬಂತಹ ಸಂದೇಹ ಎಲ್ಲರನ್ನೂ ಕಾಡುತ್ತಿದೆ.
ಟ್ರುಡೋ ಅವರ ಬೆಂಬಲದ ಹಿನ್ನೆಲೆಯಲ್ಲಿ ಕೆನಡಾದ ಖಲೀಸ್ತಾನಿ ಉಗ್ರರು ವ್ಯಾಂಕೋವರ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿಯ ಮುಂದೆ ಭಾರತ ವಿರೋಧಿ ಪ್ರತಿಭಟನೆ, ಗದ್ದಲದ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ. ಖಲೀಸ್ತಾನಿ ಉಗ್ರ ನಿಜ್ಜರ್ ಹತ್ಯೆಯನ್ನು ಭಾರತವೇ ಮಾಡಿದೆ ಎಂದು ಆರೋಪಿಸಿ ಭಾರತದ ತ್ರಿವರ್ಣ ಧ್ವಜವನ್ನು ಸುಟ್ಟು ಹಾಕುವ ಮೂಲಕ ಭಾರತೀಯರ ಭಾವನೆಗಳಿಗೆ ಧಕ್ಕೆಯಾಗುವಂತೆ ಮಾಡಿದ್ದಾರೆ.
ಈ ಪ್ರತಿಭಟನೆಯಲ್ಲಿ ಭಾಗವಹಿಸಿದವರು ಖಲೀಸ್ತಾನಿ ಬಾವುಟಗಳನ್ನು ಹಾರಿಸುವುದು, ಸಂಗೀತ ನುಡಿಸುವುದು, ಭಾರತ ವಿರೋಧಿ ಘೋಷಣೆಗಳನ್ನು ಕೂಗುವುದು, ಖಲೀಸ್ತಾನಿ ಪರ ಘೋಷಣೆಗಳನ್ನು ಕೂಗುವುದು ಇತ್ಯಾದಿಗಳನ್ನು ಮಾಡಿದರು. ಕೆಲವು ಉಗ್ರರು ಭಾರತೀಯ ದೂತಾವಾಸ ಕಚೇರಿಯ ಹೊರಗಿರುವ ಕಸದ ತೊಟ್ಟಿಯಲ್ಲಿ ಭಾರತದ ಧ್ವಜವನ್ನು ಸುಟ್ಟು ಹಾಕುವ ಮೂಲಕ ಭಾರತಕ್ಕೆ ಅವಮಾನ ಎಸಗಿದ್ದಾರೆ. ಟೊರಾಂಟೋ ದಲ್ಲಿ ಸಹ ಇಂತದ್ದೇ ಪ್ರತಿಭಟನೆ ನಡೆದಿದ್ದು, ಇವೆಲ್ಲವೂ ಟ್ರುಡೋ ಕೃಪಾಕಟಾಕ್ಷದಿಂದಲೇ ನಡೆದಿದೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿದೆ.
ಹಾಗೆಯೇ ಪ್ರತಿಭಟನಾ ನಿರತರು ನಿಜ್ಜರ್ ಹತ್ಯೆ ಖಂಡಿಸಿ, ಈ ಪ್ರಕರಣವನ್ನು ಸಾರ್ವಜನಿಕ ತನಿಖೆಗೆ ಕರೆ ನೀಡಿದ್ದಾರೆ. ಹಾಗೆಯೇ ಕೆನಡಾದ ಹಲವು ನಗರಗಳಲ್ಲಿ ಖಲೀಸ್ತಾನಿ ಬೆಂಬಲಿಗರು ಪ್ರತಿಭಟನೆ ನಡೆಸಲು ಕರೆ ನೀಡಿದ್ದಾರೆ.
ಈ ಹಿಂದೆಯೂ ಕೆನಡಾದಲ್ಲಿ ಭಾರತದ ವಿರುದ್ಧ ಖಲೀಸ್ತಾನಿ ಉಗ್ರರು ಪ್ರತಿಭಟನೆ, ಹಿಂಸಾಚಾರ ನಡೆಸಿದ್ದರು. ಹಾಗೆಯೇ ಕೆಲ ದಿನಗಳ ಹಿಂದೆ ಖಲೀಸ್ತಾನಿ ಉಗ್ರರ ಪರ ಕೆನಡಾ ಪ್ರಧಾನಿ ಟ್ರುಡೋ ಅವರು ಹೇಳಿಕೆ ನೀಡಿದ್ದು, ಭಾರತದ ವಿರುದ್ಧ ಮಾತನಾಡಿದ್ದರು. ಇದಾದ ಬಳಿಕ ಮತ್ತೆ ಕೆನಡಾದಲ್ಲಿ ಖಲೀಸ್ತಾನಿ ಉಗ್ರರ ಭಾರತ ವಿರೋಧಿ ಚಟುವಟಿಕೆ ಗರಿಗೆದರಿದೆ. ಇನ್ನಾದರೂ ಇಂತಹ ಉಗ್ರರ ವಿರುದ್ಧ ಟ್ರುಡೋ ಕ್ರಮ ಕೈಗೊಳ್ಳುವರೇ ಎಂದು ಕಾದು ನೋಡಬೇಕಿದೆ.