ಪ್ರಚಲಿತ

ಹದಿಮೂರು ವರ್ಷಗಳ ಗಾಢಾಂಧಕಾರದ ಬಳಿಕ ಬೆಳಕು ಕಂಡ ಛತ್ತಿಸ್ ಗಡದ ಹಳ್ಳಿ!! ನಕ್ಸಲರ ಅಟ್ಟಹಾಸ ಕೊನೆಗಾಣಿಸಿ ಹಳ್ಳಿಗರ ಬಾಳಿನಲ್ಲಿ ಬೆಳಕು ತಂದ ಮೋದಿ ಸರಕಾರ!!

ಕೇಂದ್ರದಲ್ಲಿ ಮೋದಿ ಸರಕಾರ ಮತ್ತು ರಾಜ್ಯದಲ್ಲಿ ಭಾಜಪದ ರಮಣ್ ಸಿಂಗ್ ಸರಕಾರದ ಪರಿಶ್ರಮದ ಫಲವಾಗಿ ಛತ್ತಿಸ್ ಗಡದ ಹಳ್ಳಿಗಳಿಂದು ನಕ್ಸಲರ ಅಟ್ಟಹಾಸದಿಂದ ಮುಕ್ತವಾಗಿ ನೆಮ್ಮದಿಯ ಬದುಕು ಕಾಣುವಂತಾಗಿದೆ. ಛತಿಸ್ ಗಡದ ಸುಕ್ಮಾ ಜಿಲ್ಲೆಯಲ್ಲಿರುವ ಚಿಂತಲ್ನಾರ್ ಮತ್ತು ಜಗರ್ಗುಂಡ ಹಳ್ಳಿಗಳು ನಕ್ಸಲರ ಅಟ್ಟಹಾಸದಿಂದ ನಲುಗಿ ಹೋಗಿತ್ತು. ಕಳೆದ ಹದಿಮೂರು ವರ್ಷಗಳಿಂದ ಈ ಹಳ್ಳಿಗಳು ಗಾಢಾಂಧಕಾರದಲ್ಲಿ ಮುಳುಗಿ ಹೋಗಿದ್ದವು. ನಕ್ಸಲ್ ನಿಗ್ರಹಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ತೆಗೆದುಕೊಂಡ ದಿಟ್ಟ ನಿರ್ಧಾರಗಳಿಂದಾಗಿ ಇವತ್ತು ಇಲ್ಲಿನ ಜನರು ಬೆಳಕು ಕಾಣುವಂತಾಗಿದೆ. ಜನರ ಬಾಳನ್ನು ಬೆಳಗುವ ಇಂತಹ ಸರಕಾರಗಳಿದ್ದರೆ ನಕ್ಸಲರನ್ನು ಮಾತ್ರವಲ್ಲ, ಉಗ್ರರನ್ನೂ ಮಟ್ಟ ಹಾಕಬಹುದು.

ಸುಕ್ಮಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ನಿತ್ಯವೂ ಭಾರತದ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆಯುವ ಎನ್ಕೌಂಟರ್ ಗಳಿಂದಾಗಿ ಕುಖ್ಯಾತಿ ಪಡೆದಿವೆ. ಏಪ್ರಿಲ್ 2017 ರಲ್ಲಿ, 25 ಜನ ಕೇಂದ್ರ ರಿಸರ್ವ್ ಪೋಲೀಸ್ (ಸಿ ಆರ್ ಪಿ ಎಫ್) ಜಾವಾನರು ನಕ್ಸಲರಿಂದ ಕೊಲ್ಲಲ್ಪಟ್ಟಿದ್ದರು. ದಾಂತೇವಾಡಾ ಜಿಲ್ಲೆಯ ನೆರೆಯ ಜಗರ್ಗುಂಡ ಗ್ರಾಮವು ಎಡಪಂಥೀಯ ಉಗ್ರಗಾಮಿತ್ವದಿಂದಾಗಿ ಕತ್ತಲೆಯಲ್ಲಿ ಮುಳುಗಿ ಹೋಗಿತ್ತು. 199 ಮನೆಗಳಲ್ಲಿ 898 ಜನರು ವಾಸಿಸುತ್ತಿರುವ ಈ ಗ್ರಾಮದ ವಿದ್ಯುತ್ ಸಂಪರ್ಕವನ್ನು ನಕ್ಸಲರು ಕಡಿದು ಹಾಕಿದ್ದರು. ಹದಿಮೂರು ವರ್ಷಗಳ ಬಳಿಕ ಗ್ರಾಮದಲ್ಲಿ ವಿದ್ಯುತ್ ಸೇವೆಗಳು ಪುನಃಸ್ಥಾಪನೆಯಾಗಿದೆ ಎಂದು ANI ವರದಿ ಮಾಡಿದೆ.

“ಹಲವು ವರ್ಷಗಳಿಂದ ಕತ್ತಲೆಯಲ್ಲಿ ಕಳೆದುಹೋಗಿರುವ ಚಿಂತಲ್ನಾರ್ ಮತ್ತು ಜಗರ್ಗುಂಡ ಮತ್ತೊಮ್ಮೆ ಬೆಳಗುತ್ತಿವೆ. ನಕ್ಸಲರು ಗ್ರಾಮಸ್ಥರ ವಿದ್ಯುತ್ ಸಂಪರ್ಕವನ್ನು ಕಡಿದು ಹಾಕಿದ್ದರು. ಹಳ್ಳಿಗಳಿಗೆ ರಸ್ತೆ, ಸಂವಹನ ಮತ್ತು ವಿದ್ಯುತ್ ನಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸೈನಿಕರು ತ್ಯಾಗ ಮಾಡಿದ್ದಾರೆ, ಅವರ ತ್ಯಾಗ ವ್ಯರ್ಥವಾಗುವುದಿಲ್ಲ ” ಎಂದು ಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೂಲ ಭೂತ ಸೌಕರ್ಯವನ್ನು ಸ್ಥಾಪಿಸುವುದು ಬಲು ಕಷ್ಟ. ಭಾರತೀಯ ಸೇನೆಯ ಸಿ.ಆರ್.ಪಿ.ಎಫ್ ಜವಾನರ ಸಹಾಯದಿಂದ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಈ ಭಾಗದಲ್ಲಿರುವ ನಕ್ಸಲರು ಅಭಿವೃದ್ದಿ ಕಾರ್ಯಗಳಲ್ಲಿ ಅಡ್ಡಗಾಲು ಹಾಕುತ್ತಾ ಸೇನೆಯ ಜವಾನರ ಮೇಲೆ ಗುಂಡಿನ ಮಳೆಗರೆಯುತ್ತಾರೆ ಮತ್ತು ನೆಲದಡಿ ಬಾಂಬ್ ಹೂತಿಟ್ಟು ಜವಾನರ ಗಾಡಿಗಳನ್ನೆ ಉಡಾಯಿಸುತ್ತಾರೆ.

ತಮ್ಮ ಪ್ರಾಣವನ್ನೇ ಪಣಕಿಟ್ಟು ಇಲ್ಲಿ ಸೇನೆಯ ಜವಾನರು ಮತ್ತು ಅಧಿಕಾರಿಗಳು ಕೆಲಸ ನಿರ್ವಹಿಸುತ್ತಾರೆ. ದೇಶ ಸೇವೆಗಾಗಿ ಪ್ರಾಣವನ್ನೆ ಪಣಕ್ಕಿಡುವ ಜವಾನರಿಗೆ ಮತ್ತು ಅಧಿಕಾರಿಗಳಿಗೆ ಒಂದು ಸಲಾಂ. ಮೋದಿ ಸರಕಾರದ ಸಂಪೂರ್ಣ ವಿದ್ಯುದೀಕರಣ ಯೋಜನೆಯಡಿಯಲ್ಲಿ ದೇಶದ ಎಲ್ಲಾ ಹಳ್ಳಿಗಳು ಬೆಳಕು ಕಾಣುವಂತಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲೂ ನುಗ್ಗಿ ಜನರ ಬಾಳಿಗೆ ಬೆಳಕಾಗುತ್ತಿರುವ ಮೋದಿ ಸರಕಾರ ನೂರ್ಕಾಲ ಬಾಳಲಿ. ದೇಶದ ಎಲ್ಲಾ ಜನರು ನೆಮ್ಮದಿಯ ಬದುಕು ಕಾಣುವಂತಾಗಲಿ ಎನ್ನುವುದೆ ಜನತೆಯ ಹಂಬಲ. ಗಡಿಯಲ್ಲಿ ನುಸುಳುಕೋರ ಉಗ್ರರ ಅಟ್ಟಹಾಸವನ್ನು ಮಟ್ಟ ಹಾಕಿದ ಮೋದಿ ಸರಕಾರ ದೇಶದೊಳಗೆ ನಕ್ಸಲರ ಬೆನ್ನು ಮೂಳೆ ಮುರಿಯುತ್ತಿದೆ. ಮೋದಿ ಅವರ ಯಶಸ್ವಿ ನಾಯಕತ್ವದ ಫಲವಾಗಿ ಭಾರತದ ಹಳ್ಳಿಗಳೂ ಅಭಿವೃದ್ದಿ ಹೊಂದುವಂತಾಗಿದೆ. ಈ ನಾಯಕತ್ವ ದಶಕಗಳ ಕಾಲ ಮುಂದುವರಿಯಲಿ ಎನ್ನುವುದು ದೇಶಪ್ರೇಮಿಗಳ ಹಾರೈಕೆ.

-ಶಾರ್ವರಿ

Tags

Related Articles

Close