ಕಳೆದ 9 ವರ್ಷಗಳಲ್ಲಿ ಭಾರತೀಯ ಸೇನೆ ದೊಡ್ಡ ಮಟ್ಚಿನಲ್ಲಿ ಸಶಸ್ತ್ರವಾಗಿದೆ ಮತ್ತು ಸಶಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ನಮ್ಮ ದೇಶದ ರಕ್ಷಣಾ ಪಡೆಗಳಿಗೆ ಸ್ವಾತಂತ್ರ್ಯ ದೊರಕಿದೆ. ಹಲವಾರು ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವಂತಹ ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ನೀಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇದೀಗ ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಭಾರತೀಯ ಸೇನೆಯು ಸಮುದಾಯ ರೇಡಿಯೋ ಕೇಂದ್ರವನ್ನು ಆರಂಭ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದೆ.
ಕಣಿವೆ ರಾಜ್ಯದ ಯುವ ಜನರ ಜೊತೆಗೆ ಉತ್ತಮ ಸಂವಹನ ಹೊಂದುವ ನಿಟ್ಟಿನಲ್ಲಿ ಸೇನೆ ಸಮುದಾಯ ಬಾನುಲಿ ಕೇಂದ್ರವನ್ನು ಆರಂಭ ಮಾಡಿರುವುದಾಗಿ ಅಧಿಕೃತ ಮೂಲಗಳು ಮಾಹಿತಿ ನೀಡಿವೆ. ಅವರನ್ನು ದೇಶಸೇವೆ, ಸಮಾಜಮುಖಿ ಕೈಕಂರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ಭಾರತೀಯ ಸೇನೆ ಇರಿಸಿದ ಮಹತ್ವದ ಹೆಜ್ಜೆ ಇದಾಗಿದೆ. ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ‘ಪೈಗಮ್-ಎ-ಶೋಪಿಯಾನ್’ ಹೆಸರಿನಲ್ಲಿ ಈ ಬಾನುಲಿ ಕೇಂದ್ರವನ್ನು ಭಾರತೀಯ ಸೇನೆ ಆರಂಭ ಮಾಡಿದೆ.
ಈ ಕೇಂದ್ರದ ನಿರ್ವಾಹಕ ಸಾಜಿದ್ ಅಹ್ಮದ್ ಅವರು ಈ ಸಮುದಾಯ ಬಾನುಲಿ ಕೇಂದ್ರಕ್ಕೆ ಸಂಬಂಧಿಸಿದ ಹಾಗೆ ಮಾತನಾಡಿದ್ದು, ಈ ಸಮುದಾಯ ರೇಡಿಯೋ ಕೇಂದ್ರವನ್ನು ಪ್ರದೇಶಕ್ಕೆ ಸಂಬಂಧಪಟ್ಟ ದೂರದ ಹಳ್ಳಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಆರಂಭ ಮಾಡಲಾಗಿದೆ. ಸುದ್ದಿ ಮತ್ತು ಮಾಹಿತಿಯನ್ನು ಜನರಿಗೆ ರವಾನೆ ಮಾಡುವುದೇ ಇದರ ಪ್ರಾಥಮಿಕ ಉದ್ದೇಶವಾಗಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಥಳೀಯ ಯುವಕರಿಗೆ ಅಗತ್ಯ ಮಾರ್ಗದರ್ಶನ ನೀಡುವ ಸಲುವಾಗಿ, ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ, ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ರೇಡಿಯೋಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ಸಮುದಾಯ ಬಾನುಲಿ ಕೇಂದ್ರದ ಮೂಲಕ ಕೇವಲ ಶೋಪಿಯಾನ್ ಜಿಲ್ಲೆ ಮಾತ್ರವಲ್ಲದೆ, ಇತರ ಪ್ರದೇಶಗಳನ್ನು ಸಹ ಭಾರತೀಯ ಸೇನೆ ತಲುಪಲಿದ್ದು, ಇದರಿಂದ ಜನರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸುವ ಮೂಲಕ ಸೇವೆ ಸಲ್ಲಿಸಲಾಗುತ್ತದೆ ಎಂದು ಸಾಜಿದ್ ಅಹ್ಮದ್ ವಿವರಿಸಿದ್ದಾರೆ.
ಜನರಿಗೆ ತಮ್ಮೊಳಗಿನ ಪ್ರತಿಭೆ, ಕೌಶಲಗಳನ್ನು ಪ್ರದರ್ಶನ ಮಾಡುವುದಕ್ಕೂ ಈ ಬಾನುಲಿ ಕೇಂದ್ರ ಅವಕಾಶ ಒದಗಿಸಲಿದೆ. ದೇಶದ ಪ್ರಮುಖ ಸಮಸ್ಯೆಗಳಿಗೆ ದನಿಯಾಗುವ ನಿಟ್ಟಿನಲ್ಲಿಯೂ ಈ ಬಾನುಲಿ ಕೇಂದ್ರ ಮುಖ್ಯ ಪಾತ್ರ ವಹಿಸಲಿದೆ. ಸ್ಥಳೀಯ ಸಮುದಾಯಗಳಿಗೆ ಬೆಂಬಲ ನೀಡುವುದು, ಅವರಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪ್ರೇರೇಪಣೆ ನೀಡುವ ನಿಟ್ಟಿನಲ್ಲಿಯೂ ಈ ಬಾನುಲಿ ಕೇಂದ್ರ ಕೆಲಸ ಮಾಡಲಿದೆ.
ಭಾರತೀಯ ಸೇನೆಯ ಇಂತಹ ಮಹತ್ವದ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.