ಪ್ರಚಲಿತ

ಸಂವಿಧಾನ ವಿರೋಧಿ ಕೆಲಸಗಳಿಗೆ ಮುಂದಾಯ್ತಾ ಕಾಂಗ್ರೆಸ್?

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ಧ್ಯೇಯದ ಜೊತೆಗೆ ದೇಶದ, ದೇಶವಾಸಿಗಳ ಅಭಿವೃದ್ಧಿಯ ಕನಸನ್ನು ನನಸು ಮಾಡುವ ಕಾರ್ಯದಲ್ಲಿ ತಲ್ಲೀನವಾಗಿದೆ.

ಬಿಜೆಪಿ ದೇಶವನ್ನು ಸಬಲಗೊಳಿಸುವ ಕೆಲಸ ಮಾಡಿದರೆ, ಕಾಂಗ್ರೆಸ್ ಮತ್ತು ಇತರ ಬಿಜೆಪಿ, ಪ್ರಧಾನಿ ಮೋದಿ ವಿರೋಧಿ ಶಕ್ತಿಗಳು ದೇಶವನ್ನು ಕೊಳ್ಳೆ‌ಹೊಡೆಯುವ ದಾರಿ ಹುಡುಕುವ ಪ್ರಯತ್ನ ನಡೆಸುತ್ತಿವೆ. ಜೊತೆಗೆ ಸಾರ್ವಜನಿಕ ವಲಯದಲ್ಲಿ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಅವರ ವಿರುದ್ಧ ಸುಳ್ಳು ಬಿತ್ತಿ ಜನರ ದಾರಿ ತಪ್ಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿವೆ. ಆ ಮೂಲಕ ದೇಶದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿವೆ ಎನ್ನುವುದು ದುರಂತ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ದೇಶವನ್ನು ಒಡೆದು ಆಳುವ ಸಂಸ್ಕೃತಿಯಿಂದ ರಕ್ಷಣೆ ಮಾಡಿದ್ದಾರೆ. ದೇಶದಲ್ಲಿ ಹಲವು ದಶಕಗಳಿಂದ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಪೋಷಣೆ ಮಾಡುತ್ತಿತ್ತು. ಎಪ್ಪತ್ತು ವರ್ಷಗಳ ಒಡೆದು ಆಳುವ ರಾಜಕೀಯದಿಂದ, ರಿಪೋರ್ಟ್ ಕಾರ್ಡ್ ರಾಜಕೀಯವಾಗಿ ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬದಲಾವಣೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಲೋಕಸಭಾ ಚುನಾವಣೆಯಲ್ಲಿ ವಿಜಯ ಮಾಲೆ ಹಾಕಿಸಿಕೊಂಡ ಅಭ್ಯರ್ಥಿಗಳು ದೇಶದ, ತಮ್ಮ ಕಾರ್ಯ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂದು ಅವರು ನುಡಿದಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ನೇತೃತ್ವದ ದೇಶ ವಿರೋಧಿ ಪಕ್ಷಗಳ ಒಕ್ಕೂಟ ಇಂಡಿ ಬಗೆಗೂ ಅವರು ಮಾತನಾಡಿದ್ದು, ವಂಶಾವಳಿ ರಾಜಕಾರಣವನ್ನು ಪೋಷಣೆ ಮಾಡುವ, ಭ್ರಷ್ಟರನ್ನು ರಕ್ಷಣೆ ಮಾಡುವ ಕುಟುಂಬಗಳ ಒಗ್ಗೂಡುವಿಕೆಯೇ ಇಂಡಿ ಒಕ್ಕೂಟ ಎಂದು ಹೇಳಿದ್ದಾರೆ. ಈ ಒಕ್ಕೂಟದ ನಾಯಕರಲ್ಲಿ ಹಲವರು ಭ್ರಷ್ಟಾಚಾರದ ಕಾರಣಕ್ಕೆ ಜೈಲಿನಲ್ಲಿ ಇದ್ದಾರೆ, ಇನ್ನೂ ಕೆಲವರು ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಇರುವುದಾಗಿ ಅವರು ನುಡಿದಿದ್ದಾರೆ. ಇಂಡಿ ಒಕ್ಕೂಟದ ಭ್ರಷ್ಟ ನಾಯಕರು ಚುನಾವಣೆಯ ಬಳಿಕ ಜೈಲು ಸೇರಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಹಾಗೆಯೇ ಡಾ. ಬಿ. ಆರ್. ಅಂಬೇಡ್ಕರ್ ಬರೆದ ಸಂವಿಧಾನದ ಹೆಸರು ಹೇಳಿಕೊಂಡು, ರಾಜಕೀಯ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ನಾಯಕ‌ ರಾಹುಲ್ ಗಾಂಧಿ ತಿರುಗುತ್ತಿದ್ದಾರೆ. ನಮ್ಮ ಸಂವಿಧಾನ ಧರ್ಮದ ಹೆಸರಿನಲ್ಲಿ ಯಾವ ಮೀಸಲಾತಿಯೂ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತದೆ ಎಂದು ಕಾಂಗ್ರೆಸ್‌ನ ಸುಳ್ಳಿನ ರಾಜಕೀಯ ಬಯಲಾಗಿಸಿದ್ದಾರೆ.

ಈಗಾಗಲೇ ನಾಲ್ಕು ಬಾರಿ ತಮಿಳು ನಾಡಿನಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿ ತರಲು ದೇಶ ವಿರೋಧಿಗಳು ಪ್ರಯತ್ನ ನಡೆಸಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲೂ ಧರ್ಮಾಧಾರಿತ ಮೀಸಲಾತಿ ತರಲು ಸಾಕಷ್ಟು ಪ್ರಯತ್ನ ನಡೆಸುತ್ತಿವೆ ಎಂದು ಅವರು ಕಿಡಿ ಕಾರಿದ್ದಾರೆ.

ಒಟ್ಟಿನಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುವ, ಧರ್ಮಾಧಾರಿತ ಕಲಹ ಗಳನ್ನು ಸೃಷ್ಟಿ ಮಾಡುವ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ನಾಟಕದ ವಿರುದ್ಧ ನಡ್ಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಪಕ್ಷಗಳನ್ನು ನಂಬಿದಲ್ಲಿ ಭಾರತದಲ್ಲಿ ಕೋಮು ಗಲಭೆ ಹೆಚ್ಚಾಗಿ, ಅಭಿವೃದ್ಧಿ ಶೂನ್ಯ ರಾಷ್ಟ್ರ ಎನ್ನುವಂತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Tags

Related Articles

Close