ಪ್ರಚಲಿತ

ಬಿಟ್ಟಿ ಗ್ಯಾರಂಟಿ ಮೂಲಕ ಜನರನ್ನು ಸೆಳೆಯಲು ಹೋಗಿ ‘ಕೈ’ ಸುಟ್ಟುಕೊಳ್ಳುತ್ತಿರುವವರ ವ್ಯಥೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಲು ಎಲ್ಲಾ ಪಕ್ಷಗಳೂ ಭರ್ಜರಿ ಪ್ರಣಾಳಿಕೆ ಪ್ರಕಟಿಸಿದ್ದು ಎಲ್ಲರಿಗೂ ತಿಳಿದಿದೆ. ಈ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವಂತೂ ಒಂದು ಹೆಜ್ಜೆ ಮುಂದೆ ಎಂಬಂತೆ ಜನರಿಗೆ ಉಚಿತಗಳ ಸರಮಾಲೆಯನ್ನೇ ಪ್ರಕಟಿಸಿದ್ದು ಸಹ ಎಲ್ಲರಿಗೂ ತಿಳಿದೇ ಇದೆ.

ಕಾಂಗ್ರೆಸ್ ಪಕ್ಷದ ಆಶ್ವಾಸನೆಗಳಿಗೆ ಮರು ವಾದ ಮತದಾರ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದೂ ಆಯಿತು. ಆದರೆ ಗೆದ್ದ ಬಳಿಕ ಮಾತ್ರ ಕೈ ತಾನು ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಹಿಂದೆ ಮುಂದೆ ನೋಡುತ್ತಿದೆ. ಜೊತೆಗೆ ಈಡೇರಿಸುವ ಭರವಸೆಗಳಿಗೂ ಕಂಡೀಷನ್ ಅಪ್ಲೈ ಎನ್ನಲು ಆರಂಭ ಮಾಡಿದೆ. ಹಾಗೆಯೇ ಹೇಳಿದ್ದೆಲ್ಲವನ್ನೂ ಮಾಡೋದಿಕ್ಕೆ ಆಗಲ್ಲ ಅನ್ನುವ ತಾತ್ಸಾರ ಮನೋಭಾವನೆ ಸಹ ಕಾಂಗ್ರೆಸಿಗರಲ್ಲಿ ಕಾಣುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

೨೦೦ ಯೂನಿಟ್ ವಿದ್ಯುತ್ ಉಚಿತ, ಫ್ರೀ ಅಕ್ಕಿ ಕೊಡುತ್ತವೆ, ಬಸ್ಸಿನಲ್ಲಿ ಮಹಿಳೆಯರಿಗೆ ಫ್ರೀ ಟ್ರಾವೆಲ್, ನಿರುದ್ಯೋಗಿಗಳಿಗೆ ೩೦೦೦ ನಿರುದ್ಯೋಗ ಭತ್ಯೆ, ಮನೆಯ ಮಹಿಳೆಗೆ ಗೃಹ ಲಕ್ಷ್ಮಿ ಯೋಜನೆಯಡಿ ೨೦೦೦ ರೂ. ಮಾಸಿಕ ನೀಡಲಾಗುತ್ತದೆ ಎಂದೆಲ್ಲಾ ಫಿಲ್ಮಿ ಡೈಲಾಗ್ ಹೊಡೆದು, ಜನರನ್ನು ಮರಳು ಮಾಡಿ ಅಧಿಕಾರಕ್ಕೆ ಏನೋ ಬಂದಿದೆ. ಆದರೆ ನೀವು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿ ಎಂದರೆ ಮಾತ್ರ ಕಂಡೀಷನ್ ಮೇಲೆ ಮುಂದಿನ ದಿನಗಳಲ್ಲಿ ಬೇಡಿಕೆಗಳನ್ನು ಈಡೇರಿಸುವುದಾಗಿ ಮತ್ತೆ ಭರವಸೆ ನೀಡುವ ಮೂಲಕ ಜನರನ್ನು ಮಂಗ ಮಾಡಲು ಹೊರಟಿದೆ. ಕೆಲವು ಊರುಗಳಲ್ಲಿ ಕರೆಂಟ್ ಬಿಲ್ ನೀಡಲು ಹೋದ ಬಿಲ್ ರೀಡರ್‌ಗಳನ್ನೇ ಜನರು ತರಾಟೆಗೆ ತೆಗೆದುಕೊಂಡು, ನಾವು ಕರೆಂಟ್ ಬಿಲ್ ಕಟ್ಟಲ್ಲ. ಕಾಂಗ್ರೆಸ್ ಪಕ್ಷವೇ ಕಟ್ಟಲು ಎಂದು ಪಟ್ಟು ಹಿಡಿದು ಕುಳಿತ ಘಟನೆಗಳು ನಡೆಯುತ್ತಿವೆ. ಜೊತೆಗೆ ಬಸ್ಸಿನಲ್ಲಿಯೂ ಕೆಲ ಮಹಿಳೆಯರು ನಾವು ಟಿಕೆಟ್ ತೆಗೆಯಲ್ಲ ಎಂದು ಕಂಡೆಕ್ಟರ್ ಜೊತೆ ಕಿರಿಕಿರಿ ಮಾಡುವ ಘಟನೆಗಳೂ ನಡೆದಿವೆ.

ಇನ್ನು ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಸಹ ಕಾಂಗ್ರೆಸ್‌ನ‌ ಬಿಟ್ಟಿ ಘೋಷಣೆಗಳ ಚೀಟಿಯನ್ನು ಹಿಡಿದು, ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿವೆ. ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿವೆ.

ಒಟ್ಟಿನಲ್ಲಿ ಅಧಿಕಾರ ಪಡೆಯಲು ಕಾಂಗ್ರೆಸ್ ಉರುಳಿಸಿದ ಚೆಂಡು, ಸದ್ಯ ರಿವರ್ಸ್ ಹೊಡೆದು ಕಾಂಗ್ರೆಸ್ ಪಕ್ಷವನ್ನೇ ಇಕ್ಕಟ್ಟಿಗೆ ಸಿಲುಕಿಸಿರುವುದಂತೂ ಸುಳ್ಳಲ್ಲ. ಜನರನ್ನು ತನ್ನ ಉಚಿತಗಳ ಮೂಲಕವೇ ಸೆಳೆಯಲು ಹೋಗಿ ಸದ್ಯ ಕಾಂಗ್ರೆಸ್ ನಾಯಕರು ಕೈ ಸುಟ್ಟುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close