ಪ್ರಚಲಿತ

ತಮಿಳುನಾಡು ಸರ್ಕಾರದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ‘ಕೈ’ ಸುಟ್ಟುಕೊಂಡ ಕರ್ನಾಟಕ ಕಾಂಗ್ರೆಸ್ ಸರ್ಕಾರ

ಕರ್ನಾಟಕದಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಇಲ್ಲಿನ ಜನರು ಮಳೆ ಇಲ್ಲದೆ ಕಂಗಾಲಾಗಿದ್ದು, ಹೀಗೆಯೇ ಮುಂದುವರಿದಲ್ಲಿ ಮುಂದಿನ ಬೇಸಿಗೆ ಕಾಲದ ಸಂದರ್ಭದಲ್ಲಿ ರಾಜ್ಯದ ಜನತೆ ಹನಿ ನೀರಿಗೂ ಪರದಾಡುವ ಸ್ಥಿತಿ ಬಂದೊದಗುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.

ಪರಿಸ್ಥಿತಿ ಹೀಗಿದ್ದರೂ, ರಾಜ್ಯದಲ್ಲಿಯೇ ಬರಗಾಲದ ಛಾಯೆ ಇದ್ದರೂ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಂತಿಲ್ಲ. ಇಲ್ಲಿನ ಜನರಿಗೆ ನೀರಿನ ಸಮಸ್ಯೆ ತಪ್ಪಿಸುವುದು ಹೇಗೆ ಎಂದು ಯೋಚಿಸುವ ಬದಲು, ಇಲ್ಲಿನ ನೀರನ್ನೇ ತಮಿಳುನಾಡಿಗೆ ನೀಡುವ ಧಾರಾಳತನ ತೋರುವ ಮೂಲಕ ಕರ್ನಾಟಕಕ್ಕೆ ಅನ್ಯಾಯ ಎಸಗುತ್ತಿದೆ. ಕರುನಾಡ ಜನರ ದಾಹ ಇಂಗಿಸುವ ಕಾವೇರಿ ನದಿ ನೀರನ್ನು, ಈ ರಾಜ್ಯದ ಜನರ ಅವಶ್ಯಕತೆಯನ್ನೂ ಲೆಕ್ಕಿಸದೆ ತಮಿಳಿನಾಡಿಗೆ ಒದಗಿಸುವ ಮೂಲಕ ಕರುನಾಡ ಜನರಿಗೆ ಅನ್ಯಾಯ ಮಾಡುತ್ತಿದೆ.

ಕೈ ಸರ್ಕಾರದ ಈ ಧೋರಣೆಯಿಂದ ಕುಪಿತರಾಗಿರುವ ಜನತೆ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಾಗೆಯೇ ಪ್ರತಿಪಕ್ಷ ಬಿಜೆಪಿ ಸಹ ಕಾಂಗ್ರೆಸ್‌ನ ಈ ಧೋರಣೆಯಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ. ನಾಳೆ ಅಂದರೆ ಸೆಪ್ಟೆಂಬರ್ 29 ರಂದು ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದರ ವಿರುದ್ಧ ಸುಮಾರು ನೂರಕ್ಕೂ ಅಧಿಕ ಸಂಘ ಸಂಸ್ಥೆಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ, ಬಂದ್‌ಗೆ ಕರೆ ನೀಡಿವೆ. ಆ ಮೂಲಕ ಕರ್ನಾಟಕ ವಿರೋಧಿ ಧೋರಣೆಯ ಕೈ ಸರ್ಕಾರಕ್ಕೆ ಚಾಟಿ ಬೀಸಲು ಮುಂದಾದಿವೆ.

ಅಂದ ಹಾಗೆ ಕೈ ಸರ್ಕಾರದ ಈ ನಿಲುವನ್ನು ಖಂಡಿಸಿ ಪ್ರತಿಭಟನೆಯ ಮೂಲಕ ಬಿಸಿ ಮುಟ್ಚಿಸುತ್ತಿರುವ ಬಿಜೆಪಿ, ಟ್ವೀಟ್ ಮೂಲಕವೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗದ್ದುಗೆ ಏರಿದ ಬಳಿಕ ಆಗುತ್ತಿರುವ ನಕಾರಾತ್ಮಕ ಬೆಳವಣಿಗೆಗಳ ಪಟ್ಟಿಯನ್ನು ಸಹ ಬಿಜೆಪಿ ನೀಡಿದ್ದು, ಆ ಮೂಲಕ ಕಾಂಗ್ರೆಸ್ ಕರ್ಮಕಾಂಡಗಳನ್ನು ಬಯಲಿಗೆಳೆದಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು, ಏನೆಲ್ಲಾ ಆಗಿದೆ ಎಂಬುದನ್ನು ‘ಕಾಂಗ್ರೆಸ್ ಬಂತು, ಎಲ್ಲವೂ ಹೋಯಿತು’ ಎನ್ನುವ ಶಿರ್ಷಿಕೆಯಡಿ ಈ ರೀತಿಯಾಗಿ ಬರೆದುಕೊಂಡಿದೆ. “ಕಾಂಗ್ರೆಸ್ ಬಂತು, ಕಾವೇರಿ ಹೋಯ್ತು”, “ಕಾಂಗ್ರೆಸ್ ಬಂತು, ಅಭಿವೃದ್ಧಿ ಹೋಯ್ತು”, “ಕಾಂಗ್ರೆಸ್ ಬಂತು, ಆರ್ಥಿಕತೆ ಹೋಯ್ತು”, “ಕಾಂಗ್ರೆಸ್ ಬಂತು, ಕರ್ನಾಟಕದ ಅಸ್ಮಿತೆ ಹೋಯ್ತು”, “ಕಾಂಗ್ರೆಸ್ ಬಂತು, ಮಗ ದಾರಿ ಹೋಯ್ತು”, “ಕಾಂಗ್ರೆಸ್ ಬಂತು, ಭದ್ರಾ ಮೇಲ್ದಂಡೆ ಹೋಯ್ತು”, “ಕಾಂಗ್ರೆಸ್ ಬಂತು, ಅನ್ನ ಭಾಗ್ಯ ಹೋಯ್ತು”, ” ಕಾಂಗ್ರೆಸ್‌ ಬಂತು, ಕಿಸಾನ್ ಸಮ್ಮಾನ್ ಹೋಯ್ತು”, “ಕಾಂಗ್ರೆಸ್ ಬಂತು, ರೈತರ ಮಕ್ಕಳ ವಿದ್ಯಾ ನಿಧಿ ಹೋಯ್ತು”,”ಕಾಂಗ್ರೆಸ್‌ ಬಂದಿದೆ, ರಾಜ್ಯದ ಜನರ ಬದುಕು ದುಸ್ತರವಾಗಿದೆ” ಎಂದು ಬಿಜೆಪಿ ಕಾಂಗ್ರೆಸ್‌ನಿಂದ ಆಗಿರುವ ಅವಾಂತರಗಳ ಪಟ್ಟಿಯನ್ನು ಬಿಟ್ಟಿದೆ.

ಹಾಗೆಯೇ ತಮಿಳು ನಾಡು ಸರ್ಕಾರದ ಏಜೆಂಟ್‌ನಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ವರ್ತಿಸುತ್ತಿದೆ ಎನ್ನುವುದಾಗಿಯೂ ಬಿಜೆಪಿ ಆರೋಪಿಸಿದೆ. ಇಲ್ಲಿನ ಜನರಿಗೆ ನೀರಿಲ್ಲದಿದ್ದರೂ, ಅಲ್ಲಿನ ಜನರಿಗೆ ನೀರು ನೀಡಲು ಹೊರಟ ಕೈ ಸರ್ಕಾರದ ಕ್ರಮವನ್ನು ಬಿಜೆಪಿ ಬಲವಾಗಿ ಖಂಡಿಸಿದೆ. ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ವೈಫಲ್ಯ ಕಂಡಿರುವುದಾಗಿಯೂ ಬಿಜೆಪಿ ಆರೋಪಿಸಿದೆ. ಅಲ್ಲಿನ ಸರ್ಕಾರದ ಜೊತೆಗಿನ ಹೊಂದಾಣಿಕೆ ರಾಜಕಾರಣವೇ ಇದಕ್ಕೆಲ್ಲಾ ಕಾರಣ. ರಾಜ್ಯದ ಜನರಿಗೆ ದ್ರೋಹ ಬಗೆವ ಕೈ ಸರ್ಕಾರದ ಧೋರಣೆಯನ್ನು ಬಿಜೆಪಿ ಖಂಡಿಸುವುದಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಆಡಳಿತ ವಹಿಸಿಕೊಂಡಾಗಿನಿಂದ ಈ ವರೆಗೆ ಕಾಂಗ್ರೆಸ್‌ ಒಂದಿಲ್ಲೊಂದು ಎಡವಟ್ಟುಗಳನ್ನು ಮಾಡುತ್ತಲೇ ಬಂದಿದೆ. ರಾಜ್ಯದ ಜನರಿಗೆ ದ್ರೋಹ ಬಗೆಯುವ ಕಾಂಗ್ರೆಸ್‌ನ ಈ ಅನ್ಯಾಯಗಳು ಮುಂದಿನ ದಿನಗಳಲ್ಲಿ ಅದಕ್ಕೆ ಮುಳುವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close