ಪ್ರಚಲಿತ

ಡಿಕೆಶಿ ವಿರುದ್ಧ ಕಾಂಗ್ರೆಸ್ಸಿನಲ್ಲಿ ಭುಗಿಲೆದ್ದ ಭಿನ್ನಮತ.! ನಮ್ಮನ್ನು ಕೇಳಲು ನೀವ್ಯಾರು ಎಂದ ಕಾಂಗ್ರೆಸ್ ನಾಯಕರು.!

ಲೋಕಸಭಾ ಚುನಾವಣಾ ಕಾವು 14 ಲೋಕಸಭಾ ಕ್ಷೇತ್ರಗಳಲ್ಲಿ ಇಳಿಯುತ್ತಿದ್ದರೂ ಮತ್ತೆ 14 ಕ್ಷೇತ್ರಗಳಲ್ಲಿ ಕೊತ ಕೊತ ಕುದಿಯುತ್ತಿದೆ. ಉತ್ತರ ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದ್ದು ಅಲ್ಲಿನ ಪ್ರಬಲ ಓಟ್ ಬ್ಯಾಂಕ್ ಲಿಂಗಾಯತರ ಮೇಲೆ ಎಲ್ಲಾ ಪಕ್ಷಗಳ ಕಣ್ಣು ಬಿದ್ದಿದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಧರ್ಮವನ್ನು ವಿಭಜಿಸಲು ಹೊರಟಿದ್ದ ಕಾಂಗ್ರೆಸ್ಸಿಗರು ಈಗ ಮತ್ತದೇ ರಾಗವನ್ನು ಎಳೆದು ಓಟು ಕೇಳುತ್ತಿದ್ದಾರೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿ ಲಿಂಗಾಯತ ಜಾತಿಯನ್ನು ಪ್ರತ್ಯೇಕ ಧರ್ಮವೆಂದು ಘೋಷಿಸಲು ಮುಂದಾಗಿತ್ತು. ಆದರೆ ಇದು ಸರ್ಕಾರಕ್ಕೆ ಭಾರೀ ಹೊಡೆತ ನೀಡಲು ಆರಂಭಿಸಿತ್ತು. ಇದರ ಪರಿಣಾಮವನ್ನು ಅರಿತಿದ್ದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಜನರಲ್ಲಿ ಕ್ಷಮೆ ಕೇಳಿದ್ದರು. “ನಾವು ಧರ್ಮ ಒಡೆಯುವ ಕೆಲಸಕ್ಕೆ ಮುಂದಾಗಿದ್ದೆವು. ಇದು ಅತ್ಯಂತ ದೊಡ್ಡ ಅಪರಾದವಾಗಿದೆ. ಇದಕ್ಕೆ ಸರ್ಕಾರ ಕೈ ಹಾಕಬಾರದಿತ್ತು. ಈ ಬಗ್ಗೆ ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಕ್ಷಮೆ ಕೇಳುತ್ತೇನೆ” ಎಂದು ಹೇಳಿದ್ದರು.

ಆದರೆ ಡಿಕೆ ಶಿವಕುಮಾರ್ ಅವರ ಈ ಮಾತಿಗೆ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿರುವ ಕಾಂಗ್ರೆಸ್ ನಾಯಕರಾದ ಎಂಬಿ ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ಸ್ವಪಕ್ಷೀಯ ನಾಯಕರ ವಿರುದ್ಧ ಕೆಂಡ ಕಾರಿದ್ದಾರೆ. ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿರುವ ಎಂಬಿ ಪಾಟೀಲ್ “ಅದು ನಮ್ಮ ಧರ್ಮದ ಹೋರಾಟ. ಈ ಬಗ್ಗೆ ಕ್ಷಮೆ ಕೇಳಲು ಡಿಕೆಶಿ ಯಾರು? ಕಾಂಗ್ರೆಸ್ ಪಕ್ಷದ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಲು ಅವರಿಗೆ ಅಧಿಕಾರ ಕೊಟ್ಟವರ್ಯಾರು?” ಎಂದು ಅಬ್ಬರಿಸಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಕೂಡಾ ಡಿಕೆಶಿ ವಿರುದ್ಧ ಪ್ರಹಾರ ನಡೆಸಿದ್ದು “ನಾವು ಒಕ್ಕಲಿಗರ ವಿಚಾರಕ್ಕೆ ಬಂದಿಲ್ಲ. ಅವರ ಜಾತಿಯ ವಿಷಯ ಮಾತ್ರವೇ ಅವರು ನೋಡಿಕೊಳ್ಳಲಿ. ಲಿಂಗಾಯತರ ವಿಷಯ ಅವರಿಗೆ ಬೇಡ” ಎಂದು ಕಿಡಿ ಕಾರಿದ್ದಾರೆ. ಒಟ್ಟಾರೆ ಲೋಕಸಭಾ ಚುನಾವಣೆಯ ಬಿಸಿ ಕಾವೇರುತ್ತಲೇ ಇರುವಾಗ ಇತ್ತ ಜಾತಿ-ಧರ್ಮದ ವಿಚಾರವಾಗಿ ಒಂದೇ ಪಕ್ಷದ ನಾಯಕರು ಕಚ್ಚಾಡಿಕೊಳ್ಳುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಇರಿಸು ಮುರಿಸು ಉಂಟಾಗಿದೆ.

-ಏಕಲವ್ಯ

Tags

Related Articles

FOR DAILY ALERTS
Close