ಅಂಕಣಪ್ರಚಲಿತರಾಜ್ಯ

ಮೈಸೂರು ದಸರಾಕ್ಕೆ ಮೆರುಗು ನೀಡಲು ಬಂದ ಕಲಾವಿದರಿಗೆ ಕ್ರೈಸ್ತ ಜನಪದ ಗೀತೆ ಉಡುಗೊರೆ ನೀಡಿದ ಕರ್ನಾಟಕ ಸರಕಾರ? ದುರ್ಗೆಯ ದಸರಾಕ್ಕೂ ಕ್ರೈಸ್ತ ಮತಕ್ಕೂ ಎಲ್ಲಿಯ ನಂಟು?

ಐದು ವರ್ಷದ ತುಘಲಕ್ ದರ್ಬಾರು ತೊಲಗಿ ಇನ್ನೇನು ಉತ್ತರ ಪ್ರದೇಶದಂತೆ ಭಗವಾ ರಾಜ್ಯ ಬರುತ್ತದೆ, ಕರ್ನಾಟಕದಲ್ಲಿಯೂ ಕೆಂಪೇಗೌಡ, ಕೃಷ್ಣದೇವರಾಯ, ಓಬವ್ವ , ಅಬ್ಬಕ್ಕ, ದಿನಾಚರಣೆಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಕಾದಿದ್ದೇ ಬಂತು. ಅಂದುಕೊಂಡತೆ ಒಂದೂ ನಡೆಯಲಿಲ್ಲ. ಪ್ರಸ್ತುತ ಸರಕಾರದಿಂದ ಹೆಚ್ಚಿನ ನಿರೀಕ್ಷೆಗಳು ಇಲ್ಲದಿದ್ದರೂ ಇತಿಹಾಸ ಪುನರಾವರ್ತನೆ ಆಗದಿರಲೆಂದೆ ಕೈಮುಗಿಯುತ್ತಿದ್ದರು ಕನ್ನಡಿಗರು. ಆದರೆ ಈಗ ನಡೆಯುತ್ತಿರುವ ಘಟನೆಗಳು ಇನ್ನೂ ಐದು ವರ್ಷ ತುಘಲಕ್ ಆಡಳಿತದಲ್ಲೆ ಬದುಕಬೇಕು ಎನ್ನುವಂತಾ ಸೂಚನೆಗಳನ್ನು ನೀಡುತ್ತಿವೆ.

ದಸರಾಕ್ಕೆ ಮೆರೆಗು ನೀಡಲು ಬಂದ ಕಲಾವಿದರಿಗೆ ಕ್ರೈಸ್ತ ಜನಪದ ಗೀತೆಗಳ ಪುಸ್ತಕ ಉಡುಗೊರೆ ನೀಡಿದ ಆರೋಪ

ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಡಿನಿಂದ ಹಲವಾರು ಕಲಾವಿದರು ಬರುತ್ತಾರೆ. ಇವರ ಪೂರ್ವಜರು ರಾಜ ಮಹಾರಾಜರ ಕಾಲದಿಂದಲೂ ಅರಮನೆಯಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ತೀರಾ ಸಂಪ್ರದಾಯಸ್ಥರಾದ ಕಲಾವಿದರು ಅನೂಚಾನವಾಗಿ ಅರಮನೆಯಲ್ಲಿ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ. ಹೀಗೆ ಕಾರ್ಯಕ್ರಮ ನೀಡುವ ಕಲಾವಿದರಿಗೆ ಹೂಗುಚ್ಛ ಮತ್ತು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ.

ಈ ಬಾರಿ ಸರಕಾರ ಕಲಾವಿದರಿಗೆ ಉಡುಗೊರೆಯಾಗಿ ‘ಕ್ರೈಸ್ತ ಜನಪದ ಗೀತೆಗಳು’ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕ ಸರ್ಕಾರದ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಮಾಲೆ ಪ್ರಕಾಶನದ, ಡಾ. ಬಿ.ಎಸ್ ತಲ್ಲಾಡಿ ಅವರು ಸಂಪಾದಿಸಿದ ಈ ಪುಸ್ತಕವನ್ನು ಉಡುಗೊರೆಯಾಗಿ ಪಡೆದುಕೊಂಡ ಕಲಾವಿದರು ಮುಜುಗರಕ್ಕೀಡಾಗಿದ್ದಾರೆ ಮಾತ್ರವಲ್ಲ, ಚಾಮುಂಡಿ ಮೆರವಣಿಗೆ, ಮೈಸೂರು ರಾಜರು, ನವರಾತ್ರಿಯೆ ಪ್ರಾಮುಖ್ಯತೆ ಪಡೆದಿರುವ ಈ ಉತ್ಸವದಲ್ಲಿ ಕ್ರೈಸ್ತ ಮತವನ್ನು ಎಳೆದು ತಂದಿರುವುದು ಎಷ್ಟು ಸರಿ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಹೆಸರು ಹೇಳಲಿಚ್ಚಿಸದ ಕಲಾವಿದರೊಬ್ಬರು ಮನೆಯಲ್ಲಿ ಉಡುಗೊರೆಯ ಕವರ್ ಅನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಕ್ರೈಸ್ತ ಜನಪದ ಗೀತೆಗಳು ಪುಸ್ತಕವನ್ನು ನೋಡಿ ಅಚ್ಚರಿಯಾಯಿತು. ದಸರಾಕ್ಕೂ ಕ್ರೈಸ್ತ ಮತಕ್ಕೂ ಎಲ್ಲಿಂದೆಲ್ಲಿಯ ಸಂಬಂಧವೆಂದು ಅನಿಸಿತು. ಸರ್ಕಾರವೆ ಈ ರೀತಿ ಮತವನ್ನು ಹೇರಿಕೆ ಮಾಡುವುದು ಬೇಸರ ತರಿಸಿದೆ ಎಂದು ತಿಳಿಸಿದ್ದಾರೆ.

ಪುಸ್ತಕದಲ್ಲಿ ಏನೇನಿದೆ?

ಕ್ರೈಸ್ತ ಮತಕ್ಕೂ ಜನಪದಕ್ಕೂ ಸಂಬಂಧವೆ ಇಲ್ಲ. ಈ ಪುಸ್ತಕದ ಹಾಡುಗಳಲ್ಲಿ ಆರತಿ ಎತ್ತುವುದು, ತುಪ್ಪದ ದೀಪ ಹಚ್ಚುವುದು, ಎಳ್ಳುಂಡೆ, ಕೋಲಾಟ, ಇತ್ಯಾದಿಗಳನ್ನು ಬಳಸಲಾಗಿದೆ ಎನ್ನಲಾಗಿದೆ. ಕ್ರೈಸ್ತ ಮತದಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ. ಕೇವಲ ಒಂದು ಮೇಣದ ಬತ್ತಿ ಬಿಟ್ಟರೆ ಬೇರಾವುದನ್ನೂ ಮಾಡದ ಕ್ರೈಸ್ತರು ಯಾವಾಗ ಎಳ್ಳುಂಡೆ ತಯಾರಿಸುತ್ತಾರೆ, ಕೋಲಾಟ ಆಡುತ್ತಾರೆ ಮತ್ತು ಆರತಿ ಎತ್ತುತ್ತಾರೆ ಎನ್ನುವ ಪ್ರಶ್ನೆ ಎದ್ದಿದೆ.

ಕಲಾವಿದರು ದೇಶ-ಭಾಷೆ-ಮತ-ಧರ್ಮಾತೀತರು ಎನ್ನುವ ಮಾತಿದೆ. ಹಾಗಿರುವಾಗ ಕಲಾವಿದರಿಗೆ ಕ್ರೈಸ್ತ ಮತದ ಜನಪದ ಗೀತೆ ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟ ಹಿಂದಿನ ಉದ್ದೇಶ ಏನು? ಕ್ರೈಸ್ತರು ಯಾವಾಗಿನಿಂದ ಜನಪದೀಯರಾದರು? ಅಸಲಿಗೆ ಕರ್ನಾಟಕದಲ್ಲಿ ಏನು ನಡೆಯುತ್ತಿದೆ? ಇದಕ್ಕೆಲ್ಲಾ ಉತ್ತರ ನೀಡುವವರು ಯಾರು? ಇನ್ನೂ ಎಷ್ಟು ದಿನ ಇದನ್ನೆಲ್ಲಾ ಸಹಿಸಿಕೊಂಡಿರಬೇಕು?

ಮೂಲ ಲೇಖ: ಚಿರಂಜೀವಿ ಭಟ್

–ಶಾರ್ವರಿ

Tags

Related Articles

FOR DAILY ALERTS
Close