ಕೇಂದ್ರ ಸರ್ಕಾರ ನವದೆಹಲಿಯ ಜಾಮಾ ಮಸೀದಿಯನ್ನೊಳಗೊಂಡಂತೆ ವಕ್ಫ್ ಮಂಡಳಿಗೆ ಸೇರಿದ 123 ಆಸ್ತಿಗಳನ್ನು ವಶಕ್ಕೆ ಪಡೆದುಕೊಳ್ಳುವುದಕ್ಕೆ ನೊಟೀಸ್ ನೀಡಿದೆ.
ಮಸೀದಿ, ದರ್ಗಾ, ಸ್ಮಶಾನಗಳನ್ನು ಒಳಗೊಂಡ ವಕ್ಫ್ ಆಸ್ತಿಗಳನ್ನು ವಶಕ್ಕೆ ಪಡೆದುಕೊಳ್ಳುವುದಕ್ಕೆ ಕಳೆದ ಕೆಲ ತಿಂಗಳು ಹಿಂದೆಯೇ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಇಬ್ಬರು ಸದಸ್ಯರನ್ನು ಒಳಗೊಂಡ ಸಮಿತಿ ನೀಡಿರುವ ಶಿಫಾರಸುಗಳಿಗೆ ಅನುಸಾರವಾಗಿ ಈ ನಿರ್ಣಯವನ್ನು ತೆಗೆದುಕೊಂಡಿರುವುದಾಗಿ ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಅದರ ಮುಂದುವರಿದ ಭಾಗ ಎಂಬಂತೆ ಈಗ ನೊಟೀಸ್ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಹಾಗೆ ಎಲ್ಲಾ ವಿಚಾರಗಳಿಂದ ಮುಕ್ತಗೊಳಿಸುವ ಬಗ್ಗೆ ಉಪ ಭೂಮಿ ಮತ್ತು ಅಭಿವೃದ್ಧಿ ಅಧಿಕಾರಿ ವಕ್ಫ್ ಮಂಡಳಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ. ನ್ಯಾಯಮೂರ್ತಿ ಎಸ್‌ಪಿ ಗಾರ್ಗ್ ನೇತೃತ್ವದ ದ್ವಿಸದಸ್ಯ ಸಮಿತಿಯು ತನ್ನ ವರದಿಯಲ್ಲಿ ದೆಹಲಿಯ ವಕ್ಫ್ ಬೋರ್ಡ್ ಯಾವುದೇ ಪ್ರಾತಿನಿಧ್ಯ, ಆಕ್ಷೇಪಣೆಯನ್ನು ಸ್ವೀಕರಿಸಿಲ್ಲ ಎಂದು ಕೇಂದ್ರ ಸಚಿವಾಲಯ ಭೂಮಿ ಮತ್ತು ಅಭಿವೃದ್ಧಿ ಕಚೇರಿ ಹೇಳಿದೆ ಎಂದು ವರದಿ ತಿಳಿಸಿದೆ.
ಈಗಾಗಲೇ ಕೇಂದ್ರ ಸರ್ಕಾರದ ಸಚಿವಾಲಯ ಪಟ್ಟಿ ಮಾಡಲಾಗಿರುವ ಆಸ್ತಿಗಳಲ್ಲಿ ದೆಹಲಿಯ ವಕ್ಫ್ ಬೋರ್ಡ್ ಯಾವುದೇ ಪಾಲನ್ನು ಹೊಂದಿಲ್ಲ ಎಂಬುದನ್ನು ಸಹ ಸರ್ಕಾರ ಹೇಳಿದೆ. ಜೊತೆಗೆ ಈ ಸಂಬಂಧ ನೀಡಲಾದ ನೋಟಿಸ್ ವಿಚಾರದಲ್ಲಿ ಯಾವುದೇ ಆಕ್ಷೇಪಣೆ, ಹಕ್ಕುಗಳನ್ನು ಹೊಂದಿರುವ ಬಗ್ಗೆ ಮಾಹಿತಿ ನೀಡಿಲ್ಲ ಎಂಬುದನ್ನೂ ಕೇಂದ್ರದ ಮೂಲಗಳು ಈಗಾಗಲೇ ಸ್ಪಷ್ಟ ಪಡಿಸಿದೆ. ಈ ಹಿನ್ನೆಲೆಯಲ್ಲಿ ದೆಹಲಿ ವಕ್ಫ್ ಬೋರ್ಡ್‌ಗೆ ಸಂಬಂಧಿಸಿದ 123 ಆಸ್ತಿಗಳನ್ನು ಅದರ ಸುಪರ್ಧಿಯಿಂದ ತನ್ನ ವಶಕ್ಕೆ ಪಡೆದಿರುವುದಾಗಿ ಸರ್ಕಾರದ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
ಈ ಸಂಬಂಧ ದೆಹಲಿ ಹೈಕೋರ್ಟ್ ಕಳೆದ ಮೇ ತಿಂಗಳಿನಲ್ಲಿ ವಕ್ಫ್ ಬೋರ್ಡ್‌ನ ಹಿಡಿತದಲ್ಲಿದ್ದ 123 ಭೌತಿಕ ಆಸ್ತಿಗಳಿಗೆ ಸಂಬಂಧಿಸಿದಂತೆ ತಪಾಸಣೆ ನಡೆಸಲು ಕೇಂದ್ರ ಸರ್ಕಾರಕ್ಕೆ ಅನುಮತಿಯನ್ನು ನೀಡಿತ್ತು. ಇದರ ಬಳಿಕ ಕೇಂದ್ರ ಸರ್ಕಾರ ದೆಹಲಿ ವಕ್ಫ್ ಬೋರ್ಡ್‌ನ ಅಡಿಯಲ್ಲಿದ್ದ 123 ಆಸ್ತಿಗಳನ್ನು ಮಟ್ಟುಗೋಲು ಹಾಕಿಕೊಳ್ಳುವ ನಿಟ್ಟಿನಲ್ಲಿ ನೊಟೀಸ್ ಹೊರಡಿಸಿದೆ.
ಇನ್ನು ಕೇಂದ್ರ ಸರ್ಕಾರದ ಈ ಕ್ರಮಕ್ಕೆ ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕ ಮತ್ತು ವಕ್ಫ್ ಮಂಡಳಿಯ ಅಧ್ಯಕ್ಷ ಅಮಾನತುಲ್ಲಾ ಖಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರ ಮುಸಲ್ಮಾನರಲ್ಲಿ ಆತಂಕ, ಭಯ, ಅಸಮಾಧಾನವನ್ನು ಮೂಡಿಸಿರುವುದಾಗಿಯೂ ಅವರು ಕಿಡಿ ಕಾರಿದ್ದಾರೆ. ಆದರೆ ಸರ್ಕಾರದ ಈ ನಿರ್ಣಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಅಲ್ಪಸಂಖ್ಯಾತರ ಓಲೈಕೆ, ಬಹುಸಂಖ್ಯಾತರಿಗೆ ಅನ್ಯಾಯ ಎಸಗುವ ಕಾಂಗ್ರೆಸ್ ಪಕ್ಷಕ್ಕಿಂತ ಎಲ್ಲರನ್ನೂ ಸಮನಾಗಿ ಕಾಣುವ ಕೇಂದ್ರ ಸರ್ಕಾರದ ಬಗ್ಗೆ ಜನರಿಗೆ ಮತ್ತಷ್ಟು ವಿಶ್ವಾಸ ಮೂಡುವುದಕ್ಕೂ ಕೇಂದ್ರದ ಈ ನಿರ್ಧಾರ ಕಾರಣವಾಗಿದೆ ಎನ್ನುವುದು ಸತ್ಯ.