ಪ್ರಚಲಿತ

ಅಫಘಾನಿಸ್ತಾನದಲ್ಲಿರುವ ಹಿಂದೂ-ಸಿಖ್ ಅಲ್ಪಸಂಖ್ಯಾತರ ಬಾಳಿನಲ್ಲಿ ಮೂಡಿತು ಆಶಾಕಿರಣ!! ಅಲ್ಪಸಂಖ್ಯಾತರ ಪ್ರತಿನಿಧಿಯಾಗಿ ಅಫಘಾನ್ ಸದನದತ್ತ ಮಾಜಿ ಸಿಖ್ ಸೈನಿಕನ ಪಯಣ!!

ಅಫಘಾನಿಸ್ತಾನದಲ್ಲಿ ನಿತ್ಯ ನೋವು ಅನುಭವಿಸುತ್ತಿರುವ ಹಿಂದೂ ಮತ್ತು ಸಿಖ್ ಸಮುದಾಯದ ಜನರ ಬಾಳಿನಲ್ಲಿ ಆಶಾ ಕಿರಣ ಮೂಡಲಿದೆ. ಮುಂದಿನ ಸಂಸತ್ತಿನಲ್ಲಿ ಸಿಖ್ ನಾಯಕ ಅವತಾರ್ ಸಿಂಗ್ ಖಾಲ್ಸಾ ಅಫ್ಘಾನಿಸ್ತಾನದ ಸಿಖ್ ಮತ್ತು ಹಿಂದೂ ಸಮುದಾಯವನ್ನು ಪ್ರತಿನಿಧಿಸಲಿದ್ದಾರೆ ಎಂದು ವರದಿಯಾಗಿದೆ. 52 ವರ್ಷದ ಅವತಾರ ಸಿಂಗ್ ಖಾಲ್ಸಾ ಅವರು ಅಫ್ಘಾನಿಸ್ತಾನದಲ್ಲಿ ಕ್ಷೀಣಿಸುತ್ತಿರುವ ಸಮುದಾಯದವನ್ನು ಪುನರುಜ್ಜೀವನಗೊಳಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಅಖಂಡ ಭಾರತದ ಭಾಗವಾಗಿದ್ದ ಅಫಘಾನಿಸ್ತಾನ ಅಕ್ರಮಣಕಾರರ ದಾಳಿಗೆ ಸಿಲುಕಿ ಭಾರತದಿಂದ ದೂರವಾಗುತ್ತಾ ಸಾಗಿತು.

ಕಲೆ-ಸಂಸ್ಕೃತಿ-ಸಾಹಿತ್ಯ ಮತ್ತು ಭವ್ಯವಾದ ಇತಿಹಾಸ ಹೊಂದಿದ್ದ ಅಫಘಾನಿಸ್ತಾನ ಇಂದು ಉಗ್ರವಾದದ ಜನನಿ ತಾಲಿಬಾನಿಗಳ ಕೈಯಲ್ಲಿ ಸಿಲುಕಿ ರೌರವ ನರಕ ಅನುಭವಿಸುತ್ತಿದೆ. ಅದರಲ್ಲೂ ಅಫಘಾನಿಸ್ತಾನದಲ್ಲಿ ನೆಲೆಸಿರುವ ಅಲ್ಪಸಂಖ್ಯಾತ ಹಿಂದೂಗಳ ಮತ್ತು ಸಿಖ್ಖರ ಬವಣೆ ಹೇಳತೀರದು. ಇಂಥ ಸಮಯದಲ್ಲಿ ಖಾಲ್ಸಾ ಅವರು ಅಫಘಾನಿಸ್ತಾನದ ಸದನದಲ್ಲಿ ತಮ್ಮ ಸಂದೇಶವಾಹಕನಾಗಿ ಕೆಲಸ ಮಾಡಲಿರುವುದು ಅವರೆಲ್ಲರ ಬಾಳಿನಲ್ಲಿ ಆಶಾಕಿರಣ ಮೂಡಿಸಿದೆ.

ಅಫ್ಘಾನ್ ಸರ್ಕಾರವು ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ (ಐಎಸ್) ಅಂಗಸಂಸ್ಥೆಯನ್ನು ನಿಗ್ರಹಿಸಲು ಹೆಣಗಾಡುತ್ತಿರುವ ಈ ಸಮಯದಲ್ಲಿ ಇದೊಂದು ಮಹತ್ವಪೂರ್ಣ ರಾಜಕೀಯ ಬೆಳವಣಿಗೆ ಎನ್ನಲಾಗುತ್ತಿದೆ. ಇಸ್ಲಾಮಿಕ್ ಸ್ಟೇಟ್ ಸಂಘಟನೆಗಳು ಅಫಘಾನಿಸ್ತಾನದಲ್ಲಿ ಇತರರ ಜೊತೆ ಶಿಯಾ ಮುಸ್ಲಿಮರನ್ನೂ ಗುರಿಯಾಗಿಸಿಕೊಂಡಿದೆ. ಹೀಗಿರುವಾಗ ಅಫಘಾನಿಸ್ತಾನದಲ್ಲಿ ನೆಲೆಸಿರುವ ಹಿಂದೂಗಳು ಮತ್ತು ಸಿಖ್ಖರು ಕೂಡಾ ಶೋಷಣೆಗೊಳಗಾಗುವ ಭೀತಿ ಎದುರಿಸುತ್ತಿದ್ದಾರೆ.

1970 ರ ದಶಕದಲ್ಲಿ 80,000 ಕ್ಕಿಂತ ಹೆಚ್ಚು ಜನ ಸಂಖ್ಯೆಯನ್ನು ಸಿಖ್ ಸಮುದಾಯ ಹೊಂದಿತ್ತು, ಆದರೆ ಇಂದು ಅಲ್ಲಿ ಕೇವಲ 1,000 ಜನರು ಮಾತ್ರ ಉಳಿದಿದ್ದಾರೆ ಎಂದು ವರದಿಗಳು ಹೇಳುತ್ತವೆ. ಖಾಲ್ಸಾ ಅವರು ಪೂರ್ವ ಪಾಕಿಸ್ತಾನ ಪ್ರಾಂತ್ಯದಿಂದ ಬಂದಿದ್ದರೂ ತಮ್ಮ ಜೀವನದ ಬಹು ಪಾಲನ್ನು ಕಾಬುಲ್ ನಲ್ಲಿ ಕಳೆದಿರುತ್ತಾರೆ. ಅಫಘಾನ್ ಸೇನೆಯಲ್ಲಿ ಹತ್ತು ವರ್ಷಗಳಿಂದ ಸೇವೆ ಸಲ್ಲಿಸಿದ ಖಾಲ್ಸಾ ಈ ಹಿಂದೆ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಸೆನೆಟರ್ ಆಗಿಯೂ ಸೇವೆ ಸಲ್ಲಿಸಿದ್ದರು.

ಇದೀಗ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಖ್ ಸಮುದಾಯದ ವ್ಯಕ್ತಿಯೊಬ್ಬ ಮುಸ್ಲಿಂ ದೇಶದ ಸದನವನ್ನು ಪ್ರವೇಶಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ಕೃಷ್ಣಾ ಎನ್ನುವ ಹಿಂದೂ ಮಹಿಳೆ ಪಾಕಿಸ್ತಾನದ ಸಂಸತ್ತನ್ನು ಪ್ರವೇಶಿಸಿ ಇತಿಹಾಸ ರಚಿಸಿದ್ದರು. ಈಗ ಅಫಘಾನಿಸ್ತಾನದಲ್ಲಿ ಸಿಖ್ ವ್ಯಕ್ತಿಯೊಬ್ಬರು ಸಂಸತ್ತನ್ನು ಪ್ರವೇಶಿಸಿ ಇಸ್ಲಾಮಿಕ್ ದೇಶಗಳೂ ಪ್ರಜಾಪ್ರಭುತ್ವ ವ್ಯವಸ್ತೆಯತ್ತ ವಾಲುತ್ತಿರುವ ಸಂಕೇತವನ್ನು ನೀಡುತ್ತಿವೆ.

“ಎಲ್ಲ ರೀತಿಯ ನೋವಿನಿಂದ ಬಳಲುತ್ತಿರುವ ನನ್ನ ಸಹೋದರ-ಸಹೋದರಿಯರಿಗಾಗಿ ನನ್ನ ಜೀವನವನ್ನೆ ತ್ಯಾಗ ಮಾಡುತ್ತೇನೆ. ನಾನು ನನ್ನ ಇಡೀ ಕುಟುಂಬವನ್ನು ಕಳೆದುಕೊಂಡರೂ ಮತ್ತು ನಾನೇ ಕೊಲ್ಲಲ್ಪಟ್ಟರೂ ಹೆದರುವುದಿಲ್ಲ. ನನ್ನವರ ಹಕ್ಕುಗಳನ್ನು ಪಡೆದುಕೊಳ್ಳುವವರೆಗೆ ನಾನು ಹೋರಾಟ ಮಾಡುತ್ತೇನೆ.” ಎಂದು ಎದೆ ತಟ್ಟಿ ಹೇಳುತ್ತಾರೆ ಖಾಲ್ಸಾ. ಉಗ್ರರ ಯಾವುದೆ ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದು ಬಹಿರಂಗವಾಗಿ ಹೇಳುವ ಖಾಲ್ಸಾ ತಮ್ಮ ಸಿಖ್ ಸಮುದಾಯದ ಬಂಧುಗಳನ್ನು ಪುನರುಜ್ಜೀವಿತಗೊಳಿಸುವ ಶಪಥಗೈದು ಇಸ್ಲಾಮಿಕ್ ಭಯೋತ್ಪಾದಕರ ವಿರುದ್ದ ತೊಡೆ ತಟ್ಟಿದ್ದಾರೆ. ಅವರ ಪಯಣ ಸುಖಕರವಾಗಿರಲಿ ಮತ್ತು ಹಿಂದೂಗಳ ಹಾಗೂ ಸಿಖ್ಖರ ಬಾಳಿನಲ್ಲಿ ಶಾಂತಿ ನೆಲೆಸಲಿ ಎನ್ನುವುದು ಭಾರತೀಯರ ಹಾರೈಕೆ.

-ಶಾರ್ವರಿ

Tags

Related Articles

Close