ಪ್ರಚಲಿತ

ಕಲೆ ವಾಸ್ತುಶಿಲ್ಪ ಮಾತ್ರವಲ್ಲ..ದಾನಧರ್ಮಗಳಲ್ಲೂ ಹೊಯ್ಸಳ ಅರಸರು ಪ್ರಸಿದ್ದರಾಗಿದ್ದರು.. ದಾನದ ಬಗ್ಗೆ ಹೊಯ್ಸಳ ಶಾಸನ ಏನು ಹೇಳುತ್ತದೆ ಗೊತ್ತೇ?

ಭಾರತವು ಎಷ್ಟು ಪುರಾತನ ಸಂಸ್ಕೃತಿಯನ್ನು ಹೊಂದಿದೆಯೋ ಅಷ್ಟೇ ವಿಶಾಲವಾದ ಸಂಸ್ಕಾರವನ್ನೂ ಹೊಂದಿದೆ.ನಮ್ಮ ಪೂರ್ವಜರು ನಮಗೆ ದಾನಕ್ಕಿಂತ ಮಹತ್ತರವಾದುದು ಯಾವುದೂ ಇಲ್ಲ ಎಂಬುದನ್ನು ಆಚರಣೆಯ ಮೂಲಕವೇ ತಿಳಿಯಪಡಿಸಿದ್ದಾರೆ. ರಾಮಾಯಣದಲ್ಲಾಗಲಿ ಮಹಾಭಾರತದಲ್ಲಾಗಲಿ ದಾನಗಳಿಗೂ ದಾನಿಗಳಿಗೂ ಎತ್ತರವಾದ ಸ್ಥಾನವಿದೆ. ಕರ್ಣನನ್ನು ಇಂದಿಗೂ ದಾನಶೂರನೆಂದೇ ಕರೆಯುತ್ತಾರೆ.ಚಕ್ರವರ್ತಿ ಮಹಾಬಲಿಯೂ ಶ್ರೇಷ್ಠ ದಾನಿಗಳಲ್ಲಿ ಒಬ್ಬರೆಂದು ಖ್ಯಾತರಾಗಿದ್ದಾರೆ. ನಮ್ಮ ಬೃಹತ್ ದೇಶವನ್ನು ಹಲವಾರು ಅರಸರು,ರಾಜವಂಶಗಳು ಆಳಿದ ಇತಿಹಾಸವಿದೆ.ಯುದ್ಧಗಳ ಇತಿಹಾಸವೂ ಇದೆ.ಆದರೆ ಯಾವುದೇ ಭಾರತೀಯ ಅರಸರು ದಾನವನ್ನು ಕೇಳಿದಾಗ ಇಲ್ಲವೆಂದು ಬರಿಕೈಯ್ಯಲ್ಲಿ ಕಳುಹಿಸಿದ ಉದಾಹರಣೆಗಳಿಲ್ಲ..ದೇವಾಲಯಗಳಿಗಿರಬಹುದು,ಜನಸಾಮಾನ್ಯನ ಜೀವನಕ್ಕಾಗಿ ಕೂಡಾ ಇರಬಹುದು . ದಾನವು ರಾಜವಂಶಗಳ ಸಂಸ್ಕೃತಿ ಮತ್ತು ಸಂಸ್ಕಾರ ಮಾತ್ರವಾಗಿರದೆ,ಅವರ ಜೀವನದ ದೈನಂದಿನ ವ್ಯವಹಾರಗಳಲ್ಲೂ ಒಂದಾಗಿತ್ತು.ಇಂತಹಾ ರಾಜವಂಶಗಲ್ಲಿ ಒಂದು ದಕ್ಷಿಣ ಭಾರತದ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲೇ ಪ್ರಮುಖ ಪಾತ್ರವನ್ನು ವಹಿಸಿದ್ದ ಹೊಯ್ಸಳ ರಾಜವಂಶ.ಕ್ರಿಸ್ತಶಕ ೧೦೦೦ ದಿಂದ ೧೩೪೬ ರ ವರೆಗೆ ಸುಮಾರು ೩೫೦ ವರ್ಷಗಳ ಕಾಲ ಈ ರಾಜವಂಶ ಆಡಳಿತವನ್ನು ನಡೆಸಿತ್ತು.ರಾಜಕೀಯ,ಇತಿಹಾಸ,ಧಾರ್ಮ ಸಾಹಿತ್ಯ ಹಾಗೂ ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಅವರ ಕೊಡುಗೆಗಳು ಅಪೂರ್ವವಾಗಿದೆ.ಸಾಮಾಜಿಕ ವ್ಯವಸ್ಥೆಗಾಗಿ ರಾಜರು ಉತ್ತಮ ಆಡಳಿತ ಕ್ರಮವನ್ನು ರೂಪಿಸಿಕೊಂಡಿದ್ದರು.ರಾಜಪದ್ಧತಿಯ ಪ್ರಕಾರ ಸೈನ್ಯದ ವ್ಯವಸ್ಥೆ,ಪ್ರಜೆಗಳ ಹಿತರಕ್ಷಣೆ,ದೇವಾಲಯಗಳ ಉಸ್ತುವಾರಿ ಇತ್ಯಾದಿಗಳ ನಿರ್ವಹಣೆಗೆ ಅಧಿಕಾರಿಗಳ ನೇಮಕವಾಗುತ್ತಿತ್ತು.

ಹೊಯ್ಸಳ ಅರಸರು ಆಡಳಿತದಲ್ಲಿ ದುಷ್ಟ ಶಿಕ್ಷಣ,ಶಿಷ್ಟ ರಕ್ಷಣಾ ಪದ್ದತಿಯನ್ನು ಪಾಲಿಸುತ್ತಿದ್ದರು.ಹೆಚ್ಚಾದ ರಾಜಾದಾಯ ಮತ್ತು ಯುದ್ಧದಲ್ಲಿ ಲಭಿಸಿದ ದೊರೆತ ಸಂಪತ್ತನ್ನು ತುಂಬು ಹೃದಯದಿಂದ ಪ್ರಜೆಗಳಿಗೆ ದಾನವಾಗಿ ನೀಡಿ ಸಮಾಜವನ್ನು ಸುಸ್ಥಿತಿಯಲ್ಲಿ ರಕ್ಷಿಸಲು ಸರ್ವಪ್ರಯತ್ನವನ್ನು ನಡೆಸುತ್ತಿದ್ದರು.ಹೊಯ್ಸಳರ ಶಾಸನಗಳನ್ನು ಗಮನಿಸಿದರೆ ದಾನ ಮತ್ತು ಕೊಡುಗೆಯ ಬಗ್ಗೆ ಅವರು ಹೊಂದಿದ್ದ ಉತ್ತಮ ಕಲ್ಪನೆಯ ಅರಿವುಂಟಾಗುತ್ತದೆ.ಹೊಯ್ಸಳರ ಪ್ರತಿಯೊಂದು ದಾನದ ಶಾಸನಗಳಲ್ಲೂ ಮುಕ್ತಾಯ ಶ್ಲೋಕಗಳಲ್ಲಿ ದಾನ ನೀಡುವ ಮಹತ್ವವನ್ನು ಮತ್ತು ಪಡೆದ ದಾನವನ್ನು ಮುಂದಿನ ತಲೆಮಾರುಗಳು ಸೂರ್ಯ ಚಂದ್ರರಿರುವವರೆಗೂ ರಕ್ಷಿಸಬೇಕಾದ ಹೊಣೆಗಾರಿಕೆಯನ್ನು ಹೇಳುತ್ತದೆ. ಹೊಯ್ಸಳರು ದಾನ ಮಾಡುವುದು ಯೋಗ,ಸೇವೆ ಮಾತ್ರವಲ್ಲ ಧರ್ಮನಿಷ್ಠೆಯ ಕರ್ತವ್ಯವೆಂದೇ ತಿಳಿದಿದ್ದರೂ.ದಾನಿಗಳು ಧೃಡವಾದ ಧಾರ್ಮಿಕ ಭಾವನೆಯಿಂದ ದಾನವನ್ನು ಮಾಡುತ್ತಿದ್ದರು.ದಾನ ಮಾಡುವಾಗ ಧರ್ಮದ ನೀತಿ,ಪಾವಿತ್ರ್ಯ ಮತ್ತು ಸತ್ಯ ಮುಂತಾದ ವಿಷಯಗಳಲ್ಲಿ ಎಚ್ಚರಿಕೆ ವಹಿಸುತ್ತಿದ್ದರು.ದಾನಕೊಡುವ ಮತ್ತು ಅದನ್ನು ದಾಖಲಿಸುವ ನಿಯಮ,ವಿಧಿ ಮತ್ತು ಮಿತಿಗಳ ಬಗ್ಗೆ ಪ್ರಜೆಗಳಲ್ಲಿ ಜಾಗ್ರತೆಯನ್ನು ಮೂಡಿಸಿದ್ದರು.ಹೊಯ್ಸಳರು ಪ್ರಜೆಗಳು ಧರ್ಮದ ಎಲ್ಲೆಯನ್ನು ಮೀರುವುದಿಲ್ಲವೆಂಬ ಪ್ರಜೆಗಳ ಮನವನ್ನು ಚೆನ್ನಾಗಿ ಅರಿತಿದ್ದರು.ಆದ್ದರಿಂದ ದಾನವನ್ನು ನ್ಯಾಯ ಸಮ್ಮತವಾಗಿ ಶಾಸನಗಳಲ್ಲಿ ಬರೆದಿರಿಸುತ್ತಿದ್ದರು ಮಾತ್ರವಲ್ಲದೆ ದಾನವನ್ನು ಹಾಳು ಮಾಡಬಾರದೆಂಬ ಸೂಕ್ಷ್ಮತೆಯನ್ನೂ ಶಾಸನಗಳ ಮೂಲಕ ಪ್ರಜೆಗಳಲ್ಲಿ ಸೃಷ್ಟಿಸಿದ್ದರು.ಉದಾಹರಣೆಗೆ ಪಾಂಡವಪುರ ತಾಲೂಕಿನ ಒಂದು ಶಾಸನದ ಮುಕ್ತಾಯ ಶ್ಲೋಕದಲ್ಲಿ ದಾನವನ್ನು ನಾಶಪಡಿಸಿದರೆ ಪಂಚಮಹಾ ಪಾತಕವನ್ನು ಮಾಡಿದಂತೆ ಎಂದಿದೆ. ಇನ್ನೊಂದು ಕಾಲದ ತಿರುಮಕೂಡಲು ನರಸೀಪುರದ ಶಾಸನದಲ್ಲಿ ದೇವರ ಸೇವೆಗಾಗಿ ಭೂಮಿಯನ್ನು ಮತ್ತು ಎಣ್ಣೆಯ ಗಾಣದ ಮೇಲಿನ ತೆರಿಗೆಯನ್ನು ದಾನಕ್ಕೆ ನೀಡಿದ ಉಲ್ಲೇಖವಿದೆ,ಕೊನೆಯಲ್ಲಿ “ ಈ ದಾನವನ್ನು ನಾಶಪಡಿಸಿದವನು ಬ್ರಹ್ಮಹತ್ಯಾ ದೋಷಕ್ಕೆ,ಸಾವಿರ ಕಪಿಲೆಯರನ್ನು ಕೊಂದವರ ಪಾಪಕ್ಕೆ ಗುರಿಯಾಗುತ್ತಾನೆ” ಎಂಬ ಎಚ್ಚರಿಕೆಯೂ ಇದೆ.

 

ಇನ್ನೊಂದು ಶಾಸನದಲ್ಲಿ “ದಾನವನ್ನು ಕೊಡುವುದು ಮತ್ತು ಕೊಟ್ಟ ದಾನವನ್ನು ಪಾಲಿಸುವುದು,ಇವುಗಳಲ್ಲಿ ದಾನವನ್ನು ಪಾಲಿಸುವುದೇ ಹೆಚ್ಚು ಶ್ರೇಯಸ್ಕರವಾದದ್ದು” ಎಂದು ಬರೆದಿದೆ.ದಾನ ನೀಡುವುದು ಮುಖ್ಯವಾಗಿ ರಾಜರು,ರಾಜವಂಶ ಮತ್ತು ವರ್ತಕರು ಮಾಡುತ್ತಿದ್ದರು.ಹೊಯ್ಸಳರ ಪ್ರಮುಖ ಅರಸನಾದ ವಿಷ್ಣುವರ್ಧನನು ನೀಡಿದ ದಾನದತ್ತಿಗಳಲ್ಲಿ
೧) ನಾಗಾವರದಲ್ಲಿ ಬಲ್ಲೇಶ್ವರ ದೇವಾಲಯ
೨) ವಿರೂಪಾಕ್ಷಪುರದಲ್ಲಿ ಜಯಗೊಂಡೇಶ್ವರ ಮತ್ತು ಚಂಡೀಶ್ವರ ದೇವಾಲಯಗಳು
೩)ದೋರಸಮುದ್ರದಲ್ಲಿ ಬಂಟೇಶ್ವರ ದೇವಾಲಯ
೪) ಸೀತಹಳ್ಳಿಯಲ್ಲಿ ಕ್ಷೇತ್ರಸಾಲೇಶ್ವರ.
೫) ನಾಗರಹಾಲುವಿನಲ್ಲಿ ಸಿಂಗೇಶ್ವರ ದೇವಾಲಯ.
೬) ಮದ್ದೂರಿನಲ್ಲಿ ಸ್ವಯಂಭೂ ವೈದ್ಯನಾಥ ದೇವಾಲಯ
೭) ಕರಿಗುಂದದಲ್ಲಿ ಮೂಲಸ್ಥಾನೇಶ್ವರ ದೇವಾಲಯ
೮) ನಳನಕೆರೆಯಲ್ಲಿ ಮೂಲಸ್ಥಾನ ಮಲ್ಲಿಕಾರ್ಜುನೇಶ್ವರ
ಹೀಗೆ ಸುಮಾರು ೨೫ ವರ್ಷಗಳ ಅವಧಿಯಲ್ಲಿ ವಿಷ್ಣುವರ್ಧನನು ದತ್ತಿಗಳನ್ನು ನೀಡಿ ಅನೇಕ ದೇವಾಲಯಗಳನ್ನು ನಿರ್ವಹಿಸುತ್ತಿದ್ದನು.ದೇವಾಲಯಗಳಿಗೆ ದಾನಗಳು ಉಡುಗೊರೆಯ ರೂಪದಲ್ಲೂ ನೀಡಲ್ಪಡುತ್ತಿದ್ದವು.
ಉದಾಹರಣೆಗೆ ಎತ್ತಿನಹೊರೆಗಾಗಿ,ಸಕ್ಕರೆಯ ಹೊರೆಗಾಗಿ,ಗಂಧ ಕರ್ಪೂರಗಳಿಗಾಗಿ ಹಾಗು ಸಾವಿರ ಜನರ ಊಟೋಪಚಾರದ ವ್ಯವಸ್ಥೆಗಳಿಗಾಗಿ ಪ್ರತ್ಯೇಕವಾಗಿ ದಾನಗಳನ್ನು ನೀಡಲಾಗುತ್ತಿತ್ತು.ಆ ಕಾಲದಲ್ಲಿ ಸಾಮಾನ್ಯವಾಗಿ ಮೂರು ವಿಧದ ದಾನಗಳಿದ್ದವು,ಅತ್ಯುತ್ತಮ,ಮಾಧ್ಯಮ ಮತ್ತು ನಿಮ್ನ.ಆದರೆ ಶಾಸನಗಳ ಪ್ರಕಾರ ಗೋದಾನ,ಭೂದಾನ ಮತ್ತು ವಿದ್ಯಾದಾನಗಳು ಅತ್ಯಂತ ಶ್ರೇಷ್ಠವೆಂದು ಹೇಳುತ್ತವೆ.

ಕ್ರಿಸ್ತಶಕ ೧೦೬೦ ರ ಸಮಯದಲ್ಲಿ ರಾಜನಾಗಿದ್ದ ಹೊಯ್ಸಳರ ಅರಸನಾದ ವಿನಯಾದಿತ್ಯನು ದಾನಗಳಾಗಿ ಕೆರೆಗಳನ್ನು ನಿರ್ಮಿಸಿದ್ದನು.ದ್ವಾರಸಮುದ್ರದ ಕೆರೆಗಾಗಿ ಕಾಲುವೆಯನ್ನು ನಿರ್ಮಿಸಿದ್ದನು.ಅವನ ಪ್ರಧಾನ ವೀರದಂಡನಾಯಕನು ತಾನು ಸ್ಥಾಪಿಸಿದ ವೀರಬಲ್ಲಾಳಪುರ ಎಂಬಲ್ಲಿ ಕಾಡುಗಳನ್ನು ತೆರವುಗೊಳಿಸಿ ರುದ್ರ ಸಮುದ್ರ,ಗಂಗಾ ಸಮುದ್ರ,ಅಚ್ಯುತ ಸಮುದ್ರ ಮತ್ತು ವೀರ ಸಮುದ್ರ ಎಂಬ ನಾಲ್ಕು ಕೆರೆಗಳನ್ನು ನಿರ್ಮಿಸಿದ್ದನು.ಇಷ್ಟಲ್ಲದೆ ಮಲ್ಲಿಕಾರ್ಜುನ ದೇವಾಲಯಕ್ಕೆ ದಾನಿಗಳು ನೀರಾವರಿ ಭೂಮಿ,ಒಣಭೂಮಿ,ನಂದಾ ದೀಪಕ್ಕೆ ಎಣ್ಣೆ,ಪ್ರತಿದಿನ ಒಂದು ಮಣ ತುಪ್ಪ ಹೀಗೆ ದೇವಾಲಯಗಳು ದಾನಿಗಳ ಸಹಕಾರದಿಂದಲೇ ನಿರ್ವಹಿಸಲ್ಪಡುತ್ತಿತ್ತು.ಹೊಯ್ಸಳರ ಕಾಲದಲ್ಲಿ ದಾನಗಳಲ್ಲಿ ಎರಡು ವಿಧಾನಗಳಿತ್ತು. ಮೊದಲನೆಯ ವಿಧಾನದಲ್ಲಿ ದಾನವಾಗಿ ಭೂಮಿಯನ್ನು ಪಡೆದವರು,ಆ ಸ್ಥಳದ ಬಾಡಿಗೆದಾರರಿಂದ ಬಾಡಿಗೆ ಮತ್ತು ಆದಾಯದ ಇತರ ಮೂಲಗಳನ್ನು ಪಡೆಯುತ್ತಿದ್ದರು. ಎರಡನೇ ವಿಧದಲ್ಲಿ ಹಳ್ಳಿಯನ್ನು ದಾನವಾಗಿ ಕೊಡುವುದೆಂದರೆ ಹಳ್ಳಿಯಿಂದ ಕಂದಾಯವನ್ನು ಬಿಟ್ಟುಕೊಡುವುದೆಂದು ಅರ್ಥವಾಗಿತ್ತು.ಹೊಯ್ಸಳ ಅರಸರಲ್ಲಿ ವಿಷ್ಣುವರ್ಧನ ಮತ್ತು ಇಮ್ಮಡಿ ಬಲ್ಲಾಳರು ಮಹಾದಾನಿಗಳಾಗಿದ್ದರು.ಹೊಯ್ಸಳರ ಶಾಸನಗಳಲ್ಲೂ ಹೆಚ್ಚಿನವು ದಾನ ಅಥವಾ ದತ್ತಿಗಳಿಗೆ ಸಂಬಂಧಿಸಿದವಾಗಿವೆ.ಮಹಿಳಾ ಆಡಳಿತಗಾರರು ಅಥವಾ ಉತ್ತಮ ಕುಲದ ಮಹಿಳೆಯರೂ ಧಾರಾಳವಾಗಿ ದಾನಗಳನ್ನು ನೀಡುತ್ತಿದ್ದರು.ಹೊಯ್ಸಳ ಪ್ರಭುತ್ವವು ಧರ್ಮ ಸಹಿಷ್ಣುತೆಯ ನೀತಿಯನ್ನು ಪಾಲಿಸುತ್ತಿದ್ದು ಅರಸರು ಎಲ್ಲಾ ಧರ್ಮಗಳಿಗೂ ಸಮಾನವಾದ ರಾಜಾಶ್ರಯವನ್ನು ನೀಡಿದ್ದರು.ಮತ್ತು ಎಲ್ಲ ಧರ್ಮಗಳ ಕಲಾವಿದರಿಗೂ ದೇವಾಲಯಗಳಿಗೂ ದಾನದತ್ತಿಗಳನ್ನು ನೀಡಲಾಗುತ್ತಿತ್ತು.

-Deepashree M

Tags

Related Articles

FOR DAILY ALERTS
Close