ಅಂಕಣ

ಜನತೆಯ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ನಖ ಶಿಖಾಂತ ದ್ವೇಷಿಸುತ್ತಿದ್ದುದ್ದೇಕೆ ಕಾಂಗ್ರೆಸಿನ ರಾಜಮಾತೆ ಸೋನಿಯಾ?

ಹೌದು. ಕಾಂಗ್ರೆಸಿನ ರಾಜಮಾತೆ ಸೋನಿಯಾ ಗಾಂಧಿಗೆ ಅಬ್ದುಲ್ ಕಲಾಂರನ್ನು ಕಂಡರಾಗುತ್ತಿರಲಿಲ್ಲ. ವಿಶ್ವವೇ ಕಂಡ ಮಹಾನ್ ವಿಜ್ಞಾನಿ, ಅಪ್ಪಟ ದೇಶ ಭಕ್ತ, ಜನತೆಯ ರಾಷ್ಟ್ರಪತಿ, ಅಜಾತಶತ್ರು ಭಾರತರತ್ನ ಅಬ್ದುಲ್ ಕಲಾಂ ಅನ್ನು ಕಂಡರೇನೇ ನಖಶಿಖಾಂತ ಕುದಿಯುತ್ತಿದ್ದರು ಮೇಡಮ್ ಜೀ. ಎಷ್ಟೆಂದರೆ ಒಂದೆರೆಡಲ್ಲ ಬದಲಿಗೆ ಮೂರು ಬಾರಿ ಅಬ್ದುಲ್ ಕಲಾಂ ರಾಷ್ಟ್ರಪತಿಯಾಗದಂತೆ ತಡೆದಿದ್ದರು ರಾಜಮಾತೆ! ದ್ವೇಷದ ಪರಿ ಹೇಗಿರಬೇಕು ಯೋಚಿಸಿ. ಇದೇ ರೀತಿ ದೇಶ ಕಂಡ ಒಬ್ಬ ಅತ್ಯುತ್ತಮ ಪ್ರಧಾನಿ, ತನ್ನದೇ ಪಕ್ಷದ ಪಿ.ವಿ.ನರಸಿಂಹ್ ರಾವ್ ಅವರನ್ನೂ ಮೇಡಮ್ ಜೀ ದ್ವೇಷಿಸುತ್ತಿದ್ದರೆಂಬ ಸತ್ಯ ಎಲ್ಲರಿಗೂ ಗೊತ್ತಿರುವಂಥದ್ದೇ.

ಮೊತ್ತ ಮೊದಲ ಬಾರಿಗೆ ಅಬ್ದುಲ್ ಕಲಾಂ ಅವರ ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ನಾಮಾಂಕನ ಮಾಡಿದಾಗಲೇ ಮೇಡಮ್ ಜೀಗೆ ಅಸಮಾಧಾನವಾಗಿತ್ತು. ವಾಸ್ತವವಾಗಿ 1995ರಿಂದಲೇ ಮೇಡಮ್ ಜೀ ಭಾರತದ ಪ್ರಧಾನಿ ಗದ್ದುಗೆ ಏರಬೇಕೆಂದು ಬಯಸುತ್ತಿದ್ದರು ಮತ್ತು ಅದಕ್ಕೆ ಬೇಕಾದ ಪೃಷ್ಟಭೂಮಿಯನ್ನು ತಯಾರಿಸುತ್ತಿದ್ದರು. 2002 ರಲ್ಲಿ ರಾಷ್ಟ್ರಪತಿ ಹುದ್ದೆಗೆ ಕಲಾಂ ಅವರ ಹೆಸರನ್ನು ಪ್ರಸ್ತಾಪಿಸಿದಾಗ ಅವರ ಹೆಸರನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು ಮೇಡಮ್ ಜೀ. ಆಕೆಗೆ ಕೆ.ಆರ್.ನಾರಾಯಣನ್ ಅವರನ್ನೇ ಆ ಹುದ್ದೆಯಲ್ಲಿ ಮುಂದುವರಿಸುವ ಆಸೆ ಇತ್ತು. ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ರೋಬೋಟ್ ಬೇಕಾಗಿತ್ತು ಮೇಡಮ್ ಜೀ ಗೆ. ಆದರೆ ಅಬ್ದುಲ್ ಕಲಾಂ ಅಪ್ಪಟ ದೇಶ ಭಕ್ತ, ಅವರು ಯಾವುದೇ ಕಾರಣಕ್ಕೂ ಮೇಡಮ್ ಜೀ ಪುಂಗಿಗೆ ತಲೆಯಾಡಿಸುವುದಿಲ್ಲ ಎಂಬುದು ಆಕೆಗೆ ತಿಳಿದಿತ್ತು. ದೇಶ ಭಕ್ತರನ್ನು ಕಂಡರೆ ಮೇಡಮ್ ಜೀ ಗೆ ಮೈಯೆಲ್ಲಾ ಉರಿ ಉರಿ.

ಆಡಳಿತ ಪಕ್ಷ ಮತ್ತು ಅವರ ಸಹವರ್ತಿಗಳು ಮಾತ್ರವಲ್ಲ ವಿಪಕ್ಷಗಳೆಲ್ಲರೂ ಅಬ್ದುಲ್ ಕಲಾಮರೇ ರಾಷ್ಟ್ರಪತಿಯೆಂಬುದನ್ನು ಒಪ್ಪಿಯಾಗಿತ್ತು. ಅದರೆ ಸೋನಿಯಾ ಪಟ್ಟು ಬಿಡಲಿಲ್ಲ. ಆಕೆ ಹಿಂಬಾಗಿಲಿನಿಂದ ಅಬ್ದುಲ್ ಕಲಾಂ ಅವರನ್ನು ಸೋಲಿಸುವ ಪ್ರಯತ್ನ ಮಾಡಲು ಶುರುವಿಟ್ಟುಕೊಳ್ಳುತ್ತಾರೆ. ಚೋರ ಗುರುವಿಗೆ ಚಾಂಡಾಲ ಶಿಷ್ಯರಿರುವಂತೆ ಕಾಂಗ್ರೆಸಿನ ಎಲ್ಲಾ ಅನೈತಿಕ ಕಾರ್ಯಗಳಲ್ಲಿ ಮೇಡಮ್ ಗೆ ಬೆನ್ನುಲುಬಾಗಿ ನಿಲ್ಲುವುದು ಕಮ್ಮಿನಿಷ್ಟರು. ಮೊದಲೇ ಅವರಿಗೆ ದೇಶದ ಬಗ್ಗೆ ನಿಷ್ಟೆ ಕಮ್ಮಿ ಆದ್ದರಿಂದ ಮೇಡಮ್ ಹೇಳಿದ್ದಕ್ಕೆಲ್ಲಾ “ಜೀ ಮೇಡಮ್ ಜೀ” ಎಂದು ತಲೆಯಾಡಿಸುತ್ತಿರುತ್ತಾರೆ. ಮೇಡಮ್ ಜೀ ಇದೇ ಕಮ್ಮಿನಿಷ್ಟರ ಬಾಗಿಲು ಬಡಿಯುತ್ತಾರೆ. ಸಿ.ಪಿ.ಐ(ಎಮ್)ನ ಜೊತೆ ಒಳ ಒಪ್ಪಂದ ಮಾಡಿಕೊಂಡು ಲಕ್ಷ್ಮಿ ಸೆಹಗಲ್ ಅವರನ್ನು ಕಲಾಂ ಎದುರುಗಡೆ ನಿಲ್ಲಿಸುತ್ತಾರೆ.

ಭಾರತ ಮಾತೆಯ ಅದೃಷ್ಟ ಚೆನ್ನಾಗಿತ್ತು ಕಲಾಂ ಭಾರೀ ಬಹುಮತದಿಂದ ದೇಶದ ರಾಷ್ಟ್ರಪತಿಯಾಗುತ್ತಾರೆ. ಮೇಡಮ್ ಜೀ ಯ ಪ್ರಧಾನಮಂತ್ರಿ ಆಗುವ ಆಸೆಗೆ ಮೊದಲ ಬಾರಿಗೆ ತಣ್ಣೀರೆರಚಲ್ಪಪಡುತ್ತದೆ. ಅಲ್ಲಿಂದ ಹೆಡೆ ತುಳಿದ ಹಾವಿನಂತಾಗುತ್ತಾರೆ ಮೇಡಮ್ ಜೀ. ಮುಂದೆ 2004 ರಲ್ಲಿ ಅಟಲ್ ಸರಕಾರ ಸೋತು ಹೋಗುತ್ತದೆ. ಮೇಡಮ್ ಜೀ ಯೂಪಿಎ ಎಂಬ ಸಮ್ಮಿಶ್ರ ಸರಕಾರವನ್ನು ತಯಾರಿಸಿ ತಾನು ಗದ್ದುಗೆ ಮೇಲೆ ಕೂರುವುದೆಂದು ಕನಸು ಕಾಣುತ್ತಿರುತ್ತಾರೆ. ಮೇಡಮ್ ಜೀ ಪ್ರಧಾನಮಂತ್ರಿಯಾಗುವುದು ಬಹುತೇಕ ಖಚಿತವಾಗಿರುತ್ತದೆ. ರಾಷ್ಟ್ರಪತಿ ಭವನದಲ್ಲಿ ಮೇಡಮ್ ಜೀ ಪ್ರಧಾನಮಂತ್ರಿಯಾಗಲು ಬೇಕಾಗಿರುವ ಎಲ್ಲಾ ಪತ್ರಗಳು ತಯಾರಾಗಿ ಇನ್ನೇನು ರಾಷ್ಟ್ರಪತಿಯವರ ಅಂಕಿತ ಬೀಳುವುದೊಂದೆ ಬಾಕಿ ಇತ್ತು. ಅಷ್ಟರಲ್ಲಿ ಒಂದು ಆಶ್ಚರ್ಯಕರ ಘಟನೆ ನಡೆಯುತ್ತದೆ.

ಪ್ರಧಾನಮಂತ್ರಿ ಆಗುವ ಕೆಲವೇ ಘಳಿಗೆಗಳ ಮೊದಲು ಸೋನಿಯಾ ರಾಷ್ಟ್ರಪತಿ ಕಲಾಂ ಅವರನ್ನು ಭೇಟಿ ಆಗುತ್ತಾರೆ. ಆ ಭೇಟಿಯಲ್ಲಿ ಏನು ಮಾತುಕತೆ ನಡೆದಿತ್ತೋ ಯಾರಿಗೂ ತಿಳಿದಿರುವುದಿಲ್ಲ. ಆದರೆ ಮರಳಿ ಬಂದ ಸೋನಿಯಾ ತಾನು ಪ್ರಧಾನಮಂತ್ರಿ ಪದವನ್ನು “ತ್ಯಾಗ” ಮಾಡುತ್ತೇನೆ ತನ್ನ ಬದಲಿಗೆ ಮನಮೋಹನ ಸಿಂಗರು ಪ್ರಧಾನಮಂತ್ರಿಯಾಗುತ್ತಾರೆ ಎನ್ನುತ್ತಾರೆ! ಇಡಿಯ ದೇಶವೇ ಸ್ಥಬ್ಧವಾಗುತ್ತದೆ. ದೇಶ ವಿದೇಶದ ಮಾಧ್ಯಮಗಳೆಲ್ಲ ಮೇಡಮ್ ಜೀ ಯ “ತ್ಯಾಗ”ವನ್ನು ಕೊಂಡಾಡಿದ್ದೇ ಕೊಂಡಾಡಿದ್ದು! ಕಾಂಗ್ರೆಸಿನ ಬಾಲ ಬಡುಕರಂತೂ ಸೋನಿಯಾ ದೇಶಕ್ಕಾಗಿ ಯುದ್ದ ಮಾಡಿ ಹುತಾತ್ಮರಾದರೇನೋ ಎನ್ನುವಂತೆ ಹೊಗಳಿದ್ದೇ ಹೊಗಳಿದ್ದು. ಅಹಾ, ತ್ಯಾಗಮಯೀ ಮಾತೆ ನಮ್ಮ ಮೇಡಮ್ ಜೀ ದೇಶಕ್ಕೋಸ್ಕರ ಪ್ರಧಾನಮಂತ್ರಿ ಹುದ್ದೆಯನ್ನು ತ್ಯಾಗಮಾಡುವುದೆಂದರೆ? ಮಕ್ಕಳು ನಮ್ಮ ಅಮ್ಮನಿಗೆ ಜೀವದ ಭಯ ಎಂದು ಪಿಟೀಲು ಕುಯ್ದವು. ನಿಜವಾಗಿಯೂ ಜೀವದ ಭಯವೆಂದಾದರೆ ರಾಹುಲನನ್ನು ಯಾವ ಧೈರ್ಯದಿಂದ ಪ್ರಧಾನಮಂತ್ರಿ ಮಾಡಲು ಹೊರಟಿರುವುದು ರಾಜಮಾತೆ?

ವಾಸ್ತವವಾಗಿ ಅಲ್ಲಿ ಆದ ವಿಷಯವೇ ಬೇರೆ ಇತ್ತು. ಸೋನಿಯಾ ಪ್ರಧಾನಿಯಾಗಲು ತಾಂತ್ರಿಕ ಅಡಚಣೆಗಳಿದ್ದವು. ಕೆಲವರ ಪ್ರಕಾರ ಅಬ್ದುಲ್ ಕಲಾಂ ಸೋನಿಯಾ ಪ್ರಧಾನಮಂತ್ರಿಯಾಗುವುದನ್ನು ತಡೆದಿದ್ದರು ಎನ್ನುತ್ತಾರೆ. ಆದರೆ ಕಲಾಂ ಇದನ್ನು ಅಲ್ಲಗಳೆದಿದ್ದಾರೆ. ಸ್ವತಃ ತನ್ನ ಆತ್ಮ ಕಥನದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ ಕಲಾಂ. ಆಕೆ ಮನಮೋಹನ್ ಸಿಂಗರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಆಗಿ ತನ್ನ ಮುಂದೆ ನಿಲ್ಲಿಸಿದಾಗ ತನಗೆ ಆಶ್ಚರ್ಯವಾಗಿತ್ತು, ಏಕೆಂದರೆ ಪ್ರಧಾನಮಂತ್ರಿ ಹುದ್ದೆಗೆ ಬೇಕಾದ ಪತ್ರಗಳೆಲ್ಲವನ್ನೂ ಮತ್ತೆ ತಿದ್ದಿ ಬರೆಯಬೇಕಾಗಿತ್ತು ಎಂಬುದನ್ನು ಹೇಳಿಕೊಂಡಿದ್ದಾರೆ. ಇಷ್ಟಾಗಿಯೂ ಕೊನೆ ಘಳಿಗೆಯಲ್ಲಿ ಕಲಾಂ ಮನೆಯಿಂದ ಹೊರಗೆ ಬಂದ ತಕ್ಷಣವೇ ಹೇಗೆ ಆಕೆಗೆ ಜ್ಞಾನೋದಯವಾಯಿತು ಎನ್ನುವುದು ಬ್ರಹ್ಮ ರಹಸ್ಯ! ನಿಜವೆಂದರೆ 1995ರಿಂದಲೇ ಕಂಡ ಕನಸೊಂದು ನುಚ್ಚುನೂರಾಗಿ ಮೇಡಮ್ ಜೀ ಆಹತರಾಗುತ್ತಾರೆ. ಕಲಾಂ ಮೇಲೆ ಆಕೆಯ ದ್ವೇಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತದೆ. ಎಲ್ಲಿಯವರೆಗೆಂದರೆ 2007ರಲ್ಲಿ ಕಲಾಂರನ್ನ ಮತ್ತೊಂದು ಅವಧಿಗೆ ರಾಷ್ಟ್ರಪತಿಯಾಗಿ ನೋಡಲು ಸ್ವಪಕ್ಷ, ಪ್ರತಿಪಕ್ಷ ಸಮೇತ ಇಡಿಯ ದೇಶವೇ ಹಾತೊರೆಯುತ್ತಿದ್ದಾಗ ಮೇಡಮ್ ಜೀ ಅಡ್ಡಗಾಲು ಹಾಕುತ್ತಾರೆ. ಯಾವುದೇ ಕಾರಣಕ್ಕೂ ಕಲಾಂ ಎರಡನೇ ಅವಧಿಗೆ ರಾಷ್ಟ್ರಪತಿ ಆಗದಂತೆ ನೋಡಿಕೊಳ್ಳುತ್ತಾರೆ.

ತನ್ನ ಮನದಿಚ್ಚೆಯಂತೆಯೇ ದೇಶಕ್ಕೆ ಒಬ್ಬ “ರೋಬೋಟ್ ಪ್ರಧಾನಮಂತಿ”ಯನ್ನು ಮತ್ತು “ರಬ್ಬರ್ ಸ್ಟಾಂಪ್ ರಾಷ್ಟಪತಿ”ಯನ್ನು ನೇಮಿಸಿ ತಾನು ಮಹಾರಾಣಿಯಂತೆ ಮೆರೆಯುತ್ತಾರೆ. ಮುಂದೆ 2012 ರಲ್ಲಿ ರಾಷ್ಟ್ರಪತಿ ಹುದ್ದೆಗೆ ಮಗದೊಮ್ಮೆ ಕಲಾಂ ಅವರ ಹೆಸರು ಪ್ರಸ್ತಾವನೆಯಾಗುತ್ತದೆ. ಆದರೆ ಆಗಲೂ ಮೇಡಮ್ ಜೀ ಅವರ ಹೆಸರನ್ನು ನಿರಾಕರಿಸುತ್ತಾರೆ. ಮೇಡಮ್ ಜೀ ದ್ವೇಷದ ಬಗ್ಗೆ ಅರಿವಿದ್ದ ಅಬ್ದುಲ್ ಕಲಾಂ ಸರ್ವ ಪಕ್ಷ ಸಮ್ಮತಿಯಿದ್ದರೆ ಮಾತ್ರ ತಾನು ರಾಷ್ಟ್ರಪತಿಯಾಗುತ್ತೇನೆ ಇಲ್ಲವಾದಲ್ಲಿ ಬೇಡ ಎಂದು ಅಭ್ಯರ್ಥಿಯಾಗುವುದನ್ನು ತಾವೇ ತಪ್ಪಿಸಿಕೊಳ್ಳುತ್ತಾರೆ. ಎಂತಹ ದೌರ್ಭಾಗ್ಯ ನಮ್ಮದು ನೋಡಿ. ಒಬ್ಬ ಹಠಮಾರಿ ಹೆಣ್ಣಿನ ದ್ವೇಷಕ್ಕಾಗಿ ಭಾರತದ ಕಂಡ ಅತ್ಯುತ್ತಮ ರಾಷ್ಟ್ರಪತಿಯನ್ನು ಎರೆಡೆರಡು ಬಾರಿ ಹುದ್ದೆಯಿಂದ ವಂಚಿತನನ್ನಾಗಿಸಲಾಗುತ್ತದೆ. ಕಲಾಂ ಅವರನ್ನು ಮತ್ತೊಂದು ಅವಧಿಗೆ ರಾಷ್ಟ್ರಪತಿಯಾಗಿ ನೋಡುವ ಭಾಗ್ಯ ಕೇವಲ ಮತ್ತು ಕೇವಲ ಮೇಡಮ್ ಜೀ ಹಠದಿಂದ ತಪ್ಪಿ ಹೋಗುತ್ತದೆ.

ದೇಶದ ಮಾನವನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಹೊಳೆಯುವಂತೆ ಮಾಡಿದ, ಭಾರತಾಂಬೆಯ ಕೀರ್ತಿ ಧ್ವಜವನ್ನು ವಿಶ್ವ ಪಟಲದಲ್ಲಿ ಹಾರಿಸಿದ, ರಾಷ್ಟ್ರಪತಿ ಭವನದ ದ್ವಾರವನ್ನು ಜನತೆಗಾಗಿ ತೆಗೆದಿರಿಸಿ, ಜನತೆಯೊಂದಿಗೆ ಸಾಮಾನ್ಯನಂತೆ ಬೆರೆದ ನಮ್ಮೆಲ್ಲರ ಪ್ರೀತಿಯ ಅಬ್ದುಲ್ ಕಲಾಂ ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಮೇಡಮ್ ಜೀ. ಆದರೂ ಆ ಪುಣ್ಯಾತ್ಮ ಒಂದೇ ಒಂದು ಬಾರಿಯೂ ಆಕೆಯನ್ನು ದೂರಲಿಲ್ಲ. ಎಲ್ಲಿಯೂ ತನಗಾದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲಿಲ್ಲ. ಇದ್ದಷ್ಟೂ ದಿನ ಭಾರತ ಮಾತೆಯನ್ನು ಪ್ರೀತಿಸಿದರು. ಜನತೆಯ ಪ್ರೀತಿ ಸಂಪಾದಿಸಿದರು. ಜೀವನ ಪರ್ಯಂತ ಆ ದೇವತಾ ಮನುಷ್ಯ ಸಂಪಾದಿಸಿದ ಆಸ್ತಿಯೆಂದರೆ ಜನರ ಪ್ರೀತಿ. ಇವತ್ತಿಗೂ ಕಲಾಂಗಾಗಿ ಕಣ್ಣೀರು ಸುರಿಸುತ್ತಾರೆ ಕೋಟ್ಯಂತರ ಭಾರತೀಯರು. ದೇಶ ಅವರ ಬಣ್ಣ, ಜಾತಿ, ಭಾಷೆ, ಊರು ಯಾವುದನ್ನೂ ನೋಡಲಿಲ್ಲ. ದೇಶ ನೋಡಿದ್ದು ಅವರ ದೇಶ ಪ್ರೇಮವನ್ನು ಮಾತ್ರ.

ಅಂತಹ ಮಹಾನ್ ನಾಯಕನ್ನು ಮೇಡಮ್ ಜೀ ದ್ವೇಶಿಸುತ್ತಿದ್ದರೆಂದರೆ ಆಕೆ ಎಂತಹ ಕೆಟ್ಟ ವ್ಯಕ್ತಿತ್ವದ ವ್ಯಕ್ತಿ ಎನ್ನುವುದನ್ನು ಅರ್ಥಮಾಡಿಕೊಳ್ಳಿ. ಬಹುಶ ಕಲಾಂ ಇದ್ದಿದ್ದರೆ ಈ ಬಾರಿ ಅವರೇ ರಾಷ್ಟ್ರಪತಿಯಾಗಿರುತ್ತಿದ್ದರೇನೋ? ಕಲಾಂರನ್ನು ಅಪಾರವಾಗಿ ಗೌರವಿಸುತ್ತಿದ್ದರು ಮೋದೀಜೀ. ಕಲಾಂ ಇರುತ್ತಿದ್ದರೆ ಮತ್ತೊಂದು ಅವಧಿಗೆ ಅವರಿಗೇ ರಾಷ್ಟ್ರಪತಿಯಾಗುವ ಅವಕಾಶ ಸಿಗುತ್ತಿತ್ತೇನೋ? ನಮ್ಮ ದೌರ್ಭಾಗ್ಯ ಕಲಾಂ ನಮ್ಮನ್ನೆಲ್ಲ ಬಿಟ್ಟು ಹೊರಟೇ ಹೋದರು. ಮರು ಜನ್ಮವೊಂದಿದ್ದರೆ ಈ ಭಾರತಾಂಬೆಯ ಮಡಿಲಲ್ಲೇ ಹುಟ್ಟಿ ಬರುವರು ಕಲಾಂ ಅಂತಹ ಅಪ್ಪಟ ದೇಶ ಭಕ್ತ ಅವರು. ತಾಯಿ ಭಾರತಿಯ ಹೆಮ್ಮೆಯ ಪುತ್ರ, ಜನತೆಯ ಪ್ರೀತಿಯ ಚಾಚಾ, ಭಾರತ ರತ್ನ ಅಬ್ದುಲ್ ಕಲಾಂ ನಿಮಗಿದೋ ಭಾರತೀಯರ ಸಲಾಂ… ಮತ್ತೆ ಭಾರತ ಮಾತೆಯ ಮಡಿಲಲ್ಲೇ ಹುಟ್ಟಿ ಬನ್ನಿ ಕಲಾಂ.

-Sharvari

Tags

Related Articles

Close