ಅಂಕಣಪ್ರಚಲಿತ

ವಂದೇಮಾತರಂ ಹಾಡು ರಚನೆಯಾಗಿದ್ದು ಹೇಗೆ? ಬಂಕಿಮರ ಜನುಮದಿನದಂದು ಭಾರತದ ಸರ್ವಶ್ರೇಷ್ಠ ಹಾಡಿನ ಬಗ್ಗೆ ತಿಳಿಯೋಣವೇ.!

ವಂದೇಮಾತರಂ… ಈ ಎರಡು ಶಬ್ಧಗಳ ಹಿಂದಿರುವ ಇತಿಹಾಸ ಹೇಳಲಸಾಧ್ಯವಾದಷ್ಟು. ಸ್ವಾತಂತ್ರ್ಯ ಹೋರಾಟದ ಧಿಕ್ಕಿನಿಂದ ಇಂದಿನವರೆಗೂ ಈ ಶಬ್ಧ ಅದೆಷ್ಟೋ ಕ್ರಾಂತಿಗಳನ್ನು ಹುಟ್ಟುಹಾಕಿದೆ. ತಾಯೇ ವಂದಿಸುವೆ ಎಂಬ ಈ ಎರಡು ಶಬ್ಧದಲ್ಲಿ ಇಡಿಯ ದೇಶವೇ ತಲ್ಲಣವಾಗಿದೆ. ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿಸಿದೆ. ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರರಿಂದ ಹಿಡಿದು ಪ್ರತಿಯೋರ್ವ ಸ್ವಾತಂತ್ರ್ಯ ಸೇನಾನಿಯೂ ತನ್ನ ಸ್ವಾತಂತ್ರ್ಯ ಜ್ಯೋತಿಯ ಬೆಳಕಿಗಾಗಿ ಘೋಷಿಸಿದ ಒಂದೇ ಒಂದು ಶಕ್ತಿಮಂತ್ರ ವಂದೇಮಾತರಂ. ಈ ಎರಡಕ್ಷರದ ಪದಕ್ಕೆ ಸೂರ್ಯ ಮುಳುಗದ ಸಾಮ್ರಾಜ್ಯ ಕೊಚ್ಚಿಹೋಗಿತ್ತು. ವಂದೇ ಮಾತರಂ ಮಂತ್ರ ಪ್ರತೀ ದೇಶಭಕ್ತನ ಹೃದಯದಲ್ಲಿ ಅಚ್ಚೊತ್ತಿತ್ತು. ಇಂದಿಗೂ ಕೂಡಾ ವಂದೇ ಮಾತರಂ ಅಜರಾಮರವಾಗಿ ಉಳಿದಿದೆ.

ಕೋಟ್ಯಾಂತರ ರಾಷ್ಟ್ರಭಕ್ತರ ನೆಚ್ಚಿನ ಮಂತ್ರ ವಂದೇಮಾತರಂ ಉದಯಿಸಿದ ಆ ಘಳಿಗೆಯೇ ಅದ್ಭುತ. ವಂದೇ ಮಾತರಂ ಗೀತೆ ರಚಿಸಿದ್ದು ಶ್ರೇಷ್ಠ ಕವಿ, ರಾಷ್ಟ್ರಭಕ್ತ ಕವಿ ಬಂಕಿಮಚಂದ್ರ ಚಟರ್ಜಿ. ಪ್ರತಿಭಾ ಸಂಪನ್ನರಾಗಿದ್ದ ಬಂಕಿಮಚಂದ್ರ ಚಟರ್ಜಿಯವರು ಮ್ಯಾಜಿಸ್ಟ್ರೇಟ್ ಆಗಿದ್ದರು. ವಿದ್ಯಾರ್ಥಿ ಜೀವನದಲ್ಲೇ ಕವಿಹೃದಯವನ್ನು ಹೊಂದಿದ್ದ ಬಂಕಿಮರು ತನ್ನ ಹೈಸ್ಕೂಲ್ ವಿದ್ಯಾಭ್ಯಾಸ ನಡೆಸುತ್ತಿರುವಾಗಲೇ ಲಲಿತಾ ಮತ್ತು ಮಾನಸಿ ಎಂಬ ಕವನಸಂಕಲನಗಳನ್ನು ಬರೆದು ಅರ್ಪಿಸಿದ್ದರು. ಅದಾಗಲೇ ಬಂಕಿಮ ಎಂಬ ಹೆಸರು ಬಂಗಾಳದಾದ್ಯಂತ ಪಸರಿತ್ತು. ಪರಿಸರ, ರಾಷ್ಟ್ರಭಕ್ತಿಯ ಬಗ್ಗೆ ಕವನಗಳನ್ನು ಬರೆಯುತ್ತಿದ್ದ ಬಂಕಿಮರನ್ನು ಕಂಡರೆ ಶಿಕ್ಷಕರಿಗೂ ಅಷ್ಟೇ ಪ್ರೀತಿ.

See the source image

ಅದೊಂದು ದಿನ ರಾಮಕೃಷ್ಣರು ಹಾಗೂ ಬಂಕಿಮಚಂದ್ರರ ಭೇಟಿ ಆಗುತ್ತೆ. ಈ ವೇಳೆ ರಾಮಕೃಷ್ಣರು ಬಂಕಿಮರ ಬಳಿ ಅವರ ಹೆಸರಿನ ಬಗ್ಗೆ ಕೇಳುತ್ತಾರೆ. “ಬಂಕಿಮ ಅಂದರೆ ಬಾಗಿದ ಎಂದು ಅರ್ಥ. ನೀನು ಬಂಕಿಮ ಆಗಿದ್ದು ಹೇಗೆ?” ಎಂಬ ಪ್ರಶ್ನೆಯನ್ನು ರಾಮಕೃಷ್ಣರು ಕೇಳುತ್ತಾರೆ. ಈ ವೇಳೆ ಬಂಕಿಮರು ನೀಡಿದ ಉತ್ತರ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚಿನ ಕ್ರಾಂತಿ ಹಾಗೂ ಅದರ ಪರಿಣಾಮವನ್ನು ಬಿಂಬಿಸಿತ್ತು. ರಾಮಕೃಷ್ಣರು ಕೇಳಿದ ಆ ಪ್ರಶ್ನೆಗೆ ಉತ್ತರಿಸಿದ ಬಂಕಿಮರು, “ಬ್ರಿಟಿಷರ ಬೂಟು ನನ್ನ ಬೆನ್ನನ್ನು ಭಾಗಿಸಿದೆ. ಅವರ ದಬ್ಬಾಳಿಕೆಯ ಪರಿಣಾಮವೇ ನನ್ನ ಹೆಸರು ಕೂಡಾ ಬಾಗಿದೆ, ಹೀಗಾಗಿ ಬಂಕಿಮನಾದೆ” ಎನ್ನುತ್ತಾರೆ.

ಕೊಲ್ಕತ್ತಾದಲ್ಲಿ ಕೆಲಸ ಮಾಡುತ್ತಿದ್ದ ಬಂಕಿಮರು ಅದೊಂದು ದಿನ ರಜೆ ತೆಗೆದುಕೊಂಡು ಕಾಂಡಲ್ಪಡ ಎಂಬ ತನ್ನ ಹಳ್ಳಿಗೆ ತೆರಳುತ್ತಾರೆ. ಹಳ್ಳಿಗೆ ತೆರಳಬೇಕಾದರೆ ರೈಲು ಹತ್ತಬೇಕಾಗಿತ್ತು. ಹೀಗೆ ರೈಲಿನಲ್ಲಿ ಕುಳಿತುಕೊಂಡು ಹೋಗುತ್ತಿರುವಾಗ ದಾರಿಯುದ್ದಕ್ಕೂ ಪರಿಸರವನ್ನು ಸೂಕ್ಷ್ಮವಾಗಿ ನೋಡುತ್ತಿದ್ದರು. ನಗರ ಪ್ರದೇಶದ ವಾತಾವರಣ ದೂರವಾಗಿ ಹಳ್ಳಿ ಸೊಗಡು ಕಣ್ಣಮುಂದೆ ಹಾದು ಹೋಗಲು ಆರಂಭವಾಗುತ್ತದೆ. ಅದು ಮಳೆಗಾಳದ ಸಮಯವಾಗಿದ್ದರಿಂದ ಹಳ್ಳಿಗಳು ಹಚ್ಚ ಹಸುರಿನಿಂದ ಕಂಗೊಳಿಸುತ್ತಿತ್ತು. ನದಿಗಳಲ್ಲಿ ನೀರುಗಳೆಲ್ಲಾ ತುಂಬಿ ಹರಿಯುತ್ತಿತ್ತು. ಹನಿ ಹನಿ ನೀರಿನ ತುಂತುರುಗಳು ಬಂಕಿಮರ ಮುಖಕ್ಕೆ ಅಪ್ಪಳಿಸುತ್ತಿತ್ತು. ಪ್ರಕೃತಿಯ ಈ ಸೊಬಗಿಗೆ ಬಂಕಿಮ ಚಂದ್ರರು ಮೈಮರೆದು ಹೋಗುತ್ತಾರೆ. ಮುಂದೆ ಸಾಗುತ್ತಲೇ ಬಂಕಿಮರಿಗೆ ಇಡಿಯ ಪ್ರಕೃತಿಯ ಸೊಬಗು ತಾಯಿ ಭಾರತಿಯ ಅವತಾರವೆಂಬಂತೆ ಕಾಣಿಸಿತ್ತು. ಈ ವೇಳೆ ಅವರ ಬಾಯಿಂದ ಹೊರಬಂದ ಐತಿಹಾಸಿಕ ಶಬ್ಧವೇ “ವಂದೇಮಾತರಂ”, ಅಂದರೆ ತಾಯೇ ವಂದಿಸುವೆ…

ಕೇರಳದಿಂದ ಹಿಮಾಲಯದವರೆಗೂ ಭಾರತಾಂಬೆಯ ಪ್ರಕೃತಿಯ ಸೊಬಗು ಬಂಕಿಮರ ಕಣ್ಣಮುಂದೆ ಬಂದು ನಿಲ್ಲಲು ಆರಂಭಿಸಿತ್ತು. ಬಂಕಿಮರು ತಾಯಿಯ ವರ್ಣನೆ ಮಾಡಲು ಆರಂಭಿಸಿದ್ದರು. ಸಸ್ಯ ಶ್ಯಾಮಲೆ ಎಂದು ಭಾರತಾಂಬೆಯನ್ನು ಕರೆದರು. ಸುಜಲಾಂ ಸುಫಲಾಂ ಮಾತರಂ ಎಂದು ಉದ್ಘೋಷಿಸಲು ಆರಂಭಿಸಿದರು. ಆದರೆ ಮತ್ತೆ ಭಾರತಮಾತೆಯ ಬಗ್ಗೆ ಬೇಸರ ತರಿಸುವ ಸನ್ನಿವೇಶಗಳು ಎದುರಾದವು. ಬ್ರಿಟಿಷರ ಹಿಡಿತದಲ್ಲಿ ಸಿಲುಕಿಕೊಂಡಿದ್ದ ಭಾರತಮಾತೆಯ ಬಗ್ಗೆ ಬೇಸರ ತರಿಸಿತ್ತು. “ತನಗೆ ಕೋಟಿ ಮಕ್ಕಳಿದ್ದರೂ ನಾನಿಂದು ಬಂಜೆಯಂತಿದ್ದೇನೆ” ಎನ್ನುವ ಭಾರತಮಾತೆಯ ಕಣ್ಣೀರು ಬಂಕಿಮರನ್ನು ಆವರಿಸಿತ್ತು. ಈ ವೇಳೆ ಬಂಕಿಮರು ಹೇಳುತ್ತಾರೆ, “ಅಮ್ಮ ಭಾರತಮಾತೆ, ನೀನು ಖಂಡಿತವಾಗಿಯೂ ಅಬಲೆ ಅಲ್ಲ. ನೀನು ಕೋಟಿ-ಕೋಟಿ ಕಂಠವುಳ್ಳ, ಕೋಟಿ-ಕೋಟಿ ಭುಜಗಳುಳ್ಳ, ಕೋಟಿ-ಕೋಟಿ ಕೈಗಳುಳ್ಳ ಮಹಾಶಕ್ತಿ ನೀನು. ಅಷ್ಟು ಮಾತ್ರವಲ್ಲ, ನೀನು ದುರ್ಗಾಮಾತೆ, ನೀನು ದಶಪ್ರಹರಣಧಾರಿನಿ. ಇಷ್ಟೆಲ್ಲಾ ಇರುವಾಗ ನೀನು ಹೇಗೆ ಅಬಲೆಯಾಗುತ್ತೀಯಾ” ಎಂದು ತನ್ನಲ್ಲೇ ಸ್ಮರಿಸುತ್ತಾ ತೆರಳಿದರು.

ನಂತರ ತನ್ನ ಹಳ್ಳಿಗೆ ಬಂದು ನೇರವಾಗಿ ಮನೆಯ ಕಡೆ ತೆರಳಿ ಊಟನೂ ಮಾಡದೆ ಮನೆಯ ಟೆರಿಸ್ ಮೇಲೆ ಹೋಗಿದ್ದರು. ಈ ವೇಳೆ ತನ್ನ ತಂಗಿಯ ಮಗ ಚಾಪೆ ಹಾಕುತ್ತಾನೆ. ಆ ಹುಡುಗನಿಗೆ ಒಂದು ಸ್ವಭಾವಿ ಇತ್ತು ಅದೇನೆಂದರೆ ತನ್ನ ಸೋದರ ಮಾವ ಬಂಕಿಮರು ಬಂದಾವಾಗ ಅವರ ಜೊತೆನೇ ಇದ್ದು ಒಂದು ಕಾಗದದ ಶೀಟ್ ಹಾಗೂ ಒಂದು ಪೆನ್ಸಿಲ್ ಇಟ್ಟುಕೊಂಡು ಕುಳಿತಿರುತ್ತಿದ್ದ. ಕವಿ ಹೃದಯಿ ತನ್ನ ಮಾವ ಯಾವ ಸಂದರ್ಭದಲ್ಲೂ ಕವನ ವಾಚಿಸಬಹುದು, ಹೀಗಾಗಿ ಅದನ್ನು ಬರೆದುಕೊಳ್ಳಬೇಕೆಂದೇ ತಾನು ತಯಾರಾಗಿರುತ್ತಿದ್ದ.

ಆ ದಿನ ಇಬ್ಬರೂ ಒಟ್ಟಾಗಿ ಮಲಗಿದ್ದರು. ಮಧ್ಯರಾತ್ರಿ ಅದೇನೋ ಶಬ್ಧ ಬಂತೆಂದು ಎಚ್ಚರವಾಗುವಾಗ ಬಂಕಿಮರು ಎದ್ದು ಕುಳಿತು ಬೆಳದಿಂಗಳ ಚಂದ್ರನನ್ನೇ ನೋಡುತ್ತಾ, ಕಣ್ಣಲ್ಲಿ ನೀರುರಿಸುತ್ತಾ ಮಂತ್ರಶ್ಲೋಕದಂತೆ ಏನೋ ಹೇಳುತ್ತಿದ್ದರು. ತಡಮಾಡದ ಬಂಕಿಮರ ಅಳಿಯ ಕೂಡಲೇ ಅವರು ಹೇಳುತ್ತಿದ್ದನ್ನು ಆ ಕಾಗದದ ಹಾಳೆಯಲ್ಲಿ ಬರೆದುಕೊಳ್ಳುತ್ತಾನೆ. ಮಾರನೇ ದಿನ ಬೆಳಗೆದ್ದು ತಾನು ಬರೆದ ಬಂಕಿಮರ ಸಾಲುಗಳನ್ನು ತನ್ನ ಮಾವನ ಬಳಿ ತೋರಿಸುತ್ತಾನೆ. ಅಂದು ಬಂಕಿಮರು ಮಧ್ಯರಾತ್ರಿ ಹೇಳಿದ ಆ ಸಾಲುಗಳೇ ಇಂದು ಕೋಟ್ಯಾಂತರ ರಾಷ್ಟ್ರಪ್ರೇಮಿಗಳ ಭಕ್ತಿಗೀತೆ ವಂದೇಮಾತರಂ.

ಮಧ್ಯರಾತ್ರಿ ತಾನು ಹೇಳಿದ್ದ ಆ ಸಾಲುಗಳನ್ನು ಮಾರನೇ ದಿನ ಬೆಳಿಗ್ಗೆ ತನ್ನ ಅಳಿಯನ ಹಸ್ತಾಕ್ಷರದಲ್ಲಿ ನೋಡಿದ ಬಂಕಿಮರು ತನ್ನ ಅಳಿಯನ ಬಳಿ, “ಈವರೆಗೆ ನಾನು ಬರೆದ ಆ ಎಲ್ಲಾ ಸಾಹಿತ್ಯವನ್ನು ಸಮುದ್ರಕ್ಕೆ ಎಸೆದುಬಿಡು, ಇದು ಒಂದು ಉಳಿದರೆ ಸಾಕು, ಜನರು ಇದರ ವೀಣಾಧ್ವನಿಗೆ ತಮ್ಮ ಹೃದಯವನ್ನು ಮುಡಿಪಾಗಿಡುತ್ತಾರೆ” ಎಂದು ಹೇಳುತ್ತಾರೆ. ಭಾರತ ಮಾತೆಯನ್ನು ಪೂಜಿಸುತ್ತಾ, ಭಾರತವನ್ನು ವರ್ಣನೆ ಮಾಡುತ್ತಾ, ಸ್ವಾತಂತ್ರ್ಯ ಸಿಂಹಗಳ ರಕ್ತವನ್ನು ಬಿಸಿ ಮಾಡಲು ಸಮರ್ಥ ಸಾಲುಗಳು ಅಂದೇ ಸಿದ್ಧಗೊಂಡಿತ್ತು.

1875ರಲ್ಲಿ ರಚಿಸಿದ ಈ ಹಾಡಿಗೆ ಅಂದು ಅಷ್ಟು ಮಹತ್ವ ಬರಲಿಲ್ಲ. ಆದರೆ ಬಂಕಿಮಚಂದ್ರರ ಕನಸು ಮಾತ್ರ ಕನಸಾಗಿಯೇ ಉಳಿದಿಲ್ಲ. ವಂದೇ ಮಾತರಂ ವಿಜ್ರಂಭಿಸಿತ್ತು. ವಂದೆ ಮಾತಾ, ಭಾರತ ಮಾತಾ, ಕಾಳಿಮಾತೆಯರನ್ನು ಒಟ್ಟಾಗಿ ಪೂಜಿಸಲು ಒಂದು ಮಂತ್ರ ಬೇಕಾಗಿತ್ತು. ಆ ಮಂತ್ರದ ರೂಪದಲ್ಲಿ ಕೆಲಸ ಮಾಡಿದ ಸಾಲುಗಳೇ ವಂದೇ ಮಾತರಂ. ಇಂದು ಈ ಸಾಲುಗಳು ಅದೆಷ್ಟೋ ಕೋಟಿ ಜನರ ಜೀವನಾಡಿ ಆಗಿದೆ. ರಾಜಕೀಯ ಕುತಂತ್ರದಿಂದ ಅನೇಕ ಬಾರಿ ಈ ಹಾಡನ್ನು ತಳ್ಳಿ ಹಾಕುವ ಯತ್ನ ನಡೆಸಲಾಗಿತ್ತು. ಲೋಕಸಭೆಯಲ್ಲಿ ಕೆಲವೇ ಕೆಲವು ಸದಸ್ಯರು ವಿರೋಧಿಸಿದರು ಎಂಬ ಕಾರಣಕ್ಕೆ ಪವಿತ್ರ ವಂದೇಮಾತರಂ ಗೀತೆಯ ಸಾಲುಗಳನ್ನೇ ಕತ್ತರಿಸಲಾಯಿತು. ಆದರೆ ಈಗ ಮತ್ತೆ ಈ ಹಾಡು ಮುನ್ನಲೆಗೆ ಬಂದಿದೆ. ಭಾರತವನ್ನು ದೇವಿಗೆ ಹೋಲಿಸುವ ಈ ಹಾಡು ರಾಷ್ಟ್ರಗೀತೆಯಾಗಿ ಬಿಂಬಿಸುತ್ತಿದೆ. ವಂದೇಮಾತರಂ ಅಜರಾಮರವಾಗಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
Close