ಪ್ರಚಲಿತ

ಭಗವದ್ಗೀತೆಯನ್ನು ಹೃದಯದಲ್ಲಿಟ್ಟು ಶ್ಲೋಕಗಳನ್ನು ನಾಲಿಗೆ ತುದಿಯಲ್ಲಿ ನಿರರ್ಗಳವಾಗಿ ಪಠಿಸುವ ಸಂಸ್ಕೃತ ಪಂಡಿತ ಡಾ. ಮುಹಮ್ಮದ್ ಹನೀಫ್ ಖಾನ್ ಶಾಸ್ತ್ರಿಯವರನ್ನು ನೋಡಿ ಹಿಂದೂಗಳು ಕಲಿಯಬೇಕು!!

ಡಾ.ಮುಹಮ್ಮದ್ ಹನೀಫ್ ಖಾನ್ “ಶಾಸ್ತ್ರಿ”? ಭಗವದ್ಗೀತೆ ಮತ್ತು ಮುಸಲ್ಮಾನ? ಒಬ್ಬ ಮುಸಲ್ಮಾನ ಸಂಸ್ಕೃತದ ಶಾಸ್ತ್ರಿ? ಇದು ಸಾಧ್ಯವೆ!! ಹೌದು ಖಂಡಿತ ಸಾಧ್ಯ. ಎಲ್ಲಾ ಮುಸ್ಲಿಮರೂ ಮೂಲಭೂತವಾದಿಗಳೇ ಆಗಿರಬೇಕು ಎಂದೇನಿಲ್ಲ. ನಮ್ಮಲ್ಲಿ ಧರ್ಮಭ್ರಷ್ಟರಾದ ಹಿಂದೂಗಳಿದ್ದಾರೆ, ದೇವರುಗಳ ಹೆಸರಿಟ್ಟುಕೊಂಡವರೂ ಭಗವದ್ಗೀತೆಯನ್ನು ಸುಡಬೇಕು , ರಾಮ-ಕೃಷ್ಣ ದೇವರೆ ಅಲ್ಲ ಎನ್ನುವವರೂ ಇದ್ದಾರೆ. ಇಂತಹ “ಎಡ”ಬಿಡಂಗಿಗಳು ಡಾ. ಮುಹಮ್ಮದ್ ಹನೀಫ್ ಖಾನ್ ಶಾಸ್ತ್ರಿಯವರನ್ನು ನೋಡಿ ಕಲಿಯಬೇಕು. ಒಬ್ಬ ಅಪ್ಪಟ ಸನಾತನಿ ಕೂಡಾ ಭಗವದ್ಗೀತೆಯ ಶ್ಲೋಕಗಳನ್ನು ಇಷ್ಟು ನಿರರ್ಗಳವಾಗಿ ಪಠಿಸಲು ಸಾಧ್ಯವಿಲ್ಲ ಅಂತಹದರಲ್ಲಿ ಒಬ್ಬ ಅಪ್ಪಟ ಮುಸಲ್ಮಾನ ಭಗವದ್ಗೀತೆಯನ್ನು ಕಂಠ ಪಾಠ ಮಾಡಿದ್ದಲ್ಲದೆ, ತನ್ನ ಸಮುದಾಯದವರಿಗೆ ಅದರ ಮಹತ್ವ ತಿಳಿಸಿಕೊಡುತ್ತಿದ್ದಾರಲ್ಲ, ಅವರಿಗೊಂದು ದೀರ್ಘದಂಡ ನಮಸ್ಕಾರ.

ಮೊಹಮ್ಮದ್ ಹನೀಫ್ ಖಾನ್ ಶಾಸ್ತ್ರಿ ಅವರು ಭಾರತೀಯ ಸಂಸ್ಕೃತ ವಿದ್ವಾಂಸ. ಇವರಿಗೆ 2009 ರಲ್ಲಿ ‘ನ್ಯಾಷನಲ್ ಕಮ್ಯುನಲ್ ಹಾರ್ಮನಿ’ ಪ್ರಶಸ್ತಿ ಕೂಡಾ ಲಭಿಸಿದೆ. ಶಾಸ್ತ್ರಿ ಅವರು ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದಲ್ಲಿ ಪ್ರೊಫೆಸರ್ ಕೂಡಾ ಆಗಿದ್ದರು. ‘ಖಾನ್ ಶಾಸ್ತ್ರಿ’ ಎಂದು ಚಿರಪರಿಚಿತ ಹನೀಫ್ ಅವರು ಉತ್ತರಪ್ರದೇಶದಲ್ಲಿ ಜನಿಸಿದವರು. ಐದನೆ ತರಗತಿಯಲ್ಲಿ ಅನುತ್ತೀರ್ಣರಾದಾಗ ಅವರ ಶಿಕ್ಷಕರಾದ ಪಂಡಿತ್ ರತನ್ ಲಾಲ್ ಶಾಸ್ತ್ರಿ ಅವರು ಭಗವದ್ಗೀತೆಯ ಒಂದು ಅಧ್ಯಾಯವನ್ನು ಓದಲು ಹೇಳಿದ್ದರು. ಗೀತೆ ಅವರನ್ನು ಎಷ್ಟು ಆಕರ್ಷಿಸಿತೆಂದರೆ ಮುಂದೆ ಅವರು ಗೀತೆಯನ್ನು ಕಂಠ ಪಾಠ ಮಾಡಿದರಲ್ಲದೆ, ಅದರ ತಿರುಳನ್ನು ಅರ್ಥಮಾಡಿಕೊಂಡು ಇನ್ನಿತರರಿಗೂ ಅದರ ಸವಿಯನ್ನು ಹಂಚಿದರು.

ಖಾನ್ ಶಾಸ್ತ್ರಿ ಸಂಸ್ಕೃತದಲ್ಲಿ ಎಮ್ಎ ಯನ್ನು ಹೊಂದಿದ್ದು, ತರುವಾಯ ವಾರಣಾಸಿಯ ಸಂಪೂರ್ಣ ಆನಂದ್ ನಲ್ಲಿ ಪುರಾಣಗಳನ್ನು ಅಧ್ಯಯನ ಮಾಡಿದರು ಹಾಗೂ ಆಚಾರ್ಯ ಮತ್ತು ಶಾಸ್ತ್ರಿ ಪದವಿಯನ್ನು ಪಡೆದರು. ಖಾನ್ ಶಾಸ್ತ್ರಿ ಅವರು ‘ತುಲನಾತ್ಮಕ ಧರ್ಮದ’ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಭಗವದ್ಗೀತೆ ಮತ್ತು ಕುರಾನಿನಲ್ಲಿರುವ ಸಾಮ್ಯತೆಗಳ ಬಗ್ಗೆ ಅವರು ಗ್ರಂಥವನ್ನು ಬರೆದಿದ್ದಾರೆ ಮಾತ್ರವಲ್ಲ ಜನರಿಗೆ ಅದನ್ನು ಬೋಧಿಸುತ್ತಾರೆ ಕೂಡಾ. ಎಲ್ಲಾ ಉಪನಿಷತ್ತುಗಳ ಸಾರವನ್ನು ದ್ವಾಪರಯುಗದಲ್ಲಿ ಒಂದು ಪುಟ್ಟ ಭಗವದ್ಗೀತೆಯಲ್ಲಿ ಆ ಕೃಷ್ಣ ಪರಮಾತ್ಮ ತುಂಬಿದ್ದಾನೆ ಎನ್ನುತ್ತಾರೆ ಖಾನ್ ಶಾಸ್ತ್ರಿ. ಶಾಸ್ತ್ರಿ ಎನ್ನುವುದು ನನ್ನ ಡಿಗ್ರಿ ಮಾತ್ರವಲ್ಲ ಇದು “ಭಾರತೀಯತೆಯ” ಗುರುತು ಎನ್ನುತ್ತಾರೆ.

ಅಫಘಾನಿಸ್ತಾನದಲ್ಲಿ ತಾಲಿಬಾನಿಗಳು ಇವರನ್ನು ಬಂಧಿಯಾಗಿಸಿದ್ದಾಗ ಇವರ ಶಾಸ್ತ್ರಿ ಉಪನಾಮವನ್ನು ಕೇಳಿ ಯಾಕೆ ಶಾಸ್ತ್ರಿ ಹೆಸರನ್ನಿಟ್ಟುಕೊಂಡಿದ್ದೀರಿ ಎಂದಾಗ ಒಂದು ಕೋಟಿ ಮೊಹಮ್ಮದ್ ಹನೀಫ್ ಖಾನ್ ರನ್ನು ಕರೆಸಿಕೊಳ್ಳಿ ನಿಮಗೆ ಆತ ಯಾವ ದೇಶದವನೆಂದು ಗೊತ್ತೆ ಆಗುವುದಿಲ್ಲ ಆದರೆ ಮೊಹಮ್ಮದ್ ಹನೀಫ್ ಖಾನ್ ಶಾಸ್ತ್ರಿ ಎಂದರೆ ಸಾಕು ಆತ “ಭಾರತೀಯನಾಗಿದ್ದಾನೆ” ಎನ್ನುವುದು ನಿಮಗೆ ಥಟ್ಟನೆ ತಿಳಿಯುತ್ತದೆ ಎಂದು ಉತ್ತರ ನೀಡುತ್ತಾರೆ. ಅಬ್ಬ! ಎಂತಹ ದೇಶ ಪ್ರೇಮ!! ತಾಲಿಬಾನಿಗಳಂತ ಮತಾಂಧರಿಗೆ ತಾನು ಭಾರತೀಯ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟ ಖಾನ್ ಶಾಸ್ತ್ರಿ ಅವರಿಗೆ ಹೃದಯದಿಂದ ಧನ್ಯವಾದ.

ಹಿಂದುತ್ವದ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾ ಖಾನ್ ಶಾಸ್ತ್ರಿ ಹೇಳುತ್ತಾರೆ ಏನೆಂದರೆ, ಹಿಂದುತ್ವ ಎನ್ನುವುದು ಧರ್ಮದ ಹೆಸರಲ್ಲ ಬದಲಾಗಿ ಇದು ಭಾರತೀಯ ಸಂಸ್ಕೃತಿ ಆಗಿದೆ. ಎಲ್ಲರನ್ನೂ ಸಮನ್ವಯಾತ್ಮಕ ದೃಷ್ಟಿಯಿಂದ ನೋಡುವ ಸಂಸ್ಕೃತಿಯಿದು. ಎಲ್ಲರನ್ನೂ ಒಂದೇ ರೀತಿಯಾಗಿ ನೋಡುವ ಈ ಸಂಸ್ಕೃತಿಯಿಂದ ಸಾರ್ವಭೌಮಿಕತೆಯ ಅನುಭವವಾಗುತ್ತದೆ ಎನ್ನುವುದು ನನ್ನ ವೈಯಕ್ತಿತ ಅಭಿಪ್ರಾಯ ಎನ್ನುತ್ತಾರೆ ಖಾನ್ ಶಾಸ್ತ್ರಿ. “ಭಗವದ್ಗೀತೆ ವೈಶ್ವಿಕ ಸಂಪತ್ತು”, ಅಂದರೆ ವಿಶ್ವದ ಸಂಪತ್ತು ಭಗವದ್ಗೀತೆ ಆದರೆ ಭಾರತದಲ್ಲಿ 95% ಜನರು ಭಗವದ್ಗೀತೆಯನ್ನು ಓದುವ ಅಭ್ಯಾಸವನ್ನು ಹೊಂದಿಲ್ಲ. ಹಾಗಾದರೆ ಯಾವ ಆಧಾರದ ಮೇಲೆ ನಾವು ನಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುವುದು? ಎಂದು ಪ್ರಶ್ನೆ ಕೇಳುತ್ತಾರೆ.

ನಮ್ಮ ಸಂಸ್ಕೃತಿ- ಸಭ್ಯತೆಯ, ಅಧ್ಯಾತ್ಮಿಕ ಚೇತನಗಳ ಬಗ್ಗೆ ನಮಗೇ ಅರಿವಿಲ್ಲ. ಭಗವದ್ಗೀತೆ ಸಾರ್ವಕಾಲಿಕ ಮತ್ತು ಸಾರ್ವಭೌಮಿಕ ಗ್ರಂಥ, ಇಸ್ಲಾಂ ಇದರ ಮರುಪರಿಶೀಲನೆ ಅಷ್ಟೆ. ಇಸ್ಲಾಮಿನಲ್ಲಿರುವ ಒಂದೊಂದು ವಿಷಯಗಳೂ ಭಗವದ್ಗೀತೆಯ ಮರುಪರಿಶೀಲನೆ ಆಗಿದೆ. ಇಸ್ಲಾಮಿನ ನಮಾಜ್ ಬಗ್ಗೆ ಭಗವದ್ಗೀತೆಯಲ್ಲಿ ಮೊದಲೆ ಹೇಳಲಾಗಿದೆ ಎನ್ನುತ್ತಾ ಭಗವದ್ಗೀತೆಯೇ ಕುರಾನಿನ ಜನನಿ ಎನ್ನುವ ಕಟು ಸತ್ಯವನ್ನು ಜಗತ್ತಿನ ಮುಂದೆ ತೆರೆದಿಡುತ್ತಾರೆ ಖಾನ್ ಶಾಸ್ತ್ರಿ ಅವರು. ಭಾರತೀಯ ಸನಾತನ ಸಂಸ್ಕೃತಿ ಪ್ರತಿಭೆ ಇದ್ದವರನ್ನು ಎತ್ತಿ ಹಿಡಿಯಿರಿ ಅವರಿಗೆ ಅವಕಾಶ ಕೊಟ್ಟು ಮುಂದೆ ತನ್ನಿ ಎನ್ನುತ್ತದೆ, ಹಾಗೆಯೆ ನನ್ನಂತಹ ಮುಸಲ್ಮಾನನಲ್ಲಿ ಪ್ರತಿಭೆ ಉಂಟೆಂದು ಗೊತ್ತಾದಾಗ ನನ್ನ ಹಿಂದೂ ಸಹೋದರರೆ ನನಗೆ ವಿದ್ಯಾದಾನ ಮಾಡಿದ್ದಲ್ಲದೆ ನನಗಾಗಿ ಚಂದಾ ಕೂಡಾ ಎತ್ತಿದ್ದರು ಎಂದು ಹಿಂದೂಗಳ ಸಹೃದಯತೆಯ ಪರಿಚಯ ಮಾಡಿಕೊಡುತ್ತಾರೆ ಖಾನ್ ಶಾಸ್ತ್ರಿ.

ಭಾರತವನ್ನು, ಸನಾತನ ಸಂಸ್ಕೃತಿಯನ್ನು ಪ್ರೀತಿಸುವ ಖಾನ್ ಶಾಸ್ತ್ರಿ ಅವರನ್ನು ಭಾರತ ಮತ್ತು ಸನಾತನಿಗಳೂ ಪ್ರೀತಿಸುತ್ತಾರೆ. ಸನಾತನ ಧರ್ಮದಲ್ಲಿ ಹುಟ್ಟಿದಕ್ಕೆ ಹೆಮ್ಮೆ ಪಡಿ. ಭಾರತದಲ್ಲಿ ಹಲವಾರು ಮುಸಲ್ಮಾನರು ಸನಾತನವನ್ನು ಅದಮ್ಯವಾಗಿ ಪ್ರೀತಿಸುತ್ತಾರೆ ಆದರೆ ಸನಾತನ ಧರ್ಮದಲ್ಲೆ ಹುಟ್ಟಿದವರು ಧರ್ಮದ ಮಾನ ಕಳೆಯುತ್ತಾರೆ ಎಂತಹ ವಿಪರ್ಯಾಸವಿದು? ಸನಾತನವನ್ನು ಅರ್ಥಮಾಡಿಕೊಂಡವರು ಯಾವತ್ತೂ ಧರ್ಮದ ಬಗ್ಗೆ ಕೀಳಾಗಿ ಮಾತನಾಡಲಾರರು. ನೆನಪಿಡಿ ಸನಾತನವೊಂದೆ ಧರ್ಮ, ಉಳಿದದ್ದೆಲ್ಲವೂ ಮತಗಳು. ಸನಾತನವೆ ಸತ್ಯ, ಮತಗಳೆಲ್ಲವೂ ಮಿಥ್ಯ….

-ಶಾರ್ವರಿ

Tags

Related Articles

Close