ಅಂಕಣ

ತಮಿಳುನಾಡಿನ ಚಿದಂಬರಂ ಮಂದಿರದಲ್ಲಿ ಪೃಥ್ವಿಯ ವಿದ್ಯುತ್ಕಾಂತೀಯ ಭೂಮಧ್ಯ ರೇಖೆಯ ಕೇಂದ್ರ ಬಿಂದುವಿರುವುದು ವಿಜ್ಞಾನಿಗಳಿಗೂ ಅರ್ಥವಾಗದ ಆಶ್ಚರ್ಯ ಜನಕ ವಿಚಾರ!

ಭೂಮಿಯ ವಿದ್ಯುತ್ಕಾಂತೀಯ ಕ್ಷೇತ್ರವು ಅಗಾಧವಾದ ಅಯಸ್ಕಾಂತದ ತುಂಡನ್ನು ಹೋಲುತ್ತದೆ. ಈ ವಿದ್ಯುತ್ಕಾಂತೀಯ ರೇಖೆಗಳು ಭೂಮಿಯ ದಕ್ಷಿಣ ಭಾಗದಿಂದ ಹೊರಹೊಮ್ಮುತ್ತವೆ ಮತ್ತು ಉತ್ತರದ ಅರ್ಧಭಾಗದಲ್ಲಿ ಮತ್ತೆ ಪ್ರವೇಶಿಸುತ್ತವೆ. ಭೂಮಿಯ ಈ ಕಾಂತಕ್ಷೇತ್ರದ ಹಲವು ವೈಶಿಷ್ಟ್ಯಗಳು ಪ್ರಪಂಚದ ಮೇಲ್ಮೈಯಲ್ಲಿ ಒಂದು ನಿರೀಕ್ಷಿತ ರೀತಿಯಲ್ಲಿ ಬದಲಾಗುತ್ತವೆ ಮತ್ತು ಭೌಗೋಳಿಕ ಸ್ಥಾನಮಾನವನ್ನು ನಿರ್ಣಯಿಸುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತವೆ. ಭೂಮಿಯ ಮೇಲಿನ ಪ್ರತಿಯೊಂದು ಸ್ಥಳದಲ್ಲಿ, ಕ್ಷೇತ್ರದ ರೇಖೆಗಳು ಭೂಮಿಯ ಮೇಲ್ಮೈಯನ್ನು ಒಂದು ನಿರ್ದಿಷ್ಟ ಕೋನದ ಇಳಿಜಾರಿನಲ್ಲಿ ಛೇದಿಸುತ್ತವೆ. ಸಮಭಾಜಕ ವೃತ್ತದ ಬಳಿ, ಕಾಂತಕ್ಷೇತ್ರದ ರೇಖೆಗಳು ಭೂಮಿಯ ಮೇಲ್ಮೈಗೆ ಸಮಾನಾಂತರವಾಗಿರುತ್ತದೆ ಮತ್ತು ಈ ಪ್ರದೇಶದಲ್ಲಿ ಇಳಿಜಾರು ಕೋನವನ್ನು 0 ° ಎಂದು ಹೇಳಲಾಗುತ್ತದೆ.

ನಮ್ಮ ಸನಾತನ ಸಂಸ್ಕೃತಿಯಲ್ಲಿ ಈ ಎಲ್ಲಾ ವಿಷಯಗಳನ್ನು ಸಹಸ್ರ ಸಹಸ್ರ ವರ್ಷಗಳ ಹಿಂದೆಯೆ ಕಂಡುಹಿಡಿಯಲಾಗಿದೆ ಎಂದರೆ ಆಶ್ಚರ್ಯವಾಗುತ್ತದೆ! ತಮಿಳುನಾಡಿನಲ್ಲಿ ನಟರಾಜನಿಗೆ ಅರ್ಪಿತ ಚಿದಂಬರಂ ಮಂದಿರವಿದೆ. ವಿಜ್ಞಾನಿಗಳ ಪ್ರಕಾರ ಈ ಮಂದಿರ ಕರಾರುವಕ್ಕಾಗಿ ಪೃಥ್ವಿಯ ವಿದ್ಯುತ್ಕಾಂತೀಯ ಭೂಮಧ್ಯ ರೇಖೆಯ ಕೇಂದ್ರ ಬಿಂದುವಿನಲ್ಲಿ ನಿರ್ಮಿಸಲಾಗಿದೆ! ಈಗ ಕೌತಕದ ವಿಚಾರ ಎಂದರೆ ಸಹಸ್ರಾರು ವರ್ಶಗಳ ಹಿಂದೆ ಈ ಜಾಗದಲ್ಲಿ ಭೂಮಿಯ ವಿದ್ಯುತ್ಕಾಂತೀಯ ಭೂಮಧ್ಯ ರೇಖೆಯ ಕೇಂದ್ರ ಬಿಂದು ಉಂಟೆದು ಕಂಡುಹಿಡಿದದ್ದು ಯಾರು ಮತ್ತು ಹೇಗೆ?

ಪಂಚ ಭೂತ ಸ್ಥಳ ಮಂದಿರಗಳಲ್ಲಿ ಒಂದಾದ ತಿಲ್ಲೈ ನಟರಾಜ ಕೋವಿಲ್ ಮಂದಿರ ತಮಿಳುನಾಡಿನ ಚಿದಂಬರಂನಲ್ಲಿದೆ. ಈ ಮಂದಿರದಲ್ಲಿ ನಟರಾಜನ ಮೂರ್ತಿಯಿದೆ. ಈ ಮೂರ್ತಿಯ ಕಾಲಿನ ಅಂಗುಷ್ಟದ ಕೆಳಗೆ ಭೂಮಿಯ ಕಾಂತಕ್ಷೇತ್ರದ ಕೇಂದ್ರ ಬಿಂದು ಇದೆ ಎಂದು ಹೇಳಲಾಗುತ್ತದೆ. ಇದು ಕೇವಲ ಕಾಕತಾಳೀಯವೋ ಇಲ್ಲ ಆಧುನಿಕ ವಿಜ್ಞಾನಕ್ಕೂ ನಿಲುಕದ ಭಗವಂತನ ಲೀಲೆಯೋ ಒಂದೂ ಗೊತ್ತಿಲ್ಲ. ಪಂಚ ಭೂತ ಸ್ಥಳಗಳಲ್ಲಿ ನಿರ್ಮಿಸಿದ ಐದು ಶಿವ ಮಂದಿರಗಳಲ್ಲಿ ಆಕಾಶ ತತ್ವವನ್ನು ಪ್ರತಿನಿಧಿಸುವುದು ಚಿದಂಬರಂನ ಮಂದಿರ. ಇಲ್ಲಿ ಶಿವನನ್ನು ಶೂನ್ಯರೂಪದಲ್ಲಿ ಪೂಜಿಸಲಾಗುತ್ತದೆ. ಚಿದಂಬರಂ ಮಂದಿರ ನಿರ್ಮಾಣವಾದ ಜಾಗದಲ್ಲಿ ಭೂಮಿಯ ವಿದ್ಯುತೀಯ ಧಾರೆಗಳು ಮತ್ತು ಚುಂಬಕೀಯ ಶಕ್ತಿ ಅತೀ ಹೆಚ್ಚಾಗಿದೆ.

ಪುರಾಣಗಳಲ್ಲಿ ವಿಷ್ಣುವಿನ ನಾಭಿಯನ್ನು ನಮ್ಮ ಆಕಾಶಗಂಗೆಯ ಕೇಂದ್ರ ಬಿಂದು ಎನ್ನಲಾಗಿದೆ. ಬ್ರಹ್ಮನು ವಿಷ್ಣು ನಾಭಿಯಿಂದ ಜನಿಸಿ ಪ್ರಪಂಚದಲ್ಲಿ ಸೃಷ್ಟಿ ಕಾರ್ಯವನ್ನು ನೆರವೇರಿಸಿದನು ಎಂದು ಪುರಾಣಗಳು ಉಲ್ಲೇಖಿಸುತ್ತವೆ. ಕೈಲಾಶ ಪರ್ವತ ಭೂಮಿಯ “ಅಕ್ಷ ಮುಂಡಿಯ” ಮೇಲಿದೆ ಮತ್ತು ಇಲ್ಲಿ ಶಿವನ ವಾಸವಿದೆ ಎಂದು ಇಂದಿಗೂ ನಂಬಲಾಗಿದೆ. ಈ ಎಲ್ಲಾ ನಂಬಿಕೆಗಳ ಹಿಂದೆ ವೈಜ್ಞಾನಿಕವಾದ ಕಾರಣಗಳು ಇದ್ದೆ ಇವೆ. ಚಿಂದಬರಂ ಮಂದಿರವನ್ನು ಆಕಾಶ ತತ್ವವನ್ನು ಪ್ರತಿನಿಧಿಸುತ್ತಾ ವಿದ್ಯುತ್ಕಾಂತೀಯ ಕೇಂದ್ರ ಬಿಂದುವಿನಲ್ಲಿ ನಿರ್ಮಿಸಿರುವುದರ ಹಿಂದೆ ಯಾವುದೋ ಬಲವಾದ ಕಾರಣ ಇದ್ದೆ ಇದೆ. ಹುಲು ಮಾನವರಾದ ನಮಗೆ ಅದರ ಮರ್ಮ ತಿಳಿಯುತ್ತಿಲ್ಲ ಅಷ್ಟೆ.

ಈ ಮಂದಿರದ ವಾಸ್ತುಕಲೆಯೂ ಬಹಳ ವಿಚಿತ್ರವಾಗಿದೆ. ಮಂದಿರದಲ್ಲಿ 64 ಕಲಾ ಪ್ರಕಾರಗಳನ್ನು ಪ್ರತಿನಿಧಿಸುವ ಕಿರಣಗಳು, ಮನುಷ್ಯನ ಹೃದಯದ ಬಡಿತ, ನಾಡಿ (72)ಗಳು ಮತ್ತು ಒಂದು ದಿನದಲ್ಲಿ ಮಾನವ ತೆಗೆದುಗೊಳ್ಳುವ ಶ್ವಾಸ (21,600) ದ ಲೆಕ್ಕಗಳನ್ನು ಪ್ರತಿನಿಧಿಸುವಂತೆ ಗೋಪುರ, ಹಂಚು, ಮತ್ತು ಮೊಳೆಗಳನ್ನು ಹೊಡೆಯಲಾಗಿದೆ! ನವ ಶಕ್ತಿಗಳನ್ನು ಪ್ರತಿನಿಧಿಸಲು ಗೋಪುರದ ಮೇಲೆ ಒಂಭತ್ತು ಕಲಶಗಳನ್ನು ಇಡಲಾಗಿದೆ. ಪ್ರತಿ ಹಂಚಿನ ಮೇಲೂ “ಶಿವಾಯ ನಮಃ” ಎಂದು ಬರೆಯಲಾಗಿದೆ. ಇವೆಲ್ಲವನ್ನೂ ಸೂಕ್ಷವಾಗಿ ಅವಲೋಕಿಸಿದಾಗ ಈ ಮಂದಿರಕ್ಕೂ ಮನುಷ್ಯನ ಶರೀರಕ್ಕೂ ಭೂಮಿ ಮತ್ತು ಆಕಾಶಗಳ ಶಕ್ತಿಗೂ ಯಾವುದೋ ಸಂಬಂಧ ಇದೆ ಎಂದು ಅನಿಸುವುದು. ಹಿಂದಿನ ಕಾಲದ ಜನರು ವಿಜ್ಞಾನಕ್ಕಿಂತ ದೇವತೆಗಳ ಪವಾಡಗಳಲ್ಲಿ ಹೆಚ್ಚು ನಂಬಿಕೆ ಇಟ್ಟಿದ್ದರಿಂದ ಇಂತಹ ಅತಿ ಮಹತ್ವದ ಜಾಗಗಳಲ್ಲಿ ಮಂದಿರಗಳನ್ನು ಕಟ್ಟಿದ್ದಿರಬಹುದು.

ಈಗಿನ ಕಾಲದ ಜನರು ದೇವರು ದಿಂಡಿರುಗಳನ್ನು ನಂಬುವುದಕ್ಕಿಂತ ಹೆಚ್ಚಾಗಿ ವಿಜ್ಞಾನವನ್ನು ನಂಬುತ್ತಾರೆ. ಸಹಸ್ರಾರು ವರ್ಷಗಳ ಹಿಂದೆ ನಿರ್ಮಿಸಲಾದ ಭಾರತದ ಮಂದಿರಗಳ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎಂಬುದನ್ನು ಇಂದಿನ ಆಧುನಿಕ ಜಗತ್ತೆ ಒಪ್ಪಿಕೊಳ್ಳುತ್ತಿದೆ. ಸನಾತನ ಪರಂಪರೆಯ ಮೇಲೆ ಮತ್ತಷ್ಟು ನಂಬಿಕೆ ಇಡಲು ಇಂತಹ ಘಟನೆಗಳೆ ಕಾರಣವಾಗುತ್ತವೆ ಎನ್ನುವುದು ಸಂತೋಷದ ವಿಚಾರ. ಜಗತ್ತಿನ ಮಹಾ ವಿಜ್ಞಾನಿಗಳೂ ಕೂಡಾ ಭಾರತದ ವೇದ-ಪುರಾಣಗಳು ವೈಜ್ಞಾನಿಕ ಸತ್ಯಗಳು ಎನ್ನುವುದನ್ನು ಒಪ್ಪಿಕೊಳ್ಳುತ್ತಿವೆ. ಶಂಖದಿಂದ ಬಂದರೆನೆ ತೀರ್ಥ ಎನ್ನುವ ಪಾಶ್ಚಾತ್ಯ ಗುಲಾಮಗಿರಿಯ ಮನಸ್ಥಿತಿಯ ಹಲವರು ಅನಿವಾರ್ಯವಾಗಿಯಾದರೂ ವೇದ-ಪುರಾಣಗಳು ನಮ್ಮ ಪೂರ್ವಜರು ತಮ್ಮ ಬುದ್ದಿಮತ್ತೆಯಿಂದ ಕಂಡುಕೊಂಡ ವೈಜ್ಞಾನಿಕ ಸತ್ಯಗಳು ಎಂದು ನಂಬುವಂತಾದರೆ ಸಾಕು.

-ಶಾರ್ವರಿ

Tags

Related Articles

Close