ಪ್ರಚಲಿತ

ಇಬ್ಬರ ಜಗಳದಲ್ಲಿ ಗಢಗಢ ನಡುಗಿದ ಮೈತ್ರಿ ಸರ್ಕಾರ! ಪವರ್ ಸ್ಟಾರ್ ಗಳ ಪವರ್ ಪಾಲಿಟಿಕ್ಸ್..! ಬೀಳುತ್ತಿದೆ ಮೈತ್ರಿ ಸರ್ಕಾರದ ಒಂದೊಂದೇ ಮೆಟ್ಟಿಲು!

ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರ ಧಕ್ಕಬಾರದು ಎಂಬ ಉದ್ಧೇಶವನ್ನು ಇಟ್ಟುಕೊಂಡು ತರಾತುರಿಯಲ್ಲಿ ಜನತಾ ದಳದೊಂದಿಗೆ ಮೈತ್ರಿ ಸರ್ಕಾರವನ್ನು ನಡೆಸಿಬಿಟ್ಟಿದ್ದರು ಕಾಂಗ್ರೆಸ್ ನಾಯಕರು. ಆದರೆ ಅಂದಿನಿಂದ ಇಂದಿನವರೆಗೂ ಈ ಮೈತ್ರಿ ಸರ್ಕಾರದಲ್ಲಿ ಒಂದಲ್ಲಾ ಒಂದು ಕಾರಣದಿಂದ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಜನತಾ ದಳ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಗುದ್ದಾಟದಿಂದಲೇ ದಿನ ನಿತ್ಯ ಕಾಲ ಕಳೆಯುತ್ತಿದೆ.

ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಶ್ರಮದಿಂದಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ಕನಸು ಸಫಲವಾಯಿತು ಅನ್ನೋದಕ್ಕೆ ಮತ್ತಷ್ಟು ಉದಾಹರಣೆಗಳು ಬೇಕಾಗಿಲ್ಲ. ಆದರೆ ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಕಡೆಗಣಿಸಿತ್ತು. ಸ್ವಪಕ್ಷದ ನೀತಿಯಿಂದಲೇ ಡಿಕೆ ಶಿವಕುಮಾರ್ ಮೂಲೆಗುಂಪಾಗಿದ್ದರು.

ಇದರ ಮಧ್ಯೆ ಬದ್ಧ ವೈರಿ ಜನತಾ ದಳದ ನಾಯಕ ಹಾಗೂ ಸಚಿವ ಹೆಚ್.ಡಿ.ರೇವಣ್ಣ ಡಿಕೆಶಿ ಮೇಲೆ ತಮ್ಮ ಅಧಿಕಾರದ ಅಸ್ತ್ರವನ್ನೇ ಪ್ರಯೋಗಿಸುತ್ತಿದ್ದಾರೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಅವರು ನಿಯೋಜಿಸಿದ್ದ ಬರೋಬ್ಬರಿ 50ಕ್ಕಿಂತಲೂ ಅಧಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ನೀಡಿದ್ದರು.

ಇದು ಡಿಕೆಶಿ ಸಹಿತ ಕಾಂಗ್ರೆಸ್ ಪಕ್ಷಕ್ಕೆ ಸಿಟ್ಟು ನೆತ್ತಿಗೇರುವಂತೆ ಮಾಡಿತ್ತು. ಈ ಬಗ್ಗೆ ಡಿಕೆ ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ರೇವಣ್ಣಗೆ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಆದರೆ ಇದೀಗ ಈ ಉಭಯ ನಾಯಕರ ಆರೋಪಗಳಿಗೆ ಸ್ವತಃ ರೇವಣ್ಣ ಗರಂ ಆಗಿದ್ದಾರೆ. “ನನ್ನ ಮೇಲೆ ವೃಥಾ ಆರೋಪ ಹೊರಿಸುವುದು ಸರಿಯಲ್ಲ. ಯಾರನ್ನು ಯಾವ ಸಮಯದಲ್ಲಿ ಎಲ್ಲಿಗೆ ವರ್ಗಾವಣೆ ಮಾಡಬೇಕು ಎಂದು ನನಗೆ ತಿಳಿದಿದೆ. ಇದರ ಬಗ್ಗೆ ಆಕ್ಷೇಪಣಗಳಿದ್ದರೆ ನನ್ನನ್ನೇ ನೇರವಾಗಿ ಉಪಮುಖ್ಯಮಂತ್ರಿಗಳು ಕೇಳಲಿ. ಉತ್ತರಿಸುತ್ತೇನೆ. ಮುಖಾಮುಖಿಯಾಗಿ ಮಾತನಾಡಲಿ. ಅದು ಬಿಟ್ಟು ಪರೋಕ್ಷವಾಗಿ ಟಾಂಗ್ ಕೊಡುವ ಬುದ್ಧಿಯನ್ನು ಬಿಟ್ಟು ಬಿಡಲಿ” ಎಂದು ರೇವಣ್ಣ ಖಡಕ್ ಆಗಿ ಹೇಳಿದ್ದಾರೆ.

“ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವರ್ಗಾವಣೆ ಮಾಡಿಸಿದ್ದೇನೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಸುಮ್ಮನೆ ಅಪಪ್ರಚಾರ ಸಹಿಸಲ್ಲ” ಎಂದು ಕೆಂಡ ಕಾರಿದ್ದಾರೆ. ಹಿಂದಿನಿಂದಲೂ ರೇವಣ್ಣ ಹಾಗೂ ಡಿಕೆ ಶಿವಕುಮಾರ್ ಅವರ ಗುದ್ದಾಟ ಹೊಸ ವಿಚಾರವೇನಲ್ಲ. ಮೈತ್ರಿ ಸರ್ಕಾರ ಬಂದ ನಂತರವೂ ಇಂಧನ ಖಾತೆಗಾಗಿ ಈ ಉಭಯ ನಾಯಕರು ಕಿತ್ತಾಟ ನಡೆಸಿದ್ದರು. ಆದರೆ ಇದೀಗ ಮತ್ತೆ ವರ್ಗಾವಣೆ ವಿಚಾರದಲ್ಲಿ ಕಚ್ಚಾಡಿಕೊಳ್ಳುತ್ತಿರುವ ನಾಯಕರು ಜನಸಾಮಾನ್ಯರ ಕಷ್ಟಗಳನ್ನು ಮರೆತಿದ್ದು ಮಾತ್ರ ವಿಪರ್ಯಾಸವೇ ಸರಿ.

-ಏಕಲವ್ಯ

Tags

Related Articles

Close