ಪ್ರಚಲಿತ

ಶ್ರೀರಾಮ ಮಂದಿರಕ್ಕಾಗಿ 500 ವರ್ಷಗಳಲ್ಲಿ ಪಾಲಿಸುತ್ತಿದ್ದ ನಿಯಮವನ್ನು ಮುರಿದೇ ಬಿಟ್ಟರು.! ಏನಿದು ಶಪಥ?

ಏಳು ಮೋಕ್ಷದಾಯಕ ಪುಣ್ಯ ಕ್ಷೇತ್ರಗಳಲ್ಲಿ ಬರುವ ಮೊಟ್ಟ ಮೊದಲ ಹೆಸರೇ ಅಯೋಧ್ಯಾ. ಮಾನವೇಂದ್ರನಾದ ಮನುವಿನಿಂದ ನಿರ್ಮಿತವಾದ ಈ ಅಯೋಧ್ಯಾ ಎಂಬ ಪುಣ್ಯಸ್ಥಳವನ್ನು ಸ್ಪರ್ಷಿಸಿದ, ಆಳಿದ, ಇತಿಹಾಸ ಬರೆದ ದೇವಮಾನವರು ಎಷ್ಟೋ..! ಸತ್ಯಕ್ಕಾಗಿ ಸಕಲವನ್ನೂ ತೊರೆದ ಸತ್ಯ ಹರಿಶ್ಚಂದ್ರ, 22 ಜೈನ ತೀರ್ಥಂಕರರು, ಇಕ್ಷಾಕು ಮಹಾರಾಜರು, ದಶರಥ ಮಹಾರಾಜರು ಹಾಗೂ ಸಾಕ್ಷಾತ್ ಶ್ರೀ ಹರಿಯ ಅವತಾರ ಶ್ರೀರಾಮಚಂದ್ರ ಆಳಿದ ಪುಣ್ಯಭೂಮಿ ಅಯೋಧ್ಯೆ. ದಶರಥ ಮಹಾರಾಜರ ಪುತ್ರಿ ಶಾಂತಾಳನ್ನು ಋಶ್ಯಶೃಂಗರು ಮದುವೆಯಾದ ಪುಣ್ಯಭೂಮಿ ಅಯೋಧ್ಯೆ. ಗಂಗಾ, ಯಮುನಾ, ಸರಸ್ವತಿಯೊಂದಿಗೆ ಸ್ಮರಿಸುವ ಶ್ರೇಷ್ಠ ನದಿ ಸರಯೂ ಅಪ್ಪಿಕೊಂಡಿರುವ ಪವಿತ್ರ ಸ್ಥಳ ಅಯೋಧ್ಯೆ. ಸಿಖ್ಖ್ ಪಂಥದ ಧರ್ಮಗುರು ಗುರುನಾನಕರಿಗೆ ದೈವ ಸಾಕ್ಷಾತ್ಕಾರವಾದ ಸ್ಥಳ ಈ ಅಯೋಧ್ಯೆ.

ಇಂತಹಾ ಅನೇಕ ಐತಿಹಾಸಿಕ ಹಾಗೂ ಪುರಾಣಗಳ ಆಗುಹೋಗುಗಳಿಗೆ ಕಾರಣವಾದ ಈ ಪುಣ್ಯಸ್ಥಳವನ್ನು 1527ರಲ್ಲಿ ಭಾರತಕ್ಕೆ ಆಗಮಿಸಿದ್ದ ಅಕ್ರಮಣಕಾರಿ ಬಾಬರ್ ತನ್ನ ಸೇನಾಧಿಪತಿ ಮೀರ್ ಬಾಕೀ ಮೂಲಕ ಅಲ್ಲಿದ್ದ ಶ್ರೀರಾಮ ಮಂದಿರವನ್ನು ನೆಲಕ್ಕುರುಳಿಸಿ ಅದೇ ವಸ್ತುಗಳಿಂದ ಮಸೀದಿ ನಿರ್ಮಾಣ ಮಾಡಿದ್ದ. ಅದೆಷ್ಟೋ ಶತಮಾನಗಳ ಕಾಲ ಇತಿಹಾಸದ ಸೌಂದರ್ಯಗಳ ಬೀಡಾಗಿದ್ದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಅಂದು ಅಕ್ರಮಣಕಾರಿಗಳ ಅಟ್ಟಹಾಸಕ್ಕೆ ನಲುಗಿ ಹೋಗಿತ್ತು. ನಂತರ ನಡೆದ ಘಟನೆಗಳು, ರಾಮಜನ್ಮಭೂಮಿಗಾಗಿ ನಡೆದ ಹೋರಾಟ, ಅದಕ್ಕಾಗಿ ಮಡಿದ ಜೀವಗಳು, ಧರೆಗುರುಳಿದ ಮಸೀದಿ ಹೀಗೆ ಅನೇಕ ಘಟನೆಗಳಿಗೆ ಈ ಅಯೋಧ್ಯೆ ಸಾಕ್ಷಿಯಾಗಿತ್ತು.

ಪೇಟ ಧರಿಸಿಲ್ಲ, ಚಪ್ಪಲಿ ಹಾಕಿಲ್ಲ-ಇದು ರಾಮಭೂಮಿಗಾಗಿ ಶಪಥ.!

ಕ್ರೂರಿ ಬಾಬರನ ಅಟ್ಟಹಾಸಕ್ಕೆ ನಲುಗಿದ ಅಯೋಧ್ಯೆಯಲ್ಲಿ ಅಂದಿನಿಂದ ಇಂದಿನವರೆಗೂ ಆಕ್ರಂದನವೇ. ಮರ್ಯಾದ ಪುರುಷೋತ್ತಮ ಶ್ರೀರಾಮ ಜನಿಸಿದ ಪುಣ್ಯಸ್ಥಳ ಅಯೋಧ್ಯೆಯಲ್ಲಿ ಕಣ್ಣೀರ ದಿನಗಳೇ ಆರಂಭವಾಗಿದ್ದವು. ಅಂದಿನವರೆಗೂ ಪ್ರತೀ ದಿನವೂ ಸಂಭ್ರಮಿಸುತ್ತಿದ್ದ ಅಯೋಧ್ಯೆಯ ಜನರು ಅಂದಿನಿಂದ ಶ್ರೀರಾಮನಿಗಾಗಿ ಕಣ್ಣೀರು ಹಾಕಲು ಆರಂಭಿಸಿದ್ದರು. ಶ್ರೀರಾಮನಿಗಾಗಿ ಶಬರಿ ಯಾವ ರೀತಿ ಕಾಯುತ್ತಿದ್ದಳೋ ಅದೇ ರೀತಿ ಶ್ರೀರಾಮನ ಭವ್ಯ ಮಂದಿರಕ್ಕಾಗಿ ಪ್ರತೀ ದಿನ, ಪ್ರತೀ ಘಳಿಗೆ ಕೂಡಾ ಅಲ್ಲಿನ ಜನತೆ ಕಾಯುತ್ತಿದ್ದರು. ಒಂದು ಬಾರಿ ಶ್ರೀರಾಮ ಜನ್ಮಭೂಮಿ ಹಿಂದೂಗಳ ಸ್ವತ್ತಾಗಬೇಕು ಎಂದು ಪ್ರಾರ್ಥಿಸುತ್ತಿದ್ದರು.

ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ಧರೆಗುರುಳಿದ ಆ ದಿನಗಳಿಂದ, ಅಂದರೆ ಬರೋಬ್ಬರಿ 5 ಶತಮಾನಗಳ ಕಾಲ ಅಯೋಧ್ಯೆಯ ಪ್ರದೇಶದ ಸುಮಾರು ಒಂದು ಲಕ್ಷದ ಐವತ್ತು ಸಾವಿರ ಜನರು ತಾವು ಧರಿಸುತ್ತಿದ್ದ ಪೇಟ, ಚರ್ಮದ ಚಪ್ಪಲಿ ಹಾಗೂ ಛತ್ರಿಯನ್ನು ತ್ಯಜಿಸಿದ್ದರು. ಅಯೋಧ್ಯೆಯಲ್ಲಿ ಶ್ರೀರಾಮನಿಗಾಗಿ ಮಂದಿರ ಆಗಲೇಬೇಕೆಂದು ಶಪಥಗೈದಿದ್ದ ಅಯೋಧ್ಯೆ ಪರಿಸರದ 105 ಹಳ್ಳಿಗಳೂ ಅಂದೇ ಈ ನಿರ್ಧಾರವನ್ನು ತಳೆದುಕೊಂಡಿದ್ದು ಈವರೆಗೂ ಅದನ್ನು ಪಾಲಿಸಿಕೊಂಡು ಬಂದಿದ್ದರು. ಅಲ್ಲಿನ ಸೂರ್ಯವಂಶದ ಎಲ್ಲಾ ಕ್ಷತ್ರಿಯರೂ ಈ ನಿರ್ಧಾರದಿಂದ ಒಂದಿಂಚೂ ಹಿಂದೆ ಸರಿದಿರಲಿಲ್ಲ. ಯಾವುದೇ ಶುಭ ಸಮಾರಂಭವಿರಲಿ, ಅಧಿಕಾರಿಗಳ ಸಭೆ ಇರಲಿ, ರಾಜಕೀಯ ಸಮಾವೇಶವೇ ಇರಲಿ, ಅವರು ಮಾತ್ರ ಈ ನಿರ್ಧಾರದಿಂದ ರಾಜಿ ಆಗುತ್ತಿರಲಿಲ್ಲ.

ಈಗ ಅಲ್ಲಿ ಸಂಭ್ರಮವೋ ಸಂಭ್ರಮ-ಮತ್ತೆ ಶ್ರೀರಾಮನ ಡಿಂಡಿಮ…

ಯಾವಾಗ ಸುಪ್ರೀಂ ಕೋರ್ಟಿನಲ್ಲಿ ಅಯೋಧ್ಯೆ ಶ್ರೀರಾಮನಿಗೆ ಸೇರಿದ್ದು ಎಂಬ ತೀರ್ಪು ಬಂತೋ ಅಂದಿನಿಂದ ಅಲ್ಲಿ ನಿಜವಾದ ದೀಪಾವಳಿ ಆರಂಭವಾಗಿತ್ತು. ಗಲ್ಲಿ ಗಲ್ಲಿಯೂ ಅಲಂಕಾರಗೊಂಡಿತ್ತು. ಅಲ್ಲಿನ ಜನತೆಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ದೀಪಗಳ ನರ್ತನ, ಪೂಜಾದಿ ಪುನಸ್ಕಾರಗಳ ಸಂಭ್ರಮ, ವೈಕುಂಠವೇ ಧರೆಗಿಳಿದು ಬಂದಂತೆ ವೈಭವುಗಳು ಅಲ್ಲಿ ನಡೆಯುತ್ತಿವೆ. ಮತ್ತೊಂದು ವಿಶೇಷವೆಂದರೆ ಅಂದು ಶಪಥಗೈದಿದ್ದ ಅಯೋಧ್ಯೆಯ 105 ಹಳ್ಳಿಗಳು ಈಗ 5 ಶತಮಾನಗಳ ಹಿಂದಿನ ಸಂಪ್ರದಾಯವನ್ನು ಮುಂದುವರೆಸಲು ನಿರ್ಧರಿಸಿದೆ.

ಹಳ್ಳಿ ಹಳ್ಳಿಯಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಅಂದು ತ್ಯಜಿಸಿದ್ದ ಪೇಟಗಳನ್ನು ಇಂದು ಮತ್ತೆ ಮುಡಿಗೇರಿಸಿಕೊಂಡಿದ್ದಾರೆ. ವಕೀಲರಾದ ಬಸ್ ದೇವ್ ಸಿಂಗ್ ಸರಾಯಿ ಎಂಬವರು ತನ್ನ ಹಳ್ಳಿಯ ಮಂದಿಗೆ 400 ಪೇಟವನ್ನು ವಿತರಿಸಿದ್ದಾರೆ. ಈ ಬಗ್ಗೆ ಅಲ್ಲಲ್ಲಿ ಸಭೆ ನಡೆಯುತ್ತಿದ್ದು ಈ ಸಂಪ್ರದಾಯವನ್ನು 5 ಶತಮಾನಗಳ ನಂತರ ಮತ್ತೆ ಮುಂದುವರೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲರೂ ಹಿಂದಿನ ಸಂಪ್ರದಾಯವನ್ನು ಪಾಲಿಸುವುದರೊಂದಿಗೆ ತಮ್ಮ ಶಪಥವನ್ನು ಕೈಬಿಡಲು ಸಿದ್ಧರಾಗಿದ್ದಾರೆ. ಎಲ್ಲಾ ಮಂದಿಗೂ ಪೇಟವನ್ನು ನೀಡಿ ಶ್ರೀರಾಮ ಮಂದಿರವನ್ನು ವಿಶೇಷವಾಗಿ ಸ್ವಾಗತಿಸಲು ಸಿದ್ಧತೆ ನಡೆಯುತ್ತಿದೆ.

ಒಟ್ಟಾರೆ ಶ್ರೀರಾಮ ಮಂದಿರಕ್ಕಾಗಿ ಈ ರೀತಿಯೂ ತಪಸ್ಸು ನಡೆಸುತ್ತಿದ್ದ ಈ ಕುಟುಂಬಗಳು ಇಂದು ತಮ್ಮ ಬಲಿಷ್ಠ ನಿರ್ಧಾರವನ್ನು 5 ಶತಮಾನಗಳ ನಂತರ ಕೈಬಿಟ್ಟು ವಿಜ್ರಂಭಿಸುತ್ತಿದೆ. ಇದು ಕೇವಲ ಅಯೋಧ್ಯೆಯ ವಿಚಾರ ಮಾತ್ರವಲ್ಲ. ದೇಶದ ಅನೇಕ ಕಡೆಗಳಲ್ಲಿ ಇಂತಹಾ ನಿರ್ಧಾರ ಹಾಗೂ ಶಪಥಗಳು ಕೈಗೊಂಡಿದ್ದು ಈಗ ಎಲ್ಲವೂ ಶ್ರೀರಾಮನಿಗಾಗಿ ಅರ್ಪಣೆ ಮಾಡಲಾಗಿದೆ. ಶ್ರೀರಾಮನನ್ನು ಮನದಲ್ಲೇ ಸ್ಮರಿಸುವ ಈಗಿನ ಜನರಲ್ಲೂ ಇಷ್ಟೊಂದು ಭಕ್ತಿ ಇದೆ ಎಂದಾದರೆ ಅಂದು ಅಯೋಧ್ಯೆಯನ್ನು ಆಳಿದ್ದ ಶ್ರೀರಾಮಚಂದ್ರನ ಬಗ್ಗೆ ಅಂದಿನ ಜನರಿಗೆ ಯಾವ ರೀತಿಯ ಆಡಳಿತ ಇದ್ದಿರಬಹುದು ಎಂಬುವುದನ್ನು ಊಹಿಸುವ ಸಮಯ. ಗಥವೈಭವದ ಇತಿಹಾಸವನ್ನು ಮರುಕಳಿಸುವ ದಿನ ಮತ್ತೆ ಬರಲಿ ಎಂಬುದೇ ಕೋಟ್ಯಾಂತರ ಭಕ್ತರ ಆಶಯ…
ಜೈ ಶ್ರೀ ರಾಮ್…

-ಸುನಿಲ್ ಪಣಪಿಲ

Tags

Related Articles

FOR DAILY ALERTS
Close