ಪ್ರಚಲಿತ

ಅಧ್ಯಾಯ 4: ವೀರಮಾಂಗೈ, ರಾಣಿ ವೇಲು ನಚಿಯಾರ್ ಬ್ರಿಟಿಷರೊಂದಿಗೆ ಹೋರಾಡಿ, ಅವರಿಗೆ ಸೋಲುಣಿಸಿದ ವೀರಾಂಗನೆಯ ಕಥೆ!

ಸ್ವಾತಂತ್ರ್ಯದ ಮಹಾಗಾಥೆ !

ತಮಿಳುನಾಡಿನಲ್ಲಿ ತಮ್ಮ ಭದ್ರ ನೆಲೆ ಕಂಡುಕೊಳ್ಳಲು ಬ್ರಿಟಿಷರು ತಮ್ಮ ತಂತ್ರವನ್ನೆಲ್ಲಾ ಬಳಸಿ, ಸೈನ್ಯದ ಬಲ, ಹಣದ ಬಲದಿಂದ ಸಣ್ಣ ಸಣ್ಣ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುತ್ತಿದ್ದ ಕಾಲದಲ್ಲಿ, ರಾಮನಾಡಿನ ರಾಣಿ ವೇಲು ನಚಿಯಾರ್ ಕಂಪೆನಿಯ ವಿರುದ್ಧ ಸಮರ ಸಾರಿ ಬ್ರಿಟಿಷರ ಸಾಮ್ರಾಜ್ಯ ವಿಸ್ತರಣೆಗೆ ತೊಡಕು ಉಂಟುಮಾಡಿದಳು. ಆಕೆ ಬ್ರಿಟಿಷರ ಕುಟಿಲತೆ ವಿರುದ್ಧ ಹೋರಾಡಿ ತನ್ನ ರಾಜ್ಯವನ್ನು ಉಳಿಸಿಕೊಂಡ ರೀತಿ ಇತಿಹಾಸದಲ್ಲಿ ಅತೀ ವಿರಳವಾಗಿ ಕಾಣಸಿಗುವ ಒಂದು ಘಟನೆ. ತಮ್ಮವರೇ ಅಧಿಕಾರ ಹಾಗೂ ಹಣದ ದುರಾಸೆಗೆ ಬಿದ್ದು ಬ್ರಿಟಿಷರ ಜೊತೆ ಕೈಜೋಡಿಸುವ ಪರಿಸ್ಥಿತಿ ಇದ್ದ ಸಮಯದಲ್ಲೂ ರಾಣಿ ವೇಲು ನಚಿಯಾರ್, ತನ್ನ ಜನರ ವಿಶ್ವಾಸವನ್ನು ಗಳಿಸಿ, ಉಳಿಸಿಕೊಂಡು ಕಂಪೆನಿಯ ಆಡಳಿತ ವೈಖರಿಯ ವಿರುದ್ಧ ಹೋರಾಡಿದ ವೀರ ಮಹಿಳೆ.

ಜನವರಿ 3,1730 ತಮಿಳುನಾಡಿನ, ರಾಮನಾಡು ಸಾಮ್ರಾಜ್ಯದ ರಾಜ ಚೆಲ್ಲಮುತ್ತು ಸೇತುಪತಿಯ ಮಗಳಾಗಿ ಜನಿಸಿದ ವೇಲು ನಚಿಯಾರ್, ಯುವರಾಜನಂತೆ ಎಲ್ಲಾ ಶಸ್ತ್ರ ಹಾಗೂ ಶಾಸ್ತ್ರಗಳನ್ನು ಅಭ್ಯಾಸ ಮಾಡುತ್ತಾ ಬೆಳೆದಳು. ಆಕೆ ಆಂಗ್ಲ ಭಾಷೆ, ಫ್ರೆಂಚ್ ಭಾಷೆಯಲ್ಲಿ ಕೂಡ ಪಾಂಡಿತ್ಯ ಹೊಂದಿದ್ದಳು. ಶಿವಗಂಗೈನ ಯುವರಾಜ ಉದೈಯತೇವರನ ಜೊತೆ ತನ್ನ ಹದಿನಾರನೇ ವಯಸ್ಸಿನಲ್ಲಿ ವೇಲು ನಚಿಯಾರ್ ಳ ವಿವಾಹ ನಡೆಸಲಾಗುತ್ತದೆ. ಅವರಿಬ್ಬರಿಗೂ ವೆಲ್ಲಾಚ್ಚಿ ಎಂಬ ಮಗಳಿದ್ದಳು. 1772 ರಲ್ಲಿ ಉದಯನ ನಿಧನಾನಂತರ ರಾಜ್ಯಭಾರವು ವೇಲು ನಚಿಯಾರ್ ಳ ಹೆಗಲ ಮೇಲೆ ಬೀಳುತ್ತದೆ.

ಬ್ರಿಟಿಷರೊಂದಿಗೆ ಯುದ್ಧ:

ಸಣ್ಣ ಸಣ್ಣ ರಾಜ್ಯಗಳನ್ನು ವಶಪಡಿಸಿಕೊಂಡು ತಮ್ಮ ಬಲವಂತದ ಆಡಳಿತವನ್ನು ಅಲ್ಲಿನ ಜನರ ಮೇಲೆ ಹೇರುತ್ತಿದ್ದ ಬ್ರಿಟಿಷರಿಗೆ ಶಿವಗಂಗೈನ ಮೇಲೆ ಕಣ್ಣಿತ್ತು. ಶಿವಗಂಗೈ ಮೇಲೆ ದಂಡೆತ್ತಿ ಬಂದ ಬ್ರಿಟಿಷರು ಮಕ್ಕಳು ಮಹಿಳೆಯರು ಎಂದೂ ನೋಡದೆ ಯುದ್ಧದಲ್ಲಿ ಬರ್ಬರವಾದ ಮಾರಣಹೋಮದಲ್ಲಿ ತೊಡಗಿದರು. 1772ರ ಯುದ್ಧದಲ್ಲಿ ಉದಯ ತೇವರ್ ನನ್ನು ಕೊಲ್ಲಲಾಯಿತು. ತನ್ನ ಗಂಡನ ಸಾವಿನ ಸುದ್ದಿ ತಲುಪಿದ ಕೂಡಲೇ ವೇಲು ನಚಿಯಾರ್ ವಿರುಪ್ಪಾಚಿ ಗೆ ತನ್ನ ಮಗಳೊಂದಿಗೆ ಪಲಾಯನಗೈಯ್ಯುತ್ತಾಳೆ.

ತಾಂಡವರಾಯ ಪಿಳ್ಳೈನ ಸಹಕಾರದಿಂದ ಆಕೆ ಮುಂದಿನ ಎಂಟು ವರ್ಷಗಳನ್ನು ತನ್ನ ಸೇನೆಯನ್ನು ಪುನಃ ಕಟ್ಟುವಲ್ಲಿ, ಯುದ್ಧ ನೀತಿಗಳ ಅಭ್ಯಾಸದಲ್ಲಿ ಕಳೆಯುತ್ತಾಳೆ. 1780 ರಲ್ಲಿ ಬ್ರಿಟಿಷರ ವಿರುದ್ಧ ತನ್ನ ಹೋರಾಟವನ್ನು ಚುರುಕುಗೊಳಿಸಿ, ಬ್ರಿಟಿಷರ ಸಿಡಿಮದ್ದುಗಳ ದಾಸ್ತಾನಿನ ಮೇಲೆ ಆಕ್ರಮಣ ಮಾಡುತ್ತಾಳೆ. ಈ ಕಾರ್ಯದಲ್ಲಿ ಅವಳ ನೆರವಿಗೆ ಬಂದಿದ್ದು ಮಗಳಂತೆ ಸಾಕಿದ್ದ ಕುಯಿಲಿ ಎಂಬ ಸಖಿ. ಆಕೆ ತನ್ನ ಮೈಗೆಲ್ಲಾ ತುಪ್ಪವನ್ನು ಹಚ್ಚಿಕೊಂಡು, ತನ್ನನ್ನು ದಹಿಸಿಕೊಳ್ಳುತ್ತಾ ಸಿಡಿಮದ್ದುಗಳ ದಾಸ್ತಾನು ಸ್ಫೋಟಿಸುತ್ತಾಳೆ. ಆಕೆಯ ಪ್ರಾಣಾಹುತಿ ಇಂದಾಗಿ, ಬ್ರಿಟಿಷರ ಬಳಿ ಮದ್ದು ಗುಂಡುಗಳು ಇಲ್ಲವಾಗುತ್ತವೆ. ಇತ್ತ ಕಡೆ ಸಮಯದ ಸರಿಯಾದ ಲಾಭ ಪಡೆದುಕೊಂಡ ವೇಲು ನಚಿಯಾರ್ ಬ್ರಿಟಿಷರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿ ಆಗುತ್ತಾಳೆ.

ಶಿವಗಂಗೈ ಅರ್ಕೋಟ ನವಾಬನ ಕೈಯ್ಯಿಂದ ಪುನಃ ರಾಣಿಯ ಕೈವಶವಾಗುತ್ತದೆ. ತನ್ನ ಮಗಳಂತೆ ಇದ್ದ ಮತ್ತೊಬ್ಬ ಸಖಿ ಉದೈಯಲ್ ಕೂಡ ಬ್ರಿಟಿಷರೊಂದಿಗೆ ನಡೆದ ಯುದ್ಧದಲ್ಲಿ ತನ್ನ ಪ್ರಾಣಾರ್ಪಣೆ ನೀಡುತ್ತಾಳೆ. ನವಾಬನ ಧ್ವಜವನ್ನು ತನ್ನ ಕೋಟೆಯ ಮೇಲಿಂದ ಇಳಿಸಿ, ಹನುಮಂತನಿರುವ ಶಿವಗಂಗೈಯ ಧ್ವಜವನ್ನು ಕೋಟೆಯ ಮೇಲೆ ಪುನಃ ಹಾರುವಂತೆ ಮಾಡುತ್ತಾಳೆ ವೀರ ರಾಣಿ ವೇಲು ನಚಿಯಾರ್.ಉದೈಯಲ್ ಳ ನೆನಪಿನಲ್ಲಿ ಮಹಿಳೆಯರ ಸೈನ್ಯವನ್ನು ಕಟ್ಟಿ, ಮುಂದಿನ ಹತ್ತು ವರ್ಷಗಳ ಕಾಲ ಶಿವಗಂಗೈಯನ್ನು ನಿರ್ವಿಘ್ನವಾಗಿ ಆಳಿದಳು ರಾಣಿ ವೇಲು ನಚಿಯಾರ್.

Chapter 1:

ಅಧ್ಯಾಯ 1: ವ್ಯಾಪಾರಕ್ಕಾಗಿ ಭಾರತಕ್ಕೆ ಬಂದಿಳಿಯಿತು ಯೂರೋಪಿನ ಕಂಪೆನಿ! ಹಣ ಬಲ, ಕುತಂತ್ರ ಹಾಗೂ ಆಕ್ರಮಣಕಾರಿ ಪ್ರವೃತ್ತಿಯಿಂದ ಭಾರತವನ್ನು ದೋಚಿದ ದುರಂತ ಕಥೆ!

Chapter 2:

ಅಧ್ಯಾಯ 2 – ಮಾವೀರನ್ ಅಳಗುಮುತ್ತು ಕೋಣೆ ಎಂಬ ಮಹಾವೀರನ ಕಥೆ! ಸ್ವಾರ್ಥಕ್ಕಾಗಿ ಎಲ್ಲರೂ ಆಂಗ್ಲರ ಜೊತೆ ಕೈಜೋಡಿಸುತ್ತಿದ್ದ ಕಾಲದಲ್ಲಿ ತನ್ನ ತಾಯ್ನಾಡಿನ ರಕ್ಷಣೆಗೆ ಪಣ ತೊಟ್ಟ ಧೀರ!

Chapter 3:

ಅಧ್ಯಾಯ 3: ನೆಲ್ಕಟ್ಟುಂಸೇವಲ್ ಎಂಬ ವಿಶಿಷ್ಟ ಹೆಸರಿನ ಊರು, ಅದರ ಪಾಳೇಯಗಾರ ಪುಲಿ ತೇವರ್ ಎಂಬ ಪರಾಕ್ರಮಿ! ಬ್ರಿಟಿಷರ ದಬ್ಬಾಳಿಕೆಗೆ ಬಗ್ಗದೆ ಅವರನ್ನು ಎದುರಿಸಿದ ಧೀರ!

-Dr.Sindhu Prashanth

Tags

Related Articles

FOR DAILY ALERTS
Close