ಪ್ರಚಲಿತ

ತ್ರಿವರ್ಣ ಧ್ವಜದ ಮೇಲೆ ಹಸ್ತಾಕ್ಷರ ಹಾಕಲು ಹೇಳಿದ ಅಭಿಮಾನಿಗೆ ನೀರಜ್ ಚೋಪ್ರಾ ಹೇಳಿದ್ದೇನು?

ವಿಶ್ವ ಅಥ್ಲೆಟಿಕ್ ಚಾಂಪಿಯನ್‍ಶಿಪ್‌ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ಚಿನ್ನದ ಪದಕಕ್ಕೆ ಮುತ್ತಿಡುವ ಮೂಲಕ ದೇಶದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ.

ನೀರಜ್ ಚೋಪ್ರಾ ಅವರ ಸಾಧನೆಗೆ ಕೇವಲ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಶಹಬ್ಬಾಸ್ ಎನ್ನುತ್ತಿದೆ. ಹಂಗೇರಿಯ ಬುಡಾಫೆಸ್ಟ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತದ ಪರ ಜಾವೆಲಿನ್ ಥ್ರೋ ಪಂದ್ಯದಲ್ಲಿ ಆಡಿ, ಪ್ರಥಮ ಸ್ಥಾನ ಪಡೆಯುವ ಮೂಲಕ ದೇಶಕ್ಕೆ ಚಿನ್ನದ ಸಂಭ್ರಮವನ್ನು ತಂದು ಕೊಟ್ಟವರು ನೀರಜ್. ನೀರಜ್ ಅವರ ಈ ಸಾಧನೆಯಿಂದ ಅವರ ಸಾವಿರಾರು ಅಭಿಮಾನಿಗಳೂ ಖುಷಿಯಾಗಿದ್ದಾರೆ.

ಈ ಸಾಧನೆಯ ಬಳಿಕ ಅವರ ಹಲವಾರು ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು, ಅವರ ಅಟೋಗ್ರಾಫ್ ಪಡೆಯಲು ಮುಗಿಬಿದ್ದಿದ್ದಾರೆ. ಹಂಗೇರಿಯ ಅಭಿಮಾನಿ ಮಹಿಳೆಯೊಬ್ಬರು ಸಹ ನೀರಜ್ ಚೋಪ್ರಾ ಅವರ ಅಟೋಗ್ರಾಫ್ ಪಡೆಯಲು ಬಯಸಿದ್ದಾರೆ. ಭಾರತದ ತ್ರಿವರ್ಣ ಧ್ವಜದ ಮೇಲೆ ತಮ್ಮ ಹಸ್ತಾಕ್ಷರ ಮೂಡಿಸುವ ಹಾಗೆ ಹಂಗೇರಿಯ ಮಹಿಳಾ ಅಭಿಮಾನಿ ನೀರಜ್ ಅವರಿಗೆ ಮನವಿ ಮಾಡಿದ್ದಾರೆ.

ಆದರೆ ಈ ಮನವಿಯನ್ನು ತಿರಸ್ಕರಿಸುವ ಮೂಲಕ ಭಾರತದ ರಾಷ್ಟ್ರಧ್ವಜಕ್ಕೆ ಇರುವ ಮರ್ಯಾದೆ ಎಂತದ್ದು, ಅದಕ್ಕೆ ನೀಡಬೇಕಾದ ಗೌರವ ಎಂತದ್ದು, ಅದರ ಘನತೆ ಏನು ಎಂಬುದನ್ನು ಜಗತ್ತಿಗೆ ಸಾರುವ ಕೆಲಸವನ್ನು ನೀರಜ್ ಚೋಪ್ರಾ ಮಾಡಿದ್ದಾರೆ. ತ್ರಿವರ್ಣ ಧ್ವಜದ ಮೇಲೆ ಹಸ್ತಾಕ್ಷರ ಮಾಡಲಾರೆ ಎನ್ನುವ ಮೂಲಕ, ಭಾರತ ದೇಶ, ದೇಶದ ಧ್ವಜಕ್ಕೆ ‌ನೀಡಬೇಕಾದ ಗೌರವ ಏನು ಎಂಬುದನ್ನು ಜಗತ್ತಿಗೆ ತಿಳಿಸುವ ಕೆಲಸವನ್ನು ಕೃತಿಯ ಮೂಲಕವೇ ಮಾಡಿದ್ದಾರೆ. ಆ ಮೂಲಕ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಮಾತ್ರಕ್ಕೆ ತಾವು ಚಿನ್ನದ ಹುಡುಗನಲ್ಲ, ಇಂತಹ ಅಪರೂಪದ ವ್ಯಕ್ತಿತ್ವದಲ್ಲಿಯೂ ತಾವು ಅಪ್ಪಟ ಚಿನ್ನ ಎಂಬುದನ್ನು ಸಾಬೀತು ಮಾಡಿದ್ದಾರೆ.

ತ್ರಿವರ್ಣ ಧ್ವಜದ ಮೇಲೆ ನೀರಜ್ ಹಸ್ತಾಕ್ಷರ ಕೇಳಿದ ಮಹಿಳೆಗೆ, ನಿಮಗೆ ನಾನು ಅಟೋಗ್ರಾಫ್ ನೀಡುತ್ತೇನೆ. ಆದರೆ ಭಾರತದ ಧ್ವಜದ ಮೇಲೆ ಸಹಿ ಹಾಕಿ ಅದಕ್ಕೆ ಅಗೌರವ ತೋರಲಾರೆ ಎಂದು ಹೇಳುವ ಮೂಲಕ, ಆ ಮಹಿಳೆಗೂ ದೇಶ, ಧ್ವಜದ ಮೇಲೆ ಗೌರವ ಹೇಗಿರಬೇಕು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಆ ಬಳಿಕ ಅಭಿಮಾನಿ ತೊಟ್ಟಿದ್ದ ಟಿ ಶರ್ಟ್‌ನ ತೋಳಿನ ಮೇಲೆ ಹಸ್ತಾಕ್ಷರ ಮೂಡಿಸುವ ಮೂಲಕ ಆಕೆಯ ಆಸೆಯನ್ನು ಈಡೇರಿಸಿದ್ದಾರೆ.

ಸದ್ಯ ನೀರಜ್ ಚೋಪ್ರಾ ಅವರ ಈ ನಡೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ನೀರಜ್ ಚೋಪ್ರಾ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ದೇಶದ ಘನತೆಯನ್ನು ಎತ್ತಿ ಹಿಡಿದಿದ್ದು ಮಾತ್ರವಲ್ಲ, ಭಾರತ ದೇಶಕ್ಕೆ, ಧ್ವಜಕ್ಕೆ ನೀಡಬೇಕಾದ ಗೌರವ ಹೇಗಿರಬೇಕು ಎಂಬುದನ್ನು ತಮ್ಮ ನಡೆಯ ಮೂಲಕವೇ ಸಾದರಪಡಿಸಿ ಭಾರತೀಯರಿಗೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಅವರ ಈ ನಡೆ ನಮ್ಮೆಲ್ಲರಿಗೂ ಮಾದರಿಯೇ ಸರಿ.

ಅಂದ ಹಾಗೆ 2016 ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಇಪ್ಪತ್ತು ವರ್ಷದವರೊಳಗಿನ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಭಾರತದೆಲ್ಲೆಡೆ ಚಿರಪರಿಚಿತರಾದವರು ನೀರಜ್ ಚೋಪ್ರಾ. ಆ ನಂತರದ ಕಳೆದ ಏಳು ವರ್ಷಗಳಲ್ಲಿ ಮಹತ್ವದ ಸಾಧನೆಗಳ ಮೂಲಕವೂ ಮನೆಮಾತಾದವರು ನೀರಜ್ ಚೋಪ್ರಾ. ಈ ಬಾರಿ ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ ಶಿಫ್‌ನಲ್ಲಿಯೂ ಚಿನ್ನ ಗೆದ್ದು ಭಾರತದ ಹಿರಿಮೆ ಹೆಚ್ಚಿಸಿದ್ದರು. 2018ರ ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿಯೂ ಚಿನ್ನ ಗೆಲ್ಲುವ ಮೂಲಕ ‘ಭಾರತದ ಚಿನ್ನದ ಹುಡುಗ’ ಎಂಬ ಖ್ಯಾತಿಯನ್ನು ಸಹ ತಮ್ಮ ಮುಡಿಗೇರಿಸಿಕೊಂಡವರು ನೀರಜ್ ಚೋಪ್ರಾ.

Tags

Related Articles

Close