ಅಂಕಣಇತಿಹಾಸ

ತನ್ನ ಕಾಲು ಕಳೆದುಕೊಂಡರು ಮಹಾರಾಣಾ ಪ್ರತಾಪ್‌ನ ಪ್ರಾಣ ಉಳಿಸಿತ್ತು “ಚೇತಕ್”! ಪ್ರತಾಪ್‌ನ ಜೊತೆಗೆ ಅಕ್ಬರನ ವಿರುದ್ಧ ರಣರಂಗದಲ್ಲಿ ಹೋರಾಡಿತ್ತು ಕುದುರೆ!

ಹಾರಾಣಾ ಪ್ರತಾಪ್‌ ಎಂಬ ಧೀರನ, ಹಿಂದೂ ಸಾಮ್ರಾಟನ ಹೆಸರು ಯಾರಿಗೆ ತಿಳಿದಿಲ್ಲ ಹೇಳಿ.‌ ೧೫೪೦ ರಲ್ಲಿ ಜನಿಸಿದ ಮಹಾರಾಣಾ ಪ್ರತಾಪ್‌, ವಾಯುವ್ಯ ಭಾರತದ ಮೇವಾರ ಎಂಬ ರಾಜ್ಯವನ್ನು ಆಳಿದ ಹಿಂದೂ ದೊರೆಯಾಗಿದ್ದ. ರಾಣಾ ಪ್ರತಾಪ್‌‌ನ ಒಂದೊಂದು ಕಥೆಯೂ ನಿಜಕ್ಕೂ ಮೈ ನವಿರೇಳಿಸುವಂತೆ ಮಾಡುತ್ತದೆ. ಯಾಕೆಂದರೆ ನೋಡಲು ದೈತ್ಯಾಕಾರ ಹೊಂದಿದ್ದ ಪ್ರತಾಪ್ ನಿಜಕ್ಕೂ ವೈರಿಗಳ ಎದೆಯ ಮೇಲೆ ಕಾಲಿಟ್ಟು ಹೋರಾಡುವ ಸಾಮಾರ್ಥ್ಯ ಹೊಂದಿದ್ದ ವೀರ. ರಜಪೂತರ ಹೆಮ್ಮೆಯ ನಾಯಕನಾಗಿದ್ದ ಪ್ರತಾಪ್, ಅಕ್ಬರನ ವಿರುದ್ಧ ಹೋರಾಡಿದ ಯುದ್ಧ ನಿಜಕ್ಕೂ ಅದ್ಭುತ. ಒಂದೆಡೆ ಅಕ್ಬರ್ ಭಾರತದ ಎಲ್ಲಾ ರಾಜ್ಯಗಳ ಮೇಲೆ ತನ್ನ ಹಿಡಿತ ಸಾಧಿಸಲು ಪ್ರಯತ್ನಿಸಿದರೆ, ಇತ್ತ ಅಕ್ಬರ್‌ನನ್ನು ಭಾರತದ ದೊರೆಯೇ ಅಲ್ಲ ಎಂದು ಹೇಳುತ್ತಿದ್ದರು ಮಹಾರಾಣಾ ಪ್ರತಾಪ್‌. ‌ಇಂತಹ ರಾಜನ ವಿರುದ್ಧ ಅಕ್ಬರ್ ಕೂಡ ಕತ್ತಿ ಮಸಿಯುತ್ತಲೇ ಇದ್ದ, ಆದರೆ ತನ್ನ ಸೈನ್ಯ ಎಷ್ಟೇ ಬಲಿಷ್ಠವಾಗಿದ್ದರೂ ಕೂಡ ಮಹಾರಾಣಾ ಪ್ರತಾಪ್‌ನ ಸೈನ್ಯದ ವಿರುದ್ಧ ಹೋರಾಡಲು ಅಕ್ಬರ್ ಹಿಂಜರಿಯುತ್ತಿದ್ದ. ತನ್ನ ಜೀವಮಾನವಿಡೀ ಅಕ್ಬರನ ವಿರುದ್ಧ ಹೋರಾಡುತ್ತಲೇ ಇದ್ದ ಮಹಾರಾಣಾ ಪ್ರತಾಪ್‌ನ ಪ್ರಾಣ ಉಳಿಸಿದ್ದೇ ಒಂದು ಕುದುರೆ ಎಂದರೆ ನಿಜಕ್ಕೂ ನಂಬಲು ಸಾಧ್ಯವಿಲ್ಲ. ಆದರೆ ಸತ್ಯ ಒಪ್ಪಿಕೊಳ್ಳಲೇಬೇಕು, ಯಾಕೆಂದರೆ ಇತಿಹಾಸದ ಪುಸ್ತಕಗಳಲ್ಲಿ ಇಂತಹ ಯಾವುದೇ ಸತ್ಯಾಂಶ ಕಾಣಲು ಸಿಗುವುದಿಲ್ಲ.!

ಇತಿಹಾಸವನ್ನು ಎಷ್ಟೇ ತಿರುಚಿದರು ಕೂಡ ಸತ್ಯ ಸುಳ್ಳಾಗಲು ಸಾದ್ಯವಿಲ್ಲ ಎಂಬುದಕ್ಕೆ ಮಹಾರಾಣಾ ಪ್ರತಾಪ್‌ ಎಂಬ ಹಿಂದೂ ಅರಸನ ಕಥೆಯೇ ಸಾಕ್ಷಿ. ಮಹಾರಾಣಾ ಪ್ರತಾಪ್‌ ಮತ್ತು ಅಕ್ಬರನ ನಡುವೆ ಯಾವುದೇ ದ್ವೇಷ ಇರಲಿಲ್ಲ ಆದರೂ ಅಕ್ಬರ್ ಎಂಬ ರಾಜನನ್ನು ಸೋಲಿಸದೆ ಬಿಡುವುದಿಲ್ಲ ಎಂದು ಪಣತೊಟ್ಟು ಕಾಯುತ್ತಿದ್ದ ಪ್ರತಾಪ್, ಯಾವುದೇ ಕಾರಣಕ್ಕೂ ಅಕ್ಬರನ ಎದುರು ತಲೆ ಬಾಗುವುದಿಲ್ಲ ಎಂದು ಪದೇ ಪದೇ ಹೇಳುತ್ತಿದ್ದ. ಯಾಕೆಂದರೆ ಅಕ್ಬರನು ಚಿತ್ತೂರಿನ ಮೇಲೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಎಷ್ಟು ಕ್ರೂರತೆ ಪ್ರದರ್ಶಿಸಿದ್ದ ಎಂದರೆ ಅಲ್ಲಿನ ಸುಮಾರು ೨೭,೦೦೦ ಜನರನ್ನು ಹತ್ಯೆ ಮಾಡಿದ್ದ ಎಂದು ಅನೇಕ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈ ಘಟನೆ ಪ್ರತಾಪ್‌ನ ಮನಸ್ಸಲ್ಲಿ ಅಚ್ಚೆ ಹಾಕಿದಂತಾಗಿತ್ತು. ಇದೇ ಕಾರಣಕ್ಕೆ ಅಕ್ಬರ್‌ನನ್ನು ಸೋಲಿಸಬೇಕು ಎಂದು ಹೋರಾಟ ನಡೆಸುತ್ತಿದ್ದ ಪ್ರತಾಪನಿಗೆ ಕೊನೆಗೂ ಜಯ ಲಭಿಸಿತ್ತು ಎಂಬುದು ಸತ್ಯ. ಆದರೆ ಇದನ್ನು ಯಾವುದೇ ಇತಿಹಾಸಗಳು ಹೇಳುತ್ತಿಲ್ಲ. !

ಅಕ್ಬರನ ವಿರುದ್ಧ ಮಹಾರಾಣಾ ಪ್ರತಾಪ್‌ನ ಪ್ರಾಣ ಉಳಿಸಿದ ಚೇತಕ್!

ಮಹಾರಾಣಾ ಪ್ರತಾಪ್‌ ಹಾಗೂ ಅಕ್ಬರನ ನಡುವೆ ನಡೆದ ಹಲ್ದಿಘಟ್ ಕದನ ನಿಜಕ್ಕೂ ಅದ್ಭುತ ಕದನಗಳಲ್ಲಿ ಒಂದು. ‌ಯಾಕೆಂದರೆ ಮೊಘಲರ ಸೈನ್ಯದ ಎದುರು ಮಹಾರಾಣಾ ಪ್ರತಾಪ್‌ನ ಸೈನ್ಯ ನಿಜಕ್ಕೂ ಬಹಳ ಚಿಕ್ಕದಾಗಿತ್ತು. ಆದರೂ ಯುದ್ಧದಿಂದ‌ ಹಿಂಜರಿಯದೆ ಅಕ್ಬರನ ವಿರುದ್ಧ ಹೋರಾಡಿದ್ದರು ಪ್ರತಾಪ್. ಅಷ್ಟಕ್ಕೂ ಈ ಯುದ್ಧ ಯಾಕೆ ಹೆಚ್ಚು ಮಹತ್ವ ಪಡೆದಿದೆ ಎಂದರೆ ಹಲ್ದಿಘಟ್ ಕದನದಲ್ಲಿ ಮಹಾರಾಣಾ ಪ್ರತಾಪ್‌ ತನ್ನ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾದಾಗ ಕೂಡ ಅವರ ಪ್ರಾಣವನ್ನು ಉಳಿಸಿತ್ತು ಒಂದು ಕುದುರೆ. ‌ಕುದುರೆ ಎನ್ನುವುದಕ್ಕಿಂತ ಹೆಚ್ಚಾಗಿ ಮಹಾರಾಣಾ ಪ್ರತಾಪ್‌ನ ಪ್ರಾಣ ಉಳಿಸಿದ ಆಪತ್ಭಾಂದವ ಎಂದೇ ಕರೆಯಬಹುದು. ಮಹಾರಾಣಾ ಪ್ರತಾಪ್‌ ತನ್ನ ಜೊತೆ ಒಂದು ಚೇತಕ್ ಎಂಬ ಕುದುರೆಯನ್ನು ಸಾಕಿದ್ದರು. ಈ ಕುದುರೆಯ ಮೇಲೆಯೇ ಎಲ್ಲಾ ಯುದ್ಧಗಳಲ್ಲಿ ಭಾಗವಹಿಸುತ್ತಿದ್ದ ಮಹಾರಾಣಾ ಪ್ರತಾಪ್‌, ಅಕ್ಬರನ ವಿರುದ್ಧದ ಹಲ್ದಿಘಟ್ ಯುದ್ಧವನ್ನು ಕೂಡ ಇದೇ ಕುದುರೆಯೊಂದಿಗೆ ಎದುರಿಸಿದ್ದರು. ಚೇತಕ್ ಎಂಬ ಕುದುರೆ ಸಾಮಾನ್ಯ ಕುದುರೆಗಳ ಜಾತಿಗೆ ಸೇರಿದ ಕುದುರೆ ಅಲ್ಲ, ನೋಡಲು ಸಣ್ಣದಾಗಿದ್ದು, ಇದರ ಭುಜಗಳು ಬಲಿಷ್ಠವಾಗಿದೆ, ಅದೇ ರೀತಿ ಅತೀ ಎತ್ತರಕ್ಕೆ ಹಾರುವ ಸಾಮಾರ್ಥ್ಯ ಕೂಡ ಹೊಂದಿದೆ. ಇಂತಹ ಸಾಮಾರ್ಥ್ಯ ಇರುವ ಚೇತಕ್ ಎಂಬ ಕುದುರೆಯಿಂದ‌ ಮಹಾರಾಣಾ ಪ್ರತಾಪ್‌ ಅನೇಕ ಯುದ್ಧಗಳನ್ನು ಗೆದ್ದಿದ್ದಾರೆ. ಅದೇ ರೀತಿ ಹಲ್ದಿಘಟ್ ಕದನದಲ್ಲಿ ಕೂಡ ಮಹಾರಾಣಾ ಪ್ರತಾಪ್‌ನ ಜೊತೆಗೆ ಅಕ್ಬರನ ವಿರುದ್ಧ ಹೋರಾಡಿದ ಈ ಚೇತಕ್, ಅಕ್ಬರನಿಂದ ಮಹಾರಾಣಾ ಪ್ರತಾಪರ ಪ್ರಾಣವನ್ನು ಉಳಿಸಿ ಕೊನೆಗೂ ತನ್ನ ಪ್ರಾಣ ಕಳೆದುಕೊಂಡಿತ್ತು. ಈ ಒಂದು ಘಟನೆ ನಿಜಕ್ಕೂ ರೋಮಾಂಚನಕಾರಿ.!

See the source image

ಮಹಾರಾಣಾ ಪ್ರತಾಪ್‌ ಮತ್ತು ಮಾನ್ ಸಿಂಗ್ ಎಂಬ ರಾಜನ ನಡುವೆ ನಡೆದ ಹೋರಾಟದಲ್ಲಿ ಚೇತಕ್ ಮಾನ್ ಸಿಂಗ್‌‌ನ ಆನೆಯ ಸೊಂಡಿಲಿನ ಮೇಲೆ ಕಾಲಿಟ್ಟು ಮುನ್ನುಗ್ಗುತ್ತದೆ, ಈ ಸಂದರ್ಭದಲ್ಲಿ ಮಹಾರಾಣಾ ಪ್ರತಾಪ್‌ ತನ್ನ‌ ಬಳಿ ಇರುವ ಈಟಿಯಿಂದ ಮಾನ್ ಸಿಂಗ್‌ನ ಮೇಲೆ ದಾಳಿ ಮಾಡುತ್ತಾರ, ಆದರೆ ಮಾನ್ ಸಿಂಗ್ ತಕ್ಷಣ ಬಗ್ಗಿ ಈಟಿಯಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಆನೆಯ ಮಾವುತ ಈಟಿಯ ಏಟಿಗೆ ಸಾವನ್ನಪ್ಪುತ್ತಾರೆ. ಆದರೆ ಈ ಸಂದರ್ಭದಲ್ಲಿ ಆನೆಯ ಮರ್ಡಾನ (ಯುದ್ಧ ಆನೆಗಳ ಸೊಂಡಿಲಿನ ಖಡ್ಗ)ವು ಪ್ರತಾಪರ ಕುದುರೆ ಚೇತಕ್‌ನ ಕಾಲಿಗೆ ತಾಗಿ ಚೇತಕ್ ತನ್ನ ಒಂದು ಕಾಳನ್ನೇ ಕಳೆದುಕೊಳ್ಳುತ್ತದೆ. ಆದರೂ ರಣರಂಗದಲ್ಲಿ ಕುಸಿಯದೆ ಮಹಾರಾಣಾ ಪ್ರತಾಪ್‌ರನ್ನು ಯುದ್ಧಭೂಮಿಯಿಂದ ಹೊರಗೆ ತೆಗೆದುಕೊಂಡು ಹೋಗಿ ಪ್ರತಾಪರ ಪ್ರಾಣವನ್ನು ಉಳಿಸುತ್ತದೆ ಈ ಚೇತಕ್. ರಣರಂಗದಿಂದ ಹೊರ ಹೋಗುವ ಮಾರ್ಗದಲ್ಲಿ ಒಂದು ದೊಡ್ಡ ಕಂದಕ ಸಿಗುತ್ತದೆ, ಒಂದೆಡೆ ತನ್ನ ಒಂದು ಕಾಲು ಮುರಿದಿದ್ದರೂ ಕೂಡ ಈ‌ ಬೃಹತ್ ಕಂದಕವನ್ನು ಹಾರಿ ಚೇತಕ್ ಅಲ್ಲೇ ಕುಸಿದು ಬೀಳುತ್ತದೆ. ತನ್ನ ಒಡೆಯನಾದ ಮಹಾರಾಣಾ ಪ್ರತಾಪ್‌ನ ಪ್ರಾಣವನ್ನು ಉಳಿಸುತ್ತದೆ ಈ ಕುದುರೆ. ಆದರೆ ಚೇತಕ್ ಮರಣ ಹೊಂದಿದಾಗ ಮಹಾರಾಣಾ ಪ್ರತಾಪ್‌ ಅತ್ಯಂತ ದುಃಖದಿಂದ ಅಲ್ಲೇ ಅಳುತ್ತಾ ಕೂರುತ್ತಾರೆ ಮತ್ತು ದೇವರಲ್ಲಿ ಪ್ರಾರ್ಥಿಸುತ್ತಾರೆ. ನಂತರದಲ್ಲಿ ಚೇತಕ್ ಕೊನೆಯುಸಿರೆಳೆದ ಸ್ಥಳದಲ್ಲೇ ಅದರ ನೆನಪಿಗಾಗಿ ಒಂದು ದೊಡ್ಡ ಸಮಾಧಿಯನ್ನು ಕೂಡ ನಿರ್ಮಿಸಲಾಗಿದೆ.!

ಮಹಾರಾಣಾ ಪ್ರತಾಪ್‌ ಎಂಬ ಹಿಂದೂ ಸಾಮ್ರಾಟ್ ಮೊಘಲರ ವಿರುದ್ಧ ಯಾವ ರೀತಿ ಹೋರಾಡಿದ್ದರು ಎಂದರೆ ಪ್ರತಾಪರ ಶೌರ್ಯವನ್ನು ಕಂಡು ಸುತ್ತಮುತ್ತಲಿನ ಭಿಲ್ ಎಂಬ ಬುಡಕಟ್ಟು ಜನಾಂಗದವರು ಕೂಡ ಇವರಿಗೆ ಬೆಂಬಲ ನೀಡಿದ್ದರು. ಅದೇ ರೀತಿ ಮೊಘಲ್ ಸೇನೆಯ ಮೇಲೆ ತಮ್ಮ ಹರಿತವಾದ ವಿಷಯುಕ್ತ ಬಾಣಗಳನ್ನು ಪ್ರಯೋಗಿಸಿ ಮೊಘಲ್ ಸೈನ್ಯವನ್ನು ಹಿಂದಕ್ಕೆ ಹೋಗುವಂತೆ ಮಾಡಿದ್ದರು. ಇವರ ಈ ಸಹಾಯಕ್ಕಾಗಿ ಭಿಲ್ ಬುಡಕಟ್ಟು ಜನಾಂಗದವರಿಗೆ ಗೌರವ ಸೂಚಿಸುವ ಸಲುವಾಗಿ ಮೇವಾರದ ರಾಜ ಲಾಂಛನದಲ್ಲಿ ಮಹಾರಾಣಾ ಪ್ರತಾಪರ ಪಕ್ಕದಲ್ಲಿ ಭಿಲ್ ಯೋಧರ ಚಿತ್ರವನ್ನು ಇರಿಸಲಾಗಿದೆ. ಇದು ಮಹಾರಾಣಾ ಪ್ರತಾಪ್‌ ಎಂಬ ಸಾಮ್ರಾಟನ ಮರೆಯಲಾಗದ ಘಟನೆಯಾಗಿದೆ.

ಭಾರತದ ಇತಿಹಾಸದಲ್ಲಿ ಇಂತಹ ಅದೆಷ್ಟೋ ರಾಜರುಗಳ ಶೌರ್ಯ ಪರಾಕ್ರಮದ ಕಥೆ ಇದೆ, ಆದರೆ ಇತಿಹಾಸ ಪುಟಗಳಲ್ಲಿ ಕೇವಲ ಮೊಘಲರ, ತುರ್ಕರ ಕ್ರೂರತೆಯನ್ನೇ ದೊಡ್ಡ ಸಾಹಸ ಎಂಬಂತೆ ಬಿಂಬಿಸಲಾಗಿದೆ. ‌ಇದು ನಿಜಕ್ಕೂ ವಿಪರ್ಯಾಸವೇ ಸರಿ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
Close