ಪ್ರಚಲಿತ

ಹಿಂದೂ ವಿರೋಧಿ ಕಾಂಗ್ರೆಸ್‌ನಿಂದ ಹಿಂದೂ ಸಂಘಟನೆ, ಬಿಜೆಪಿ‌ಗೆ ಪಾಠ

ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಧರ್ಮ, ಹಿಂದೂ ನಂಬಿಕೆಗಳು, ಹಿಂದೂ ದೇವರುಗಳ ಮೇಲೆ ಇನ್ನಿಲ್ಲದ ಕೋಪ. ಕಾಂಗ್ರೆಸ್ ಪಕ್ಷದಲ್ಲಿರುವ ಹಿಂದೂ ಧರ್ಮದಲ್ಲಿ ಜನಿಸಿದ ಜನರಿಗೂ ಹಿಂದೂ ಧರ್ಮ, ದೇವರುಗಳ ಮೇಲೆ ತಿರಸ್ಕಾರ, ಉಡಾಫೆ ಅವರ ಮೇಲೆ ಅಸಹ್ಯ ಹುಟ್ಟುವಂತೆ ಮಾಡಿಸುತ್ತದೆ. ಹಿಂದೂಗಳಾಗಿದ್ದುಕೊಂಡು ಹಿಂದೂಗಳ ವಿರುದ್ಧ ಕೆಲಸ ಮಾಡುವ, ಹೇಳಿಕೆಗಳನ್ನು ನೀಡುವವರ ವಿರುದ್ಧ ಸಾರ್ವಜನಿಕರಿಗೆ ಆಕ್ರೋಶ ಭುಗಿಲೇಳುತ್ತದೆ ಎಂದರೂ ಅತಿಶಯವಲ್ಲ.

ಅಲ್ಪಸಂಖ್ಯಾತರ ಓಲೈಕೆ, ಅವರಿಗೆ ಸಂತೋಷ ನೀಡುವ ನಿಟ್ಟಿನಲ್ಲಿ ಹಲವಾರು ಕೆಲಸಗಳನ್ನು ಮಾಡುವ, ಅವರ ಅಭಿವೃದ್ಧಿಯ ಹಿತದೃಷ್ಟಿಯಿಂದ ಅಲ್ಪಸಂಖ್ಯಾತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುವ ಕಾಂಗ್ರೆಸ್‌ನ ದ್ವಿಮುಖ ನೀತಿಯ ವಿರುದ್ಧ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಆದರೆ ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದ ಕಾಂಗ್ರೆಸ್ ಓಟ್ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರ ಓಲೈಕೆ, ಅವರ ದೇಶ ವಿರೋಧಿ, ಸಮಾಜ ವಿರೋಧಿ ಚಟುವಟಿಕೆಗಳಿಗೆ ಬೆಂಬಲ ನೀಡುವುದು ಇತ್ಯಾದಿ ಸಮಾಜ ಬಾಹಿರ ಚಟುವಟಿಕೆಗಳನ್ನು ಮಾಡುತ್ತಿರುವುದು ಗಂಭೀರ ವಿಷಯವೇ ಹೌದು.

ಇದರ ಜೊತೆಗೆ ಅಲ್ಪಸಂಖ್ಯಾತರ ನಂಬಿಕೆ ಗಿಟ್ಟಿಸಲು ಹಿಂದೂ ಧರ್ಮದ ಬಗ್ಗೆ, ಹಿಂದೂ ದೇವರುಗಳ ಬಗ್ಗೆ, ಹಿಂದೂ ಧಾರ್ಮಿಕ ನಂಬಿಕಗಳ ಬಗೆಗೂ ಕಾಂಗ್ರೆಸ್ ಅವಹೇಳನ ಮಾಡುತ್ತಲೇ ಬರುತ್ತಿದೆ ಎನ್ನುವುದು ಸತ್ಯ. ಕಾಂಗ್ರೆಸ್ ನಾಯಕರು ಹಿಂದೂಗಳಲ್ಲಿ ಹಿಂದುಳಿದ ವರ್ಗಗಳಿಗೆ ನೀಡುತ್ತಿದ್ದ ಮೀಸಲಾತಿಯನ್ನು ಕಿತ್ತು, ಮುಸಲ್ಮಾನರಿಗೆ ನೀಡಲು ಚಿಂತನೆ ರೂಪಿಸುತ್ತಿರುವುದು ಇದಕ್ಕೆ ಸ್ಪಷ್ಟ ನಿದರ್ಶನವೂ ಹೌದು‌.

ಅಲ್ಲದೆ ಕಾಂಗ್ರೆಸ್ ನಾಯಕರು ಹಿಂದೂ ದೇವರುಗಳ ಬಗ್ಗೆ ಕೇವಲವಾಗಿ ಮಾತನಾಡುವುದು, ದೇಶ ವಿರೋಧಿಗಳ ಜೊತೆಗೆ ಕೈಜೋಡಿಸುವುದು ಮಾಡುವ ಮೂಲಕ ಈ ದೇಶದ ಬಹುಸಂಖ್ಯಾತರ ಭಾವನೆಗಳನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ. ಪ್ರಭು ಶ್ರೀರಾಮನನ್ನು ಅವಹೇಳನ ಮಾಡುತ್ತಾರೆ. ರಾಮಾಯಣ ನಡೆದೇ ಇಲ್ಲ ಎನ್ನುತ್ತಾರೆ. ಹಿಂದೂ ನಂಬಿಕೆಗಳು, ಆಚರಣೆಗಳ ಮೇಲೆ ನಂಬಿಕೆ ಇಲ್ಲ ಎನ್ನುತ್ತಾರೆ. ಆದರೆ ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್ ನಾಯಕರು ದೇವಾಲಯಗಳಿಗೆ ತೆರಳಿ, ನಾಟಕೀಯವಾಗಿ ಹಣೆಗೆ ಉದ್ದುದ್ದ ‌ನಾಮ ಬಳಿದು ಹಿಂದೂಗಳನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ.

ಹಿಂದೂ ಧರ್ಮದ ವಿರುದ್ಧವೇ ಕೆಲಸ ಮಾಡುವ ಕಾಂಗ್ರೆಸ್ ನಾಯಕರು ಹಿಂದೂಗಳ ಬಗ್ಗೆ, ಹಿಂದೂ ಧರ್ಮವನ್ನು ಕಾಪಾಡುವ ಹಿನ್ನಲೆಯಲ್ಲಿ ಕೆಲಸ ಮಾಡುವ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದು, ಇದು ನಿಜಕ್ಕೂ ಹಾಸ್ಯಾಸ್ಪದವೇ ‌ಸರಿ.

ಹಿಂದೂ ಧರ್ಮ, ಬಸವ ತತ್ವಕ್ಕೆ ಸಂಬಂಧಿಸಿದ ಹಾಗೆ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಮಾತನಾಡಿದ್ದು, ಬಿಜೆಪಿ ಮತ್ತು ಶ್ರೀರಾಮ ಸೇನೆಯಂತಹ ಕ್ರಿಮಿನಲ್ ಹಿನ್ನಲೆ ಉಳ್ಳವರ ಅಗತ್ಯ ಹಿಂದೂ ಧರ್ಮಕ್ಕೆ ಇಲ್ಲ ಎನ್ನುವ ಮೂಲಕ ಮತ್ತೆ ವಿವಾದ ಸೃಷ್ಟಿ ಮಾಡಿದ್ದಾರೆ.

ತಮ್ಮ ಸರ್ಕಾರವೇ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದರೂ ಹಿಂದೂಗಳಿಗಾಗಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳದ, ಯಾವುದೇ ಯೋಜನೆ ರೂಪಿಸದ ಕಾಂಗ್ರೆಸ್‌ನವರಿಂದ ಹಿಂದೂ ಧರ್ಮದ ಬಗ್ಗೆ ಕಾಳಜಿ ಸಾರ್ವಜನಿಕ ವಲಯದಲ್ಲಿ ಹಾಸ್ಯಾಸ್ಪದ ವಿಷಯವಾಗಿದೆ. ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ಲೋಕಾರ್ಪಣೆಗೆ ಆಹ್ವಾನ ನೀಡಿದ್ದರೂ ಆ ಆಹ್ವಾನವನ್ನು ತಿರಸ್ಕರಿಸಿದ್ದ ಕಾಂಗ್ರೆಸ್‌ನವರಿಂದ ಈಗ ಹಿಂದೂ ಧರ್ಮದ ಮೇಲಿನ ಕಾಳಜಿಯ ಮಾತುಗಳು ಸಂದೇಹ ಹುಟ್ಟಿಸುವಂತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸದಾ ಕಾಲ ಹಿಂದೂ ಧರ್ಮ, ಹಿಂದೂ ದೇವರುಗಳ, ಹಿಂದೂಗಳ ಮೇಲಿನ ರಕ್ಷಣೆಗೆ ನಿಲ್ಲುವ ಹಿಂದೂ ಸಂಘಟನೆಗಳ ಮೇಲೆ ಆರೋಪ ಮಾಡುವ ಕಾಂಗ್ರೆಸ್, ನಿಜಾರ್ಥದಲ್ಲಿ ಹಿಂದೂಗಳಿಗೆ ಉಸಿರಾಡುವುದಕ್ಕೂ ಕಷ್ಟವಾಗುವ ಪರಿಸ್ಥಿತಿಯನ್ನು ರಾಜ್ಯದಲ್ಲಿ ನಿರ್ಮಾಣ ಮಾಡಲು ಹೊರಟಿದೆ. ಈ ಕಾರಣದಿಂದಲೇ ರಾಜ್ಯದಲ್ಲಿ ಹಿಂದೂಗಳ ಮೇಲಿನ ಅಲ್ಪಸಂಖ್ಯಾತರ ದೌರ್ಜನ್ಯಗಳಂತಹ ದುರ್ಘಟನೆಗಳು ಹೆಚ್ಚುತ್ತಿರುವುದು. ಗೋಹತ್ಯೆ, ಲವ್ ಜಿಹಾದ್‌ಗಳಂತಹ ದುರಂತಗಳು, ಪ್ರೀತಿಯ ಹೆಸರಲ್ಲಿ ಹತ್ಯೆಗಳು ನಡೆಯುತ್ತಿರುವುದು ಎನ್ನುವುದು ಎಲ್ಲರೂ ಬಲ್ಲ ಸಂಗತಿ.

ಮಾತ್ರವಲ್ಲದೆ ಅಲ್ಪಸಂಖ್ಯಾತರ ಅಭಿವೃದ್ಧಿಯ ದೃಷ್ಟಿಯಿಂದ ಕೋಟಿ ಕೋಟಿ ಅನುದಾನ ನೀಡಿರುವ ಕಾಂಗ್ರೆಸ್ ಹಿಂದೂಗಳ ಕೈಗೆ ಚಿಪ್ಪು ನೀಡಿದೆ. ಅಲ್ಲದೆ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇಗುಲಗಳ ಹುಂಡಿ ಕಾಸನ್ನು ಸಹ ಇತರ ಧರ್ಮಗಳ ಅಭಿವೃದ್ಧಿಗೆ ಬಳಕೆ ಮಾಡುತ್ತಿದೆ. ಮುಸಲ್ಮಾನರ ಧಾರ್ಮಿಕ ಕಾರ್ಯಕ್ರಮಗಳಿಗೆ ಟೋಪಿ ಹಾಕಿ ಭೇಟಿ ನೀಡುವ ಕೈ ಪಕ್ಷದ ಹಿಂದೂ ನಾಯಕರಿಗೆ, ಹಿಂದೂಗಳ ಆಚರಣೆ, ಹಬ್ಬ, ಹರಿದಿನಗಳೆಂದರೆ ಅಸಹ್ಯ.

ಹೀಗಿದ್ದರೂ ಹಿಂದೂ ಧರ್ಮದ ಆಚರಣೆ, ನಂಬಿಕೆಗಳು, ದೇವರುಗಳ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುವ ಬಿಜೆಪಿ, ಹಿಂದೂ ಸಂಘಟನೆಗಳ ವಿರುದ್ಧ ‘ಹಿಂದೂ ವಿರೋಧಿಗಳು’ ಎಂದು ಹೇಳಿಕೆ ನೀಡುವ ಕಾಂಗ್ರೆಸ್ ನಾಯಕರು ತಮ್ಮ ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳುವ ಅನಿವಾರ್ಯತೆ ಇದೆ ಎಂದರೆ ತಪ್ಪಾಗಲಾರದು.

Tags

Related Articles

Close