ಪ್ರಚಲಿತ

ಕಲಿಯುಗದ ಇಂದಿನ ದುಃಸ್ಥಿತಿ, ಜನರ ಸ್ವಭಾವ, ಪ್ರಕೃತಿ ವಿಕೋಪದ ಬಗ್ಗೆ ಸಹಸ್ರಾರು ವರ್ಷಗಳ ಹಿಂದಿನ ದ್ವಾಪರಯುಗದಲ್ಲಿ ಋಷಿಮುನಿಗಳು ತಿಳಿಸಿದ ಭವಿಷ್ಯವಾಣಿ ಏನು ಗೊತ್ತೇ? ಇಷ್ಟೊಂದು ಕರಾರುವಕ್ಕಾಗಿ ಹೇಗೆ ಹೇಳಿದರು?

ಕೃತಯುಗ, ತ್ರೇತಾಯುಗ, ದ್ವಾಪರ ಯುಗ ಹಾಗೂ ಕಲಿಯುಗ ಹೀಗೆ ಚತುರ್ಯುಗಗಳು ಸಂಭವಿಸಿದ ಬಳಿಕ ಸತ್ಯಯುಗ ಆರಂಭಗೊಳ್ಳುತ್ತದೆ. ದ್ವಾಪರಯುಗ ಮುಗಿದ ಬಳಿಕ ಕಲಿಪುರಷನು ಈ ಪೃಥ್ವಿಗೆ ವಕ್ಕರಿಸಿದ ಬಳಿಕ ಈ ಕಲಿಯುಗದಲ್ಲಿ ಏನೆಲ್ಲಾ ಸಂಭವಿಸುತ್ತದೆ ಎನ್ನುವ ಭವಿಷ್ಯವಾಣಿಯನ್ನು ಸಹಸ್ರಾರು ವರ್ಷಗಳ ಹಿಂದೆಯೇ ಋಷಿಮುನಿಗಳು ಚಾಚೂಚಪ್ಪದಂತೆ ತಿಳಿಸಿದ್ದಾರೆ. ಇಂದಿನ ಕಲಿಯುಗ ಹೇಗಿರುತ್ತದೆ ಎಂದು ಅಷ್ಟೊಂದು ನಿಖರವಾಗಿ ಋಷಿಮುನಿಗಳು ಹೇಗೆ ತಿಳಿಸಿದ್ದರು? ಇದೊಂದು ಪ್ರಶ್ನೆಯೇ ಸನಾತನ ಹಿಂದೂ ಧರ್ಮದ ಶ್ರೇಷ್ಠತೆಯನ್ನು ತಿಳಿಸುತ್ತದೆ. ಅಂದಹಾಗೆ ಋಷಿಮುನಿಗಳು ತಿಳಿಸಿದ ಆ ಭವಿಷ್ಯವಾಣಿ ಏನು? ಅದು ಇಂದಿನ ಪರಿಸ್ಥಿತಿಗೆ ಹೇಗೆ ಹೊಂದಿಕೆಯಾಗುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಇಲ್ಲಿ ತಿಳಿಯಬಹುದು.

ಭಾಗವತವನ್ನು ಹನ್ನೆರಡು ಸ್ಕಂಧಗಳಾಗಿ ವಿಂಗಡಿಸಲಾಗಿದೆ. ಚತುರ್ಮುಖ ಬ್ರಹ್ಮನಿಂದ ಆವಿರ್ಭಜಿಸಿದ ಋಗ್ವೇದ, ಸಾಮವೇದ, ಅಥರ್ವವೇದವನ್ನು ಋಷಿಮುನಿಗಳು ಕಂಡುಕೊಂಡರು. ಆ ಬಳಿಕ ಆಗಮ ಉಪನಿಷತ್ತು, ಸ್ಮøತಿ, ದರ್ಶನ, ಪುರಾಣಗಳು ಪವಿತ್ರವೇದವನ್ನು ಅನುಸರಿಸಿದವು. ಭಗವಂತನಿಂದ ನೀಡಲ್ಪಟ್ಟ ಭಾಗವತನ್ನು ವೇದವ್ಯಾಸರು ರಚಿಸಿದ್ದಾರೆ.
ಋಷಿಪುತ್ರನ ಶಾಪದಿಂದ ಏಳುದಿವಸಗಳಲ್ಲಿ ಮರಣವನ್ನು ಆಮಂತ್ರಿಸಿಕೊಂಡರೂ ಅಭಿಮನ್ಯುವಿನ ಮಗ ಪರೀಕ್ಷಿತ ಮಹಾರಾಜ ಧೃತಿಗೆಡದೆ ಕುಮಾರನಾದ ಜನಮೇಜಯನಿಗೆ ರಾಜ್ಯಾಭಿಷೇಕಗೈದು, ಪ್ರಶಾಂತ ವಾತಾವರಣದಲ್ಲಿ ಶುಕಬ್ರಹ್ಮರಿಂದ ವೇದಾಂತವನ್ನು ಆಲಿಸಿ ಬಾಳನ್ನು ಭಗವಂತನಿಗೆ ಸಮರ್ಪಿಸಿಕೊಂಡನು. ಈ ಏಳು ದಿವಸಗಳಲ್ಲಿ ಹೇಳಲ್ಪಟ್ಟ ಭಾಗವತವು ಸೂತಪುರಾಣಿಕರಿಂದ ಶೌನಕಾದಿಗಳಿಗೆ ನೇಮಿಷಾರಣ್ಯದಲ್ಲಿ ಭೋದಿಸಲ್ಪಟ್ಟಿತು. ಹೀಗೆ ಹನ್ನೆರಡು ಸ್ಕಂಧಗಳಲ್ಲಿ ಭಾಗವತವನ್ನು ನಿರೂಪಿಸಲಾಗಿದೆ. ಇದು ಭೂತಕಾಲದ ಇತಿಹಾಸ ಕೃತಿಯಂತೆ ಇರುವುದನ್ನು ಮನಗಾಣಬಹುದು.

ಹೀಗೆ ದ್ವಾದಶ(ಹನ್ನೆರಡು) ಸ್ಕಂಧದಲ್ಲಿ ಭವಿಷ್ಯದಲ್ಲಿ ಆಗಬಹುದಾದ ಘಟನೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಕಾಲನ ಮಹಿಮೆಯಿಂದ ಪ್ರಜಾಜನರಲ್ಲಿ ಸಂಭವಿಸಬಹುದಾದ ಸ್ವಭಾವ ವ್ಯತ್ಯಾಸಗಳು ಇದರಲ್ಲಿ ನಿರೂಪಿಸಲ್ಪಟ್ಟಿದೆ.

ಚಂದ್ರವಂಶದ ರಾಜ ಪರೀಕ್ಷಿತ ಅರ್ಜುನನ ಮಗ ಅಭಿಮನ್ಯುವಿನ ಪುತ್ರ. ಪಾಂಡವರು ಈತನಿಗೆ ಪಟ್ಟಾಭಿಷೇಕ ಮಾಡಿದ ಬಳಿಕ ಪರಲೋಕ ಯಾತ್ರೆ ಮಾಡುತ್ತಾರೆ. ಪರೀಕ್ಷಿತ ಮಹಾರಾಜ ಚೆನ್ನಾಗಿ ರಾಜ್ಯಭಾರ ಮಾಡುತ್ತಾನೆ. ಪರೀಕ್ಷಿತನು ದ್ವಿಗ್ವಿಜಯಗೈಯುತ್ತಿದ್ದಾಗ ಅರಸನಂತೆ ತೋರುತ್ತಿದ್ದ ಒಬ್ಬಾತನು ಭೂಲೋಕದ ಮಾತೆ ಎಂದು ಗೌರವಿಸಲ್ಪಡುವ ಗೋಮಾತೆಯನ್ನು ಕಾಲಿನಿಂದ ಒದೆಯುತ್ತಿದ್ದ. ಇಂತಹಾ ಹೀನ ಕೃತ್ಯವನ್ನು ಮಾಡುತ್ತಿದ್ದವನನ್ನು ಪರೀಕ್ಷಿತ ತನ್ನ ಭುಜಬಲದಿಂದ ನಿಗ್ರಹಿಸಿದ. ಆತನೇ ಕಲಿಪುರುಷನಾಗಿದ್ದು, ಇವನು ಪರೀಕ್ಷಿತನಲ್ಲಿ ಶರಣುಹೋಗುತ್ತಾನೆ. ತನಗೆ ಈ ಪೃಥ್ವಿಯಲ್ಲಿ ವಾಸಿಸಲು ಇರಬೇಕಾದ ಸ್ಥಳವನ್ನು ಸೂಚಿಸಿದರೆ ಅಲ್ಲೇ ನೆಲೆಯಾಗುತ್ತೇನೆ ಎನ್ನುತ್ತಾನೆ. ಆಗ ಪರೀಕ್ಷಿತ ನಾಲ್ಕು ಸ್ಥಳಗಳಲ್ಲಿ ವಾಸಿಸಲು ಅವಕಾಶಕೊಡುತ್ತಾನೆ.

ಅದುವೇ ದ್ಯೂತ(ಪಗಡೆ), ಅಮಲುಸೇವನೆ, ಅಧಾರ್ಮಿಕವಾದ ಸ್ತ್ರೀ ಸಹವಾಸ, ಕ್ರೂರ ಹಿಂಸೆ ಇರುವ ಪ್ರದೇಶಗಳಾದ ಅಸತ್ಯ, ಅಹಂಕಾರ, ಆಸಕ್ತಿ, ದಯಾವಿಹೀನತೆ ಇರುವ ಕೆಟ್ಟ ಸ್ಥಳಗಳಲ್ಲಿ ವಾಸಿಸುವಂತೆ ಹೇಳುತ್ತಾನೆ. ಅಲ್ಲದೆ ಅನ್ಯಾಯವಾಗಿ ಸಂಪಾದಿಸಿದ ಸಂಪತ್ತಿನಲ್ಲೂ ವಾಸಿಸಲು ಅವಕಾಶ ಕಲ್ಪಿಸುತ್ತಾನೆ. ಪರೀಕ್ಷಿತ ಮಹಾರಾಜ ರಾಜಗದ್ದುಗೆ ಅಲಂಕರಿಸಿದಷ್ಟು ದಿವಸ ಮತ್ತು ಶ್ರೀಕೃಷ್ಣನ ಅವತಾರ ಸಪಾಪ್ತಿಯಾಗುವವರೆಗೆ ಕಲಿಯಿಂದ ಯಾವುದೇ ಅನ್ಯಾಯ ನಡೆಯಲಿಲ್ಲ. ಆದರೆ ಪರೀಕ್ಷಿತ ಮಹಾರಾಜನ ಸಾವಿನ ಬಳಿಕ ಕಲಿಯುಗ ಆರಂಭವಾಯಿತು.

ಒಮ್ಮೆ ಬೇಟೆಗೆ ಹೋಗಿದ್ದ ಪರೀಕ್ಷಿತ ಕುಪಿತಗೊಂಡು ತಪಸ್ಸಿನಲ್ಲಿ ಮೈಮರೆತಿದ್ದ ಮುನಿಶಮೀಕನ ಕೊರಳಿಗೆ ಸತ್ತ ಸರ್ಪವನ್ನು ತೊಡಿಸುತ್ತಾನೆ. ಆದರೆ ಸಾತ್ವಿಕರಾಗಿದ್ದ ಅವರು ಪರೀಕ್ಷಿತನ ತಪ್ಪನ್ನು ಕ್ಷಮಿಸುತ್ತಾರೆ. ಆದರೆ ಅವರ ಪುತ್ರ ಶೃಂಗಿಯು ಕೋಪದಿಂದ, ಇಂದಿನಿಂದ ಏಳು ದಿವಸಗೊಳಗಾಗಿ ನೀನು ಜೀವಂತ ಸರ್ಪದಿಂದ ಕಚ್ಚಲ್ಪಟ್ಟು ಮರಣವನ್ನಪ್ಪುವೆ ಎಂದು ಶಾಪವಿತ್ತರು. ಪಶ್ಚಾತಾಪದಿಂದ ಕುದ್ದುಹೋದ ಪರೀಕ್ಷಿತ ತನ್ನ ಮಗನಾದ ಜನಮೇಜಯನಿಗೆ ಪಟ್ಟಕಟ್ಟಿ, ವೈರಾಗ್ಯವನ್ನು ತಾಳಿ ಕಾಡಿಗೆ ಹೊರಟು ಕೃಷ್ಣಧ್ಯಾನಾಸಕ್ತನಾದನು. ಕಾಡಿನಲ್ಲಿ ವೇದವ್ಯಾಸರ ಪುತ್ರ ಶುಕಮುನಿಗಳು ಪ್ರತ್ಯಕ್ಷರಾಗಿ ಅವನಿಗೆ ತತ್ವಶಾಸ್ತ್ರವನ್ನು ಭೋದಿಸಿ, ಭಾಗವತ ಕಥಾಪ್ರವಚನವನ್ನು ಭೋದಿಸಿದರು. ಹೀಗೆ ಏಳು ದಿವಸಗಳಲ್ಲಿ ಭೋಧಿಸಿದ ಕಥಾಪ್ರವಚನವೇ ಇಂದು ಭಾಗವತವಾಗಿ ಮೂಡಿಬಂದಿತು. ಕಥಾಪ್ರವಚನ ಮುಗಿಯುತ್ತಿದ್ದಂತೆ ತಕ್ಷಕನೆಂಬ ಹಾವು ಪರೀಕ್ಷಿತನಿಗೆ ಕಚ್ಚಿದ ಪರಿಣಾಮ ಆತ ಸಾವನ್ನಪ್ಪುತ್ತಾನೆ. ಈಗೆ ಹನ್ನೆರಡು ಸ್ಕಂಧಗಳಲ್ಲಿ ಮೂಡಿಬಂದ ಪ್ರವಚನದಲ್ಲಿ ದ್ವಾದಶಸ್ಕಂಧದಲ್ಲಿ ಕಲಿಯುಗದ ಭವಿಷ್ಯವಾಣಿ ನಿರೂಪಿತವಾಗಿದೆ. ಅದರ ಆಯ್ದಭಾಗಗಳು ಇಲ್ಲಿವೆ.

ಕಲಿಯುಗದ ಭವಿಷ್ಯವಾಣಿ:

1. ಕಲಿಯುಗದ ರಾಜರಾಗಿರುವವರು ಅಧರ್ಮ, ಅಸತ್ಯದಲ್ಲಿ ಆಸಕ್ತರಾಗಿ ತ್ಯಾಗ, ದಾನದಲ್ಲಿ ನಿರಾಸಕ್ತರಾಗುತ್ತಾರೆ. ಸ್ತ್ರೀಯರನ್ನು, ಬಾಲಕರನ್ನು, ಗೋಪಾಲಕರನ್ನು, ಬ್ರಾಹ್ಮಣರನ್ನು ನಿಂದಿಸುತ್ತಾರೆ.

2. ರಾಜನಂತೆ ಪೋಷಾಕುಗಳನ್ನು ಧರಿಸಿದ್ದರೂ ಪ್ರಜೆಗಳ ಪೀಡನೆಯನ್ನು ಮಾಡುತ್ತಾರೆ. ಶಾಸಕರು ದುರ್ಗುಣವಂತರಾಗಿರುವುದರಿಂದ ಪ್ರಜೆಗಳಲ್ಲೂ ಅದೇ ರೀತಿಯ ದುಷ್ಟ ಸ್ವಭಾವ ಆಚರಣೆಯಲ್ಲಿರುತ್ತದೆ. ಪ್ರಜೆಗಳ ಶೋಷಣೆಯನ್ನು ಮಾಡಿ ಕೊನೆಯಲ್ಲಿ ಎಲ್ಲರೂ ನಶಿಸುತ್ತಾರೆ.

3. ಕಲಿಯುಗದಲ್ಲಿ ವರ್ಷಗಳು ಕಳೆದಂತೆ ಸತ್ಯ, ಧರ್ಮ, ನ್ಯಾಯ, ಕ್ಷಮೆ, ತ್ಯಾಗ, ದಯೆ, ಜನರ ಆಯಸ್ಸು, ಶಕ್ತಿ, ಸ್ಮರಣೆ ಕ್ಷೀಣವಾಗುತ್ತದೆ. ಎಲ್ಲದಕ್ಕೂ ಧನಸಂಪತ್ತೇ ಅಳತೆಗೋಲಾಗುವುದು. ಯಾರು ಧನಿಕನೋ ಆತನೇ ಆಚಾರವಂತ, ಗುಣಶೀಲನೆನಿಸಲ್ಪಡುವನು.

4. ಕಾಮಾಭಿರುಚಿಯೇ ಪ್ರಾಮುಖ್ಯವಾಗುತ್ತದೆ. ಮದುವೆಗೆ ಕುಲ, ಶೀಲ, ಯೋಗ್ಯತೆ ಮಾನದಂಡವಾಗುವುದಿಲ್ಲ. ಛಲ, ಮೋಸ, ನಿಪುಣತೆಯಿಂದ ಅಧಿಕಾರದ ಸ್ಥಾನವನ್ನು ಪಡೆಯುತ್ತಾರೆ. ಕೇವಲ ವೇಷಭೂಷಣಗಳಿಂದ ಸನ್ಯಾಸಿ ಎನಿಸಿಕೊಳ್ಳುತ್ತಾನೆ.

5. ಜಗತ್ತನ್ನು ಆಧರಿಸುವಂಥಾ, ಶಾಂತಿಯನ್ನು ನಿರೂಪಿಸುವಂಥಾ ನ್ಯಾಯವಿರುವುದಿಲ್ಲ. ವಾಚಾಳಿಯೇ ಪಂಡಿತನೆನಿಸುತ್ತಾನೆ. ಗೋಪಿಚಂದನ, ಭಸ್ಮಧಾರಣೆ, ತಿಲಕಪುಂಡ್ರ ಮಾಯವಾಗುತ್ತದೆ. ಗಂಗಾಸ್ನಾನದ ಪಾವಿತ್ರ್ಯತೆ ಅರ್ಥವಾಗಲಾರದು.

6. ಮಾನ ಕೆಡಿಸಿಕೊಂಡಾದರೂ ಹೊಟ್ಟೆಹೊರೆದುಕೊಳ್ಳುವುದೇ ಧರ್ಮವೆನಿಸುತ್ತದೆ. ಉದರಪೋಷಣೆಯಲ್ಲೇ ಕಾಲ ಕಳೆಯುತ್ತಾನೆ. ಸತ್ಯಸಂಧತೆಗೆ ಬೆಲೆ ಇರುವುದಿಲ್ಲ. ಪ್ರಸಿದ್ಧಿಗಾಗಿ ಹಂಬಲಿಸಿ ಅದಕ್ಕಾಗಿ ಧರ್ಮನಿಷ್ಠೆ ಇರುವುದಿಲ್ಲ.

7. ಕ್ರೂರತನ ತಾಂಡವವಾಡಿ ವರ್ಣನಾಶವಾಗುತ್ತದೆ. ಬಲಶಾಲಿಯೊಬ್ಬ ರಾಜನಾಗಿ ಪ್ರಜಾಪೀಡಕನಾಗುತ್ತಾನೆ. ಅರಸರು, ಅಮಾತ್ಯರು, ಅಧಿಪತಿಗಳು ನೀಚರು, ನಿರ್ದಯಿಗಳಾಗಿ ಅನ್ಯಾಯ ಮಾಡುತ್ತಾರೆ. ಪ್ರಜೆಗಳು ನಾಡುಬಿಡುವ ಸ್ಥಿತಿಗೆ ತಲುಪುತ್ತಾರೆ.

8. ಕಾಲಕಾಲಕ್ಕೆ ಮಳೆ ಬರದೆ ಸುಭೀಕ್ಷೆ ಇರುವುದಿಲ್ಲ. ಕ್ಷಾಮ, ಕ್ಷೋಭೆ, ಬಿರುಗಾಳಿ, ಚಂಡಮಾರುತ, ಜಲಪ್ರವಾಹ, ಸುಂಟರಗಾಳಿ ತುಂಬಿಕೊಳ್ಳುತ್ತದೆ.

9. ಪರಸ್ಪರ ಕಲಹ, ಹಗೆ, ಸೆಣೆಸಾಟ, ಕ್ರೂರತನ, ಹೊಡೆದಾಟ, ನಡೆಯುತ್ತದೆ. ಇದರಿಂದ ಮಾನವನ ಸರಾಸರಿ ಆಯುಷ್ಯ 20ರಿಂದ 30 ವರ್ಷಗಳಾಗುತ್ತದೆ.

10. ಕಲಿರಾಜನ ಪ್ರಭಾವದಿಂದ ಶರೀರಗಳು ಅಪೇಕ್ಷಿತ ರೀತಿಯಲ್ಲಿ ಬೆಳೆಯುವುದಿಲ್ಲ. ವೇದಮಾರ್ಗ ನಷ್ಟವಾಗುತ್ತದೆ. ಭತ್ತ, ಗೋಧಿ ಗಿಡಗಳು ಚಿಕ್ಕದಾಗಿ ಬೆಳೆಯುತ್ತದೆ. ಆಕಳುಗಳು ಹಾಲನ್ನು ಕಡಿಮೆ ಪ್ರಮಾಣದಲ್ಲಿ ನೀಡುತ್ತದೆ. ಹಸುವನ್ನು ತಿನ್ನುತ್ತಾರೆ. ಮಿಂಚುಗಳು ಹೆಚ್ಚಾಗುತ್ತದೆ. ಅಕಾಲದಲ್ಲಿ ಗುಡುಗು ಕಾಣಿಸಿ ಮಳೆಯಾಗುತ್ತದೆ.

11. ಅತಿಥಿ ಸತ್ಕಾರ, ವೇದ ಪಾರಾಯಣ ಶೂನ್ಯವಾಗಲಿದೆ. ಕಲಿಯುಗದ ಅಂತ್ಯ ಸಮೀಪಿಸಿದಾಗ ಅಧರ್ಮ, ಆಪತ್ತು ಹೆಚ್ಚಾಗಲಿದೆ.

12. ಸತ್ಯ, ಧರ್ಮ ಶಾಶ್ವತವಾಗಿ ನಾಶವಾದಾಗ ಭಗವಂತ ಅಧರ್ಮವನ್ನು ಕಿತ್ತೊಗೆಯಲು ಅವತರಿಸುತ್ತಾನೆ. ಕಲಿಯುಗಾಂತ್ಯದಲ್ಲಿ ಶಂಭಲವೆಂಬ ಗ್ರಾಮದಲ್ಲಿ ವಿಷ್ಣುಯಶಸ್ ಎಂಬ ಬ್ರಾಹ್ಮಣನ ಮನೆಯಲ್ಲಿ ಕಲ್ಕಿ ಎಂಬ ಹೆಸರಿನಲ್ಲಿ ಭಗವಂತನು ಅವತರಿಸುತ್ತಾನೆ. ಆತ ಅಶ್ವಾರೋಹಿಯಾಗಿ ದುಷ್ಟರನ್ನು ಸದೆಬಡಿಯುತ್ತಾನೆ. ಆ ಬಳಿಕ ಸತ್ಯಯುಗ ಆರಂಭಗೊಳ್ಳುತ್ತದೆ.

13. ಕಲಿಯುಗದಲ್ಲಿ ಸಪ್ತರ್ಷಿಮಂಡಲ ಗೋಚರವಾಗುತ್ತದೆ. ಪುಲಹ ಹಾಘೂ ಕ್ರತು ಎಂಬ ನಕ್ಷತ್ರಗಳು ಗೋಚರವಾಗುತ್ತದೆ. ಆ ನಕ್ಷತ್ರದ ಮಧ್ಯಭಾಗದಲ್ಲಿ ದಕ್ಷಿಣೋತ್ತರದಲ್ಲಿ ಅಶ್ವಿನಿ ಮುಂತಾದ ನಕ್ಷತ್ರಗಳು ಗೋಚರವಾಗುತ್ತದೆ.

14. ಕಲಿಯುಗದ ಜನರು ಭೂಮಿಯನ್ನು ಆಳುವುದೇ ಒಂದು ಸಾಧನೆ ಎನ್ನುತ್ತಾರೆ. ಪಾಪವನ್ನು ಕಳೆಯಲು ದೇವರ ಮೊರೆ ಹೋಗುವ ಅವಕಾಶವಿದ್ದರೂ ಅದರತ್ತ ಜನರು ವಾಲುವುದಿಲ್ಲ.

15. ಕಲಿಯುಗದ ಜನರಲ್ಲಿ ತಮೋಗುಣ ಹೆಚ್ಚಾಗುತ್ತದೆ. ಕಳ್ಳತನ, ವಂಚನೆ, ಆಲಸ್ಯ, ಹಿಂಸೆ, ವಿಷಾದ, ಶೋಕ, ಮೋಹ, ಭಯ ಮೊದಲಾದ ಸ್ವಭಾವದಿಂದ ವರ್ತಿಸುತ್ತಾರೆ.

16. ಕೆಲವು ಜನರು ನಯವಂಚಕರಾಗುತ್ತಾರೆ. ಅನೇಕರು ಕ್ಷುದ್ರ ದೃಷ್ಟಿಯುಳ್ಳವರಾಗುತ್ತಾರೆ. ಸ್ತ್ರೀಯರಿಗೆ ಲಜ್ಜೆ, ಮರ್ಯಾದೆಯನ್ನು ಉಲ್ಲಂಘಿಸಿ ನಡೆಯುತ್ತಾರೆ. ತಲೆಗೂದಲನ್ನು ಬಿಟ್ಟು ವಿಚಿತ್ರ ರೀತಿಯಲ್ಲಿ ಕತ್ತರಿಸುತ್ತಾರೆ.

17. ಕಳ್ಳಕಾಕರು, ದರೋಡೆಕೋರರು ಜಗತ್ತಿನಲ್ಲಿ ತುಂಬಿಕೊಳ್ಳುತ್ತಾರೆ. ರಾಜನ ಸ್ಥಾನದಲ್ಲಿರುವವರು ಪ್ರಜಾಸಂಪಾದನೆಯನ್ನು ಕಸಿದು ಪ್ರಾಣವನ್ನು ಹೀರುತ್ತಾರೆ.

18. ಬ್ರಾಹ್ಮಣರು ಉದರಪೋಷಣೆ, ಕಾಮುಕತನದಲ್ಲಿ ನಿರತರಾಗುತ್ತಾರೆ. ಬ್ರಹ್ಮಚಾರಿಗಳು ವೃತಹೀನರಾಗುತ್ತಾರೆ. ಅತಿಥಿ ಸತ್ಕಾರ ಮಾಯವಾಗುತ್ತದೆ. ಸನ್ಯಾಸಿಗಳು ಧನಸಂಗ್ರಹಣೆಯನ್ನೇ ಅಪೇಕ್ಷಿಸುತ್ತಾರೆ.

19. ಆಪತ್ಕಾಲದಲ್ಲಿಯೂ ನಿಂದನೀಯವಾದ ವಸ್ತು, ವ್ಯಾಪಾರಗಳಲ್ಲಿ ತೊಡಗುತ್ತಾರೆ. ಯಜಮಾನ ಹಾಗೂ ಸೇವಕರಲ್ಲಿ ಬಾಂಧವ್ಯ ಕೆಟ್ಟು ವಿಶ್ವಾಸ ಕಳೆದುಕೊಳ್ಳುತ್ತಾರೆ.

20 ಹಾಲು ಕೊಡದ ಆಕಳನ್ನು ತೊರೆಯುವುದಕ್ಕೆ ಹಿಂಜರಿಯುವುದಿಲ್ಲ. ಗೋವು ತಾಯಿ ಎನ್ನುವ ಭಾವನೆ ನಾಶವಾಗುತ್ತದೆ.

21. ಕಾಮಲಾಸಲೆಗಾಗಿ ಜನರು ಮದುವೆಯಾಗುತ್ತಾರೆ. ಹೆಂಡತಿಯ ಮೋಹಕ್ಕೆ ತಂದೆ, ಸಹೋದರ ಸಹೋದರಿಯನ್ನು ದೂರ ಮಾಡುತ್ತಾರೆ.

22. ನೀಚರು ದಾನ ದಕ್ಷಿಣೆಗಳನ್ನು ಸ್ವೀಕರಿಸುತ್ತಾರೆ. ಧರ್ಮವನ್ನೇ ಅರಿಯದವರು ಉಪದೇಶ ಮಾಡುತ್ತಾರೆ.

23. ಮಳೆ ಕಡಿಮೆಯಾಗಿ ಕ್ಷೋಭೆಯುಂಟಾಗುತ್ತದೆ. ಧರಿಸಲು ಬಟ್ಟೆ ಇರುವುದಿಲ್ಲ. ಉಣ್ಣಲು ಆಹಾರವಿರುವುದಿಲ್ಲ. ನೀರಿನ ಕೊರತೆಯುಂಟಾಗುತ್ತದೆ. ದಾಂಪತ್ಯ ಸುಖವಿರುವುದಿಲ್ಲ. ಕೇವಲ ಬಿಡಿಗಾಸಿಗಾಗಿ ಜಗಳಕಾಯುತ್ತಾರೆ. ಲೋಭದಿಂದ ನೆಂಟರಿಷ್ಟರನ್ನು ಕೊಲೆಗೈಯ್ಯುತ್ತಾರೆ.

24. ಕಲಿಯುಗದಲ್ಲಿ ಪಾಷಂಡಿಗಳ(ಬುದ್ಧಿಜೀವಿಗಳು?) ಉಪದೇಶದಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ. ಭಗವಂತನನ್ನು ಆರಾಧಿಸುವುದಿಲ್ಲ. ಅಪ್ಪಿತಪ್ಪಿ ಆರಾಧಿಸುವವರೂ ಢಾಂಬಿಕರಾಗುತ್ತಾರೆ.

26. ಜನ್ಮ ನೀಡಿದ ತಂದೆತಾಯಿಯನ್ನು ಅವಗಣನೆ ಮಾಡುತ್ತಾರೆ. ತಂದೆತಾಯಿಗೆ ಪುತ್ರವಾತ್ಸಲ್ಯ ಇರುವುದಿಲ್ಲ. ಸದ್ಗುಣ ಸುಪುತ್ರರನ್ನು ತೊರೆಯುತ್ತಾರೆ.

27. ದೇವರ ನಾಮವನ್ನು ಮಲಗುವಾಗ, ಕುಳಿತಾಗ, ನಡೆಯುವಾಗ, ನಲಿಯುವಾಗ, ಏಳುವಾಗ, ಬೀಳುವಾಗ, ಜಾರುವಾಗ, ಎಡವುತ್ತಿರುವಾಗ, ಸಾವು ಕಬಳಿಸುತ್ತಿರುವಾಗ, ಉಚ್ಛರಿಸಿದರೆ ಕರ್ಮದ ಸರಪಳಿಯಿಂದ ಕಳಚಲ್ಪಡಬಹುದಾದರೂ ಕೃತಘ್ನರು ಸ್ಮರಿಸುವುದಿಲ್ಲ. ಕಲಿಯುಗದಲ್ಲಿ ಪರಮಾತ್ಮನಿಗೆ ಭಕ್ತಿಯಿಂದ ನಮಿಸಿದರೂ ಮಾನವನ ಎಲ್ಲಾ ಕಲ್ಮಶಗಳನ್ನು ದೂರ ಮಾಡಿದರೂ ಸಾಕು. ಆತ ಪರೆಯುತ್ತಾನೆ. ಕಲಿಯುಗದಲ್ಲಿ ಹರಿಸಂಕೀರ್ತಣೆ ಮಾಡಿದರೆ ಭಗವಂತನ ಸಾನಿಧ್ಯ ದೊರಕುತ್ತದೆ. ಕೃತಯುಗದಲ್ಲಿ ವಿಷ್ಣವನ್ನು ಧ್ಯಾನಿಸಿದಾಗ, ತ್ರೇತಾಯುಗದಲ್ಲಿ ಯಜ್ಞಗಳನ್ನು ಮಾಡಿದಾಗ, ದ್ವಾಪರ ಯುಗದಲ್ಲಿ ಅರ್ಚನೆಯನ್ನು ಮಾಡಿದಾಗ ಯಾವ ಫಲವು ದೊರಕುತ್ತದೋ ಅದೇ ಫಲವು ಕಲಿಯುಗದಲ್ಲಿ ಹರಿಸಂಕೀರ್ತಣೆಯಿಂದ ದೊರಕುತ್ತದೆ.

ಹೀಗೆ ದ್ವಾಪರಯುಗದಲ್ಲಿ ಕಲಿಯುಗದ ಭವಿಷ್ಯವಾಣಿಯನ್ನು ಋಷಿಮುನಿಗಳು ಅಂದೇ ನುಡಿದಿದ್ದರು. ಆದರೆ ಅವೆಲ್ಲಾ ಇಂದು ಸತ್ಯವಾಗುತ್ತಿದೆ. ಇಷ್ಟೊಂದು ಕರಾರುವಕ್ಕಾಗಿ ಹೇಗೆ ಹೇಳಿದರು ಎನ್ನುವುದೇ ಸೋಜಿಗವೆನಿಸುತ್ತದೆ. ಆದ್ದರಿಂದ ಸನಾತನ ಧರ್ಮವಾದ ಹಿಂದೂ ಧರ್ಮ ಅತಿಶ್ರೇಷ್ಠ ಎನ್ನುವುದರಲ್ಲಿ ಅರ್ಥ ಮಾಡಿಕೊಳ್ಳಬಹುದು.

ಚೇಕಿತಾನ

Tags

Related Articles

Close