ಪ್ರಚಲಿತ

‘ಒಂದು ರಾಷ್ಟ್ರ – ಒಂದು ಚುನಾವಣೆ’: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಚುನಾವಣಾ ವಿಚಾರವಾಗಿ ಮಹತ್ವದ ಹೆಜ್ಜೆ ಇರಿಸಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಅದರ ಸಾಧಕ ಬಾಧಕಗಳನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚನೆ ಮಾಡಿದೆ.

ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾವನೆಗೆ ಸಂಬಂಧಿಸಿದ ಹಾಗೆ ಮಹತ್ವದ ಹೆಜ್ಜೆ ಇರಿಸಿರುವ ಕೇಂದ್ರ ಸರ್ಕಾರ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ಆರಂಭ ಮಾಡಿದೆ. ಆ ಮೂಲಕ ಈ ನೀತಿ ಜಾರಿಯಾದಲ್ಲಿ ಅದರಿಂದಾಗುವ ಲಾಭ, ನಷ್ಟಗಳ ಬಗ್ಗೆ ಲೆಕ್ಕಾಚಾರ ಹಾಕಲು ಮುಂದಾಗಿದೆ.

ಈ ಬೆಳವಣಿಗೆಯು ಸೆಪ್ಟೆಂಬರ್ 18 – 22 ರ ವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದ ಒಂದು ದಿನದ ಬಳಿಕ ತೆಗೆದುಕೊಂಡ ನಿರ್ಣಯವಾಗಿದೆ. ಅನಿರೀಕ್ಷಿತ ಅಧಿವೇಶನದ ಘೋಷಣೆಯ ಬಳಿಕ, ಅಧಿವೇಶನದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆಗೆ ಸಂಬಂಧಿಸಿದ ಹಾಗೆ ಮಸೂದೆಯನ್ನು ಮಂಡನೆ ಮಾಡಲಾಗುವುದು ಎಂಬ ಊಹಾಪೋಹಗಳು ಸಹ ಹರಿದಾಡುತ್ತಿವೆ. ಆದರೆ ಕೇಂದ್ರ ಸರ್ಕಾರ ಈ ವರೆಗೆ ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಯಾವುದೇ ರೀತಿಯ ಖಚಿತ ನಿರ್ಧಾರಗಳನ್ನು ತಿಳಿಸಿಲ್ಲ ಎಂಬುದಾಗಿಯೂ ತಿಳಿದು ಬಂದಿದೆ.

ಆದರೆ ಆ ಸಂಬಂಧ ಅಧಿಕೃತ ಮೂಲಗಳು ನೀಡಿರುವ ಮಾಹಿತಿಯನ್ವಯ, ಈ ವಿಶೇಷ ಸಂಸತ್ ಅಧಿವೇಶನದಲ್ಲಿ ಕೇಂದ್ರದ ಪ್ರಧಾನಿ ಮೋದಿ ಸರ್ಕಾರವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ನಡೆಸುವ ಸಲುವಾಗಿ ಮಸೂದೆ ಮಂಡನೆ ಮಾಡುವ ಸಾಧ್ಯತೆ ಇದೆ. ವಿವಿಧ ರಾಜ್ಯಗಳಲ್ಲಿ ಚುನಾವಣೆ ನಡೆಯುವ ಸಂದರ್ಭದಲ್ಲಿಯೇ ಲೋಕಸಭಾ ಚುನಾವಣೆಯನ್ನು ನಡೆಸುವುದು ಸಹ ಇದರ ಉದ್ದೇಶವಾಗಿದೆ. ಈ ಸಂಬಂಧ ಮುಂದಿನ 18 ರಿಂದ 22 ರ ವರೆಗೆ 5 ದಿನಗಳ ಕಾಲ ವಿಶೇಷ ಸಭೆಗಳನ್ನು ನಡೆಸುವ ಸಾಧ್ಯತೆ ಇರುವುದಾಗಿಯೂ ಮೂಲಗಳಿಂದ ತಿಳಿದು ಬಂದಿದೆ.

ಸಮಿತಿಯ ಸದಸ್ಯರ ಬಗೆಗೆ ಆ ಬಳಿಕ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂಬುದಾಗಿಯೂ ಮೂಲಗಳು ಮಾಹಿತಿ ನೀಡಿವೆ. ಒಂದು ರಾಷ್ಟ್ರ – ಒಂದು ಚುನಾವಣೆ ಪರಿಕಲ್ಪನೆಯು ದೇಶದಲ್ಲಿ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ಪರಿಕಲ್ಪನೆಯನ್ನು ಉಲ್ಲೇಖಿಸುತ್ತದೆ. ದೇಶಾದ್ಯಂತ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ಅಸೆಂಬ್ಲಿಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸಲು ಈ ಉಪಕ್ರಮ ಮಹತ್ವದ ಪಾತ್ರ ವಹಿಸಲಿದೆ.

ಈ ವರ್ಷದ ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ದೇಶದ ಐದು ರಾಜ್ಯಗಳಿಗೆ ಸಂಬಂಧಿಸಿದ ಹಾಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ಹಾಗೆಯೇ ಮುಂದಿನ ವರ್ಷದ ಮೇ ಅಥವಾ ಜೂನ್ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ಸಹ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ವಿಶೇಷ ಒಂದು ದೇಶ – ಒಂದು ಚುನಾವಣೆ ಪರಿಕಲ್ಪನೆ ಮಹತ್ವ ಪಡೆದಿದೆ.

ಈ ಪರಿಕಲ್ಪನೆಯ ಬಗ್ಗೆ ಈ ಹಿಂದೆಯೇ ಪ್ರತಿಪಾದಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಇಂತಹ ವ್ಯವಸ್ಥೆ ಭಾರತಕ್ಕೆ ಅಗತ್ಯವಾಗಿದೆ. ಏಕೆಂದರೆ ವರ್ಷದಲ್ಲಿ ಆಗಾಗ್ಗೆ ಭಾರತದಲ್ಲಿ ಚುನಾವಣೆ ನಡೆಯುತ್ತಿದ್ದು, ಇದು ಅಭಿವೃದ್ಧಿ ಕಾರ್ಯಗಳಿಗೂ ಹಿನ್ನಡೆಯಾಗುವುದಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದರು. ಹಾಗೆಯೇ ಲೋಕಸಭೆ, ವಿಧಾನಸಭೆ, ಪಂಚಾಯತ್ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿಯನ್ನು ಪ್ರಸ್ತಾಪಿಸಿದ್ದ ಅವರು, ಇದರಿಂದ ಸಂಪನ್ಮೂಲ ವ್ಯರ್ಥವಾಗುತ್ತಿರುವುದಾಗಿಯೂ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸಂಸತ್ತಿನ ಈ ವಿಶೇಷ ಅಧಿವೇಶನವು ಪ್ರಧಾನಿ ಮೋದಿ ಅವರ ಒಂಬತ್ತು ವರ್ಷಗಳ ಆಡಳಿತದಲ್ಲಿ ನಡೆಯುತ್ತಿರುವ ಮೊದಲ ವಿಶೇಷ ಅಧಿವೇಶನವಾಗಿದೆ.

Tags

Related Articles

Close