ಪ್ರಚಲಿತ

ಲೆಫ್ಟಿನೆಂಟ್ ಮನೋಜ್ ಪಾಂಡೆ ಎಂಬ ಪರಮ ವೀರ! ಎಂಜಿನಿಯರ್ ಆಗಬೇಕಾದ ಯುವಕ ದೇಶ ರಕ್ಷಣೆಯಲ್ಲಿ ಅತ್ಯುಚ್ಚ ಬಲಿದಾನ ನೀಡಿದ ಸಾಹಸಗಾಥೆ!

ಮಗನನ್ನು ಇಂಜಿನಿಯರ್ ಮಾಡಬೇಕೆಂದು ಆಸೆ ಹೊತ್ತ ಈ ತಂದೆ ತಾಯಿಯ ಮಾತು ಧಿಕ್ಕರಿಸಿ ಮಗ ಸೇನೆಗೆ ಸೇರಿ ಇಡೀ ದೇಶವೇ ಆತನ ಸಾಹಸಕ್ಕೆ ಅಚ್ಚರಿಪಟ್ಟಿತ್ತು ಆತ ಬೇರಾರು ಅಲ್ಲ.. ಗೋಪಿಚಂದ್ರ ಪಾಂಡೆ ಮತ್ತು ಮೋಹಿನಿ ಪಾಂಡೆ ಎಂಬ ದಂಪತಿಗಳ ಸುಪುತ್ರ ಮನೋಜ್ ಕುಮಾರ್ ಪಾಂಡೆ. ಹುಟ್ಟಿನಿಂದಲೇ ತಮ್ಮ ಮಗನನ್ನು ಇಂಜಿನಿಯರಾಗಿ ಮಾಡಬೇಕು ಎನ್ನುವುದು ಮನೋಜ್ ಅವರ ತಾಯಿಯ ಆಸೆಯಾಗಿತ್ತು.. ಆದರೆ ಮಗ ಮಾತ್ರ `ರಾಷ್ಟ್ರೀಯ ರಕ್ಷಣಾ ಅಕಾಡೆಮಿ’ ಸೈನಿಕ ಶಾಲೆಯನ್ನು ಸೇರಿಕೊಂಡ.ಮನೋಜ್ ಕುಮಾರ್ ಪಾಂಡೆ ಹುಟ್ಟಿದ್ದು 1975ರ ಜೂನ್ 25 ರಂದು, ಲಕ್ನೋ ಸೈನಿಕ ಶಾಲೆಯಲ್ಲಿ ಶಿಕ್ಷಣವನ್ನು ಪ್ರಾರಂಭಿಸಿದ ಮನೋಜ್ ಕುಮಾರ್ ಸಣ್ಣವಯಸ್ಸಿನಿಂದಲೇ ದೇಶಾಭಿಮಾನವನ್ನು ಮೈಗೂಡಿಸಿಕೊಂಡಿದ್ದರು. ವೀರಚರಿತೆಗಳನ್ನು ಕೇಳುತ್ತಾ ಕೇಳುತ್ತಾ ಮನೋಜ್ ಕುಮಾರ್ ತನ್ನ ಮನಸ್ಸಿನಲ್ಲಿ “ನಾನೇಕೆ ಅವರ ಹಾಗೆ ಆಗಬಾರದು ಎಂದು ಯೋಚನೆ ಮಾಡುತ್ತಿದ್ದರು”. ಮಾಧ್ಯಮಿಕ ಶಿಕ್ಷಣ ಮುಗಿಸಿದ ಬಳಿಕ ಪುಣೆಯ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಕೊಂಡ ಮನೋಜ್ ಕುಮಾರ್ ಬಿಇ ಪದವಿಯನ್ನು ದ್ವಿತೀಯ ರ್ಯಾಂಕ್ ಪಡೆಯುವ ಮೂಲಕ ಮುಗಿಸಿದರು. ಮಗನ ಸಾಧನೆಯನ್ನು ಕಂಡು ತಾಯಿ ತಂದೆಗೆ ಮಗನ ಬಗ್ಗೆ ಹೆಮ್ಮೆಯೋ ಹೆಮ್ಮೆ. ಖುಷಿಯಿಂದ ಊರು ತುಂಬಾ ಸಿಹಿ ಹಂಚಿದರು. ತನ್ನ ಮಗನನ್ನು ಇಂಜಿನಿಯರ್ ಮಾಡಬೇಕೆಂಬ “ನನ್ನ ಆಸೆ ಈಡೇರಿತು” ಎನ್ನುವಷ್ಟರಲ್ಲಿ ಆ ತಾಯಿಯ ಆಸೆಗೆ ಬಿತ್ತು ಕತ್ತರಿ!! ತಂದೆ ತಾಯಿಯ ಆಸೆಯನ್ನು ಪೂರೈಸಲು ಮನೋಜ್ ಕುಮಾರ್ ಒಪ್ಪದೆ ಸೇನೆಗೆ ಸೇರಿಕೊಂಡರು… ತಾಯಿ ತಂದೆಯ ವಿರೋಧದ ನಡುವೇಯೇ ಮನೋಜ್ ಕುಮಾರ್ ಪುಣೆಯ `ರಾಷ್ಟ್ರೀಯ ರಕ್ಷಣಾ ಅಕಾಡಮಿ’ ಸೈನಿಕ ಶಾಲೆಯನ್ನು ಸೇರಿಕೊಂಡರು.

Image result for lieutenant manoj kumar pandey pvc kargil war

 

ಪರೀಕ್ಷೆಯನ್ನ ಕಟ್ಟಿದ ಮೊದಲ ಪ್ರಯತ್ನದಲ್ಲೇ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಎಲ್ಲಾ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ಇನ್ನೇನು ಸೇನಾ ಸಮವಸ್ತ್ರ ಧರಿಸಲು ಇದ್ದದ್ದು ಕೊನೆಯ ಸಂದರ್ಶನ, ತನ್ನ ರಿಪೋರ್ಟ್ ತೆಗೆದುಕೊಂಡು ಹೋಗಿ ಕುಳಿತಿದ್ದೆ ತಡ ಅಧಿಕಾರಿಗಳಿಗೆ ಆಶ್ಚರ್ಯವಾಗಿತ್ತಂತೆ!! ಇಂಜಿನಿಯರಿಂಗ್ ಮುಗಿಸಿದ ನೀನು ಸೇನೆಗೆ ಯಾಕೆ ಸೇರಿಕೊಂಡೆ?! ಇದಕ್ಕಿಂತ ಒಳ್ಳೆ ಉದ್ಯೋಗ ಸಿಗಬಹುದಿತ್ತಲ್ಲ?! ಸಾವು ಬಂದರೆ ಏನು ಮಾಡುತ್ತಿಯಾ? ಎಂಬ ಅಧಿಕಾರಿಗಳ ಪ್ರಶ್ನೆಗೆ ಮನೋಜ್ ನಗುತ್ತಲೆ ಉತ್ತರಿಸಿದ್ದ “ನನಗೆ ಬೇರೆ ಕೆಲಸಗಳು ಹಣ ಕೊಡಬಹುದು ಆದರೆ ಈ ಕೆಲಸ ನೆಮ್ಮದಿ ಕೊಡುತ್ತೆ ಒಮ್ಮೆ ನನ್ನ ಕೆಲಸಕ್ಕೆ ಯಮ ಅಡ್ಡಪಡಿಸಿದರೆ ಅವನನ್ನು ಕೊಂದು ನನ್ನ ಕೆಲಸ ಮಾಡ್ತಿನಿ” ಉತ್ತರ ಕೇಳಿ ಅಧಿಕಾರಿಗಳೇ ಬೆವತು ಹೋಗಿದ್ದರು, ಅಲ್ಲಿಯ ವರೆಗೆ ಅದೆಷ್ಟೋ ಸೈನಿಕರನ್ನ ಮಾತಾಡಿಸಿದ್ದರೂ ಮನೋಜ್ ಮಾತುಗಳು ದಂಗು ಬಡಿಸಿ ಬಿಟ್ಟಿತ್ತು!! ಮೃತ್ಯುವಿಗೇ ಓಪನ್ ಛಾಲೆಂಜ್ ನೀಡಿದ್ದ ಮನೋಜ್ ನಿಜಕ್ಕೂ ಒಂದು ಅಚ್ಚರಿ?!
ಅಂತೂ ಇಂತೂ ಸೇನೆಗೆ ಕಾರ್ಯನಿರ್ವಹಿಸಲು ಶುರು ಮಾಡಿದ. ಗೂರ್ಖಾ ರೈಪಲ್ಸ್ ನಲ್ಲಿ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸತೊಡಗಿದ್ದ ಸಮಯದಲ್ಲಿ ಮನೋಜ್ ಕುಮಾರ್ ಪಾಂಡೆ ತುಕಡಿಗೆ ಬೆಟಾಲಿಯನ್ ಸೆಕ್ಟರ್ನಲ್ಲಿ ಬೀಡು ಬಿಟ್ಟಿದ್ದ ಭಯೋತ್ಪಾದಕರನ್ನ ಸೆದೆಬಡಿಯಬೇಕೆಂಬ ಆದೇಶ ಬಂದಿತ್ತು!

ಕಡಿದಾದ ಸುಮಾರು 14229 ಅಡಿ ಎತ್ತರದ ಪ್ರದೇಶದಲ್ಲಿ ಕಾರ್ಯಾಚರಣೆ ಮಾಡಬೇಕಿತ್ತು, ಮನೋಜ್ ಕುಮಾರ್ ಪಾಂಡೆ ಉತ್ಸಾಹದಿಂದಲೇ ತುಕಡಿಯನ್ನ ಮುನ್ನಡೆಸಿದ್ದ, ಅದು 1999ರ ಜೂನ್ 11 ಅತಿ ಕಡಿದಾದ ಜುಬರ್ ಶಿಖರ ಮತ್ತೆ ಸೇನೆಯ ವರ್ಷವಾಗಿತ್ತು, ಅಲ್ಲಿಗೆ ಬಟಾಲಿಯನ್ ಸೆಕ್ಟರ್ನ ಒಂದು ಪ್ರದೇಶ ಮತ್ತೆ ಭಾರತದ ತೆಕ್ಕೆಗೆ ಬಿದ್ದಿತ್ತು ಭಯೋತ್ಪಾದಕರಿಗೆ ಮನೋಜ್ ಹಾಗೂ ತಂಡ ಸಿಂಹಸ್ವಪ್ನವಾಗಿ ಹೋಯ್ತು! ಇಷ್ಟಕ್ಕೆ ನಿಲ್ಲಲಿಲ್ಲ ಜುಲೈ 3ರಂದು ಬೆಳಗಿನ ಜಾವ ಮತ್ತೊಂದು ಸಿಹಿ ಸುದ್ಧಿ ಸೇನೆಯ ಕಿವಿಗೆ ಬಿದ್ದಿತ್ತು ಬೆಟಾಲಿಯನ್ ಸೆಕ್ಟರ್ನ ಖಲುಬಾರ್ ಶಿಖರವನ್ನ ಮನೋಜ್ ಮತ್ತು ತಂಡ ಜಯಿಸಿತ್ತು!! ಇಡೀ ಸೇನೆ ಅಂದು ಸಂಭ್ರಮಿಸಿತು.. ರಾತ್ರಿಯಾಗುವಷ್ಟರಲ್ಲಿ ತುಕಡಿ ಗುರಿಯ ಅಂಚಿನಲ್ಲಿತ್ತು, ಇನ್ನೇನು ಬೆಟಾಲಿಯನ್ ಸೆಕ್ಟರ್ ಸಂಪೂರ್ಣವಾಗಿ ನಮ್ಮದಾಗಬೇಕು ಎನ್ನುವಷ್ಟರಲ್ಲಿ ವಿರೋಧಿ ಪಡೆ ಗುಂಡಿನ ಮಳೆ ಸುರಿಸಿಯೆ ಬಿಟ್ಟಿತ್ತು!!ಆಗ ಮನೋಜ್ ರವರ ತೋಳಿಗೆ ಮತ್ತು ಕಾಲಿಗೆ ಗುಂಡುಗಳು ಬಿದ್ದವು. ಜತೆಯಲ್ಲಿದ್ದ ಹುಡುಗರು ಹೇಳಿದರು- `ಇಲ್ಲೇ ನಿಲ್ಲಿ ಸಾಹೇಬ್.. ನಾವು ಮುಂದುವರಿಯುತ್ತೇವೆ..’ ಆತ ಹೇಳಿದ- `ಕರ್ನಲ್ ಗೆ ನಾನು ಮಾತು ಕೊಟ್ಟಿದ್ದೇನೆ. ನಾನೇ ಹೋರಾಟ ಮುಗಿಸುತ್ತೇನೆ..’ ಹಾಗನ್ನುತ್ತಲೇ ಮೂರನೇ ಬಂಕರನ್ನೂ ಉಡಾಯಿಸಿದ. ನಾಲ್ಕನೆಯದರ ಬಳಿ ಸಾರಿದಾಗ ಅದಾಗಲೇ ಸುಸ್ತಾಗಿದ್ದ. ಸ್ಥಿರತೆ ಸಹಜವಾಗಿಯೇ ತಪ್ಪಿತ್ತು. ಅಷ್ಟಾಗಿಯೂ ನಾಲ್ಕನೇ ಬಂಕರ್ ಗುರಿಯಾಗಿಸಿ ಗ್ರೈನೆಡ್ ಮುಚ್ಚಳ ಜಗ್ಗಿದ. ತನ್ನ ಕಣ್ಣೆದುರು ಇದ್ದ ಪಾಕಿಸ್ತಾನಿ ಮಷಿನ್‍ಗನ್ನುಗಳು ಆತನ ತಲೆಯನ್ನು ಸೀಳಿಬಿಟ್ಟವು. ಆ ಕ್ಷಣದಲ್ಲೇ ಸಾವು ಬಂತು. ಆದರೆ ಅಚ್ಚರಿ ನೋಡಿ. ಅಂಥ ಸಂದರ್ಭದಲ್ಲೂ ಆತ ಎಸೆದ ಗ್ರೆನೆಡ್ ಗುರಿ ತಲುಪಿ ನಾಲ್ಕನೇ ಬಂಕರನ್ನು ಉಡಾಯಿಸಿತು.. ಮನೋಜ್ ಕೊಟ್ಟ ಮಾತು ಉಳಿಸಿಕೊಂಡಿದ್ದ, ಆತನ ಕರ್ತವ್ಯ ಮುಗಿಸುವ ವರೆಗೆ ಯಮನಿಗೂ ಭಯ ಹುಟ್ಟಿಸಿದ್ದ, ಮನೋಜ್ ಇಂದು ದೇಹ ಬಿಟ್ಟು ಅಗಲಿರಬಹುದು ಆದರೆ ಇಂದಿಗೂ ದೇಶ ಭಕ್ತರ ಎದೆಯಲ್ಲಿ ಜೀವಂತವಾಗಿದ್ದಾರೆ!!.. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಸಂದರ್ಶನದಲ್ಲಿ ಹೇಳಿದ ಮಾತನ್ನು ಕೊನೆಗೂ ಉಳಿಸಿಬಿಟ್ಟ ಈ ಧೀರ.. ಯುದ್ಧ ಕಾಲದಲ್ಲಿ ನೀಡುವ ಅತ್ಯುಚ್ಛ ಶೌರ್ಯ ಪ್ರಶಸ್ತಿಯಾದ `ಪರಮವೀರ ಚಕ್ರ’ವನ್ನು ಅಪ್ಪ ಗೋಪಿಚಂದ್ ಪಾಂಡೆ ಮಗನ ಪರವಾಗಿ ಪಡೆದುಕೊಂಡರು!!!

ತಂದೆ ತಾಯಿಗೆ ಮಗ ಇಂಜಿನಿಯರ್ ಆಗಬೇಕೆಂಬ ಆಸೆಯನ್ನು ನೆರವೇರಿಸದೆ ಇದ್ದರೂ ಇಡೀ ದೇಶವೇ ಅಚ್ಚರಿ ಪಡುವ ರೀತಿಯಲ್ಲೇ ದೇಶ ರಕ್ಷಣೆಯನ್ನು ಮಾಡಿದ್ದಾರೆ. ಮನೋಜ್ ಕುಮಾರ್ ಹುಟ್ಟಿದ್ದೇ ದೇಶರಕ್ಷಣೆಗೆ!! ತಾನು ಮಾತು ಕೊಟ್ಟ ಹಾಗೆಯೇ ಸಾವು ಕೂಡಾ ಹತ್ತಿರ ಸುಳಿದಿರಲಿಲ್ಲ.. ಒಂದು ತಿಳಿದುಕೊಳ್ಳಿ ಇಂಜಿನಿಯರ್ ಡಾಕ್ಟರ್.. ಹೀಗೆ ಯಾರೂ ಕೂಡಾ ಆಗಬಹುದು.. ಆದರೆ ದೇಶ ರಕ್ಷಣೆ ಮಾಡುತ್ತೇವೆ ಮುಂದೆ ಬರುತ್ತಾರಲ್ಲವೆ ಅವರೇ ನಿಜವಾದ ಹೀರೋಗಳು.. ನಾವು ಇವರನ್ನು ಸದಾ ಪೂಜಿಸಬೇಕು.. ಅದ್ಯಾವುದೋ ಸಿನಿಮಾದಲ್ಲಿ ನಟಿಸಿದ್ರು ಅಂದ ಮಾತ್ರಕ್ಕೆ ಅವರನ್ನು ತಲೆ ಮೇಲೆ ಹೊತ್ತುಕೊಂಡು ಆರಾಧಿಸುತ್ತೇವೆ ಆದರೆ ಅದೇ ದೇಶ ರಕ್ಷಣೆ ವಿಚಾರ ಬಂದಾಗ ರಾತ್ರಿ ಹಗಲೆನ್ನದೆ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ದೇಶದ ರಕ್ಷಣೆ ಮಾಡುತ್ತಾರಲ್ಲ.. ನಿಜಕ್ಕೂ ಯೋಧರೇ ರಿಯಲ್ ಹೀರೋಗಳು.

ಗಡಿಯಲ್ಲಿ ದೇಶದ ರಕ್ಷಣೆ ಮಾಡುವವರು ನಿಜಕ್ಕೂ ನಮ್ಮ ಪಾಲಿಗೆ ದೇವರು.. ಯಾಕೆಂದರೆ ರಾತ್ರಿ ಹಗಲೆನ್ನದೆ ಇಡೀ ದೇಶದ ರಕ್ಷಣೆಯ ಹೊಣೆಯನ್ನು ಹೊತ್ತು ಇಡೀ ದೇಶವನ್ನು ಕಾಯುತ್ತಿರುತ್ತಾರೆ. ತಮ್ಮ ಪ್ರಾಣ ಹೋದರೂ ಪರವಾಗಿಲ್ಲ ದೇಶಕ್ಕೆ ಅಪಾಯವಿದೆ ಎಂದಾಗ ಗಡಿಯಲ್ಲೇ ನಿಂತು ನಮ್ಮನ್ನು ಕಾಯುತ್ತಾರೆ. ಒಂದೊಂದು ಸೈನಿಕನ ಕತೆಯೂ ಕೆಲವೊಂದು ಬಾರಿ ಅಚ್ಚರಿಯನ್ನುಂಟು ಮಾಡಿದರೆ ಮತ್ತೊಂದೆಡೆ ಅವರ ಸಾಹಸ ನಮ್ಮ ಮನಸ್ಸನ್ನು ಕರಗಿಸಿ ಕಣ್ಣಾಲಿಗಳು ತುಂಬುವಂತೆ ಮಾಡುತ್ತವೆ. ಅವರ ತ್ಯಾಗ ಬಲಿದಾನಗಳನ್ನು ಎಂದಿಗೂ ಮರೆಯದಿರೋಣ

-Dr Sindhu Prashanth

Tags

Related Articles

FOR DAILY ALERTS
Close