ಪ್ರಚಲಿತ

ಅಮೇರಿಕಾ ಮತ್ತು ಭಾರತದ ಮಧ್ಯೆ ವ್ಯಾಪಾರ ಯುದ್ದ!! ಅಮೇರಿಕಾದ 29 ವಸ್ತುಗಳ ಮೇಲೆ ಆಮದು ಸುಂಕ ಹೆಚ್ಚಿಸಿ ಟ್ರಂಪ್ ಸರ್ವಾಧಿಕಾರಕ್ಕೆ ತಿರುಗೇಟು ನೀಡಿದ ಭಾರತ!!

ಟ್ರಂಪ್ ಆಡಳಿತದ ಸರ್ವಾಧಿಕಾರದಿಂದಾಗಿ ಜಾಗತಿಕ ವ್ಯಾಪಾರ ಯುದ್ದ ಶುರುವಾಗಿದೆ. ಟ್ರಂಪ್ ನ ಸುಂಕ ಹೆಚ್ಚಳದ ಬೆದರಿಕೆಯ ಹಿನ್ನೆಲೆಯಲ್ಲಿ ಚೀನಾ ಈಗಾಗಲೇ ತಾನು ಅಮೇರಿಕಾಕ್ಕೆ ಇದಿರೇಟು ನೀಡಲು ಹಿಂಜರಿಯುವುದಿಲ್ಲ ಎಂದು ಹೇಳಿಕೊಂಡಿದೆ. ಆದರೆ ಭಾರತ ಬರಿ ಬಾಯಿ ಮಾತಿನಲ್ಲಿ ಹೇಳದೆ, ಯುರೋಪಿಯನ್ ಒಕ್ಕೂಟಗಳ ನಡೆಯಂತೆಯೆ ವ್ಯಾಪಾರ ಯುದ್ದದಲ್ಲಿ ಅಮೇರಿಕಾಕ್ಕೆ ಬಲವಾದ ಏಟು ನೀಡಿದೆ! ಟ್ರಂಪ್ ಆಡಳಿತದ ಮೇಲೆ ಪ್ರತೀಕಾರ ಹೇರುವಂತೆ ಅಮೇರಿಕಾದ ನೀತಿಯ ವಿರುದ್ದ ಪ್ರತಿಭಟನೆಯಲ್ಲಿ ಭಾರತವು 29 ವಸ್ತುಗಳ ಮೇಲಿನ ಆಮದು ಸುಂಕವನ್ನು ಏರಿಸಿದೆ.

ದೊಡ್ಡಣ್ಣನ ಧಿಮಾಕಿಗೆ ಭಾರತ ಬಲವಾದ ಛಾಟಿ ಏಟು ಬೀಸಿದೆ. ಅಮೇರಿಕಾದ ಬರೋಬ್ಬರಿ 29 ವಸ್ತುಗಳ ಆಮದು ಸುಂಕವನ್ನು ಏರಿಸಿ ಜಗತ್ತಿಗೆ ತಾನು ಯಾರ ಬೆದರಿಕೆಗೂ ಜಗ್ಗುವುದಿಲ್ಲ ಎನ್ನುವ ಸಂದೇಶವನ್ನು ಮೋದಿ ಸರಕಾರ ಸಾರಿದೆ. ಭಾರತಕ್ಕೆ ಆಮದಾಗುವ ವಸ್ತುಗಳಾದ ಕಡಲೆ ಮತ್ತು ಉದ್ದಿನ ಮೇಲೆ 60% ಸುಂಕ ಏರಿಸಿದ್ದರೆ, ಬೇಳೆಗಳ ಮೇಲೆ 30% ರಷ್ಟು ಸುಂಕವನ್ನು ಹೆಚ್ಚಿಸಿದೆ. ಇದರಂತೆಯೆ ಇನ್ನೂ ಹಲವಾರು ಉತ್ಪಾದನೆಗಳ ಮೇಲಿನ ಆಮದು ಸುಂಕವನ್ನು ಏರಿಸಲಾಗಿದೆ.

ಕೆಲವು ರೀತಿಯ ಬೀಜಗಳು, ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು, ಸೇಬು, ಪೇರಳೆ, ಸ್ಟೇನ್ಲೆಸ್ ಸ್ಟೀಲ್, ಇತರ ಮಿಶ್ರಲೋಹದ ಉಕ್ಕು, ಟ್ಯೂಬ್ ಮತ್ತು ಪೈಪ್ ಫಿಟ್ಟಿಂಗ್ ಗಳು, ಸ್ಕ್ರೂ- ಬೊಲ್ಟ್ ಗಳು ಮತ್ತು ಫ್ಲಾಟ್ ರೋಲ್ಡ್ ಉತ್ಪನ್ನಗಳು ಮುಂತಾದ 29 ಉತ್ಪನ್ನಗಳ ಮೇಲೆ ಸುಂಕ ಹೆಚ್ಚಿಸಲಾಗಿದೆ. ಭಾರತದಲ್ಲಿ 241 ಮಿಲಿಯನ್ ಡಾಲರ್ ಗಳಷ್ಟು ಸುಂಕದ ಸೂಚನೆಯನ್ನು ಹೊಂದಿದ್ದ ಕೆಲವು ಉಕ್ಕಿನ ಮತ್ತು ಅಲ್ಯುಮಿನಿಯಂ ಉತ್ಪನ್ನಗಳ ಮೇಲೆ ಅಮೇರಿಕಾವು ಕಸ್ಟಮ್ ಡ್ಯೂಟಿ ಹೆಚ್ಚಸಿದ್ದೆ ಭಾರತ, ಅಮೇರಿಕಾಕ್ಕೆ ಈ ತಿರುಗೇಟು ನೀಡಲು ಕಾರಣ.

ಕಳೆದ ವಾರ, ಭಾರತವು WTO ಗೆ 50% ರಷ್ಟು ಕಸ್ಟಮ್ಸ್ ಡ್ಯೂಟಿ ಏರಿಸಬಹುದಾದ 30 ವಸ್ತುಗಳ ಸುಂಕ ಹೆಚ್ಚಿಸುವ ದ ಪರಿಷ್ಕೃತ ಪಟ್ಟಿಯನ್ನು ಸಲ್ಲಿಸಿತ್ತು. ಅದರಂತೆಯೆ ಈ ವಸ್ತುಗಳ ಕಸ್ಟಮ್ ಡ್ಯೂಟಿಯನ್ನು ಏರಿಸಲಾಗಿದೆ. ಅಮೇರಿಕಾದಿಂದ ಆಮದಾಗುವ ಮೋಟರ್ ಸೈಕಲ್ ಗಳ ಮೇಲಿನ ಸುಂಕ ಹೆಚ್ಚಿಸಲಾಗಿಲ್ಲ. ಅಮೇರಿಕಾದ ವಸ್ತುಗಳ ಮೇಲೆ ಭಾರತವು ಭಾರೀ ಪ್ರಮಾಣದ ಸುಂಕವನ್ನು ಹೆಚ್ಚಿಸಿರುವುದು ಅಮೇರಿಕಾದ ವ್ಯಾಪಾರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಮಾರ್ಚ್ 9 ರಂದು ಟ್ರಂಪ್ ಆಡಳಿತವು ಸ್ಟೀಲ್ ಮತ್ತು ಅಲ್ಯೂಮೀನಿಯಂ ಉತ್ಪನ್ನಗಳ ಮೇಲೆ ಅತಿ ಹೆಚ್ಚಿನ ಸುಂಕ ವಿಧಿಸಿದ್ದೆ ವ್ಯಾಪಾರ ಯುದ್ದಕ್ಕೆ ನಾಂದಿ ಎಂದು ಪರಿಗಣಿಸಲಾಗಿತ್ತು.

ಆಮದು ಸುಂಕ ಹೆಚ್ಚಿಸಿದರೆ ಏನಾಗುತ್ತದೆ?

ಅಮೇರಿಕಾದ ಯಾವ ಉತ್ಪನ್ನಗಳ ಮೇಲೆ ಆಮದು ಸುಂಕ ಹೆಚ್ಚಾಗಿದೆಯೋ ಆ ಉತ್ಪಾದಕರ ಆದಾಯಕ್ಕೆ ಕಲ್ಲು ಬೀಳುತ್ತದೆ.
ಉದಾ: ಡೈಮ್ಲರ್ ಎಜಿ ಕಂಪನಿಯ ಗಳಿಕೆಯಲ್ಲಿ ಕಳೆದ ವಾರ ಇಳಿಕೆ ದಾಖಲಾಗಿದೆ. ಏಕೆಂದರೆ ಬೀಜಿಂಗ್(ಚೀನಾ) ಅಮೇರಿಕಾದಿಂದ ಆಮದಾಗುವ ಮರ್ಸಿಡಿಸ್ ಬೆಂಜ್ ಎಸ್ ಯು ವಿ ಕಾರಿನ ಮೇಲೆ ವಿಪರೀತ ಆಮದು ಸುಂಕ ಹೇರಿರುವುದರಿಂದ ಗ್ರಾಹಕರು ಅದನ್ನು ಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ ಎನ್ನುವುದು ಕಂಪನಿಯ ಅಂಬೋಣ. ಅಮೇರಿಕಾದ ಈ ನಡೆಯಿಂದಾಗಿ ಜಾಗತಿಕ ಆರ್ಥಿಕ ವಿಸ್ತರಣೆಗೆ ಬೆದರಿಕೆ ಉಂಟಾಗಿದೆ ಎಂದು ಜಗತ್ತಿನ ಹಲವಾರು ಬ್ಯಾಂಕ್ ಗಳು ಆರೋಪಿಸುತ್ತಿವೆ.

ಇತ್ತ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ಆಮದು ಸುಂಕಗಳನ್ನು ಹೇರುವ ಬಗ್ಗೆ ವಿಶ್ವ ವಾಣಿಜ್ಯ ಸಂಘಟನೆಯ (ಡಬ್ಲ್ಯುಟಿಒ) ವಿವಾದ ಪರಿಹಾರ ವ್ಯವಸ್ಥೆಗೆ ಅಮೆರಿಕವನ್ನು ಭಾರತ ಎಳೆದಿದೆ. ಅತ್ತ ಚೀನಾ ಕೂಡಾ ತಾನು ಜಾಗತಿಕ ವ್ಯಾಪಾರ ಯುದ್ದಕ್ಕೆ ಸನ್ನದ್ಧನಾಗಿದ್ದೇನೆ ಎಂದು ಹೇಳಿಕೊಂಡಿದೆ. ಯುರೋಪಿಯನ್ ಒಕ್ಕೂಟ ಈಗಾಗಲೇ ಏಟಿಗೆ ಇದಿರೇಟು ನೀಡಿದೆ. ಇನ್ನು ಜಪಾನ್, ಕೆನಡಾ, ಮೆಕ್ಸಿಕೋ ದೇಶಗಳೂ ಕೂಡಾ ಅಮೇರಿಕಾದ ಸರ್ವಾಧಿಕಾರಕ್ಕೆ ಬುದ್ದಿ ಕಲಿಸಲು ಸನ್ನದ್ದರಾಗಿ ನಿಂತಿದ್ದಾರೆ. ಇವರೆಲ್ಲರಿಗಿಂತಲೂ ಮೊದಲೆ ಭಾರತವು ಕ್ಷಿಪ್ರ ನಿರ್ಣಯಗಳನ್ನು ತೆಗೆದುಕೊಂಡು ತಾನು ರಣಾಗಂಣಕ್ಕೆ ಧುಮುಕಿದ್ದೇನೆ ಎಂದು ಜಗತ್ತಿಗೆ ಸಾರಿ, ಅಮೇರಿಕಾದ ಸೊಕ್ಕು ಮುರಿಯಲು ತೊಡೆ ತಟ್ಟಿ ನಿಂತಿದೆ. ತನ್ನ ಸಮಸ್ಯೆಗಳಿಗೆ ಇತರ ದೇಶಗಳನ್ನು ಬಲಿಪಶು ಮಾಡುವ ಅಮೇರಿಕಾದ ದುರ್ಬುದ್ದಿಗೆ ಭಾರತ ತಕ್ಕ ಶಾಸ್ತಿಯೆ ಮಾಡಿದೆ.

-ಶಾರ್ವರಿ

Tags

Related Articles

Close