ಪ್ರಚಲಿತ

ಅಭಿವೃದ್ಧಿ ಹೊಂದಿದ ಭಾರತದ ಅಗತ್ಯತೆಯನ್ನು ಗಮನದಲ್ಲಿರಿಸಿಕೊಂಡು ಎನ್ಇಪಿ ಜಾರಿ: ಪ್ರಧಾನಿ ಮೋದಿ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದ ಆರ್ಥಿಕ ಮತ್ತು ಅಭಿವೃದ್ಧಿಯ ಆಶಯವನ್ನಿರಿಸಿಕೊಂಡು, ಅಭಿವೃದ್ಧಿ ಹೊಂದಿದ ದೇಶಗಳ ಅಗತ್ಯತೆಗಳನ್ನು ಗಮನದಲ್ಲಿರಿಸಿಕೊಂಡು ಜಾರಿಗೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ನೂತನವಾಗಿ ನೇಮಕ ಮಾಡಲಾದ ಶಿಕ್ಷಕರನ್ನು ಗಮನದಲ್ಲಿರಿಸಿಕೊಂಡು ನಡೆಸಲಾದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಗೆಗೂ ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಮಾನಸಿಕ ಅಭಿವೃದ್ಧಿ, ಜ್ಞಾನ, ಕೌಶಲ, ಸಮಗ್ರ ಅಭಿವೃದ್ಧಿಯನ್ನು ಇದು ಉತ್ತಮಗೊಳಿಸುವುದಲ್ಲದೆ, ಭಾರತೀಯತೆ, ಸಂಸ್ಕೃತಿ ಇತ್ಯಾದಿಗಳನ್ನು ಮಕ್ಕಳಿಗೆ ತಿಳಿಸಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಹಿಸಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಕ್ರಮ ಭೋಪಾಲ್‌ನಲ್ಲಿ ನಡೆದಿದ್ದು, ಮಧ್ಯಪ್ರದೇಶಕ್ಕೆ ‌ಸಂಬಂಧಿಸಿದಂತೆ ಯುವಕರಿಗೆ ಸರಕಾರಿ ನೌಕರಿ ಒದಗಿಸಿ ಕೊಡುವ ಅಭಿಯಾನ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಶಿಕ್ಷಕರ ಹುದ್ದೆಗೆ ೨೨,೪೦೦ ಕ್ಕೂ ಹೆಚ್ಚು ಯುವಕರನ್ನು ನೇಮಕ ಮಾಡಲಾಗಿದೆ. ಎನ್ಇಪಿ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಮದ್ಯ ಪ್ರದೇಶ ದಲ್ಲಿ ಶಿಕ್ಷಕರ ನೇಮಕಾತಿ ಅಭಿಯಾನವು ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದೆ ಎಂದು ಮೋದಿ ಬಣ್ಣಿಸಿದ್ದಾರೆ.

ಹಾಗೆಯೇ ಯುವಕರಿಗೆ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿಯಲ್ಲಿ ತರಬೇತಿ ಒದಗಿಸಲು ದೇಶದಾದ್ಯಂತ ಕೌಶಲಾಭಿವೃದ್ಧಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ೩೦ ಕೌಶಲಾಭಿವೃದ್ಧಿ ಕೇಂದ್ರಗಳನ್ನು ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ತೆರೆಯಲಾಗುವುದು. ಅವುಗಳ ಮೂಲಕ ಯುವಕರಿಗೆ ನವಯುಗ ತಂತ್ರಜ್ಞಾನ ಮೂಲಕ ತರಬೇತಿ ನೀಡಲಾಗುವುದು ಎಂಬುದಾಗಿಯೂ ಮೋದಿ ಮಾಹಿತಿ ನೀಡಿದ್ದಾರೆ.

Tags

Related Articles

Close