ಪ್ರಚಲಿತ

ಭಾರತೀಯ ವೈದ್ಯಕೀಯ ವ್ಯವಸ್ಥೆಯನ್ನು ಜಗತ್ತೇ ಗೌರವಿಸುತ್ತಿದೆ: ಪ್ರಧಾನಿ ಮೋದಿ

ಭಾರತದ ಮುಖ್ಯ ಗುರಿ ಎಲ್ಲಾ ಜನರ ದೈಹಿಕ, ಮಾನಸಿಕ ಸ್ವಾಸ್ಥ್ಯ ಮತ್ತು ಸಾಮಾಜಿಕ ಕಲ್ಯಾಣವಾಗಿದೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಉಪಕ್ರಮದಡಿ ಪ್ರಪಂಚದ ನೂರಾರು ರಾಷ್ಟ್ರಗಳು ಭಾರತದ ಜೊತೆ ಹೆಜ್ಜೆ ಹಾಕುತ್ತಿದೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ.

ಅಡ್ವಾಂಟೇಜ್ ಹೆಲ್ತ್‌ಕೇರ್ ಇಂಡಿಯಾ ೨೦೨೩ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಭಾರತವು ವಸುದೇವ ಕುಟುಂಬಕಂ ಎಂಬ ಧ್ಯೇಯದ ಜೊತೆಗೆ ಮುನ್ನಡೆಯುತ್ತಿದೆ. ಜಗತ್ತು ಕೊರೋನಾದಂತಹ ಸವಾಲಿನ ಜೊತೆಗೆ ಸಂದರ್ಭದಲ್ಲಿ ಭಾರತದ ಆರೋಗ್ಯ ಕ್ಷೇತ್ರದ ಪ್ರತಿಭೆ ಇಡೀ ಜಗತ್ತನ್ನೇ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಭಾರತದ ವೈದ್ಯರುಗಳ ಸಾಮರ್ಥ್ಯವನ್ನು ಜಗತ್ತೇ ಕೊಂಡಾಡುತ್ತಿದೆ. ಅವರನ್ನು ದೇಶದ ಒಳಗೆ ಮತ್ತು ಹೊರಗೆ ಗೌರವಿಸಲಾಗುತ್ತಿದೆ. ಭಾರತೀಯ ವೈದ್ಯಕೀಯ ವ್ಯವಸ್ಥೆಯ ಪ್ರಯೋಜನವನ್ನು ವಿಶ್ವವೇ ಪಡೆದುಕೊಂಡಿದೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರತಿಭೆ, ತಂತ್ರಜ್ಞಾನ, ಸಂಪ್ರದಾಯಗಳನ್ನು ಭಾರತ‌ ಹೊಂದಿದೆ. ಕೊರೋನಾ ಸಂಕಷ್ಟದ ಅವಧಿಯಲ್ಲಿ ಭಾರತವು ಲಸಿಕೆಯನ್ನು ಅಭಿವೃದ್ಧಿ ಮಾಡಿತು. ವಿಶ್ವದ ನೂರಕ್ಕೂ ಅಧಿಕ ರಾಷ್ಟ್ರಗಳಿಗೆ ಮುನ್ನೂರು ಮಿಲಿಯನ್ ಡೋಸ್‌ಗಳನ್ನು ಒದಗಿಸಿದೆ. ಆ ಸಮಯದಲ್ಲಿ ವಿಶ್ವದ ಕೊರೋನಾ ಲಸಿಕೆಯ ಅತಿ ದೊಡ್ಡ ತವರೂರಾಗಿ ಭಾರತ ಗುರುತಿಸಲ್ಪಟ್ಟಿತು. ಈಗ ಇಡೀ ಜಗತ್ತಿಗೆ ಭಾರತದ ಶಕ್ತಿ ಸಾಮರ್ಥ್ಯದ ಅರಿವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತೀಯರ ಜೊತೆಗೆ ಇಡೀ ಜಗತ್ತಿಗೆ ಆರೋಗ್ಯ ಪ್ರಯೋಜನಗಳನ್ನು ಕಲ್ಪಿಸಿ ಕೊಡುವುದು ಭಾರತದ ಕನಸಾಗಿದೆ. ಅಸಮಾನತೆ ಕಡಿಮೆ ಮಾಡುವುದು ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ, ಅವರ ಸೇವೆ ಮಾಡುವುದು ನಮ್ಮ ಆದ್ಯತೆಯ ವಿಷಯವಾಗಿದೆ. ಯೋಗ ಮತ್ತು ಧ್ಯಾನ ಜಾಗತಿಕ ಚಳುವಳಿಯ ಭಾಗವಾಗಿದೆ. ಇದು ಆಧುನಿಕ ಜಗತ್ತಿಗೆ ಪ್ರಾಚೀನ ಜಗತ್ತಿನ ಕೊಡುಗೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

Tags

Related Articles

Close