ಭಾರತದ ಪ್ರಧಾನಿ ಪಟ್ಟವನ್ನು ಮೋದಿ ಅವರು ಅಲಂಕರಿಸಿದ ಮೇಲೆ ದೇಶ ವಿಶ್ವಮಟ್ಟದಲ್ಲಿ ಮತ್ತಷ್ಟು ಪ್ರಖ್ಯಾತಿ ಪಡೆಯುವಂತಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. 2014 ಕ್ಕೂ ಮೊದಲು ವಿಶ್ವದೆದುರು ಕೈ ಕಟ್ಟಿ ನಿಲ್ಲುವ ಪರಿಸ್ಥಿತಿಯಲ್ಲಿದ್ದ ಭಾರತ, ಇಂದು ವಿಶ್ವವೇ ತನ್ನ ಮುಂದೆ ಕೈ ಕಟ್ಟಿ ನಿಲ್ಲುವ ಹಾಗೆ ಬದಲಾಗಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ಮೋದಿ ಅವರ ದೂರದೃಷ್ಟಿ ಮತ್ತು ಅಭಿವೃದ್ಧಿ ಪರ ಆಡಳಿತ ಎನ್ನುವುದು ಸ್ಪಷ್ಟ.
ಪ್ರಧಾನಿ ಮೋದಿ ದೇಶಕ್ಕೆ ಮಾತ್ರವಲ್ಲ ವಿದೇಶಗಳಿಗೂ ಮಾದರಿಯಾದ ನಾಯಕ ಎನ್ನುವುದು ಸತ್ಯ. ಇದಕ್ಕೆ ಸಾಕ್ಷಿ ಎಂಬಂತೆ ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಸಮೀಕ್ಷೆಯೊಂದು ಪ್ರಧಾನಿ ಮೋದಿ ಅವರ ಪ್ರಖ್ಯಾತಿಯ ಬಗ್ಗೆ ತಿಳಿಸಿದೆ.
ಪ್ಯೂ ರಿಸರ್ಚ್ ಸೆಂಟರ್ ಇತ್ತೀಚೆಗೆ ಸಮೀಕ್ಷೆ ನಡೆಸಿದ್ದು, ಪ್ರಧಾನಿ ಮೋದಿ ಅವರ ಬಗ್ಗೆ ಭಾರತೀಯರಲ್ಲಿ 79% ಜನರು ಸಕಾರಾತ್ಮಕ ಅಭಿಪ್ರಾಯವನ್ನು ಹೊಂದಿದ್ದಾಗಿ ತಿಳಿದು ಬಂದಿದೆ. ಅಷ್ಟೇ ಅಲ್ಲದೆ, ಹೀಗೆ ಪ್ರಧಾನಿ ಮೋದಿ ಅವರ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಹೊಂದಿರುವವರು ಪ್ರಸ್ತುತ ದಿನಮಾನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಭಾವವನ್ನು, ಅದರ ಸ್ಪಷ್ಟವಾದ ಅಭಿವೃದ್ಧಿಯ ಬಗ್ಗೆ ಮಾಹಿತಿ ಹೊಂದಿದವರೇ ಆಗಿದ್ದಾರೆ ಎನ್ನುವುದು ಗಮನಾರ್ಹ.
ಕಳೆದ ಫೆಬ್ರವರಿ ತಿಂಗಳಿನಿಂದ ಮೇ ತಿಂಗಳ ವರೆಗೆ ಈ ಸಮೀಕ್ಷೆಯನ್ನು ಸಂಸ್ಥೆ ನಡೆಸಿದೆ. ಇದರಲ್ಲಿ ಭಾರತವೂ ಸೇರಿದ ಹಾಗೆ ಇತರ ಇಪ್ಪತ್ಮೂರು ದೇಶಗಳ ಮೂವತ್ತು ಸಾವಿರದ ಎಂಟು ನೂರಕ್ಕೂ ಅಧಿಕ ವಯಸ್ಕರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಭಾರತದ ಭೌಗೋಳಿಕ ಸ್ಥಿತಿ, ಪ್ರಧಾನಿ ಮೋದಿ ಅವರ ಚಿಂತನೆಗಳು, ದೂರದೃಷ್ಟಿ ಹಾಗೂ ಬೇರೆ ದೇಶಗಳ ಜೊತೆಗೆ ಅವರು ಇರಿಸಿಕೊಂಡಿರುವ ಸಂಬಂಧ ಇತ್ಯಾದಿಗಳನ್ನು ಆಧರಿಸಿ ಜಾಗತಿಕ ದೃಷ್ಟಿಕೋನದ ಒಳನೋಟಗಳನ್ನು ಆಧರಿಸಿ ಈ ಸಮೀಕ್ಷೆ ನಡೆಸಲಾಗಿದೆ.
ಪ್ರಧಾನಿ ಮೋದಿ ಅವರ ಬಗ್ಗೆ ಈ ಸಮೀಕ್ಷೆಯಲ್ಲಿ 80% ಗಳಷ್ಟು ಸಕಾರಾತ್ಮಕ ಅಭಿಪ್ರಾಯಗಳೇ ಇವೆ. ಈ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದವರಲ್ಲಿ 55% ಗಳಷ್ಟು ಜನರು ಕಳೆದ ಒಂಬತ್ತು ವರ್ಷಗಳಿಂದ ಭಾರತದ ಆಡಳಿತ ಚುಕ್ಕಾಣಿ ಹಿಡಿದಿರುವ ಮತ್ತು ಮರು ಆಯ್ಕೆಯನ್ನು ಬಯಸುತ್ತಿರುವ ತಮ್ಮ ನೆಚ್ಚಿನ ಪ್ರಧಾನಿ ಮೋದಿ ಅವರ ಕುರಿತಾಗಿ ಅತ್ಯಂತ ಅನುಕೂಲಕರವಾದ ಅಭಿಪ್ರಾಯ ಹೊಂದಿದ್ದಾರೆ ಎನ್ನುವುದು ಈ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಆದರೆ ಈ ಸಮೀಕ್ಷೆಯಲ್ಲಿ ಭಾಗವಹಿಸದ ಐದರಲ್ಲಿ ಒಂದು ಭಾಗದಷ್ಟು ಜನರು ಪ್ರಧಾನಿ ಮೋದಿ ಅವರ ಬಗ್ಗೆ ನಕಾರಾತ್ಮಕ ದೃಷ್ಟಿಕೋನವನ್ನು ಹೊಂದಿದ್ದಾರೆ.
ಮುಂದಿನ ತಿಂಗಳು ನವದೆಹಲಿಯಲ್ಲಿ ನಡೆಯಲಿರುವ ಇಪ್ಪತ್ತು ನಾಯಕರು ಭಾಗವಹಿಸುವ ಶೃಂಗಸಭೆಗೂ ಮುನ್ನವೇ ಈ ಸಮೀಕ್ಷೆಯ ಫಲಿತಾಂಶವನ್ನು ಬಹಿರಂಗಗೊಳಿಸಲಾಗಿದೆ.
ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರ ಕಾರಣದಿಂದ ಭಾರತದ ಜಾಗತಿಕ ಪ್ರಭಾವ ಹೆಚ್ಚಿದೆ ಎಂದು ಹೆಚ್ಚು ಜನರು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ, ಮುಂದೆಯೂ ಭಾರತವನ್ನು ಸಮರ್ಥವಾಗಿ ಮುನ್ನಡೆಸಲು ಪ್ರಧಾನಿ ಮೋದಿ ಅವರೇ ಸೂಕ್ತ ಎಂಬುದಕ್ಕೆ ಈ ಸಮೀಕ್ಷೆಯ ಮೂಲಕ ಜನರು ಬೆಂಬಲ ಸೂಚಿಸಿದ್ದಾರೆ ಎಂದರೂ ತಪ್ಪಾಗಲಾರದು.