ಅಂಕಣ

ಮಹರ್ಷಿ ದಧೀಚಿಯಿಂದ ಸ್ಫೂರ್ತಿ ಪಡೆದು ಒಬ್ಬ ಸ್ವಿಸ್ ಮಹಿಳೆಯ ಕೈಯಿಂದ ತಯಾರಿಸಲ್ಪಟ್ಟ ಭಾರತೀಯ ಸೇನೆಯ ಸರ್ವೋಚ್ಚ ಪದಕ ಪರಮವೀರ್ ಚಕ್ರ ಸೈನಿಕನ ಸರ್ವೋಚ್ಚ ಬಲಿದಾನದ ದ್ಯೋತಕ!!

ಒಬ್ಬ ಸೈನಿಕನ ಜೀವನದಲ್ಲಿ ಅತ್ಯಾನಂದದ ಕ್ಷಣ ಯಾವುದು ಗೊತ್ತೆ? ವಿರೋಧಿ ಪಾಳಯಕ್ಕೆ ನುಗ್ಗಿ ಶತ್ರುವಿನ ರುಂಡ ತೆಗೆಯುವುದು ಇಲ್ಲ ದೇಶದ ರಕ್ಷಣೆ ಮಾಡುತ್ತಾ ಪ್ರಾಣಾರ್ಪಣೆ ಮಾಡುವುದು. ಒಬ್ಬ ಸೈನಿಕನ ಪರಾಕ್ರಮಕ್ಕೆ ದೊರಕಬಹುದಾದ ಅತ್ಯುನ್ಯತ ಶೌರ್ಯ ಪದಕವೆಂದರೆ ಅದು ” ಪರಮವೀರ್ ಚಕ್ರ”. ಹೇಗೆ ಕ್ರೀಡಾ ಪಟು ತನ್ನ ಜೀವನದಲ್ಲಿ ಒಂದಾದರೂ ಒಲಿಪಿಂಕ್ ಪದಕ ಗೆಲ್ಲಬೇಕೆಂದು ಕನವರಿಸುತ್ತಿರುತ್ತಾನೋ ಹಾಗೆಯೆ ಒಬ್ಬ ಸೈನಿಕ ತಾನು ಪರಮವೀರ್ ಚಕ್ರ ಪಡೆಯಬೇಕೆಂದು ಹಂಬಲಿಸುತ್ತಿರುತ್ತಾನೆ. ಪರಮವೀರ್ ಚಕ್ರ ಪಡೆಯುವುದೆಂದರೆ ದೇಶಕ್ಕಾಗಿ ಆತ ತನ್ನ ಪ್ರಾಣವನ್ನೇ ಬಲಿದಾನ ಮಾಡಿದ್ದಾನೆಂದರ್ಥ!

ಯಾಕೆಂದರೆ ಈ ದೇಶದಲ್ಲಿ ಇದುವರೆಗೂ ಕೇವಲ 21 ಜನರಿಗೆ ಮಾತ್ರ ಪರಮವೀರ್ ಚಕ್ರವನ್ನು ನೀಡಲಾಗಿದೆ. ಅವುಗಳಲ್ಲಿ ಮೂರನೇ ಎರಡರಷ್ಟು ಪದಕಗಳನ್ನು ಮರಣಾನಂತರ ನೀಡಲಾಗಿದೆ. ಆ ಸೈನಿಕರ ಪರಾಕ್ರಮ, ದೇಶದ ಪ್ರೇಮದ ಪರಿ ಎಂಥದ್ದಿರಬೇಕು ಊಹಿಸಿ. ಪರಮವೀರ್ ಚಕ್ರದ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ವಿಚಾರಗಳು ಇಂತಿವೆ:

1. ಇದುವರೆಗೂ ಕೇವಲ 21ಜನರಿಗೆ ಮಾತ್ರ ಪರಮವೀರ ಚಕ್ರ ಪಡೆಯುವ ಸೌಭಾಗ್ಯ ದೊರಕಿದೆ. ಕೇವಲ ಮೂವರಿಗಷ್ಟೆ ಬದುಕಿರುವಾಗಲೆ ದೊರೆತದ್ದು ಬಿಟ್ಟರೆ, ಉಳಿದದ್ದೆಲ್ಲವೂ ಮರಣಾನಂತರ ದೊರಕಿರುವಂಥದ್ದು. 18 ವೀರ ಸೈನಿಕರ ಶೌರ್ಯದ ಪರಿ ಎಂಥದ್ದಿರಬೇಕು!!

2. ಇಪ್ಪತ್ತು ಪರಮವೀರ ಚಕ್ರಗಳು ಭೂಸೇನೆಯೊಂದಕ್ಕೆ ಲಭಿಸಿದೆ. ಕೇವಲ ಒಂದು ಪದಕ ವಾಯುಸೇನೆಯ ಸೈನಿಕನಿಗೆ ದೊರಕಿದೆ. ಸೈನ್ಯದ ಎಲ್ಲಾ ಶಾಖೆಗಳೂ ಒಂದೇ ಅರ್ಹತೆ ಹೊಂದಿದ್ದರೂ, ನೌಕಾಪಡೆಯಿಂದ ಇದುವರೆಗೂ ಯಾರಿಗೂ ಪರಮ ವೀರ ಚಕ್ರವನ್ನು ನೀಡಲಾಗಲಿಲ್ಲ. ಯುದ್ದ ಸಮಯದಲ್ಲಿ ಶತ್ರುವಿನ ಗುಂಡಿಗೆ ಎದೆ ಒಡ್ಡಿ ನಿಲ್ಲುವವರು ನಮ್ಮ ಭೂ ಸೇನೆಯ ಸೈನಿಕರಲ್ಲವೆ, ಹಾಗಾಗಿ ಅವರಲ್ಲಿ ಅತಿ ಹೆಚ್ಚು ಸೈನಿಕರು ಪರಮವೀರ್ ಚಕ್ರ ಪಡೆದಿದ್ದಾರೆ.

3. ಪರಮವೀರ ಚಕ್ರ ಪ್ರಶಸ್ತಿ ವಿಜೇತರಿಗೆ ಪ್ರತಿ ತಿಂಗಳೂ 10,000 ರೂ. ನಗದು ಭತ್ಯೆ ದೊರಕುತ್ತದೆ.

4. ಪರಮ ವೀರ ಚಕ್ರವನ್ನು ಸ್ವಿಸ್ ಮೂಲದ ಮಹಿಳೆ ಇವಾ ಯುಯೊನೆ ಲಿಂಡಾ ಮ್ಯಾಡೆ-ಡೆ-ಮಾರೋಸ್ ಅವರು ವಿನ್ಯಾಸಗೊಳಿಸಿದ್ದೆಂದರೆ ನಂಬುತ್ತೀರಾ? ಈಕೆಯ ತಾಯಿ ಹಂಗೇರಿಯನ್ ಮತ್ತು ತಂದೆ ರಷ್ಯಾದವರು. ಆದರೆ ಅವರು ವಿಕ್ರಮ್ ಖಾನೋಲ್ಕರ್ (ನಂತರ ಸೇನೆಯ ಮೇಜರ್ ಜನರಲ್ ಆಗಿದ್ದರು) ಅವರನ್ನು ಮದುವೆಯಾಗಿ ತಮ್ಮ ಹೆಸರನ್ನು ಸಾವಿತ್ರಿ ಬಾಯಿ ಖಾನೋಲ್ಕರ್ ಎಂದು ಬದಲಾಯಿಸಿ ಭಾರತಕ್ಕೆ ಬಂದು ಅಪ್ಪಟ ಹಿಂದೂ ಮಹಿಳೆಯಾಗಿ ಇಲ್ಲೆ ನೆಲೆಸಿದ್ದರು.

ಈಕೆಯೆ ಪರಮವೀರ್ ಚಕ್ರವನ್ನು ವಿನ್ಯಾಸಗೊಳಿಸಿದವರು. ಅದಕ್ಕಾಗಿ ಅವರು ಭಾರತೀಯ ಪುರಾಣಗಳನ್ನು ಅಧ್ಯಯನ ಮಾಡಿದ್ದರು! ತದನಂತರ ಪುರಾಣಗಳಲ್ಲಿ ಉಲ್ಲೇಖಿತವಾಗಿದ್ದ ಇಂದ್ರನ ಅತಿ ಶಕ್ತಿಶಾಲಿ ಅಸ್ತ್ರ “ವಜ್ರಾಯುಧವನ್ನು” ಗಮನದಲ್ಲಿರಿಸಿ ಪರಮವೀರ್ ಚಕ್ರವನ್ನು ವಿನ್ಯಾಸಗೊಳಿಸಿದರು. ಇಂದ್ರನಿಗೆ ವಜ್ರಾಯುಧವನ್ನು ಮಹರ್ಷಿ ದಧೀಜಿ ತನ್ನ ಮೂಳೆಗಳಿಂದ ತಯಾರಿಸಿಕೊಟ್ಟಿದ್ದರು. ಆದ್ದರಿಂದ ದಧೀಜಿಯ ಬಲಿದಾನದ ನೆನಪಿಗಾಗಿ ಮತ್ತು ವಜ್ರಾಯುಧದಿಂದ ಸ್ಪೂರ್ತಿ ಪಡೆದು ಪರಮವೀರ್ ಚಕ್ರವನ್ನು ವಿನ್ಯಾಸ ಮಾಡಿದ್ದರು ಸಾವಿತ್ರಿ ಬಾಯಿ.

ಒಬ್ಬ ಸ್ವಿಸ್ ಮಹಿಳೆ ಭಾರತಕ್ಕೆ ಪರಮವೀರ್ ಚಕ್ರ ವಿನ್ಯಾಸ ಮಾಡಿಕೊಟ್ಟರು. ಆದರೆ ಒಬ್ಬ ಇಟಲಿ ಮಹಿಳೆ ದೇಶವನ್ನು ಕೊಳ್ಳೆ ಹೊಡೆದು, ಭಾರತದ ಸೇನೆಯ ಮಾನ ಕಳೆದರು. ಎಂತಹ ವ್ಯತ್ಯಾಸ!!

5. ಪದಕದ ಮಧ್ಯವಿರುವ ರಾಷ್ಟ್ರೀಯ ಲಾಂಛನದ ಸುತ್ತ ಇಂದ್ರನ ವಜ್ರಾಯುಧದ ನಾಲ್ಕು ಪ್ರತಿಕೃತಿಗಳು ಮಹರ್ಷಿ ದಧೀಜಿಯ ಅತ್ಯುನ್ನತ ತ್ಯಾಗವನ್ನು ಪ್ರತಿನಿಧಿಸುತ್ತಿದೆ ಎಂದರೆ ನಮ್ಮ ಸನಾತನ ಧರ್ಮ ಮತ್ತು ಸೇನೆಯ ತ್ಯಾಗದ ಬಗ್ಗೆ ಹೆಮ್ಮೆ ಅನಿಸುತ್ತದೆ. ವಿಚಿತ್ರವೆಂದರೆ ಈ ಪದಕವನ್ನು ಪಡೆದ ಪ್ರಥಮ ಭಾರತೀಯ ಸೈನಿಕ, ಸಾವಿತ್ರಿ ಬಾಯಿಯ ಮಗಳ ಗಂಡ(ಅಳಿಯ)ನ ತಮ್ಮ ಸೋಮನಾಥ ಶರ್ಮ ಆಗಿದ್ದರು!! 1947 ರ ನವೆಂಬರ್ 3 ರಂದು ಕಾಶ್ಮೀರದಲ್ಲಿ ಮೇಜರ್ ಸೋಮನಾಥ್ ಶರ್ಮಾ ಅವರು ಹುತಾತ್ಮರಾದಾಗ ಈ ಪದಕ ವಾಸ್ತವವಾಗಿ ಅಸ್ತಿತ್ವದಲ್ಲಿರಲಿಲ್ಲ. ಭಾರತ ಗಣತಂತ್ರ ದೇಶವಾದ ಬಳಿಕ ಈ ಪದಕವನ್ನು ಅವರ ಸರ್ವೋಚ್ಚ ಬಲಿದಾನಕ್ಕಾಗಿ ಮರಣಾನಂತರ ನೀಡಲಾಯಿತು.

7. ಪದಕ ಕಂಚಿನಿಂದ ತಯಾರಿಸಲ್ಪಟ್ಟಿದೆ, 1-3 ತ್ರಿಜ್ಯದ 8-ಇಂಚು ದೊಡ್ಡ ಪದಕ ಬಾರ್ ಒಂದಕ್ಕೆ ತೂಗಿಸಲ್ಪಟ್ಟಿದೆ. ಪದಕದ ಹಿಂಭಾಗದಲ್ಲಿ ಕಮಲದಿಂದ ಬೇರ್ಪಡಿಸಲ್ಪಟ್ಟ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಬರೆದ ‘ಪರಮವೀರ ಚಕ್ರ’ ಎಂಬ ಬರಹಗಳಿವೆ

8. ಪರಮ ವೀರ ಚಕ್ರ ಸ್ವೀಕರಿಸಿರುವ ಬಾನಾ ಸಿಂಗ್, ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್ ಮತ್ತು ನಾಯಿಬ್ ಸುಬೇದಾರ್ ಸಂಜಯ್ ಕುಮಾರ್ ಇನ್ನೂ ಸೇನೆಯ ಕರ್ತವ್ಯದಲ್ಲಿ ಸಕ್ರಿಯರಾಗಿದ್ದಾರೆ.

9. ಪರಮ ವೀರ ಚಕ್ರವನ್ನು ಎರಡನೇ ಬಾರಿಗೆ ನೀಡುವ ಅವಕಾಶವಿದೆ. ಆದರೆ ಇದುವರೆಗೂ ಯಾವ ಸೈನಿಕನಿಗೂ ಎರಡು ಬಾರಿ ಪರಮವೀರ್ ಚಕ್ರ ದೊರೆತಿಲ್ಲ.

ಒಬ್ಬ ಪರಮ ಪರಾಕ್ರಮಿ ವೀರ ಸೈನಿಕ ಮಾತ್ರ ಈ ಪದಕ ಪಡೆಯುವ ಸೌಭಾಗ್ಯ ಪಡೆಯುತ್ತಾನೆ. “ಶತ್ರುವಿನ ಉಪಸ್ಥಿತಿಯಲ್ಲಿ ಅತ್ಯಂತ ಎದ್ದುಕಾಣುವ ಶೌರ್ಯ” ವನ್ನು ಒಬ್ಬ ಸೈನಿಕ ಪ್ರದರ್ಶಿಸಿದರೆ ಮಾತ್ರ ಆತನಿಗೆ ಪರಮವೀರ ಚಕ್ರ ದೊರೆಯುತ್ತದೆ. ಅದಕ್ಕೆಂದೆ ಈ ಚಕ್ರವನ್ನು “Wheel of the Ultimate Brave” ಎಂದು ಕರೆಯಲಾಗುತ್ತದೆ. 21 ‘ಪರಮವೀರ’ರಿಗೆ ಮಾತ್ರವಲ್ಲ, ತನ್ನ ಮಾತೃಭೂಮಿಯನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುವ ಪ್ರತಿ ಸೈನಿಕರ ಬಲಿದಾನಕ್ಕೆ ಸಾಷ್ಟಾಂಗ ನಮಸ್ಕಾರಗಳು. ದೇಶದ ರಕ್ಷಣೆ ಮಾಡುತ್ತಾ ಪ್ರಾಣಾರ್ಪಣೆಗೈದ ಪ್ರತಿ ಸೈನಿಕನ ಚರಣಗಳಿಗೆ ವಂದನಾರ್ಪಣೆಗಳು. ಜೈ ಜವಾನ್….ಜೈ ಹಿಂದ್…

-ಶಾರ್ವರಿ

Tags

Related Articles

Close