ದೇಶ

ರೈಲ್ವೆ ಪ್ರಯಾಣಿಕರಿಗಾಗಲಿದೆ ಹೊಸ ಅನುಭವೋದಯ! ದೇಶದ ಮೊತ್ತ ಮೊದಲ ಸ್ವಯಂಚಾಲಿತ ಆಹಾರ ವಿತರಣಾ ಯಂತ್ರವನ್ನು ಅಳವಡಿಸಿಕೊಳ್ಳಲಿದೆ IRCTC ಯ ಎಕ್ಸ್ ಪ್ರೆಸ್ ಉದಯ!!

ಭಾರತೀಯ ರೈಲ್ವೇಯಲ್ಲಿ ಪ್ರಯಾಣಿಸುತ್ತಿರುವಾಗ ಚಿಪ್ಸ್ ಅಥವಾ ಬಿಸ್ಕಟ್ ತಿನ್ನುವ ಬಯಕೆಯಾಗುತ್ತದೆಯೆ? ಅಂತವರಿಗಾಗಿಯೆ IRCTC ಸಿಹಿ ಸುದ್ದಿಯನ್ನು ಕೊಟ್ಟಿದೆ. ಇನ್ನು ಮುಂದೆ ಪ್ರಯಾಣಿಕರ ಬಾಳಿನಲ್ಲಿ ಹೊಸ ಅನುಭವದ ಉದಯವಾಗಲಿದೆ. ಏಕೆಂದರೆ ಉದಯ್ ಎಕ್ಸ್ ಪ್ರೆಸ್ಸಿನಲ್ಲಿ ಸ್ವಯಂಚಾಲಿತ ಆಹಾರ ವಿತರಣಾ ಯಂತ್ರವನ್ನು ಅಳವಡಿಸಿಕೊಳ್ಳಲಿದೆ IRCTC! ಇನ್ನು ನಿಮಗೆ ಯಾವಾಗ ಬೇಕೆಂದರಾವಾಗ ಕುರುಕುಲು ತಿಂಡಿ ಕರುಂ ಕುರುಂ ಮಾಡಬಹುದು. ಇನ್ನೂ ಒಂದು ಖುಶಿಯ ವಿಚಾರವೆಂದರೆ ಈ ಯಂತ್ರವನ್ನು ನೀವು ಟ್ಯಾಬ್ಲೆಟ್ ಸಹಾಯದಿಂದ ಚಲಾಯಿಸಬಹುದು.

ಈ ಯಂತ್ರವನ್ನು ಅಳವಡಿಸಿಕೊಳ್ಳುವ ಮೊತ್ತ ಮೊದಲ ಸೌಭಾಗ್ಯ ಕೊಯಮತ್ತೂರು-ಬೆಂಗಳೂರು ಮಾರ್ಗದಲ್ಲಿ ಚಲಿಸುವ ಉದಯ್ ಎಕ್ಸ್ ಪ್ರೆಸ್ ರೈಲಿಗೆ ದೊರೆತಿದೆ. ಈ ಸ್ವಯಂಚಾಲಿತ ಆಹಾರ ವಿತರಣಾ ಯಂತ್ರಗಳನ್ನು ಹೊಸ ಉದಯ್ ಎಕ್ಸ್ ಪ್ರೆಸ್ ಡಬಲ್ ಡೆಕ್ಕರ್ ರೈಲಿನಲ್ಲಿರುವ ಮೂರು ಕೋಚ್ ಗಳ ಮಿನಿ-ಪ್ಯಾಂಟ್ರಿ-ಕಮ್-ಡೈನಿಂಗ್ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ವಿಶೇಷವಾಗಿ ಬಿಸಿನೆಸ್ ವಿಷಯಕ್ಕಾಗಿ ಈ ಮಾರ್ಗದಲ್ಲಿ ಪ್ರಯಾಣಿಸುವವರ ಅನುಕೂಲಕ್ಕಾಗಿ ಈ ವ್ಯವಸ್ತೆಯನ್ನು ಅಳವಡಿಸಿಕೊಳ್ಳಲಾಗಿದೆ. ಬೆಂಗಳೂರು-ಕೊಯಮತ್ತೂರು ಮಾರ್ಗದಲ್ಲಿ ಸರಿಸುಮಾರು ಏಳು ಗಂಟೆ ಪ್ರಯಾಣಿಸಬೇಕಾಗುತ್ತದೆ ಅಂತಹ ಸಂಧರ್ಭದಲ್ಲಿ ಕುರುಕುಲು ತಿಂಡಿ, ಬಿಸ್ಕೆಟ್, ತಂಪು ಪಾನೀಯ ಬೇಕೆಂದು ಮನಸ್ಸಾದರೆ ಈ ಸ್ವಯಂ ಚಾಲಿತ ಯಂತ್ರದ ಸಹಾಯ ಪಡೆಯಬಹುದು.

ಉದಯ್ ಎಕ್ಸ್ ಪ್ರೆಸ್ ನ ಪ್ರಯಾಣಿಕರು ಟ್ಯಾಬ್ಲೆಟ್ ಅನ್ನು ಬಳಸಿ ತಮಗೆ ಬೇಕಾದ ತಿಂಡಿಗಳನ್ನು ಆರಿಸಬಹುದು. ಪ್ರಯಾಣಿಕ ಹಣ ಪಾವತಿ ಮಾಡಿದ ನಂತರ ಯಂತ್ರವು ಆಹಾರ / ಕಾಫಿಗಳನ್ನು ವಿತರಿಸುತ್ತದೆ. ಮೊದಲು ನಗದು ರೂಪದಲ್ಲಿ ಹಣ ಪಾವತಿಸಬಹುದು, ತದನಂತರ ವ್ಯವಹಾರಗಳು ಕ್ಯಾಶ್ ಲೆಸ್ ಆಗಲಿವೆ ಎಂದು ಹೇಳಲಾಗಿದೆ. ಇದೆ ತೆರನಾಗಿ ಮುಂಬೈ ರೈಲ್ವೆ ನಿಲ್ದಾಣಗಳಲ್ಲಿ ಸ್ವಯಂ ಚಾಲಿತ ಪಿಜಾ ಯಂತ್ರಗಳನ್ನು ಅಳವಡಿಸಲೂ IRCTC ಚಿಂತನೆ ನಡೆಸಿದೆ. ಮುಂಬೈಯ ಐದು ಅತಿ ಹೆಚ್ಚು ಜನನಿಬಿಡ ರೈಲು ನಿಲ್ದಾಣಗಳಾದ ಕಲ್ಯಾಣ್, ಕುರ್ಲಾ, ಮುಂಬೈ ಸೆಂಟ್ರಲ್, ಸಿಎಸ್ಟಿ ಮತ್ತು ಅಂಧೇರಿಗಳಲ್ಲಿನ ಲೋಕಮಾನ್ಯ ತಿಲಕ ಟರ್ಮಿನಸ್ ಗಳಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಪಿಜಾ ತಿನ್ನುಲು ಸ್ವಯಂಚಾಲಿತ ಪಿಜಾ ಯಂತ್ರಗಳನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

ಉನ್ನತ ತಂತ್ರಜ್ಞಾನದ ಕ್ಯಾಮೆರಾಗಳ ಸಹಾಯದಿಂದ ಅಡಿಗೆಮನೆಗಳನ್ನು ನೈಜ-ಸಮಯದ ಆಧಾರದಲ್ಲಿ ಮೇಲ್ವಿಚಾರಣೆ ಮಾಡಲು ಕೃತಕ ಬುದ್ಧಿಮತ್ತೆಯನ್ನು ಕೂಡಾ IRCTC ಬಳಸುತ್ತಿದೆ. ಅಲ್ಲದೆ, ಪ್ರಯಾಣಿಕರಿಂದ ಮಿತಿಮೀರಿದ ಬೆಲೆ ತೆಗೆದುಕೊಳ್ಳುವ ಮಾರಾಟಗಾರರನ್ನು ತಡೆಗಟ್ಟಲು, ರೈಲುಗಳಲ್ಲಿ ಪಿಓಎಸ್ ಯಂತ್ರಗಳನ್ನು ಅಳವಡಿಸಿಕೊಳ್ಳಲು ಮತ್ತು ಎಲ್ಲಾ ಆಹಾರ ಪದಾರ್ಥಗಳಲ್ಲಿ ಗರಿಷ್ಟ ಚಿಲ್ಲರೆ ಬೆಲೆಗಳನ್ನು ಮುದ್ರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಪರಿಸರ ಮಾಲಿನ್ಯವನ್ನು ತಡೆಗಟ್ಟಲು ರಾಜಧಾನಿ ಮತ್ತು ಶತಾಬ್ದಿಗಳಲ್ಲಿ ಪರಿಸರಸ್ನೇಹಿ ತಟ್ಟೆಗಳನ್ನು ಉಪಯೋಗಿಸಿ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಇಷ್ಟೆಲ್ಲಾ ಅಭಿವೃದ್ದಿ ಆದರೂ ನಮ್ಮ ಜನರು ಅಚ್ಛೆ ದಿನ್ ಎಲ್ಲುಂಟು ಎನ್ನುತ್ತಾರೆ!

ನಮ್ಮ ದೇಶ ಬದಲಾಗುತ್ತಿದೆ. ವಿದೇಶಗಳಲ್ಲಿ ನೋಡುತ್ತಿದ್ದ ತಂತ್ರಜ್ಞಾನಗಳನ್ನು ನಾವು ಇವತ್ತು ಭಾರತದಲ್ಲಿ ನೋಡುವಂತಾಗಿದ್ದರೆ ಅದಕ್ಕೆ ಕಾರಣ ಮೋದಿ. ಭಾರತದ ಭಾಗ್ಯ ಬದಲಾಗಿದೆ ಆದರೆ ಜನರ ಮನಸ್ಥಿತಿ ಮಾತ್ರ ಬದಲಾಗಿಲ್ಲ. ಜನರ ಆಚಾರ ವಿಚಾರಗಳು ಬದಲಾಗಿಲ್ಲ. ವಿಶ್ವದರ್ಜೆಯ ರೈಲುಗಳನ್ನು ಮೋದಿ ಸರಕಾರ ಜನರಿಗೆ ನೀಡುತ್ತಿದ್ದರೂ ಅದರ ಬೆಲೆ ಗೊತ್ತಿಲ್ಲದ ನಾಗರಿಕರು, ರೈಲಿನ ಸೀಟುಗಳನ್ನು ಹಾಳುಗೆಡವುದು, ಶೌಚಾಲಯಗಳನ್ನು ಗಲೀಜು ಮಾಡುವುದು, ರೈಲ್ವೆಯ ತಟ್ಟೆ ಲೋಟಗಳನ್ನೂ ಕದಿಯುವುದು, ಕಿಟಿಕಿ ಗಾಜುಗಳನ್ನು ಒಡೆಯುವುದರ ಮೂಲಕ ತಾವು ಈ ಸೌಲಭ್ಯಕ್ಕೆ ಅರ್ಹರಲ್ಲ ಎಂದು ಸಾರುತ್ತಿದ್ದಾರೆ. ಒಬ್ಬ ವ್ಯಕ್ತಿ ಭಾರತವನ್ನು ಬದಲಾಯಿಸುವ ಪಣ ತೊಟ್ಟಿದ್ದರೆ ನಾವು ಅನಾಗರಿಕರಂತೆ ವರ್ತಿಸಿ ಅವರ ಪ್ರಯತ್ನಕ್ಕೆ ತಣ್ಣೀರೆರಚುತ್ತಿದ್ದೇವೆ. ಜನ ಬದಲಾಗದೆ ಭಾರತ ಬದಲಾಗದು.

-ಶಾರ್ವರಿ

Tags

Related Articles

Close